ಕೂಡ್ಲಿಗಿ:
ತುಂಗಾಭದ್ರ ನದಿಯಿಂದಾಗಲಿ ಅಥವಾ ಭದ್ರಾ ಮೇಲ್ದಂಡೆ ಯೋಜನೆಯ ಅನ್ವಯ ಕೂಡ್ಲಿಗಿ ಹಾಗೂ ಸಂಡೂರು ತಾಲ್ಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರರ ಮುಖಾಂತರ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು.
ಈ ಎರಡು ತಾಲ್ಲೂಕಿನ ರೈತರು ಕಳೆದ ನಾಲ್ಕು ವರ್ಷಗಳಿಂದಲೂ ಬರ ಎದುರಿಸುತ್ತಿದ್ದು, ಈ ವರ್ಷವೂ ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೆ ಹಾಳಾಗಿವೆ. ಹಿಂದುಳಿದ ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ಮೂಲಗಳಿಲ್ಲದೆ, ರೈತರು, ಕೂಲಿ ಕಾರ್ಮಿಕರು ಬರದಿಂದ ತತ್ತರಿಸಿ ಗುಳೇ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ತುಂಗಾ ಭದ್ರಾ ನದಿಯಿಂದ ಹರಿದು ಹೋಗುವ ಹೆಚ್ಚುವರಿ ನೀರನ್ನು ತಾಲ್ಲೂಕಿಗೆ ಹರಿಸಬೇಕು, ಇಲ್ಲವೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡುವ ಮೂಲಕ ತಾಲ್ಲೂಕಿಗೆ ನೀರಾವರಿ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಾಲ್ಲೂಕಿನಲ್ಲಿ ಮಳೆಯಾಶ್ರಿತ ಬೆಳೆಗಳು ಈಗಾಗಲೇ ಸಂಪೂರ್ಣ ಒಣಗಿಹೋಗಿದ್ದು, ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಕೃಷಿ ಹಾಗೂ ಕಂದಾಯ ಇಲಾಖೆಗೆ ಅದೇಶ ನೀಡಬೇಕು. ಬೆಳೆ ನಷ್ಟ ಅನುಭವಿಸಿದ ರೈತರ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರು ಎನ್ನದೆ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು. ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ನಿರಂತರ 12 ತಾಸು ವಿದ್ಯುತ್ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಸ್ನೇಹ ಲತಾ ಮನವಿ ಪತ್ರ ಸ್ವೀಕಾರ ಮಾಡಿದರು.
ಇದಕ್ಕೂ ಮುನ್ನ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಬಂದ ರೈತ ಸಂಘದ ಕಾರ್ಯಕರ್ತರು ತಾಲ್ಲೂಕಿಗೆ ಸಮಗ್ರ ನಿರಾವರಿ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕು ಪಂಚಾಯ್ತಿಯಿಂದ ಪ್ರಸ್ತಾವನೆಯನ್ನು ಅಂಗೀಕರಿಸಿ ಸರ್ಕಾರಕ್ಕೆ ಕಳಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಸದಸ್ಯರನ್ನು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಎಂ. ಬಸವರಾಜ, ಉಪಾಧ್ಯಕ್ಷದೇವರಮನೆ ಮಹೇಶ, ಸಂಚಾಲಕ ಕೆ.ಎಂ. ಚಂದ್ರಯ್ಯಸ್ವಾಮಿ, ಸಂಘಟನಾ ಕಾರ್ಯದರ್ಶಿ ವಿ. ನಾಗರಾಜ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ಬಾಷಾ ಸಾಬ್, ಜಿಲ್ಲಾ ಮುಖಂಡ ಆರ್. ಶಿವರೆಡ್ಡಿ, ಎಂ. ವೀರಭದ್ರಪ್ಪ, ಎನ್. ಪಕ್ಕೀರಪ್ಪ ಸೇರಿದಂತೆ ನೂರಾರು ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ