ತುಮಕೂರು ಮಹಾನಗರ ಪಾಲಿಕೆ : ವಾರ್ಡ್ ವಾರು ವಿಶ್ಲೇಷಣೆ

   ತುಮಕೂರು:

      1 ನೇ ವಾರ್ಡ್ -ಮರಳೇನಹಳ್ಳಿ- (ಹಿಂದುಳಿದ ವರ್ಗ -ಎ-ಮಹಿಳೆ):-

      ಇಲ್ಲಿ ಕಾಂಗ್ರೆಸ್ನ ವೈ.ಸಿ.ಶಿವಮ್ಮ, ಬಿಜೆಪಿಯ ನಳಿನಾ ಇಂದ್ರಕುಮಾರ್ ಮತ್ತು ಜೆಡಿಎಸ್ನ ಜಿ.ಚಂದ್ರಕಲಾ ಅವರು ಕಣದಲ್ಲಿದ್ದರೂ, ಪಕ್ಷೇತರರಾದ ವಿಜಯಲಕ್ಷಮ್ಮ ಮತ್ತು ಜಯಲಕ್ಷ್ಮಿ ಅವರು ಬಿಜೆಪಿಗೆ ಸ್ಪರ್ಧೆ ಒಡ್ಡುತ್ತಿದ್ದಾರೆನ್ನಲಾಗಿದೆ. ಒಂದು ರೀತಿ ಇದು ಬಿಜೆಪಿಗೆ ಪ್ರತಿಷ್ಠಿತ ವಾರ್ಡ್. ಕಾರಣ ಈವರೆಗೆ ಬಿಜೆಪಿಯ ಇಂದ್ರಕುಮಾರ್ ಇಲ್ಲಿ ಸದಸ್ಯರಾಗಿದ್ದರು. ಮೀಸಲಾತಿ ಕಾರಣದಿಂದ ಈಗ ಅವರ ಪತ್ನಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಸದಸ್ಯರಾಗಿ ಇಲ್ಲಿ ಇಂದ್ರಕುಮಾರ್ ಅವರು ಈವರೆಗೆ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅವರ ಜನಪ್ರಿಯತೆ ಈಗ ಪರೀಕ್ಷೆಗೊಳ್ಳಲಿದೆ. ಒಟ್ಟು ಇಲ್ಲಿ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕುರುಬ ಸಮುದಾಯದವರೇ ಅಧಿಕವಾಗಿರುವ ಈ ವಾರ್ಡ್ನಿಂದ ಕುರುಬ ಸಮುದಾಯಕ್ಕೆ ಸೇರಿದವರೇ ಒಟ್ಟು ಐವರು ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳೂ ಕುರುಬರೇ ಎಂಬುದು ಗಮನಾರ್ಹ.

      2 ನೇ ವಾರ್ಡ್ -ಅಂತರಸನಹಳ್ಳಿ-(ಪರಿಶಿಷ್ಟ ಜಾತಿ):-

      ಈ ವಾರ್ಡ್ನಲ್ಲಿ ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ/ಪಂಗಡಡ ಮತದಾರರ ಸಂಖ್ಯೆ ಅಧಿಕವಿದ್ದು, ಅಂತಿಮವಾಗಿ ಮುಸ್ಲಿಂ ಮತಗಳೇ ಯಾವುದೇ ಅ‘್ಯರ್ಥಿಯ ಗೆಲುವಿಗೆ ನಿರ್ಣಾಯಕವಾಗಲಿದೆಯೆನ್ನಲಾಗುತ್ತಿದೆ. ಕಾಂಗ್ರೆಸ್ನ ಎ.ವೈ.ಹನುಮಂತರಾಯಪ್ಪ ರಾಜಕೀಯದಲ್ಲಿ ಹಳಬರಾಗಿದ್ದು, ಇವರು ಬೋವಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿಯ ಎಸ್.ಮಂಜುನಾಥ್ ಮತ್ತು ಜೆಡಿಎಸ್ನ ದೊಡ್ಡಯ್ಯ ರಾಜಕೀಯಕ್ಕೆ ಹೊಸಬರು. 6 ಜನ ಪಕ್ಷೇತರರು ಸ್ಪರ್ಧಿಸಿದ್ದರೂ, ಒಟ್ಟಾರೆ ಇಲ್ಲಿ ಮುಸ್ಲಿಂ ಮತಗಳು ಯಾರತ್ತ ಒಲಿಯಲಿವೆ ಎಂಬುದು ಗೆಲುವನ್ನು ನಿ‘ರ್ರಿಸಲಿದೆ.

      3 ನೇ ವಾರ್ಡ್ -ಅರಳೀಮರದಪಾಳ್ಯ-(ಸಾಮಾನ್ಯ):-

      ಈ ವಾರ್ಡ್ ಇಡೀ ನಗರದಲ್ಲಿ ‘‘ಹೈ ಓಲ್ಟೇಜ್ ವಾರ್ಡ್’’ ಎಂದೇ ಪರಿಗಣಿಸಲ್ಪಟ್ಟಿದೆ. ಘಟಾನುಘಟಿಗಳ ಗೂಳಿ ಕಾಳಗ ಇಲ್ಲಿ ನಡೆಯುತ್ತಿದೆಯೆಂಬುದು ರಾಜಕೀಯ ವಲಯದ ವರ್ಣನೆ. ಕಾಂಗ್ರೆಸ್ನ ಎನ್.ಮಹೇಶ್ ಇದೇ ವಾರ್ಡ್ನಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಇವರು, ವಾರ್ಡ್ನಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಇವರಿಗೆ ಪೈಪೋಟಿ ನೀಡಲು ಬಿಜೆಪಿಯಿಂದ ಲಿಂಗಾಯಿತ ಸಮುದಾಯದ ಬಿ.ಎಸ್.ನಾಗೇಶ್ ಸಹ ಕಣಕ್ಕಿಳಿದಿದ್ದು, ರಾಜಕೀಯವಾಗಿ ಭಾರಿ ಕುತೂಹಲ ಕೆರಳಿಸಿದೆ. ಈವರೆಗೆ 4 ನೇ ವಾರ್ಡ್ನಲ್ಲಿ ಸದಸ್ಯರಾಗಿದ್ದ ನಾಗೇಶ್ ವಾರ್ಡ್ ಮೀಸಲಾಗಿ ಹಿನ್ನೆಲೆ ಈಗ ಈ ವಾರ್ಡ್ಗೆ ಬಂದಿದ್ದು ಜಿದ್ದಾಜಿದ್ದಿನ ಸ್ಪರ್ಧೆಗೆ ಎಡೆಮಾಡಿದೆ. ಜೆಡಿಎಸ್ನಿಂದ ಕುರುಬ ಸಮುದಾಯದವರಾದ ಮಾಜಿ ನಗರಸಭಾ ಸದಸ್ಯ ಲಕ್ಷ್ಮೀನರಸಿಂಹರಾಜು ಸ್ಪರ್ಧಿಸಿದ್ದಾರೆ. ಇಲ್ಲಿ ಇತರೆ 8 ಜನರು ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಇವರಲ್ಲಿ ಮಾಜಿ ನಗರಸಭಾ ಸದಸ್ಯ ಕುರುಬ ಸಮುದಾಯದ ಕೆ.ನರಸಿಂಹರಾಜು ಸಹ ಇರುವುದು ಗಮನಾರ್ಹ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬ ಸಮುದಾಯದ ಮತವಿಭಜನೆ ಹೇಗಾಗಬಹುದೆಂಬ ಲೆಕ್ಕಾಚಾರ ಇಲ್ಲಿ ಶುರುವಾಗಿದೆ. ಅಲ್ಲದೆ ಸ್ಥಳೀಯರು ಮತ್ತು ಹೊರಗಿನವರೆಂಬ ಅಭಿಪ್ರಾಯವೂ ಚರ್ಚೆಯಾಗುತ್ತಿದೆ.

      4 ನೇ ವಾರ್ಡ್-ಚಿಕ್ಕಪೇಟೆ -(ಹಿಂದುಳಿದ ವರ್ಗ-ಬಿ-ಮಹಿಳೆ):-

      ಹೆಸರಿಗೆ ತಕ್ಕಂತೆ ಈ ವಾರ್ಡ್ನಲ್ಲಿ ಕೇವಲ 4 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. ಕಾಂಗ್ರೆಸ್ನಿಂದ ಟಿ.ಎಸ್.ಸಂಧ್ಯಾ ನಾರಾಯಣಪ್ಪ, ಬಿಜೆಪಿಯ ದೀಪಶ್ರೀ ಮಹೇಶ್ಬಾಬು, ಜೆಡಿಎಸ್ನ ಎ.ಪಾರ್ವತಿ ಮತ್ತು ಸಿಪಿಎಂನಿಂದ ರೇಖಾ ಉಮೇಶ್ ಸ್ಫರ್ಧಿಸಿದ್ದಾರೆ. ಈ ವಾರ್ಡ್ ಎಲ್ಲ ಜನಾಂಗ ಮತ್ತು ಧರ್ಮದವರಿಂದ ಕೂಡಿದೆ. ಅಭ್ಯರ್ಥಿಗಳು ಸ್ಥಳೀಯರು ಮತ್ತು ಹೊರಗಿನವರೆಂಬ ಚರ್ಚೆಯೂ ಇಲ್ಲಿ ನಡೆಯುತ್ತಿದೆ. ಮಿಗಿಲಾಗಿ ಈವರೆಗೆ ಈ ವಾರ್ಡ್ ನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಬಿ.ಎಸ್.ನಾಗೇಶ್ ಅವರು ಕಳೆದಬಾರಿ ನೀಡಿದ್ದ ಭರವಸೆಯಂತೆ ‘‘ಮಾದರಿ ವಾರ್ಡ್’’ ಆಗಿ ಮಾಡಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಹಲವರು ಕೇಳುತ್ತಿದ್ದಾರೆ. ‘‘ಈವರೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ನೋಡಿದ್ದೇವೆ. ಈಬಾರಿ ಸಿಪಿಎಂಗೊಂದು ಅವಕಾಶ ಕೊಟ್ಟು ನೋಡಬಹುದಲ್ಲವೇ?’’ ಎಂಬ ಮಾತುಗಳೂ ಕೇಳಿಸುತ್ತಿವೆ. ಚಿಕ್ಕಪೇಟೆ, ಆಯಿಲ್ಮಿಲ್ ರಸ್ತೆ, ಯಜಮಾನರ ಬೀದಿ ಹೀಗೆ ಒಂದೊಂದು ಭಾಗಗಳಲ್ಲಿ ಒಬ್ಬೊಬ್ಬರ ಹೆಸರು ಪ್ರಸ್ತಾಪಗೊಳ್ಳುತ್ತಿದೆ. ಕಾಂಗ್ರೆಸ್ನ ಸಂಧ್ಯಾ ನಾರಾಯಣಪ್ಪ ಅವರು ಈ ಹಿಂದಿನ ನಗರಸಭೆಯಲ್ಲಿ ಬಿಜೆಪಿಯಿಂದ ಉಪಾಧ್ಯಕ್ಷರಾಗಿದ್ದ ನಾರಾಯಣಪ್ಪ ಅವರ ಪತ್ನಿಯಾಗಿದ್ದು, ಈ ಚುನಾವಣೆ ಮೂಲಕ ರಾಜಕೀಯ ಚಟುವಟಿಕೆಯನ್ನು ನಾರಾಯಣಪ್ಪ ಪುನರಾರಂಭಿಸಿದಂತಿದೆ.

      5 ನೇ ವಾರ್ಡ್-ಶ್ರೀರಾಮನಗರ- (ಸಾಮಾನ್ಯ):-

      ಒಟ್ಟು 8 ಸ್ಪರ್ಧಿಗಳು ಕಣದಲ್ಲಿದ್ದು, ವಾರ್ಡ್ನ ಒಂದು ಭಾಗದಿಂದ ಏಕೈಕ ಅಭ್ಯರ್ಥಿಯಿದ್ದರೆ, ಉಳಿದ ಭಾಗಕ್ಕೆ ಸೇರಿದ 6 ಜನರು ಹಾಗೂ ಈ ವಾರ್ಡ್ಗೇ ಒಳಪಡದ ಓರ್ವ  ಅಭ್ಯರ್ಥಿ ಇಲ್ಲಿರುವುದು ವಿಶೇಷ. ಕಾಂಗ್ರೆಸ್ನ ಟಿ.ಎಂ.ಮಹೇಶ್, ಬಿಜೆಪಿಯ ಜಿ.ಎಸ್.ಶೇಷಾಚಲಂ, ಜೆಡಿಎಸ್ನ ಟಿ.ಎ.ಬಾಲಕೃಷ್ಣ ಅಲ್ಲದೆ ಇತರೆ ಐವರು ಪಕ್ಷೇತರರು ಇದ್ದಾರೆ. ನಗರದ ಅಮಾನಿಕೆರೆಯ ಕೋಡಿ ಬಸವೇಶ್ವರ ಎದುರಿನ ತೋಟದ ಸಾಲಿನ ರಸ್ತೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದವರೆಗೆ ಎಡಭಾಗಕ್ಕೆ ಸೇರಿದ ಹರಿಸಿಂಗರ ಬೀದಿ, ಪಾಂಡುರಂಗನಗರ, ಎಮ್ಮೆಕೇರಿ, ಕ್ರಿಶ್ಚಿಯನ್ನರ ಬೀದಿ ಒಳಗೊಂಡು ಮಂಡಿಪೇಟೆ ಮುಖ್ಯರಸ್ತೆಯವರೆಗಿನ ಬೆಂಕಿ ಪೊಟ್ಟಣದಂತಹ ಪ್ರದೇಶದಿಂದ ಏಕೈಕ ಅಭ್ಯರ್ಥಿಯಾಗಿ ಜೆಡಿಎಸ್ನ ಬಾಲಕೃಷ್ಣ ಕಣದಲ್ಲಿದ್ದಾರೆಂಬುದು ಹಾಗೂ ಈ ಭಾಗದಿಂದ ಹಿಂದೆ ಒಮ್ಮೆ ಇವರು ಹಾಗೂ ಆ ಬಳಿಕ ಇವರ ಪತ್ನಿ ಆಗಿನ ನಗರಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಸತತ 10 ವರ್ಷಗಳ ಜನಸಂಪರ್ಕ ಇವರದ್ದಾಗಿತ್ತೆಂಬುದು ಇವರ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ. ಶೇಷಾಚಲಂ (ಅಚ್ಚಯ್ಯ ಶೆಟ್ಟಿ) ಇಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದು, ಇವರು ಮಾಜಿ ನಗರಸಭಾ ಸದಸ್ಯರೆಂಬುದು ಹಾಗೂ ಈ ವಾರ್ಡ್ಗೆ ಹೊರಗಿನವರೆನಿಸಿದ್ದಾರೆಂಬುದು ಚರ್ಚೆಯ ವಿಷಯವಾಗಿದೆ. ಮಿಕ್ಕ ಎಲ್ಲ ಅಭ್ಯರ್ಥಿಗಳು ಕೆ.ಆರ್.ಬಡಾವಣೆ, ಅರಳೆಪೇಟೆ, ಹೊರಪೇಟೆ, ಶ್ರೀರಾಮನಗರ ಭಾಗಕ್ಕೆ ಸೇರಿದವರಾಗಿದ್ದಾರೆಂಬುದು ಮತ್ತೊಂದು ಚರ್ಚಾ ಸಂಗತಿ. ವಿಶೇಷಾಗಿ ಕೋಟೆ ಆಂಜನೇಯ ದೇವಾಲಯ ಒಳಗೊಂಡ ಆ ಭಾಗದಲ್ಲಿ ಕ್ರೈಸ್ತರು, ಮುಸ್ಲಿಮರು, ಹಿಂದುಳಿದ ವರ್ಗದವರೇ ಬಹುಸಂಖ್ಯೆಯಲ್ಲಿದ್ದು, ಈ ಭಾಗದಲ್ಲೇ ಸುಮಾರು 3200 ಮತಗಳಿವೆಯೆಂದು ಲೆಕ್ಕ ಹಾಕಲಾಗಿದೆ. ಇನ್ನು ಇತ್ತ ಅರಳೆ ಪೇಟೆ, ಕೆ.ಆರ್.ಬಡಾವಣೆ ಭಾಗದಲ್ಲಿ ವೀರಶೈವ-ಲಿಂಗಾಯಿತರು ಸೇರಿದಂತೆ ಎಲ್ಲ ಸಮುದಾಯಗಳವರೂ ಇದ್ದಾರೆ. ಮೇಲ್ನೋಟಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು, ಪಕ್ಷೇತರರಲ್ಲಿ ಟಿ.ಬಿ.ಮಹೇಶ್ (ಡಿಪೋ) ಪ್ರಬಲರೆನ್ನಲಾಗುತ್ತಿದೆ.

      6 ನೇವಾರ್ಡ್-ಭೀಮಸಂದ್ರ-(ಸಾಮಾನ್ಯ ಮಹಿಳೆ) :-

      ಈವರೆಗೆ ಇಲ್ಲಿ ಪಾಲಿಕೆ ಸದಸ್ಯರಾಗಿದ್ದ ಜೆಡಿಎಸ್ನ ಪ್ರೆಸ್ ರಾಜಣ್ಣ ಇದೀಗ ಮೀಸಲಾತಿ ಕಾರಣದಿಂದ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ನಿಂದ ಟಿ.ಆರ್.ಅಪರ್ಣ, ಬಿಜೆಪಿಯಿಂದ ಬಿ.ಜಿ.ವೀಣಾ ಕಣದಲ್ಲಿದ್ದು, ಈ ವಾರ್ಡ್ನಲ್ಲಿ ಈ ಮೂವರು ಮಾತ್ರ ಅಭ್ಯರ್ಥಿಗಳಿರುವುದು ವಿಶೇಷ. ಜೆ.ಡಿ.ಎಸ್.ಮತ್ತು ಬಿಜೆಪಿ ನಡುವೆಯೇ ಸ್ಪರ್ಧೆ ಎಂಬ ಭಾವನೆ ಇದೆ. ಪ್ರೆಸ್ ರಾಜಣ್ಣ ಅವರು ತಾವು ಮಾಡಿರುವ ವಾರ್ಡ್ ಅಭಿವೃದ್ಧಿ ಕಾರ್ಯಗಳು ಹಾಗೂ ಧರ್ಮಸ್ಥಳ ಸಂಸ್ಥೆ ಮೂಲಕ ಅವರು ಮಾಡಿರುವ ಸಮಾಜ ಸೇವಾ ಕಾರ್ಯಗಳು ಜೆಡಿಎಸ್ ಅಭ್ಯರ್ಥಿ ವಿಜಯಲಕ್ಷ್ಮಿ ಅವರಿಗೆ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ. ಈ ವಾರ್ಡ್ನಲ್ಲಿ ತಿಗಳ ಜನಾಂಗವೇ ಅಧಿಕವಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳವರು ನಂತರದ ಸ್ಥಾನದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ತಿಗಳ ಸಮುದಾಯದವರಾದರೆ, ಬಿಜೆಪಿ ಅಭ್ಯರ್ಥಿ ಒಕ್ಕಲಿಗರು. ಕಾಂಗ್ರೆಸ್ ಅಭ್ಯರ್ಥಿ ಪರಿಶಿಷ್ಟ ಜಾತಿಗೆ ಸೇರಿದವರು. ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರೆಂಬ ಭಾವನೆ ಇಲ್ಲೂ ವ್ಯಕ್ತವಾಗುತ್ತಿದೆ.

      7 ನೇ ವಾರ್ಡ್-ಅಗ್ರಹಾರ- (ಹಿಂದುಳಿದ ವರ್ಗ-ಬಿ) :-

      ಕೇವಲ ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ಎದುರಿಸುತ್ತಿರುವ ವಾರ್ಡ್ ಇದಾಗಿದೆ. ಜೆಡಿಎಸ್ನಿಂದ ಹಾಲಿ ಸದಸ್ಯ ಹಾಗೂ ಪಾಲಿಕೆಯ ಮಾಜಿ ಉಪಮೇಯರ್ ಟಿ.ಆರ್.ನಾಗರಾಜ್, ಕಾಂಗ್ರೆಸ್ನಿಂದ ಜೆ.ಕುಮಾರ್, ಬಿಜೆಪಿಯಿಂದ ಟಿ.ಡಿ.ವಿನಯ್ ಕಣದಲ್ಲಿದ್ದಾರೆ. ನಾಗರಾಜ್ ಮತ್ತು ಕುಮಾರ್ ಒಕ್ಕಲಿಗರಾದರೆ, ವಿಜಯ್ ಜೈನ ಸಮುದಾಯದವರು. ಆಚಾರ್ಯರ ಬೀದಿ, ಅಗ್ರಹಾರ, ತೋಟದ ಸಾಲು, ಜಿ.ಸಿ.ಆರ್.ಕಾಲೋನಿ ಒಳಗೊಂಡ ಈ ವಾರ್ಡ್ನಲ್ಲಿ 2900 ರಷ್ಟು ಮುಸ್ಲಿಂ ಮತದಾರರಿದ್ದು, ಯಾರೊಬ್ಬರ ಗೆಲುವಿಗೆ ಇವರ ಮತಗಳೇ ನಿರ್ಣಾಯಕವೆನ್ನಲಾಗುತ್ತಿದೆ. ನಂತರದ ಸ್ಥಾನ 1600 ಮತಗಳನ್ನು ಹೊಂದಿರುವ ತಿಗಳ ಸಮುದಾಯದ್ದು. ಇಲ್ಲಿ ಬ್ರಾಹ್ಮಣ ಸಮುದಾಯ ಸುಮಾರು 900 ಮತಗಳನ್ನು ಹೊಂದಿದೆ. ಮಿಕ್ಕಂತೆ ಲಿಂಗಾಯಿತರು, ಒಕ್ಕಲಿಗರು, ವಿಶ್ವಕರ್ಮರು ಮೊದಲಾದ ಇತರ ಸಮುದಾಯಗಳವರು ಸಹ ಇಲ್ಲಿ ಹಂಚಿಹೋಗಿದ್ದಾರೆ. ಟಿ.ಆರ್.ನಾಗರಾಜ್ ವಾರ್ಡ್ನಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕುಮಾರ್ ಮತ್ತು ವಿನಯ್ ಸಹ ಸೆಡ್ಡು ಹೊಡೆದಿದ್ದಾರೆ. ಬ್ರಾಹ್ಮಣ ಮತ್ತು ತಿಗಳ ಸಮುದಾಯದ ಮತಗಳು ಜೆಡಿಎಸ್ ಮತ್ತು ಬಿಜೆಪಿಗೆ ಹಂಚಿಹೋಗುವುದೆನ್ನಲಾಗುತ್ತಿದೆ. ಇತರ ಮತಗಳೊಂದಿಗೆ ಜಿ.ಸಿ.ಆರ್.ಕಾಲೋನಿಯ ಮುಸ್ಲಿಂ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಪಡೆಯುವವರು ವಿಜಯಿಯಾಗುವರೆಂಬುದು ಇಲ್ಲಿನ ಲೆಕ್ಕಾಚಾರ.

      8 ನೇ ವಾರ್ಡ್-ಪಿ.ಜಿ.ಲೇಔಟ್- (ಸಾಮಾನ್ಯ)-

      ಎರಡು ಬಾರಿ ಸತತ ಗೆದ್ದು, 3 ಬಾರಿ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಕಾಂಗ್ರೆಸ್ನ ಸೈಯದ್ ನಯಾಜ್ ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈವರೆಗೆ ವಾರ್ಡ್ನಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಜೆಡಿಎಸ್ನಿಂದ ಮುನೀರ್ ಅಹಮದ್ ಹಾಗೂ ಬಿಜೆಪಿಯಿಂದ ಎನ್.ಮಂಜುನಾಥ್ ಕಣದಲ್ಲಿದ್ದು, ಇಬ್ಬರು ಮುಸ್ಲಿಮರು ಪಕ್ಷೇತರರಾಗಿದ್ದಾರೆ. ಈ ಭಾಗದಲ್ಲಿ ಮುಸ್ಲಿಮರು, ದಲಿತರು ಹಾಗೂ ಇತರ ಹಿಂದುಳಿದ ವರ್ಗದವರು ಇದ್ದಾರೆ. ಕಣದಲ್ಲಿ ಒಟ್ಟು ನಾಲ್ವರು ಮುಸ್ಲಿಂ ಅಭ್ಯರ್ಥಿಗಳಿದ್ದು, ಮತ ವಿ‘ಜನೆಯ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿದೆ. ಆದರೂ ಸೈಯದ್ ನಯಾಜ್ ಒಂದು ಹೆಜ್ಜೆ ಮುಂದಿದ್ದಾರೆಂದು ಹೇಳಲಾಗುತ್ತಿದೆ.

      9 ನೇ ವಾರ್ಡ್ -ವೀರಸಾಗರ- (ಪರಿಶಿಷ್ಟ ಜಾತಿ -ಮಹಿಳೆ):-

      ಪಾಲಿಕೆಯಲ್ಲಿ ಪ್ರಸ್ತುತ ಮೇಯರ್ ಆಗಿದ್ದ ಸುಧೀಶ್ವರ್ ಅವರು ಈ ವಾರ್ಡ್ನಿಂದ ಈಗ ತಮ್ಮ ಪತ್ನಿ ಪ್ರಭಾವತಿ ಸುಧೀಶ್ವರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಇದರಿಂದಾಗಿ ಈ ವಾರ್ಡ್ ಸಹಜವಾಗಿಯೇ ನಗರದ ಪ್ರತಿಷ್ಠಿತ ವಾರ್ಡ್ಗಳಲ್ಲೊಂದಾಗಿದೆ. ಪಾಲಿಕೆ ಸದಸ್ಯರಾಗಿ, ಮೇಯರ್ ಆಗಿ ಸುಧೀಶ್ವರ್ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಅವರ ಜನಪ್ರಿಯತೆ ಈಗ ಪರೀಕ್ಷೆಗೊಳಗಾಗುತ್ತಿದೆ. ಬಿಜೆಪಿಯಿಂದ ನರಸಮ್ಮ ಮತ್ತು ಜೆಡಿಎಸ್ನಿಂದ ಸೌಮ್ಯ ಶಿವಪ್ರಸಾದ್ ಕಣದಲ್ಲಿದ್ದು ಸ್ಪರ್ಧೆ ಒಡ್ಡಿದ್ದಾರೆ. ಇತರೆ ಮೂವರು ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ಗೆ ಜೆಡಿಎಸ್ ಸ್ಪರ್ಧೆ ಒಡ್ಡುತ್ತಿದೆ ಎನ್ನಲಾಗಿದೆ. ಇಲ್ಲಿ 1600 ದಲಿತರ ಮತಗಳಿದ್ದು, 4000 ಷ್ಟು ಮುಸ್ಲಿಂ ಮತಗಳಿವೆ. ಇತರೆ ಹಿಂದುಳಿದ ವರ್ಗಗಳ ಮತಗಳು ಹಂಚಿಹೋಗಿವೆ. ದಲಿತ ಮತಗಳ ಜೊತೆಗೆ ಮುಸ್ಲಿಂ ಮತಗಳನ್ನು ಯಾರು ಹೆಚ್ಚು ಪಡೆಯುವರೋ ಅಂಥವರು ಗೆಲ್ಲುವರೆಂದು ಹೇಳಲಾಗುತ್ತಿದೆ.

      10 ನೇ ವಾರ್ಡ್-ಲೇಬರ್ ಕಾಲೋನಿ (ಹಿಂದುಳಿದ ವರ್ಗ -ಎ-ಮಹಿಳೆ) :-

      ಸತತ ಎರಡು ಬಾರಿ ಕಾಂಗ್ರೆಸ್ ಸದಸ್ಯರಾಗಿ ಗೆದ್ದುಬಂದಿದ್ದ ಹಾಗೂ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಮಹಮದ್ ನದೀಂ ಪಾಷ (ಚಿಚ್ಚ) ಅವರು ಈ ಬಾರಿ ವಾರ್ಡ್ ಮೀಸಲಾತಿ ಬದಲಾದ ಕಾರಣದಿಂದ ತಮ್ಮ ಪತ್ನಿ ಮುಬಸ್ಸಿರ ಸುಲ್ತಾನ ಅಕ್ತರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಜೆಡಿಎಸ್ನಿಂದ ದಿಲ್ಶಾದ್ ನಾನು ಸ್ಪರ್ಧಿಸಿದ್ದು, ಇತರೆ ಐವರು ಪಕ್ಷೇತರ ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದಾರೆ. ತಾವು ಕಳೆದ 10 ವರ್ಷಗಳಿಂದ ವಾರ್ಡ್ಗೆ ಸಲ್ಲಿಸಿರುವ ಸೇವೆಯನ್ನು ಮುಂದಿಟ್ಟುಕೊಂಡು ಮಹಮದ್ ನದೀಂ ಪಾಷ ಅವರು ತಮ್ಮ ಪತ್ನಿ ಪರವಾಗಿ ಮತ ಯಾಚಿಸುತ್ತಿದ್ದಾರೆ. ಈ ವಾರ್ಡ್ನ ಎಲ್ಲ 7 ಸ್ಪರ್ಧಿಗಳೂ ಮುಸ್ಲಿಮರೆಂಬುದು ಗಮನಾರ್ಹ. ಈ ವಾರ್ಡ್ನಲ್ಲಿ ಸುಮಾರು 11000 ದಷ್ಟು ಮುಸ್ಲಿಂ ಮತದಾರರಿದ್ದು, ಇತರರ ಸಂಖ್ಯೆ ಕಡಿಮೆ ಇದೆ. ಮುಸ್ಲಿಮರ ಮತಗಳೇ ಇಲ್ಲೂ ಯಾವೊಬ್ಬ ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕವಾಗಲಿದೆ.

 11 ವಾರ್ಡ್-ಮೆಳೆಕೋಟೆ- (ಹಿಂದುಳಿದ ವರ್ಗ -ಎ):-

      ಇಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ನಗರಸಭಾ ಸದಸ್ಯ ಸೈಯದ್ ಮಹಬೂಬ್ಪಾಷ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಇವರಿಗೂ ಜೆಡಿಎಸ್ನ ಎಂ.ಕೆ.ಮನು ಅವರಿಗೂ ಹಣಾಹಣಿ ಇರುವಂತೆ ತೋರುತ್ತಿದೆ. ಬಿಜೆಪಿಯಿಂದ ಮಾಜಿ ನಗರಸಭಾ ಸದಸ್ಯ ಎಂ.ಪಿ.ರಮೇಶ್ ಕಣದಲ್ಲಿದ್ದಾರೆ. ಮುಸ್ಲಿಮರ ಮತಗಳು ಸುಮಾರು 2800 ರಷ್ಟಿದ್ದು, ಉಪ್ಪಾರರ ಮತಗಳು 1400, ದಲಿತರ ಮತಗಳು ಸುಮಾರು 2000 ರಷ್ಟಿವೆ. ಕುರುಬ ಸಮುದಾಯದ ಸುಮಾರು 500 ಮತಗಳು ಸೇರಿದಂತೆ ಹಿಂದುಳಿದ ವರ್ಗದವರು ಇತರರು ಇಲ್ಲಿದ್ದಾರೆ. ರಾಜೀವ್ಗಾಂಧಿ ನಗರದಲ್ಲಿ ಗರಿಷ್ಠ ಮತಗಳನ್ನು ಪಡೆದು ಇತರೆಡೆ ಒಂದಿಷ್ಟು ಮತ ಪಡೆಯುವವರ ಗೆಲುವು ಸುಲಭ, ಅದೇ ರೀತಿ ಮೇಳೆಕೋಟೆ ಭಾಗದಲ್ಲಿ ಗರಿಷ್ಟ ಮತಗಳನ್ನು ಪಡೆದು ಇತರೆಡೆ ಮತಗಳನ್ನು ಸೆಳೆದರೆ ಅಂತಹವರು ಗೆಲ್ಲಬಹುದು ಎಂಬುದು ಇಲ್ಲಿನ ಲೆಕ್ಕಾಚಾರ.

12 ನೇ ವಾರ್ಡ್ -ನಜರಾಬಾದ್ (ಸಾಮಾನ್ಯ):-

      11 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಸುಮಾರು ಎರಡು ದಶಕಗಳಿಂದ ಬಡವರ ಪರವಾದ ಅಸಂಖ್ಯಾತ ಹೋರಾಟಗಳಿಂದಲೇ ಗುರುತಿಸಿಕೊಂಡು ಬಂದಿರುವ ಸೈಯದ್ ಮುಜೀಬ್ ಅಹಮದ್ ಇಲ್ಲಿ ಸಿಪಿಎಂ ಅಭ್ಯರ್ಥಿ ಆಗಿರುವುದರಿಂದ ಸಹಜವಾಗಿಯೇ ಈ ವಾರ್ಡ್ ಎಲ್ಲ ಪ್ರಜ್ಞಾವಂತರ ಗಮನ ಸೆಳೆಯುತ್ತಿದೆ. ಜನಪರ ಪ್ರಾಮಾಣಿಕ ಹೋರಾಟಗಾರನನ್ನು ಜನರು ಯಾವ ರೀತಿ ಬೆಂಬಲಿಸುವರೆಂಬುದನ್ನು ಪ್ರಜ್ಞಾವಂತರು ಎದುರು ನೋಡುತ್ತಿದ್ದಾರೆ. ಮುಜೀಬ್ ಹಾಗೂ ಎಸ್.ಡಿ.ಪಿ.ಐ.ನ ಮುಕ್ತಿಯಾರ್ ಅಹಮದ್ ಮತ್ತು ಕಾಂಗ್ರೆಸ್ನ ಷಕೀಲ್ ಅಹಮದ್ ಷರೀಫ್ ನಡುವೆ ಹಣಾಹಣಿ ಇದೆ ಎನ್ನಲಾಗುತ್ತಿದೆ. ಸ್ವತಂತ್ರವಾಗಿ ಸ್ಪರ್ಧಿಸಿರುವ ಸೈಯದ್ ಹಬೀಬ್ ಎಷ್ಟು ಓಟುಗಳನ್ನು ಪಡೆಯುತ್ತಾರೋ ಅದು ಕಾಂಗ್ರೆಸ್ ಅಭ್ಯರ್ಥಿಗೆ ಹೊಡೆತ ತರುತ್ತದೆ; ಅದೇ ರೀತಿ ಮತ್ತೋರ್ವ ಪಕ್ಷೇತರ ಅಭ್ಯರ್ಥಿ ಆರ್.ನಳಿನ ಅವರು ಪಡೆಯುವ ಮತಗಳು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಅವರಿಗೆ ತೊಡಕಾಗುತ್ತದೆಂದೇ ಇಲ್ಲಿ ವಿಮರ್ಶಿಸಲಾಗುತ್ತಿದೆ. ಇಲ್ಲಿ ಸುಮಾರು 7000 ಮುಸ್ಲಿಂ ಮತಗಳು, ಕುರುಬ ಸಮುದಾಯದ 1500 ಮತಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ಮತಗಳು ಇಲ್ಲಿವೆ.

13 ನೇ ವಾರ್ಡ್-ಕುರಿಪಾಳ್ಯ- (ಸಾಮಾನ್ಯ ಮಹಿಳೆ) :-

      ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರಾದರೂ ಇಲ್ಲಿ ಸ್ವತಂತ್ರ ಅಭ್ಯರ್ಥಿ ಟಿ.ಗೀತಾ ಅವರೇ ಪ್ರಬಲ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ನ ರೀದಾ ಬೇಗಂ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಇವರಿಬ್ಬರ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ಈವರೆಗೆ ಸತತ ಎರಡು ಬಾರಿ ಗೆದ್ದು ಸದಸ್ಯರಾಗಿದ್ದ ಹಾಗೂ ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿದ ಮಹಮದ್ ಹಫೀಜ್ ಅವರು ಈ ಬಾರಿ ವಾರ್ಡ್ ಮೀಸಲಾತಿ ಬದಲಾದ ಹಿನ್ನೆಲೆಯಲ್ಲಿ ತಮ್ಮ ಪತ್ನಿಯನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಆ ಮೂಲಕ ಈವರೆಗಿನ ವಾರ್ಡ್ ಅಭಿವೃದ್ಧಿ ಕಾಮಗಾರಿಗಳನ್ನು ಮತ್ತು ತಮ್ಮ ಜನಪ್ರಿಯತೆಯನ್ನು ಮಹಮದ್ ಹಫೀಜ್ ಪಣಕ್ಕೊಡ್ಡಿದ್ದಾರೆ. ಅಪ್ಸರಾ ಬಾನು ಇಲ್ಲಿನ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಮತ್ತೋರ್ವ ಸ್ವತಂತ್ರ ಅಭ್ಯರ್ಥಿ ಇದ್ದಾರೆ. ಇಲ್ಲಿ ಸುಮಾರು 3200 ಮುಸ್ಲಿಂ ಮತಗಳಿದ್ದು, 900 ದಲಿತರ, 300 ಕ್ರೈಸ್ತರ, 300 ಕುರುಬ ಸಮುದಾಯದ ಹಾಗೂ ಇತರ ಹಿಂದುಳಿದ ವರ್ಗಗಳವರ ಮತಗಳಿವೆ. ಸ್ವತಂತ್ರ ಅಭ್ಯರ್ಥಿ ಗೀತಾ ಅವರು 12 ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಶಂಕರ್ ಅವರ ಪತ್ನಿ ಎಂಬುದು ಗಮನಾರ್ಹ.

14 ನೇ ವಾರ್ಡ್ -ವಿನಾಯಕ ನಗರ (ಸಾಮಾನ್ಯ ಮಹಿಳೆ):-

      ಇಲ್ಲಿ 3 ಪಕ್ಷಗಳ 3 ಅಭ್ಯರ್ಥಿಗಳು ಮಾತ್ರ ಇದ್ದು, ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆಯಾದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ತೀವ್ರವಾಗಿದೆಯೆನ್ನಲಾಗುತ್ತಿದೆ. ತುಮಕೂರು ನಗರಸಭೆಯ ಅಧ್ಯಕ್ಷರಾಗಿದ್ದ ಹಾಗೂ ನಂತರದ ಮಹಾನಗರ ಪಾಲಿಕೆಯಲ್ಲಿ ಉಪಮೇಯರ್ ಆಗಿದ್ದ ಅಸ್ಲಂಪಾಷ ಅವರ ಮಗಳು ನಾಸಿರಾ ಬಾನು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಬಿಜೆಪಿಯಿಂದ ಪಿ.ಎನ್.ರತ್ನಮಾಲಾ ಸ್ಪರ್ಧೆಯೊಡ್ಡಿದ್ದಾರೆ. ಜೆಡಿಎಸ್ನಿಂದ ಶಾನು ಕಣಕ್ಕಿಳಿದ್ದಿದ್ದಾರೆ. ಈ ವಾರ್ಡ್ನಲ್ಲಿ ಸುಮಾರು 4000 ದಷ್ಟು ಮುಸ್ಲಿಂ ಮತಗಳಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ ತಮಿಳು ಭಾಷಿಕರು ಸುಮಾರು 1000 ದಷ್ಟಿದ್ದಾರೆ. ಇತರರು ಸುಮಾರು 3000 ದಷ್ಟಿದ್ದಾರೆ.

15 ನೇ ವಾರ್ಡ್-ಗಾಂಧಿನಗರ (ಹಿಂದುಳಿದ ವರ್ಗ-ಎ-ಮಹಿಳೆ):-

      ನಗರದ ಹೃದಯಭಾಗವಾದ ಈ ವಾರ್ಡ್ನಿಂದ ಬಿಜೆಪಿಯ ವಿ.ಎಸ್.ಗಿರಿಜ, ಜೆಡಿಎಸ್ನ ಟಿ.ಜಿ.ವಿಜಯಕುಮಾರಿ, ಕಾಂಗ್ರೆಸ್ನ ಡಿ.ಸಾವಿತ್ರಮ್ಮ ಹಾಗೂ ಇಬ್ಬರು ಪಕ್ಷೇತರರು ಸ್ಪರ್ಧಿಸಿದ್ದಾರೆ. ಸುಮಾರು 1500 ಲಿಂಗಾಯಿತರು, 1200 ಜೈನರು, 900 ಬ್ರಾಹ್ಮಣರು, 500 ಆರ್ಯವೈಶ್ಯ ಸಮಾಜದ ಮತದಾರರು ಇಲ್ಲಿದ್ದಾರೆಂಬ ಲೆಕ್ಕಾಚಾರವಿದೆ. ‘‘ಸೋಮೇಶ್ವರ ಬಡಾವಣೆ, ಸಿ.ಎಸ್.ಐ. ಲೇಔಟ್, ಗಾಂಧಿನಗರ ಒಳಗೊಂಡ ಈ ವಾರ್ಡ್ನಲ್ಲಿ ಸುಶಿಕ್ಷಿತರೇ ಅಧಿಕ. ಸಹಜವಾಗಿಯೇ ಬಿಜೆಪಿ ಒಲವಿನವರೇ ಹೆಚ್ಚು, ಅಲ್ಲದೆ ಈ ವಾರ್ಡ್ನಿಂದ ಬಿಜೆಪಿ ಗೆದ್ದುಕೊಂಡು ಬಂದಿರುವ ಇತಿಹಾಸವಿದೆ. ಹೀಗಾಗಿ ಇಲ್ಲಿ ಬಿಜೆಪಿ ಹಾದಿ ಕಠಿಣವಾಗಿಲ್ಲ’’ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೂ ಸ್ಪರ್ಧೆಯಂತೂ ಇದ್ದೇ ಇದೆ.

16 ನೇ ವಾರ್ಡ್-ಕೆ.ಆರ್.ಬಡಾವಣೆ -(ಸಾಮಾನ್ಯ):-

      ಈಗಾಗಲೇ ಮೂರು ಬಾರಿ ನಗರಸಭೆ ಸದಸ್ಯರಾಗಿದ್ದು, ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿದ್ದ ಸರಳ ವ್ಯಕ್ತಿತ್ವದ ರಾಮಕೃಷ್ಣ ಬದಲಾದ ಈ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಮ್ಮ ಜನಪ್ರಿಯತೆಯನ್ನು ಪಣಕ್ಕೊಡ್ಡಿದ್ದಾರೆ. ಕಾಂಗ್ರೆಸ್ನ ಇತಾಯತ್ ಉಲ್ಲಾ ಖಾನ್ ಇವರಿಗೆ ನೇರ ಸ್ಪರ್ಧೆ ಒಡ್ಡಿದ್ದಾರೆ. ಟಿ.ಜಿ. ಶಿವಕುಮಾರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಇತರೆ 6 ಜನ ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಮುಸ್ಲಿಂ ಮತಗಳು ಗಣನೀಯ ಸಂಖ್ಯೆಯಲ್ಲಿದೆ. ಮಿಕ್ಕಂತೆ ತಮಿಳು ಭಾಷಿಕರು ಸೇರಿದಂತೆ ಹಿಂದುಳಿದ ವರ್ಗದವರು ಹಾಗೂ ಇತರೆ ಸಮುದಾಯದವರು ಚದುರಿದಂತೆ ಇದ್ದಾರೆ. ‘‘ಬಿಜೆಪಿ ಅಭ್ಯರ್ಥಿ ಗಳಿಸುವ ಮತಗಳು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ; ಅದೇ ರೀತಿ ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳು ಗಳಿಸುವ ಹೆಚ್ಚು-ಹೆಚ್ಚು ಮತಗಳು ಜೆಡಿಎಸ್ ಗೆಲುವಿಗೆ ಕಾರಣವಾಗಲಿದೆ’’ ಎಂದು ಇಲ್ಲಿನ ರಾಜಕೀಯವನ್ನು ವಿಮರ್ಶಿಸಲಾಗುತ್ತಿದೆ.

17 ನೇ ವಾರ್ಡ್- ಶಾಂತಿ ನಗರ -(ಹಿಂದುಳಿದ ವರ್ಗ-ಎ):-

      ಇಲ್ಲಿ 8 ಜನ ಅಭ್ಯರ್ಥಿಗಳು ಕಣದಲ್ಲಿದ್ದರೂ, ಕಾಂಗ್ರೆಸ್ನ ಎನ್.ರಮೇಶ್, ಬಿಜೆಪಿಯ ಮೋಹನ್ ಕುಮಾರ್ ಮತ್ತು ಜೆಡಿಎಸ್ನ ಬಿ.ಎಸ್.ಮಂಜುನಾಥ್ ನಡುವೆ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇದೆಯೆನ್ನಲಾಗುತ್ತಿದೆ. ಆದರೆ ಪಕ್ಷೇತರರಾಗಿ ಸ್ಪರ್ಧಿಸಿರುವ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಸಾರ್ವಜನಿಕ ಹೋರಾಟಗಾರ ಇಮ್ರಾನ್ ಪಾಷ ತೀವ್ರ ಸ್ಪರ್ಧೆ ಒಡ್ಡುತ್ತಿದ್ದಾರೆ. ತಾವು ಈವರೆಗೆ ಪಾಲಿಕೆಯ ಅಕ್ರಮಗಳ ವಿರುದ್ಧ ಮಾಡಿರುವ ಹೋರಾಟ ಹಾಗೂ ಉಪ್ಪಾರಹಳ್ಳಿ ಮಿನಿ ಅಂಡರ್ಪಾಸ್ ನಿರ್ಮಾಣಕ್ಕೆ ನಡೆಸಿದ ಯಶಸ್ವೀ ಹೋರಾಟ ಇತ್ಯಾದಿ ವಿವರಿಸಿ ಜನರ ಗಮನ ಸೆಳೆಯುತ್ತಿದ್ದು, ಈ ವಾರ್ಡ್ ಸಹ ನಗರದ ಹೋರಾಟಗಾರರ ಗಮನವನ್ನು ಸೆಳೆಯುತ್ತಿದೆ. ಇಲ್ಲಿ ಸುಮಾರು 1600 ಮುಸ್ಲಿಂ ಮತಗಳಿದ್ದು, 900 ರಷ್ಟು ಒಕ್ಕಲಿಗರ, ಹಿಂದುಳಿದ ವರ್ಗಗಳ ಸುಮಾರು 300 ಓಟುಗಳು ಹಾಗೂ ಇತರ ಸಮುದಾಯಗಳ ಓಟುಗಳು ಇವೆಯನ್ನಲಾಗಿದೆ. ಮುಸ್ಲಿಂ ಓಟುಗಳು ಇಲ್ಲಿ ನಿರ್ಣಾಯಕ ಆಗಲಿದ್ದು, ಇವರ ಮತಗಳು ಕಾಂಗ್ರೆಸ್ಗೆ ಬೀಳುವುದೇ ಅಥವಾ ಈ ಬಾರಿ ಸ್ಥಳೀಯ ವ್ಯಕ್ತಿಗೆ ಲಭಿಸುವುದೇ ಎಂಬ ಕುತೂಹಲ ಉಂಟಾಗಿದೆಯೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.

18 ನೇ ವಾರ್ಡ್ -ಬನಶಂಕರಿ- (ಸಾಮಾನ್ಯ ಮಹಿಳೆ):-

      ಬಿಜೆಪಿಯ ಎಸ್.ಮಂಜುಳ, ಕಾಂಗ್ರೆಸ್ನ ಹಾಲಿ ಸದಸ್ಯೆ ಮುಜೀದಾ ಖಾನಂ, ಜೆಡಿಎಸ್ನ ಆರ್.ರೇಖಾ ಮತ್ತು ಇತರ ಮೂವರು ಪಕ್ಷೇತರರು ಸೇರಿದಂತೆ ಒಟ್ಟು 7 ಜನರು ಇಲ್ಲಿ ಕಣದಲ್ಲಿದ್ದಾರೆ. ಆದರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೆ.ಜಿ.ಗೀತಾ (ಗೀತಾ ರುದ್ರೇಶ್) ಇಲ್ಲಿಂದ ಪಕ್ಷೇತರರಾಗಿ ಕಣಕ್ಕಿಳಿದಿರುವುದರಿಂದ ಈ ವಾರ್ಡ್ ಸಹ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಹಿಂದೆ 2 ಬಾರಿ ಗೆಲುವು ಸಾಧಿಸಿದ್ದ ಇವರು ಪ್ರಬಲ ಅಭ್ಯರ್ಥಿಯೂ ಆಗಿದ್ದಾರೆ. ಇಲ್ಲಿ 1850 ರಷ್ಟು ಮುಸ್ಲಿಂ ಮತದಾರರಿದ್ದು, ಇತರೆ ಮತದಾರರ ಸಂಖ್ಯೆ ಸುಮರು 8000 ದಷ್ಟಿದೆ.

19 ನೇ ವಾರ್ಡ್- ಕೋತಿತೋಪು- (ಪರಿಶಿಷ್ಟ ಜಾತಿ ಮಹಿಳೆ):-

     ಬಿಜೆಪಿಯ ಜಿ. ಮ‘ುವನಿತ, ಕಾಂಗ್ರೆಸ್ನ ಬಿ.ಎಸ್.ರೂಪಶ್ರೀ, ಜೆಡಿಎಸ್ನ ಲಲಿತಕುಮಾರಿ ಸೇರಿದಂತೆ ಒಟ್ಟು 6 ಜನರು ಕಣದಲ್ಲಿದ್ದರೂ, ಸದರಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇದೆಯೆನ್ನಲಾಗಿದೆ. ಜೆಡಿಎಸ್ ಅಭ್ಯರ್ಥಿ ಲಲಿತಕುಮಾರಿ ಅವರು ಈವರೆಗೆ ಪಾಲಿಕೆ ಸದಸ್ಯರಾಗಿದ್ದ ಹನುಮಂತರಾಯಪ್ಪ (ಎಚ್.ಆರ್.) ಅವರ ಪತ್ನಿ ಎಂಬುದು ಗಮನಾರ್ಹ. ಆದರೆ ಪಕ್ಷೇತರರಾದ ರತ್ನಮ್ಮ ಶ್ರೀರಾಮನಗರದ ನಿವಾಸಿಯಾಗಿದ್ದು, ಶ್ರೀರಾಮನಗರದಲ್ಲಿ ಇವರ ಪ್ರಭಾವ ಸಹಜವಾಗಿ ಒಂದು ಹೆಜ್ಜೆ ಮುಂದಿದೆಯೆಂದು ಹೇಳಲಾಗುತ್ತಿದೆ. ಈ ವಾರ್ಡ್ನಲ್ಲಿ ಮುಸ್ಲಿಂ ಓಟುಗಳು ಸುಮಾರು 1100 ರಷ್ಟಿದ್ದು, ಮಿಕ್ಕ ಓಟುಗಳು ಎಲ್ಲ ಜನಾಂಗದವರಿಗೂ ಹಂಚಿಹೋಗಿದೆ.

20 ನೇ ವಾರ್ಡ್- ಹನುಮಂತಪುರ- (ಹಿಂದುಳಿದ ವರ್ಗ-ಎ):-

      ಇಲ್ಲಿ ಕಾಂಗ್ರೆಸ್ನ ಟಿ.ಎಲ್.ಮೇಘ, ಬಿಜೆಪಿಯ ಟಿ.ವಿ.ರವಿಶಂಕರ್, ಜೆಡಿಎಸ್ನ ಎ.ಶ್ರೀನಿವಾಸ್ ಮತ್ತು ಬಿ.ಎಸ್.ಪಿ.ಯ ಅಬ್ಬಾಸ್ ಅಲಿ ಕಣದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೆಣಸಾಟ ಕಂಡುಬಂದರೂ, ಜೆಡಿಎಸ್ ಒಂದು ಹೆಜ್ಜೆ ಮುಂದಿದೆಯೆಂಬ ಅಭಿಪ್ರಾಯ ಇದೆ.

21 ನೇ ವಾರ್ಡ್- ಕುವೆಂಪುನಗರ -(ಹಿಂದುಳಿದ ವರ್ಗ-ಎ- ಮಹಿಳೆ) :-

      ಬಿಜೆಪಿಯ ಭಾಗ್ಯ ರಾಜೇಂದ್ರ, ಕಾಂಗ್ರೆಸ್ನ ಮಂಜುಳ ಮತ್ತು ಜೆಡಿಎಸ್ನಿಂದ ಮಾಜಿ ಮೇಯರ್ ಲಲಿತ ರವೀಶ್ ಈ ಮೂವರು ಮಾತ್ರ ಕಣದಲ್ಲಿದ್ದು, ಮಾಜಿ ಮೇಯರ್ ವಾರ್ಡ್ ಆಗಿರುವುದರಿಂದ ಸಹಜವಾಗಿಯೇ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇವರು ಎರಡನೇ ಬಾರಿ ಕಣಕ್ಕಿಳಿದಿದ್ದು, ತಮ್ಮ ಜನಪ್ರಿಯತೆಯನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇರುವುದೆಂದು ಹೇಳಲಾಗುತ್ತಿದೆ. ಈ ವಾರ್ಡ್ನಲ್ಲಿ ಲಿಂಗಾಯಿತರು 2000, ಒಕ್ಕಲಿಗರು 2000, ತಿಗಳ ಸಮುದಾಯದ 1500 ಹೀಗೆ ಪ್ರಮುಖ ಸಮುದಾಯದ ಮತಗಳಿವೆ.

  22 ನೇ ವಾರ್ಡ್- ವಾಲ್ಮೀಕಿ ನಗರ-(ಸಾಮಾನ್ಯ):-

      ಮಾಜಿ ಮೇಯರ್ ಜೆಡಿಎಸ್ನ ಎಚ್.ರವಿಕುಮಾರ್, ಕಾಂಗ್ರೆಸ್ನ ಎಂ.ವಿ.ರಾಘವೇಂದ್ರ ಸ್ವಾಮಿ, ಬಿಜೆಪಿಯ ಸಂದೀಪ್ ಕೆ.ಗೌಡ ಹಾಗೂ ಇಬ್ಬರು ಪಕ್ಷೇತರರು ಸೇರಿ ಒಟ್ಟು 5 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ಮೇಯರ್ ವಾರ್ಡ್ ಆಗಿರುವುದರಿಂದ ಸಹಜವಾಗಿ ಇದು ಎಲ್ಲರ ಗಮನ ಸೆಳೆಯುತ್ತಿದೆ. ಮೇಲ್ನೋಟಕ್ಕೆ 3 ಪಕ್ಷಗಳಿದ್ದರೂ, ಜೆಡಿಎಸ್ಗೆ ಬಿಜೆಪಿ ತೀವ್ರ ಸೆಡ್ಡು ಹೊಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಯು 3 ಪ್ರಮುಖ ಸ್ಲಂಗಳನ್ನೇ ಬಲವಾಗಿ ನೆಚ್ಚಿಕೊಂಡಿದ್ದು, ಬಿಜೆಪಿ ಸಹ ಸ್ಲಂಗಳಿಗೆ ಲಗ್ಗೆಯಿಟ್ಟಿದೆಯಲ್ಲದೆ ಆ ವಾರ್ಡ್ನ ಇತರ ಬಡಾವಣೆಗಳ ಮತಗಳ ಮೇಲೆ ಗಮನ ಕೇಂದ್ರೀಕರಿಸಿದೆ ಎನ್ನಲಾಗಿದೆ. ಈ ವಾರ್ಡ್ನಲ್ಲಿ ಸುಮರು 700 ಕ್ಕೂ ಅಧಿಕ ಒಕ್ಕಲಿಗರ, 500 ಕ್ಕೂ ಅಧಿಕ ಲಿಂಗಾಯಿತರ ಮತಗಳಿವೆ ಎಂದು ಲೆಕ್ಕಾಚಾರ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗಳಿಸುವ ಮತಗಳು ಮತ್ತು ಪಕ್ಷೇತರ ಅಭ್ಯರ್ಥಿ ಆಗಿರುವ ಮಾಜಿ ನಗರಸಭಾ ಸದಸ್ಯ ಎನ್. ಸತೀಶ್ಕುಮಾರ್ ಕಿತ್ತುಕೊಳ್ಳುವ ಮತಗಳು ಇಲ್ಲಿನ ಲಿತಾಂಶವನ್ನು ಬರೆಯುತ್ತದೆಂದು ವಿಮರ್ಶಿಸಲಾಗುತ್ತಿದೆ.

23 ನೇ ವಾರ್ಡ್- ಸತ್ಯಮಂಗಲ- (ಸಾಮಾನ್ಯ):-

      ಕಾಂಗ್ರೆಸ್ನಿಂದ ದಯಾನಂದ, ಜೆಡಿಎಸ್ನಿಂದ ಮಾಜಿ ನಗರಸಭಾ ಸದಸ್ಯ ಟಿ.ಕೆ.ನರಸಿಂಹಮೂರ್ತಿ ಮತ್ತು ಬಿಜೆಪಿಯಿಂದ ಮಾಜಿ ನಾಮಿನಿ ನಗರಸಭಾ ಸದಸ್ಯ ಟಿ.ಎನ್.ಶ್ರೀನಿವಾಸ ಮೂರ್ತಿ ಕಣದಲ್ಲಿದ್ದು, ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆಯೇ ಹಣಾಹಣಿ ಇರುವುದಾಗಿ ಹೇಳಲಾಗುತ್ತಿದೆ. ತಿಗಳ ಸಮುದಾಯದ 2000, ಪರಿಶಿಷ್ಟರ 700, ಒಕ್ಕಲಿಗರ 500 ಓಟುಗಳಿವೆಯೆಂದು ಲೆಕ್ಕ ಹಾಕಿದ್ದು, ತಿಗಳ ಸಮುದಾಯದ ಓಟುಗಳೇ ನಿರ್ಣಾಯಕ ಆಗಲಿದೆಯೆಂದು ಹೇಳಲಾಗುತ್ತಿದೆ.

24 ನೇ ವಾರ್ಡ್- ಉಪ್ಪಾರಹಳ್ಳಿ- (ಪರಿಶಿಷ್ಟ ಜಾತಿ):-

      ಬಿಜೆಪಿಯ ಓಂಕಾರ್, ಕಾಂಗ್ರೆಸ್ನ ವೀಣಾ ಎಂ.ಎಚ್.ವಿಜಯೇಂದ್ರ, ಜೆಡಿಎಸ್ನ ಬಿ.ಆರ್.ಲೋಕೇಶ್ ಸ್ವಾಮಿ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್, ಜೆಡಿಎಸ್ಗಿಂತ ಇಲ್ಲಿ ಪಕ್ಷೇತರರಾದ ಎಸ್.ಶಿವಕುಮಾರ್, ಶಿವರಾಂ, ಸಿದ್ದರಾಮಯ್ಯ ಅವರು ಬಿಜೆಪಿಗೆ ಸ್ಪರ್ಧೆ ನೀಡುತ್ತಿದ್ದಾರೆನ್ನಲಾಗಿದೆ. ಇಲ್ಲಿ 1600 ಮುಸ್ಲಿಂ ಮತಗಳು, 700 ಲಿಂಗಾಯಿತರ, 400 ಬ್ರಾಹ್ಮಣರ, 200 ಉಪ್ಪಾರರ, 400 ಒಕ್ಕಲಿಗರ, 400 ಕುರುಬರ, ಪರಿಶಿಷ್ಟ ಜಾತಿ-ಪಂಗಡದ 600 ಮತಗಳಿವೆಯೆಂದು ಲೆಕ್ಕಾಚಾರ ಹಾಕಲಾಗಿದೆ.

25 ನೇ ವಾರ್ಡ್-ಸಿದ್ಧಗಂಗಾ ಬಡಾವಣೆ (ಸಾಮಾನ್ಯ ಮಹಿಳೆ):-

      ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಪಿ.ಬಿ.ವಿಜಯ ರುದ್ರೇಶ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಸತತ ಎರಡು ಬಾರಿ ಇದೇ ವಾರ್ಡ್ನಿಂದ ಒಮ್ಮೆ ಬಿಜೆಪಿಯಿಂದ ಮತ್ತೊಮ್ಮೆ ಕೆಜೆಪಿಯಿಂದ ಗೆದ್ದಿದ್ದ ಹಾಗೂ ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಇವರು ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯಿಂದ ಮಂಜುಳ ಕೆ.ಎಸ್.ಆದರ್ಶ ಮತ್ತು ಜೆಡಿಎಸ್ನ ಚರಿತ್ರ ಉಮಾಶಂಕರ್ ಕಣದಲ್ಲಿದ್ದಾರೆ. ಪಕ್ಷೇತರರಾಗಿ ಓರ್ವ ಅಭ್ಯರ್ಥಿ ಇದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಕಂಡುಬರುತ್ತಿದೆಯೆನ್ನಲಾಗಿದೆ. ವಾರ್ಡ್ನಲ್ಲಿ ಲಿಂಗಾಯಿತ ಸಮುದಾಯದ 4000 ಮತಗಳು, ಮುಸ್ಲಿಮರ 900 ಮತಗಳು ಇದ್ದು, ತಿಗಳರು, ಬ್ರಾಹ್ಮಣರು, ಆರ್ಯವೈಶ್ಯರು,ಇತರೆ ಹಿಂದುಳಿದ ವರ್ಗದವರು ಹಂಚಿಹೋಗಿದ್ದಾರೆ. ಲಿಂಗಾಯಿತ ಮತಗಳು ವಿಭಜನೆ ಆಗಿ, ಮುಸ್ಲಿಂ ಮತಗಳು ಒಂದೆಡೆ ಬಂದಲ್ಲಿ ಅಂತಹ ಅಭ್ಯರ್ಥಿ ಇಲ್ಲಿ ಗೆಲ್ಲಬಹುದೆಂದು ವಿಮರ್ಶಿಸಲಾಗುತ್ತಿದೆ.

 26 ನೇ ವಾರ್ಡ್- ಅಶೋಕನಗರ-(ಹಿಂದುಳಿದ ವರ್ಗ -ಎ) :-

      ಮಾಜಿ ನಗರಸಭಾ ಸದಸ್ಯ ಕಾಂಗ್ರೆಸ್ನ ನಾಗಭೂಷಣ್ (ಕುಬೇರ), ಬಿಜೆಪಿಯ ಎಚ್.ಮಲ್ಲಿಕಾರ್ಜುನಯ್ಯ, ಜೆಡಿಎಸ್ನ ಟಿ.ಎಸ್.ದಯಾನಂದ್ ಮತ್ತು ಇಬ್ಬರು ಪಕ್ಷೇತರರು ಇಲ್ಲಿ ಕಣದಲ್ಲಿದ್ದಾರೆ. ಇಬ್ಬರು ಪಕ್ಷೇತರರಲ್ಲಿ ಒಬ್ಬರಾದ ಪ್ರಸನ್ನ ಕುಮಾರ್ ಹಿಂದೆ ಬಿಜೆಪಿಯಿಂದ ನಗರಸಭಾ ಸದಸ್ಯರಾಗಿದ್ದವರು. ಬಹುತೇಕ ಸುಶಿಕ್ಷಿತ ವಲಯದಿಂದಲೇ ಕೂಡಿರುವ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಹಣಾಹಣಿ ಇರುವುದಾಗಿ ವಿಮರ್ಶಿಸಲಾಗುತ್ತಿದೆ. ಇಲ್ಲಿ ಲಿಂಗಾಯಿತರ 4000, ಒಕ್ಕಲಿಗರ 2000, ಇತರರ ಸುಮಋಉ 5000 ಮತಗಳಿವೆಯೆಂದು ಹೇಳಲಾಗಿದೆ.

27 ನೇ ವಾರ್ಡ್-ಎಸ್.ಐ.ಟಿ.-(ಹಿಂದುಳಿದ ವರ್ಗ -ಎ-ಮಹಿಳೆ):-

      ಜೆಡಿಎಸ್ನ ಎಂ.ಎಚ್.ಜಯಲಕ್ಷ್ಮಿ, ಬಿಜೆಪಿಯ ಚಂದ್ರಕಲಾ ಮತ್ತು ಕಾಂಗ್ರೆಸ್ನ ಜೀನತ್ ಉನ್ನೀಸ ಈ ಮೂವರು ಮಾತ್ರ ಕಣದಲ್ಲಿದ್ದಾರೆ. ಮಾಜಿ ನಗರಸಭಾ ಸದಸ್ಯ ಟಿ.ಜಿ. ನರಸಿಂಹರಾಜು ಅವರ ಪತ್ನಿಯಾದ ಜಯಲಕ್ಷ್ಮಿ ಅವರು ಸತತ ಎರಡು ಬಾರಿ ಗೆದ್ದಿದ್ದು, ಇದೀಗ ಮೂರನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಇನ್ನು ಇವರ ಪತಿ ನರಸಿಂಹರಾಜು ಸತತ ಎರಡು ಅವಧಿಗೆ ನಗರಸಭಾ ಸದಸ್ಯರಾಗಿದ್ದರು. ಈ ಬಾರಿ ಇವರು ಗೆದ್ದಲ್ಲಿ ರಾಜಕೀಯವಾಗಿ ಒಂದು ಇತಿಹಾಸವೇ ಆಗಿಬಿಡುವುದೆಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ. ವಾರ್ಡ್ನ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಜನಸಂಪರ್ಕವನ್ನು ಮುಂದಿಟ್ಟುಕೊಂಡು ಇವರು ಮತ್ತೊಮ್ಮೆ ಚುನಾವಣೆಗೆ ಇಳಿದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಪರ್ಧೆ ಇರುವುದು ಕಂಡುಬಂದರೂ, ಜೆಡಿಎಸ್ ಒಂದು ಹೆಜ್ಜೆ ಮುಂದಿದೆಯೆಂದೇ ಹೇಳಲಾಗುತ್ತಿದೆ. ಇಲ್ಲಿ 1000 ಒಕ್ಕಲಿಗರು, 700 ಲಿಂಗಾಯಿತರು, 300 ಬ್ರಾಹ್ಮಣರು, 300 ತಿಗಳ ಸಮುದಾಯದ ಮತಗಳಿವೆಯೆಂದು ಲೆಕ್ಕಾಚಾರ ಹಾಕಲಾಗಿದೆ.

28 ನೇ ವಾರ್ಡ್- ಸದಾಶಿವನಗರ- (ಸಾಮಾನ್ಯ):-

      ಕಾಂಗ್ರೆಸ್ನ ಡಿ.ಅಜಯ್ ಕುಮಾರ್, ಜೆಡಿಎಸ್ನ ಧರಣೇಂದ್ರ ಕುಮಾರ್, ಬಿಜೆಪಿಯ ಎಂ.ಎಲ್.ರವಿಕುಮಾರ್ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೂರೂ ಪ್ರಮುಖ ಪಕ್ಷಗಳ ನಡುವೆ ಸ್ಪರ್ಧೆ ಮೇಲ್ನೋಟಕ್ಕೆ ಕಾಣಿಸಿದರೂ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇದೆಯೆನ್ನಲಾಗುತ್ತಿದೆ. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸಂಬಂಧಿಕ (ಅಣ್ಣ-ತಮ್ಮ)ರೆಂಬುದು ಕುತೂಹಲ ಉಂಟುಮಾಡಿದೆ. ಮಾಜಿ ನಗರಸಭಾ ಅಧ್ಯಕ್ಷೆ ಕಾಂಗ್ರೆಸ್ನ ಟಿ.ಎಸ್.ದೇವಿಕಾ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಒಕ್ಕಲಿಗರ 1700, ಮುಸ್ಲಿಮರ 1500, ಕುರುಬರ 400, ಪರಿಶಿಷ್ಟ ಜಾತಿ-ವರ್ಗದ 400, ನಾಯಕರ 800 ಮತಗಳು ಇಲ್ಲಿವೆಯೆಂದು ಲೆಕ್ಕ ಹಾಕಲಾಗಿದೆ.

29 ನೇ ವಾರ್ಡ್-ಮರಳೂರು ದಿಣ್ಣೆ-(ಸಾಮಾನ್ಯ):-

      ಕಾಂಗ್ರೆಸ್ನ ಉಮ್ಮೆಸಲ್ಮಾ, ಬಿಜೆಪಿಯ ಪಿ.ಕೋಕಿಲಾ, ಜೆಡಿಎಸ್ನ ನಾಜೀಮಾಬಿ ಹಾಗೂ ಇಬ್ಬರು ಪಕ್ಷೇತರರು ಇಲ್ಲಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಇಲ್ಲಿ ಸ್ಪರ್ಧೆ ಎನ್ನಲಾಗುತ್ತಿದೆ. ಮುಸ್ಲಿಮರ 7000 ಮತಗಳಿದ್ದು, ಉಳಿದಂತೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರರ 3000 ಓಟುಗಳಿವೆ. ಮುಸ್ಲಿಂ ಮತಗಳೇ ನಿರ್ಣಾಯಕ ಆಗಲಿದೆ.

30 ನೇ ವಾರ್ಡ್-ವಿಜಯನಗರ- (ಹಿಂದುಳಿದ ವರ್ಗ -ಎ):-

      ಜೆಡಿಎಸ್ನ ಗಗನ್ ಶಂಕರ್, ಕಾಂಗ್ರೆಸ್ನ ಟಿ.ರಾಜೇಶ್, ಬಿಜೆಪಿಯ ಎಂ.ವೈ.ರುದ್ರೇಶ್ ಮತ್ತು ಇಬ್ಬರು ಪಕ್ಷೇತರರು ಇಲ್ಲಿ ಕಣದಲ್ಲಿದ್ದಾರೆ. ರಾಜೇಶ್ ಪಾಲಿಕೆಯ ನಾಮಿನಿ ಸದಸ್ಯರಾಗಿದ್ದವರು. ಪಕ್ಷೇತರರಾದ ಟಿ.ಎನ್.ಚಂದನ್ಕುಮಾರ್ ಮತ್ತು ವಿಷ್ಣುವರ್ಧನ್ ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದವರು. ಟಿಕೆಟ್ ಸಿಗದಿದ್ದಾಗ ಸ್ವತಂತ್ರವಾಗಿ ಕಣಕ್ಕಿಳಿದಿದ್ದು ಪಕ್ಷಗಳಿಗೆ ಪ್ರಬಲವಾಗಿಯೇ ಸೆಡ್ಡು ಹೊಡೆದಿದ್ದಾರೆ. ಸುಶಿಕ್ಷಿತರ ವಾರ್ಡ್ ಎನಿಸಿರುವ ಇಲ್ಲಿ ಪ್ರಮುಖವಾಗಿ ಬ್ರಾಹ್ಮಣರ ಸುಮಾರು 2800, ಲಿಂಗಾಯಿತರ 1800, ಒಕ್ಕಲಿಗರ 1400 ಮತಗಳಿವೆಯೆನ್ನಲಾಗಿದೆ. ಇಬ್ಬರು ಪಕ್ಷೇತರರು ಗಳಿಸುವ ಮತಗಳಲ್ಲಿ ಉಳಿದ ಸ್ಪರ್ಧಿಗಳ ಹಣೆಯಬರಹ ನಿಂತಿದೆ ಎಂದೂ, ಪಕ್ಷೇತರರಲ್ಲೇ ಒಬ್ಬರು ಗೆದ್ದರೂ ಅಚ್ಚರಿಯಿಲ್ಲ ಎಂದೂ ವಿಮರ್ಶಿಸಲಾಗುತ್ತಿದೆ.

31 ನೇ ವಾರ್ಡ್- ಶೆಟ್ಟಿಹಳ್ಳಿ (ಸಾಮಾನ್ಯ):-

      ಜೆಡಿಎಸ್ನ ಚೇತನ್ ಪುಟ್ಟೀರಪ್ಪ, ಕಾಂಗ್ರೆಸ್ನ ಎಸ್.ನಾಗರಾಜು, ಬಿಜೆಪಿಯ ಸಿ.ಎನ್.ರಮೇಶ್ ಮತ್ತು ಇಬ್ಬರು ಪಕ್ಷೇತರರು ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ಮೂರು ಪಕ್ಷಗಳಿದ್ದರೂ ಜೆಡಿಎಸ್ ಮತ್ತು ಬಿಜೆಪಿ ನಡುವೆಯೇ ನೇರ ಹಣಾಹಣಿ ಕಂಡುಬರುತ್ತಿದೆಯೆನ್ನಲಾಗಿದೆ. ಆದರೂ ಕಾಂಗ್ರೆಸ್ ಅಭ್ಯರ್ಥಿ ಸೆಳೆಯುವ ಮತಗಳತ್ತ ಎಲ್ಲರ ಕುತೂಹಲ ಅಡಗಿದೆ. ಇಲ್ಲಿ ಬ್ರಾಹ್ಮಣರ 1200, ಲಿಂಗಾಯಿತರ 1000, ತಿಗಳರ 600, ಪರಿಶಿಷ್ಟ ಜಾತಿಯ 2000, ಪಂಗಡದ 500, ಒಕ್ಕಲಿಗರ 800, ಮುಸ್ಲಿಮರ 400 ಓಟುಗಳಿವೆಯೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.

32 ನೇ ವಾರ್ಡ್-ಗೋಕುಲ ಬಡಾವಣೆ- (ಪರಿಶಿಷ್ಟ ಪಂಗಡ):-

      ಬಿಜೆಪಿಯಿಂದ ಬಿ.ಜಿ.ಕೃಷ್ಣಪ್ಪ, ಕಾಂಗ್ರೆಸ್ನಿಂದ ಎನ್.ಗೋಪಾಲಕೃಷ್ಣ, ಜೆಡಿಎಸ್ನಿಂದ ಲಕ್ಷ್ಮೀನಾರಾಯಣ ಮತ್ತು ಓರ್ವ ಪಕ್ಷೇತರ ಅಭ್ಯರ್ಥಿ ಕಣದಲ್ಲಿದ್ದಾರೆ. ಆದರೂ ಇಲ್ಲಿ ಬಿಜೆಪಿ ಮತ್ತುಜೆಡಿಎಸ್ ನಡುವೆ ಸ್ಪರ್ಧೆ ಇದೆಯೆನ್ನಲಾಗಿದೆ. ಇಲ್ಲಿ 2500 ರಷ್ಟು ಲಿಂಗಾಯಿತರ ಮತಗಳು ಪ್ರಮುಖವಾಗಿದೆ.

33 ನೇ ವಾರ್ಡ್-ಕ್ಯಾತಸಂದ್ರ- (ಸಾಮಾನ್ಯಮಹಿಳೆ) :-

      ಕಾಂಗ್ರೆಸ್ನಿಂದ ಧನಲಕ್ಷಿ ರವಿ ಜಿ.ಆರ್., ಬಿಜೆಪಿಯಿಂದ ಪ್ರಮೀಳ ಮಹೇಶ್, ಜೆಡಿಎಸ್ನಿಂದ ಶಶಿಕಲ ಗಂಗಹನುಮಯ್ಯ ಮತ್ತು ಓರ್ವ ಪಕ್ಷೇತರರು ಕಣದಲ್ಲಿದ್ದಾರೆ. ಮಾಜಿ ಉಪಮೇಯರ್ ಆಗಿದ್ದ ಧನಲಕ್ಷ್ಮೀ ರವಿ ಅವರು ವಾರ್ಡ್ನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಗೆಲುವಿನ ವಿಶ್ವಾಸದಲ್ಲಿ ಮತ್ತೊಂದು ಅವಕಾಶಕ್ಕೆ ಯತ್ನಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಪರ್ಧೆ ಕಂಡುಬರುತ್ತಿದೆಯೆನ್ನಲಾಗಿದೆ. ಇಲ್ಲಿ ತಿಗಳರ 1150, ಮುಸ್ಲಿಮರ 650, ಲಿಂಗಾಯಿತರ 700 ಮತಗಳು ಪ್ರಮುಖವೆನ್ನಲಾಗುತ್ತಿದೆ.

34 ನೇ ವಾರ್ಡ್-ಜನತಾ ಕಾಲೋನಿ- (ಸಾಮಾನ್ಯ ಮಹಿಳೆ):

      ಜೆಡಿಎಸ್ನ ಜಯಲಕ್ಷ್ಮಿ, ಕಾಂಗ್ರೆಸ್ನ ಹಸೀನಾ ಬಾನು, ಬಿಜೆಪಿಯ ನವೀನ ಅರುಣ ಎಂ.ಸಿ. ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ 3 ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇದೆಯೆನ್ನಲಾಗಿದೆ. ಪರಿಶಿಷ್ಟ ಜಾತಿಯ 2000, ಪಂಗಡದ 200, ತಿಗಳರ 500, ಮುಸ್ಲಿಂರ 900, ಲಿಂಗಾಯಿತರ 500 ಮತಗಳು ಇವೆಯೆಂದು ಲೆಕ್ಕಾಚಾರ ಹಾಕಲಾಗಿದೆ.

35 ನೇ ವಾರ್ಡ್-ದೇವರಾಯಪಟ್ಟಣ (ಸಾಮಾನ್ಯ ಮಹಿಳೆ) :-

      ಬಿಜೆಪಿಯ ಎಚ್.ಎಸ್.ನಿರ್ಮಲ ಶಿವಕುಮಾರ್, ಕಾಂಗ್ರೆಸ್ನ ಎಚ್.ಸರಸ್ವತಿ, ಜೆಡಿಎಸ್ನ ಸಿದ್ದೇಶ್ವರಿ ಸೇರಿ ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲೂ ಪ್ರಮುಖ ಪಕ್ಷಗಳ ತ್ರಿಕೋನ ಸ್ಪರ್ಧೆ ಇದೆಯೆನ್ನಲಾಗಿದೆ. ಲಿಂಗಾಯಿತರ 3000, ಪರಿಶಿಷ್ಟ ಜಾತಿಯ 2000, ಮುಸ್ಲಿಂರ 1500 ಮತಗಳು ಪ್ರಮುಖವಾಗಿದೆಯೆಂದು ಲೆಕ್ಕ ಹಾಕಲಾಗಿದೆ.

 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap