ತುಮಕೂರು
ಜಿಲ್ಲೆಯಲ್ಲಿ ಹಾದು ಹೋಗಿರುವ ಬೆಂಗಳೂರು-ಪುಣೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ-48 ರಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ 762ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿಗೆ ಭೇಟಿ ನೀಡಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆ ವ್ಯಾಪ್ತಿಯ ಚಿಕ್ಕಹಳ್ಳಿ, ಪಂಡಿತನಹಳ್ಳಿ ಗೇಟ್, ಕಳ್ಳಂಬೆಳ್ಳ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಪೊಲೀಸ್ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ತೆರಳಿ ಬ್ಲಾಕ್ ಸ್ಪಾಟ್‌ಗಳನ್ನು ವೀಕ್ಷಿಸಿದರು.
ಬ್ಲಾಕ್‌ಸ್ಪಾಟ್‌ಗಳ ಸ್ಥಳದಲ್ಲಿಯೇ ಅಪಘಾತಗಳ ನಿಯಂತ್ರಣ ಕುರಿತು ಪೊಲೀಸರಿಗೆ ಮಾರ್ಗದರ್ಶನ ನೀಡಿದ ಅವರು, ದಂಡ ವಸೂಲಿಯೇ ಪ್ರಮುಖ ಕರ್ತವ್ಯವಾಗದೆ ಅಪಘಾತ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ಬಳಿಕ ಮಾತನಾಡಿದ ಅವರು, 7 ಬ್ಲಾಕ್‌ಸ್ಪಾಟ್‌ಗಳನ್ನು ಪರಿಶೀಲನೆ ನಡೆಸಿದ್ದೇವೆ. ತುಮಕೂರು ಮೂಲಕ 7 ಜಿಲ್ಲೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಎಎಂಪಿಆರ್ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲೇನ್ ವಯೋಲೇಷನ್, ಡಿಸಿಪ್ಲೀನ್ ಸಲುವಾಗಿ ಟ್ರೈಯಲ್ ರನ್ ನಡೆಯುತ್ತಿದೆ. ಓವರ್ ಸ್ಪೀಡ್, ಸೀಟ್ ಬೆಲ್ಟ್ ಇಲ್ಲದೇ ವಾಹನ ಚಾಲನೆ, ಮೊಬೈಲ್‌ನಲ್ಲಿ ಮಾತನಾಡುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುವುದನ್ನು ಸೆರೆ ಹಿಡಿಯಲು ಈ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸೆರೆ ಹಿಡಿಯಲು 8 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8 ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇಡೀ ಎನ್‌ಹೆಚ್-4 ನಲ್ಲಿ ಒಟ್ಟು 72 ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
ಮುಂದಿನ 15 ದಿನಗಳಲ್ಲಿ ದಂಡ ಹಾಕುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಒಂದು ದಿನಕ್ಕೆ ಸುಮಾರು 5 ಸಾವಿರ ಜನರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇವರೆಲ್ಲರಿಗೂ ದಂಡ ಹಾಕಲು ಸಾಧ್ಯವಾಗುತ್ತಿಲ್ಲ ಎಂದರು.
ಜಿಲ್ಲೆಯ ಹಿರೇಹಳ್ಳಿ, ಕೋರಾ ಸೇರಿದಂತೆ ಬಹಳಷ್ಟು ಕಡೆ ಬ್ಲಾಕ್ ಸ್ಪಾಟ್‌ಗಳು ಇವೆ. ಕೆಲವು ಕಡೆ ಅಂಡರ್‌ಪಾಸ್ ಇಲ್ಲದೆ ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಬ್ಲಾಕ್‌ಸ್ಪಾಟ್‌ಗಳನ್ನು ಸರಿಪಡಿಸುವಂತೆ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಸಿ ಸರಿಪಡಿಸಲು 3 ತಿಂಗಳು ಸಮಯ ಕೊಡುತ್ತೇವೆ. ಆ ನಂತರ ಅಪಘಾತಗಳು ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರದ್ದು ತಪು ಕಾಣಿಸಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ತುಮಕೂರು ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ 762 ಜನರ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಜತೆಗೆ ತುಮಕೂರು ಜಿಲ್ಲೆಯಲ್ಲೇ ಅತಿಹೆಚ್ಚು ಸಾವು ಸಂಭವಿಸಿದೆ. ಮೂರ್ನಾಲ್ಕು ಹೆದ್ದಾರಿ ಇರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರು ಸಹ ಎಚ್ಚರಿಕೆ ವಹಿಸಬೇಕು ಎಂದರು.
ಚಾಲಕರು ಓವರ್ ಸ್ಪೀಡ್, ಕುಡಿದು ವಾಹನ ಚಲಾಯಿಸದೇ ಎಚ್ಚರಿಕೆ ವಹಿಸಬೇಕು. ಸುಮ್ಮನೇ ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಗಸ್ತು ವಾಹನಗಳಿಗೆ ರಸ್ತೆ ಸುರಕ್ಷತೆ ವಹಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿಯೊಬ್ಬರೂ ಸಹ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ರಾಹುಲ್‌ಕುಮಾರ್ ಶಹಪೂರ್‌ವಾಡ್, ಅಡಿಷನಲ್ ಮರಿಯಪ್ಪ, ಪ್ರೊಭೆಷನರಿ ಐಪಿಎಸ್ ಅಧಿಕಾರಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ ಶ್ರೀನಿವಾಸ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ