ತುಮಕೂರು:
ಜೀವನದಲ್ಲಿ ತಾಳ್ಮೆ ಮತ್ತು ಸಹನಾ ಮನೋಭಾವ ಇದ್ದರೆ ಕುಟುಂಬದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ವೇದಿಕೆ, ಬಾಪೂಜಿ ವಿದ್ಯಾಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ –ಮಾನವ ಹಕ್ಕುಗಳ ಕಾನೂನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಹಿಂದೆ ಒಂದು ಕುಟುಂಬದಲ್ಲಿ ಹತ್ತಾರು ಜನ ಇರುತ್ತಿದ್ದರು. ಈಗ ಸಂಖ್ಯೆ ಕಡಿಮೆ ಇದ್ದರೂ ನೆಮ್ಮದಿಯ ವಾತಾವರಣ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು.
ನಮ್ಮ ಕೈಲಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಹಿರಿಯ ನಾಗರಿಕರನ್ನು ಗೌರವಿಸಬೇಕು. ಸಂಸಾರದಲ್ಲಿ ಹಿರಿಯರಿದ್ದರೆ ಒಳ್ಳೆಯದೇ ಹೊರತು ಕೆಟ್ಟದ್ದಲ್ಲ. ಅವರನ್ನು ಕುಟುಂಬದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ಮಾತನಾಡಿ ನಮ್ಮ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದುದು. ಇಲ್ಲಿ ಎಲ್ಲರೂ ಸಮಾನರು ಎಂಬ ಕಾನೂನನ್ನು ರೂಪಿಸಲಾಗಿದೆ. ಕೆಲವು ವಿಶೇಷ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಹಿರಿಯ ನಾಗರಿಕರನ್ನು ಕಡೆಗಣಿಸುತ್ತಿರುವುದನ್ನು ಮನಗಂಡು ಅವರ ರಕ್ಷಣೆಗಾಗಿಯೇ ವಿಶೇಷ ಕಾಯ್ದೆಯನ್ನು 2007 ರಲ್ಲಿ ಜಾರಿಗೆ ತರಲಾಗಿದೆ. ಹಿರಿಯರನ್ನು ನಿರ್ಲಕ್ಷಿಸಿದರೆ ಶಿಕ್ಷಾರ್ಹ ಅಪರಾಧವೂ ಇದೆ. ಒಂದು ವೇಳೆ ಹಿರಿಯರನ್ನು ನಿರ್ಲಕ್ಷಿಸಿದರೆ ಮಕ್ಕಳಿಗೆ ನೀಡಿರುವ ಆಸ್ತಿಯನ್ನು ವಾಪಸ್ ಪಡೆಯಲು ಅವಕಾಶವಿದೆ. ಕಾನೂನಿನ ನಿಯಮಗಳು ಏನೇ ಇರಲಿ ಮಾನವೀಯತೆ ದೃಷ್ಟಿಯಿಂದಲಾದರೂ ಹಿರಿಯರನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುವ ಅಗತ್ಯವಿದೆ ಎಂದರು.
ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಸವಯ್ಯ ಮಾತನಾಡಿ, ತನ್ನ ವೈರಿಯನ್ನೂ ಸಹ ಆತ್ಮೀಯವಾಗಿ ಗೌರವಿಸು ಎಂದು ಮಹಾತ್ಮಗಾಂಧೀಜಿ ಹೇಳಿದ್ದಾರೆ. ಶಿಕ್ಷಣ ಹೇಗಿರಬೇಕು ಎಂಬುದು ಅವರ ಕನಸಾಗಿತ್ತು. ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿಯೇ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಂತಹ ಮಹಾನ್ ನಾಯಕರ ಈ ದೇಶದಲ್ಲಿ ಸತ್ಪ್ರಜೆಗಳಾಗಿಯೇ ಎಲ್ಲರೂ ಬಾಳಬೇಕು. ಅರಿಷÀಡ್ವರ್ಗಗಳನ್ನು ಗೆಲ್ಲಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಜಿ.ಕೆ.ಅನಿಲ್ ಮಾತನಾಡಿ, ಹಿಂದೆ ಕೂಡು ಕುಟುಂಬಗಳಿದ್ದವು. ಈಗ ಅವುಗಳು ಮರೆಯಾಗುತ್ತಿವೆ. ಮಕ್ಕಳು ಪೋಷಕರನ್ನು ಸಾಕಬೇಕು. ಆದರೆ ಕೆಲವು ಕಡೆ ವ್ಯತಿರಿಕ್ತ ಸನ್ನಿವೇಶಗಳು ಕಾಣುತ್ತಿವೆ. ಪೋಷಕರನ್ನು ನಿರ್ಲಕ್ಷಿಸಿದರೆ ಅವರ ವಿರುದ್ಧ ಕಾನೂನಿನ ಬಳಕೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಮರಿಚನ್ನಮ್ಮ, ಸಾಹಿತಿ ಎನ್.ನಾಗಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಬೋಬಡೆ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.
