ತಾಲೂಕಿನಲ್ಲಿ 32 ಅಪೌಷ್ಠಿಕ ಮಕ್ಕಳು

ಹುಳಿಯಾರು:

              ತಾಲೂಕಿನಲ್ಲಿ 32 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು ಇವರನ್ನು ಅಂಗನವಾಡಿ ಕೇಂದ್ರಗಳ ಮೂಲಕ ವಿಶೇಷ ಕಾಳಜಿ ವಹಿಸಿ ಮೊಟ್ಟೆ, ಹಾಲು ಸೇರಿದಂತೆ ಪೌಷ್ಠಿಕ ಆಹಾರ ನೀಡುವ ಜೊತೆಗೆ ವೈದ್ಯಕೀಯ ವೆಚ್ಚವಾಗಿ 750 ರೂ. ನೀಡಿ ಅಪೌಷ್ಠಿಕತೆಯಿಂದ ಹೊರ ತರುವ ಪ್ರಯತ್ನ ಮಾಡುತ್ತಿರುವುದಾಗಿ ಚಿಕ್ಕನಾಯಕನಹಳ್ಳಿ ಸಿಡಿಪಿಓ ತಿಪ್ಪಯ್ಯ ತಿಳಸಿದರು.
               ಹುಳಿಯಾರಿನ ಆಜಾದ್ ನಗರದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪೌಷ್ಠಿಕ ಆಹಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
               ಕೇವಲ ಬಡವರಲ್ಲಿ ಮಾತ್ರವಲ್ಲದೇ ಶ್ರೀಮಂತರ ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಅಪೌಷ್ಠಿಕತೆ ಕಾಣಿಸಿಕೊಳ್ಳುತ್ತಿದೆ. ಸಿದ್ಧ ಆಹಾರ ಸೇವನೆ ಹೆಚ್ಚುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಗ್ರಾಮೀಣ ಜನರಲ್ಲಿ ಆಹಾರ ಪದ್ಧತಿ ಅರಿವು ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಮಹಿಳೆಯರು ರಕ್ತಹೀನತೆಯಿಂದ ಪಾರಾಗಬೇಕಾದರೆ ಮೊಳಕೆ ಕಾಳು, ಹಣ್ಣು-ಹಂಪಲು, ತರಕಾರಿಗಳ ಸೇವನೆಯನ್ನು ರೂಢಿಮಾಡಿಕೊಳ್ಳಬೇಕು. ಮೂಢನಂಬಿಕೆಗಳಿಂದ ಹೊರಬಂದು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಏಕೆಂದರೆ ವಿವಿಧ ರೀತಿಯ ಆಹಾರಗಳು ಅನೇಕ ರೀತಿಯ ಪೌಷ್ಠಿಕಾಂಶವನ್ನು ಮನುಷ್ಯನಿಗೆ ದೇಹಕ್ಕೆ ಒದಗಿಸುತ್ತವೆ ಎಂದರು.
                ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀನಿವಾಸ್ ಅವರು ಮಾತನಾಡಿ ಇಂದು ಮಕ್ಕಳಿಗೆ ಚಾಕಲೇಟ್, ಪಿಜ್ಜಾ, ಬರ್ಗರ್‍ನಂತಹ ಆಹಾರವನ್ನು ತಿನ್ನಿಸುವುದು ಸಾಮಾನ್ಯವಾಗಿದೆ. ಇದು ನಮ್ಮ ಪಾದೇಶಿಕತೆಗೆ, ಸಂಸ್ಕೃತಿಗೆ ಒಗ್ಗದ ಆಹಾರವಾಗಿದ್ದು, ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರಲು ಕಾರಣವಾಗಿದೆ. ಗ್ರಾಮೀಣ ಜನರ ಸಹಜ ಆಹಾರವಾದ ರೊಟ್ಟಿ, ಪಲ್ಯ, ಮುದ್ದೆ, ಅನ್ನ ಮೊದಲಾದ ಆಹಾರ ಸೇವನೆಯಿಂದ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಹಾಗಾಗಿ ಮಕ್ಕಳಿಗೆ ಕುರಕಲು ತಿಂಡಿಯ ಬದಲು ಹುರುಳಿಕಾಳು ಉರಿದು ಕೊಡುವುದು, ಕಡ್ಲೇ ಮಿಠಾಯಿ ಕೊಡುವುದು, ತರಕಾರಿ ಮತ್ತು ಹಣ್ಣಿ ಸಾಲಡ್ ಮಾಡಿಕೊಡುವುದನ್ನು ಪೋಷಕರು ರೂಢಿ ಮಾಡಿಕೊಳ್ಳಬೇಕು ಎಂದರು.
                ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನಸೂಯ ಅವರು ಮಾತನಾಡಿ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಕಾರ್ಬೋಹೈಡ್ರೆಡ್, ಪ್ರೋಟಿನ್ ಕೊಬ್ಬು, ವಿಟಮಿನ್ ಮತ್ತು ಲವಣಾಂಶಾಗಳು ಇದ್ದಾಗ ಮಾತ್ರ ದೇಹದ ಬೆಳವಣಿಗೆ ಹಾಗೂ ಸವೆದು ಹೋದ ಮೂಳೆಗಳ ಬೆಳವಳಿಗೆಗೆ ಸಹಕಾರಿಯಾಗುತ್ತದೆ. ಹಾಗಾಗಿ ಜಿಂಕ್ ಫುಡ್ ತಿನ್ನುವುದ ಬಿಟ್ಟು ಬೇಳೆಕಾಳು, ಶೇಂಗಬೀಜ, ಮಾಂಸ, ಹಾಲು, ಬೆಣ್ಣೆ ಮುಂತಾದಾವುಗಳನ್ನು ತಿನ್ನಬೇಕು ಎಂದರು.
              ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ವೀಣಾ, ಚಂದ್ರಕಲಾ, ಆಶಾ ವೇಲ್ವಿಚಾರಕಿ ಜಯಂತಿ, ಕಾರ್ಯಕರ್ತೆ ಆಬೀದಾಭಿ, ಮಹಬೂಬ್ ಜಾನ್, ಮಹಿಳಾ ಹೋರಾಟಗಾರ್ತಿ ಜಯಲಕ್ಷ್ಮಮ್ಮ, ಅಂಗನವಾಡಿ ಕಾರ್ಯಕರ್ತೆ ಪೂರ್ಣಮ್ಮ, ಶಬಾನಾ ಯಾಸ್ಮೀನ್, ಪೂರ್ಣಿಮಾ, ಭಾಗ್ಯಮ್ಮ, ಗಾಯಿತ್ರಿ, ಮನ್ನುಬಾಯಿ, ಲಲಿತಮ್ಮ ಮತ್ತಿತರರು ಇದ್ದರು.

Recent Articles

spot_img

Related Stories

Share via
Copy link
Powered by Social Snap