ದಾವಣಗೆರೆ:
ಸಮೀಪದ ಆವರಗೆರೆ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಖಾಸಗಿ ಲೇಔಟ್ ಮಾಲೀಕನ ಹಿತ ಕಾಪಾಡಲಿಕ್ಕಾಗಿ ತಾಲೂಕು ಆಡಳಿತ ಮತ್ತು ಮಹಾನಗರ ಪಾಲಿಕೆ ಅಮಾಯಕ ರೈತರ ಮೇಲೆ ಅತಿಕ್ರಮಣದ ಸುಳ್ಳು ಕೇಸ್ ದಾಖಲಿಸಿದ್ದಾರೆಂದು ರೈತ ಸಿ.ಮರಿಕಲ್ಲಪ್ಪ ಆರೋಪಿಸಿದರು.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆವರಗೆರೆ ಗ್ರಾಮದ ಸರ್ವೇ ನಂ.374ರಿಂದ 384ರವರೆಗೆ ರೈತರು ಹೊಲಕ್ಕೆ ಹೋಗಲು ಮೂರು ತಲೆಮಾರಿನಿಂದಲೂ ಮಾಡಿಕೊಂಡು ಬಂದಿದ್ದ ಬಂಡಿ ದಾರಿಯನ್ನೇ ಲೇಔಟ್‍ನವರು ರಸ್ತೆಗೆ ಬಿಟ್ಟ ಜಾಗವೆಂದು ಅಧಿಕಾರಿಗಳು ಬಿಂಬಿಸಿದ್ದಾರೆ ಎಂದು ಆರೋಪಿಸಿದರು.
ಹೊಲಗಳಿಗೆ ಹೋಗುವ ದಾರಿಯಲ್ಲಿ ಯುಜಿಡಿ ಪೈಪ್‍ಲೈನ್, ಚರಂಡಿ ನೀರನ್ನು ಬಿಡಲಾಗಿದೆ. ಇದರಿಂದ ಹೊಲಕ್ಕೆ ಹೋಗಲು ತಮಗೆ ತೀವ್ರ ತೊಂದರೆಯಾಗಲಿದೆ. ಇದೀಗ 8 ಅಡಿ ಬಂಡಿ ಜಾಗದಲ್ಲೇ ರಸ್ತೆಯಿದ್ದು, ಅದನ್ನು ಅತಿಕ್ರಮಿಸಿರುವುದಾಗಿ 11 ಜನ ರೈತರ ಮೇಲೆ ಪಾಲಿಕೆ ಆಯುಕ್ತರು, ತಹಸೀಲ್ದಾರರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆಪಾದಿಸಿದರು.
ನಮ್ಮ ಹೊಲಗಳ ಎದುರಿನ ಲೇಔಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ನಮ್ಮ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ. 2012ರಲ್ಲಿ ಆಗಿನ ತಹಸೀಲ್ದಾರ್ ಹದ್ದುಬಸ್ತು ಮಾಡಿಕೊಟ್ಟಿದ್ದ ಜಾಗವನ್ನೇ ಈಗ ಖಾಸಗಿ ಲೇಔಟ್ ರಸ್ತೆ ಎಂಬುದಾಗಿ ನಮ್ಮ ಮೇಲೆ ಕೇಸ್ ಮಾಡಿರುವ ಅಧಿಕಾರಿಗಳ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಾಲೂಕು ಆಡಳಿತ, ಮಹಾನಗರ ಪಾಲಿಕೆ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಯಾವುದೇ ಲೇಔಟ್, ಸರ್ಕಾರಿ ಆಸ್ತಿ, ಸಾರ್ವಜನಿಕ ಆಸ್ತಿಯ ಒಂದಿಂಚು ಜಾಗವನ್ನೂ ನಾವು ಒತ್ತುವರಿ ಮಾಡಿಲ್ಲ. ರಸ್ತೆಯೇ ಇಲ್ಲದ ಲೇಔಟ್‍ಗೆ ಡೋರ್ ನಂಬರ್, ಎನ್‍ಓಸಿ ಕೊಟ್ಟಿದ್ದರ ಬಗ್ಗೆಯೂ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ಥ ರೈತರಾದ ಲಿಂಗರಾಜ, ಪರಮೇಶಪ್ಪ, ವಿಜಯಕುಮಾರ, ಜಿ.ಎಸ್.ಸುರೇಶ, ಸಿ.ಎನ್.ಕಲ್ಲೇಶ, ಸಿ.ಬಸವರಾಜ ಮತ್ತಿತರರು ಹಾಜರಿದ್ದರು.