ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ : ಕುಂಟುತ್ತಾ ಸಾಗಿದೆ ಕಾಮಗಾರಿ

ತುಮಕೂರು:

      ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿಯೋಜನೆಗೆ ಅಗತ್ಯವಿರುವ 209 ಎಕರೆಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಿರುವುದರಿಂದ ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಕುಂಟುತ್ತಾ ಸಾಗಿದೆ.

ನೇರ ರೈಲ್ವೆ ಯೋಜನೆಗೆ ಚಿತ್ರದುರ್ಗ ಜಿಲ್ಲೆಯಲ್ಲಿಒಟ್ಟು 101 ಕಿಮೀ ವ್ಯಾಪ್ತಿಯಲ್ಲಿ1221 ಎಕರೆ ಜಮೀನು ಭೂಸ್ವಾಧೀನ ಆಗಬೇಕಿದೆ. ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಿರಿಯೂರು ತಾಲೂಕು ವ್ಯಾಪ್ತಿಯ ಭೂ ಸ್ವಾಧೀನಕ್ಕೆ 150.35 ಕೋಟಿ ರೂ, ಚಿತ್ರದುರ್ಗ ತಾಲೂಕು ವ್ಯಾಪ್ತಿಯ ಭೂ ಸ್ವಾಧೀನಕ್ಕೆ 242.00 ಕೋಟಿ ರೂ. ಸೇರಿ ಒಟ್ಟು 392.04 ಕೋಟಿ ರೂ. ಮಂಜೂರು ಆಗಿದೆ.

ಜಿಲ್ಲೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸರಕಾರ ಇದುವರೆಗೂ ಒಟ್ಟು 140.30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿಜಮೀನು ಮಾಲೀಕರಿಗೆ ನೀಡಿರುವ ಪರಿಹಾರ ಹಾಗೂ ಶೇ.11ರಷ್ಟು ಆಡಳಿತ ವೆಚ್ಚ ಸೇರಿ ಒಟ್ಟು 11.26 ಕೋಟಿ ರೂ. ವೆಚ್ಚವಾಗಿದೆ. ಉಳಿದ 30.04 ಕೋಟಿ ರೂ. ವಿಶೇಷ ಭೂಸ್ವಾಧೀನಾಧಿಕಾರಿಗಳ ಉಳಿತಾಯ ಖಾತೆಯಲ್ಲಿದೆ. ಈಗ ಮಂಜೂರು ಆಗಿರುವ ಜಮೀನುಗಳಿಗೆ ಸರಕಾರ 252.26 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಿದೆ.

ಸಿದ್ದಾಪುರ ಗ್ರಾಮದ ಚಿಕ್ಕಜಾಜೂರು-ಚಿತ್ರದುರ್ಗ ರೈಲ್ವೆ ಕೂಡು ಮಾರ್ಗದವರೆಗೆ ಒಟ್ಟು 18 ಗ್ರಾಮಗಳಲ್ಲಿ 255.12 ಎಕರೆಗೆ ಅವಾರ್ಡ್‌ ಅನುಮೋದನೆಯಾಗಿದೆ. ಇದರಲ್ಲಿ 130 ಎಕರೆಗೆ ಸಂಬಂಧಿಸಿದ ರೈತರಿಗೆ 50.28 ಕೋಟಿ ರೂ. ಪರಿಹಾರ ನೀಡಲಾಗಿದೆ.

ಉಳಿದ 125 ಎಕರೆ ಪ್ರದೇಶಕ್ಕೆ ಪರಿಹಾರ ಪಾವತಿಸುವ ಕೆಲಸ ಪ್ರಗತಿಯಲ್ಲಿದ್ದು, ಈ ಸ್ಟ್ರೆಚ್ ನಲ್ಲಿ 70 ಕೋಟಿ ರೂ. ಭೂಪರಿಹಾರದ ಅನುದಾನ ಅವಶ್ಯಕತೆ ಇದೆ. ಇದೇ ಸ್ಟ್ರೆಚ್ ನಲ್ಲಿ ರೈಲ್ವೆ ಇಲಾಖೆ ಪುನಃ 45.17 ಎಕರೆಗೆ ಬೇಡಿಕೆ ಸಲ್ಲಿಸಿದ್ದು, ಈ ಜಮೀನಿನ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ಸಿದ್ಧತೆಯಲ್ಲಿದೆ. ಈ ಜಮೀನಿಗೂ ಸೇರಿ ಒಟ್ಟು 100 ಕೋಟಿ ರೂ. ಅನುದಾನ ಬೇಕಿದೆ.

ಕರಿಯಾಲ ಗ್ರಾಮದಿಂದ ಮಾಯಸಂದ್ರ ಗ್ರಾಮದವರೆಗಿನ ಎರಡನೇ ಸ್ಟ್ರೆಚ್ ನಲ್ಲಿ 12 ಗ್ರಾಮಗಳ 479.12 ಎಕರೆ ಭೂ ಸ್ವಾಧೀನವಾಗಲಿದೆ. ಇದರಲ್ಲಿ 280 ಎಕರೆ ಜಮೀನಿಗೆ ಅವಾರ್ಡ್‌ ಆಗಿದ್ದು, ಇದರಲ್ಲಿ 152 ಎಕರೆ ಜಮೀನಿಗೆ 22.59 ಕೋಟಿ ರೂ. ಪರಿಹಾರ ನೀಡಲಾಗಿದೆ. ಉಳಿದ 128 ಎಕರೆಗೆ 52 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಇದೇ ಎರಡನೇ ಸ್ಟ್ರೆಚ್ ನಲ್ಲಿ 199 ಎಕರೆ 19 (1) ಅಧಿಸೂಚನೆ ಹೊರಡಿಸಲಾಗಿದ್ದು, ಅವಾರ್ಡ್‌ ಇನ್ನಷ್ಟೇ ಆಗಬೇಕಿದೆ. ಈ ಜಮೀನಿಗೆ 152 ಕೋಟಿ ರೂ.ಗಳ ಅನುದಾನ ಬೇಕಿದೆ.

ಯರದ ಕಟ್ಟೆ ಗ್ರಾಮದಿಂದ ಮಾಯಸಂದ್ರ ಗ್ರಾಮದವರೆಗಿನ ಮೂರನೇ ಸ್ಟ್ರೆಚ್ ವ್ಯಾಪ್ತಿಯ 13 ಗ್ರಾಮಗಳಲ್ಲಿ ಒಟ್ಟು 405 ಎಕರೆ ಭೂಸ್ವಾಧೀನಕ್ಕೆ ಒಳಪಟ್ಟಿದೆ. ಇದರಲ್ಲಿ265 ಎಕರೆಗೆ ಅನುದಾನ ಮಂಜೂರು ಆಗಿದ್ದು, 116 ಎಕರೆಗೆ 37.37 ಕೋಟಿ ರೂ. ಪರಿಹಾರ ನೀಡಲಾಗಿದೆ. ಅವಾರ್ಡ್‌ ಆಗಿರುವ ಇನ್ನು 149 ಎಕರೆಗೆ ಪರಿಹಾರ ನೀಡಲು 50 ಕೋಟಿ ರೂ. ಅನುದಾನದ ಅಗತ್ಯ ಇದೆ. ಇದೇ ಸ್ಟ್ರೆಚ್ ನಲ್ಲಿ ಉಳಿಕೆ 140 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದು, ಅವಾರ್ಡ್‌ ಇನ್ನಷ್ಟೇ ಘೋಷಣೆಯಾಗಬೇಕಿದೆ. ಇದರ ಬಾಬ್ತು 120 ಕೋಟಿ ರೂಗಳ ಅವಶ್ಯಕತೆ ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap