ತುಮಕೂರು ಕೋವಿಡ್ ಕರ್ಫ್ಯೂ ; ಆತಂಕದಲ್ಲೇ ತವರಿಗೆ ಮರಳಿದ ಕಾರ್ಮಿಕರು

 ತುಮಕೂರು :

      ನಿನ್ನೆ ರಾತ್ರಿ 9 ರಿಂದಲೇ 14 ದಿನಗಳ ಕೋವಿಡ್ ಕರ್ಫ್ಯೂ ಜಿಲ್ಲೆಯಲ್ಲಿ ಜಾರಿಯಾಗಿದ್ದು, ಕರ್ಫ್ಯೂ ಜಾರಿಗೆ ಮುನ್ನಾ ಜಿಲ್ಲೆಯ ಜನತೆ ಮನೆಯಲ್ಲಿರಲುಬೇಕಾದ ಅಗತ್ಯಸಿದ್ಧತೆಯಲ್ಲಿ ತೊಡಗಿದ್ದು ಕಂಡುಬಂದಿತು.

      ಸರಕಾರದ ಮಾರ್ಗಸೂಚಿಯಂತೆ ಏ.27 ರಿಂದ ರಾತ್ರಿ 9 ರಿಂದಲೇ ಆರಂಭಗೊಂಡು ಮೇ.12ರಂದು ಬೆಳಿಗ್ಗೆ 6ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದು, 14 ದಿನಗಳ ಕೋವಿಡ್ ಕರ್ಪ್ಯೂ ಲಾಕ್‍ಡೌನ್ ಮಾದರಿಯಲ್ಲೇ ಇರುತ್ತದೆ ಎಂಬುದನ್ನು ಮನಗಂಡ ಜಿಲ್ಲೆಯ ಜನತೆ ಅದಕ್ಕೆ ಪೂರಕವಾದ ಸಿದ್ಧತೆಯಲ್ಲಿ ತೊಡಗಿದರು.

      ಕರ್ಫ್ಯೂ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳು, ಮದ್ಯ ಮಾರಾಟ, ಹೋಟೆಲ್ ಪಾರ್ಸೆಲ್‍ಗಳಿಗೆ ಸರಕಾರ ಅವಕಾಶ ಕಲ್ಪಿಸಿದ್ದರೂ ಮುಂದೆ ಏನಾಗುತ್ತದೋ ಏನೋ ಎಂಬ ಆತಂಕದಲ್ಲೇ 14 ದಿನಗಳಿಗಾಗುವಷ್ಟು ದಿನಸಿ, ಮದ್ಯ, ತರಕಾರಿ ಮತ್ತಿತರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಹಾತೊರೆದರು. ಬ್ಯಾಂಕ್, ಎಟಿಎಂಗಳಲ್ಲೂ ಹಣ ಡ್ರಾ ಮಾಡಿಕೊಳ್ಳಲು ಮುಂದಾದ ಜನತೆ ಬಂಕ್‍ಗಳಲ್ಲೂ ಪೆಟ್ರೋಲ್ ಡೀಸೆಲ್ ತುಂಬಿಸಿಕೊಳ್ಳಲು ಸರತಿ ಸಾಲಲ್ಲಿ ನಿಂತಿದ್ದರು. ಈ ಕರ್ಫ್ಯೂ 14 ದಿನಗಳ ಬಳಿಕವೂ ವಿಸ್ತರಿಸಬಹುದು, ಏನಾಗುತ್ತೋ ಏನೋ? ಎನ್ನುವ ಆತಂಕದ ಮಾತುಗಳು ಜನರಿಂದ ವ್ಯಕ್ತವಾಗುತ್ತಿದ್ದವು.

ಬಸ್‍ನಿಲ್ದಾಣದಲ್ಲಿ ಕಾರ್ಮಿಕ ಕುಟುಂಬಗಳ ದಂಡು:

      ಜಿಲ್ಲೆಯ ವಿವಿಧ ಬಸ್‍ನಿಲ್ದಾಣಗಳಲ್ಲಿ ಊರಿಗೆ ತೆರಳುವ ಕಾರ್ಮಿಕರ ಜಮಾವಣೆ ಅಧಿಕವಾಗಿ ಕಂಡುಬಂತು. ಕಂಕುಳಲ್ಲಿ ಎಳೆ ಮಗು, ತಲೆಮೇಲೆ, ಕೈಯಲ್ಲಿ ಬಟ್ಟೆ ಸಾಮಾಗ್ರಿಗಳ ಬ್ಯಾಗ್, ಇನ್ನೊಂದು ಕೈಯಲ್ಲಿ ಮತ್ತೊಂದು ಮಗುವನ್ನು ಹಿಡಿದು ಹೆಂಡತಿ, ಕುಟುಂಬ ಸದಸ್ಯರೊಂದಿಗೆ ಊರು ಸೇರುವ ಧಾವಂತದಲ್ಲಿದ್ದ ಕಾರ್ಮಿಕರುಗಳು ಯಾವಾಗ ಬಸ್ ಬರುತ್ತಪ್ಪಾ ನಮ್ಮೂರಿಗೆ ಸೇರ್ಕೊಂಡುಬಿಟ್ರೆ ಸಾಕು ಎನ್ನುವ ಆತಂಕದಲ್ಲೇ ನಿಲ್ದಾಣದಲ್ಲಿ ಕಾಯುತ್ತಿದ್ದರು.

      ಕುಷ್ಟಗಿಯಿಂದ ಮೈಸೂರಿಗೆ ತಲುಪಬೇಕಾದ ಕಾರ್ಮಿಕ ಕುಟುಂಬವೊಂದು ಬೆಳಿಗ್ಗೆಯಿಂದ 2-3 ಬಸ್ ಹತ್ತಿ ಮೈಸೂರಿಗೆ ನೇರ ಬಸ್ ಸಿಗದ ಕಾರಣ ತುಮಕೂರು ನಿಲ್ದಾಣದಲ್ಲಿ ಇಳಿದು ಬಸ್‍ಗಾಗಿ ಕಾಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.

      ಡಾಬಸ್‍ಪೇಟೆಯ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದ ಗುಲ್ಬರ್ಗಾ ಮೂಲದ ಐದಾರು ಕುಟುಂಬಗಳು ಒಟ್ಟಿಗೆ ಊರಿಗೆ ಮರಳಲು ಸಿದ್ಧರಾಗಿ ತುಮಕೂರು ಬಸ್ ನಿಲ್ದಾಣಕ್ಕೆ ಮಂಗಳವಾರ ಮಧ್ಯಾಹ್ನದಿಂದಲೇ ಬಂದಿಳಿದಿದ್ದು, ಅಲ್ಲಿಯೇ ಊಟ ಮಾಡಿಕೊಂಡು ಬಸ್‍ಗಾಗಿ ಎದುರು ನೋಡುತ್ತಿದ್ದರು. ಮುಂದಿನ ಭವಿಷ್ಯವೇ ಅವರಿಗೆ ಮಂಕಾದಂತೆ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ಏನ್ ಮಾಡೋದು ಸರಾ, ಕಾರ್ಖಾನೆ ಏನ್ ಮುಚ್ಚಿಲ್ಲ, ಆದರೆ ಈ ಕೆಟ್ ಖಾಯಿಲೆ-ಕಸಾಲೆ ಬಂದ್ರೆ ನಮ್ಮನ್ನಿಲ್ಲಿ ಯಾರ್ ನೋಡ್ಕೋತಾರ, ಅದ್ಕೆ ಊರ್‍ಗೇ ಹೊಂಟಿವೀ ಅಂತಲೇ ತೇವಗೊಂಡಿದ್ದ ಕಣ್ಣಾಲಿಗಳನ್ನು ಒರೆಸಿಕೊಂಡರು. ಇನ್ನೂ ಇತ್ತ ರಾಜಧಾನಿಯಲ್ಲಿ ಕೆಲಸ, ವಿವಿಧ ಕಾರಣಕ್ಕೆ ತೆರಳಿದ್ದ ಜಿಲ್ಲೆಯ ಜನತೆ ಮರಳಿ ಜಿಲ್ಲೆಗೆ ಮರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಧಾನಿಯಿಂದ ಮನೆ ಖಾಲಿ ಮಾಡಿಕೊಂಡು ಟ್ರ್ಯಾಕ್ಸ್, ಟಿಟಿ ಮಾಡಿಕೊಂಡು ಕಾರ್ಮಿಕರು ಊರು ಬಿಡುತ್ತಿದ್ದ ದೃಶ್ಯಗಳು ಗಮನ ಸೆಳೆದವು.

ಬೀದಿ ಬದಿ ವ್ಯಾಪಾರಸ್ಥರು, ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಬದುಕಿನ ಚಿಂತೆ:

      ಮತ್ತೊಂದೆಡೆ ದಿನಸಿ, ತರಕಾರಿ, ಹಣ್ಣು ಹೊರತುಪಡಿಸಿದ ಇತರೆ ಬೀದಿ ಬದಿ ವ್ಯಾಪಾರಸ್ಥರು, ಫುಟ್‍ವೇರ್, ಬಟ್ಟೆ ಅಂಗಡಿ, ಜ್ಯೂಯೆಲರಿ, ಡ್ರೈ ಕ್ಲೀನ್, ಮೊಬೈಲ್, ಟಿವಿ ಶೋರೂಂ ಮತ್ತಿತರ ಕಾರ್ಮಿಕರು, ಆಟೊರಿಕ್ಷಾ, ಟ್ಯಾಕ್ಸಿ ಚಾಲಕರು, ಇತರೆ ವರ್ಗದವರು, ಡಿಸಿ ಕಚೇರಿ, ತಹಸೀಲ್ದಾರ್ ಕಚೇರಿ, ನೋಂದಣಿ ಕಚೇರಿ ಮತ್ತಿತರೆಡೆಯ ಸ್ಟ್ಯಾಂಪ್‍ವೆಂಡರ್‍ಗಳು, ಸಣ್ಣ ಪುಟ್ಟ ದೇವಾಲಯದ ಅರ್ಚಕರು, ಸೈಕಲ್‍ಶಾಪ್, ಗ್ಯಾರೇಜ್ ಕೆಲಸಗಾರರು. ಈ ಲಾಕ್‍ಡೌನ್ ಮಾದರಿ ಕರ್ಫ್ಯೂ 14 ದಿನಗಳಿಗೆ ಮುಗಿಯುತ್ತದೆಯೋ ಅಥವಾ ಇನ್ನಷ್ಟು ದಿನ ವಿಸ್ತರಿಸುತ್ತದೆಯೋ ತಿಳಿಯದು. ಆಯಾ ದಿನದ ವೇತನ ನಂಬಿ ಬದುಕು ನಡೆಸುತ್ತಿದ್ದೇವೆ. ಮನೆ ಬಾಡಿಗೆ, ವಾಹನದ ಸಾಲದ ಕಂತು ಹೀಗೆ ಹಲವು ಹೊಣೆಗಾರಿಕೆಗಳು ನಮ್ಮ ಮೇಲಿದೆ. ಆದರೆ ಸೋಂಕು ತಗ್ಗಿಸಲು ಈ ಕ್ರಮ ಸರಕಾರಕ್ಕೂ ಅನಿವಾರ್ಯ. ಹಾಗಾಗಿ ನಾವು ಜೀವನ ನಡೆಸಲು ಒಂದಷ್ಟು ಆರ್ಥಿಕ ಸಹಾಯವನ್ನು ಸರಕಾರ ಮಾಡಬೇಕೆಂದು ರಿಕ್ಷಾ ಚಾಲಕರುಗಳು ಒತ್ತಾಯಿಸಿದರು.
 
ಯಾವುದಕ್ಕೆ ಅನುಮತಿ? ಯಾವುದಕ್ಕೆ ನಿರ್ಬಂಧ?

      14 ದಿನಗಳಕಾಲ ಪ್ರತಿದಿನ ಬೆಳಿಗ್ಗೆ ವೇಳೆ 6 ರಿಂದ 10ರವರೆಗೆ ಹಾಲು, ಹಣ್ಣು, ದಿನಸಿ, ತರಕಾರಿ, ಮದ್ಯ, ಮಾಂಸ, ಮೀನು ಮಾರಾಟ, ಪ್ರಾಣಿಗಳ ಮೇವು ಮಾರಾಟಕ್ಕೆ ಕೋವಿಡ್ ನಿಯಮ ಪಾಲನೆಯೊಂದಿಗೆ ಅವಕಾಶವಿದ್ದು, ನಂತರದಲ್ಲಿ ಜನ, ಸಾರಿಗೆ ಸಂಚಾರ ನಿಷಿದ್ಧವಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿ ಮತ್ತು ಅವರನ್ನು ನೋಡಿಕೊಳ್ಳುವವರು ಹಾಗೂ ವೈದ್ಯಕೀಯ ಪರಿಕ್ಷೆ, ಲಸಿಕೆ ಹಾಕಿಸಿಕೊಳ್ಳಲು ಮಾತ್ರ ಸೂಕ್ತ ದಾಖಲೆಗಳೊಂದಿಗೆ ತೆರಳಬೇಕಿದ್ದು, ಗಾರ್ಮೆಂಟ್ಸ್ ಹೊರತುಪಡಿಸಿದ ಎಲ್ಲಾ ಕೈಗಾರಿಕೆಗಳು, ಕೃಷಿ ಚಟುವಟಿಕೆಗಳ ಕಾರ್ಯಚರಣೆಗೆ ಮಾತ್ರ ಅವಕಾಶವಿದೆ. ಮನೆ ಮನೆಗೆ ತಲುಪಿಸುವ ಇ ಕಾಮರ್ಸ್, ಪತ್ರಿಕೆ, ಕೇಬಲ್, ಇಂಟರ್ನೆಟ್, ಖಾಸಗಿ ಭದ್ರತೆ, ಕಟ್ಟಡ ನಿರ್ಮಾಣ ಕಾರ್ಯಗಳಿಗೂ ಅನುಮತಿಸಿದ್ದು, ಬ್ಯಾಂಕ್ ವಿಮೆ, ಎಟಿಎಂಗಳು ತೆರೆದಿದ್ದು, ಈ ಅಗತ್ಯ ಸೇವೆಯಲ್ಲಿ ನಿರತರಾದ ಸಿಬ್ಬಂದಿ ತಮ್ಮ ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಸಂಚಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಪ್ರತ್ಯೇಕ ಪಾಸ್ ವ್ಯವಸ್ಥೆ ಜಿಲ್ಲಾಡಳಿತ ಕಲ್ಪಿಸಿಲ್ಲ. ಅಂತರ್‍ಜಿಲ್ಲಾ, ಅಂತರ್‍ರಾಜ್ಯ ಪ್ರವಾಸ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಅನುಮತಿಸಿದ್ದು, ಆರೋಗ್ಯ ಇಲಾಖೆ ನಿಬಂಧನೆಗೊಳಪಟ್ಟಿರುತ್ತದೆ. ಇನ್ನೂ ಮದುವೆಗೆ 50 ಜನ, ಅಂತ್ಯಕ್ರಿಯೆಯಲ್ಲಿ ಕೇವಲ 5 ಜನ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
 
ಆಸರೆಯಾದ ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳು!

      14 ದಿನಗಳ ಕರ್ಫ್ಯೂ ಹಿನ್ನೆಲೆಯಲ್ಲಿ ಊರಿಗೆ ಹೊರಟು ನಿಂತ ಕಾರ್ಮಿಕರಿಗೆ ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳು ಆಸರೆಯಾದವು. ಸೋಮವಾರ ತುಮಕೂರಿನ ಬಸ್ ಡಿಪೋಗಳಿಂದ 418 ಸಾರಿಗೆ ಬಸ್‍ಗಳು ರಾಜಧಾನಿ ಬೆಂಗಳೂರು, ಶಿವಮೊಗ್ಗ, ಹಾಸನ, ಚಿತ್ರದುರ್ಗ ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ ಮತ್ತಿತರರೆಡೆಗೆ ಕಾರ್ಯಚರಣೆ ನಡೆಸಿದರೆ ಮಂಗಳವಾರ ಸಂಜೆ 5ರವರೆಗೆ 536 ಬಸ್‍ಗಳು ಜಿಲ್ಲೆ, ಹೊರಜಿಲ್ಲೆಗಳಿಗೆ ಕಾರ್ಯಚರಣೆ ನಡೆಸಿದವು. ಜನರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸುವುದು ನಮ್ಮಜವಾಬ್ದಾರಿಯಾಗಿದ್ದು, ಅದರಂತೆ ಹೆಚ್ಚುವರಿ ಬಸ್‍ಗಳನ್ನು ನಿಗಮ ಸೋಮವಾರ ಮಂಗಳವಾರ ಓಡಿಸಿದೆ. ಪ್ರಯಾಣಿಕರನ್ನು ಊರಿಗೆ ತಲುಪಿಸಿ ಆಯಾ ಡಿಪೋಗಳಿಗೆ ಬಸ್‍ಗಳು ಮರಳಲಿವೆ ಎಂದು ತುಮಕೂರು ಡಿಪೋಗಳ ವ್ಯವಸ್ಥಾಪಕರಾದ ತುಳಸೀರಾಮ್ ಹಾಗೂ ಸಂತೋಷ್ ಪ್ರಜಾಪ್ರಗತಿಗೆ ಮಾಹಿತಿ ನೀಡಿದರು.

      ಕೋವಿಡ್ ಸೋಂಕು ನಿಯಂತ್ರಣದ ಸಲುವಾಗಿ ಸರಕಾರದ ಮಾರ್ಗಸೂಚಿಯಂತೆ ಮೇ 12ರ ಬೆಳಿಗ್ಗೆ 6ರವರೆಗೆ 14 ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದ್ದು, ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಃಣಾ ಕಾಯ್ದೆ ಹಾಗೂ ಐಪಿಸಿ 188ರ ರೀತ್ಯಾ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರ ಆರೋಗ್ಯದ ಹಿತೃದೃಷ್ಟಿಯಿಂದ ಜಾರಿಗೊಳಿಸಿರುವ ಕರ್ಫ್ಯೂ ನಿಯಮಗಳನ್ನು ಜಿಲ್ಲೆಯ ಜನತೆ ಪಾಲಿಸಿ ಸಹಕರಿಸಬೇಕು.

-ವೈ.ಎಸ್.ಪಾಟೀಲ್ ಜಿಲ್ಲಾಧಿಕಾರಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap