ತುರುವನೂರು ಗ್ರಾಮದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ

 ಭಾರತದ ಸ್ವಾತಂತ್ರ್ಯ ಆಂದೋಲನದ ಇತಿಹಾಸದಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮವು ಅತಿ ಮಹತ್ವದ ಊರಾಗಿದೆ ಇತಿಹಾಸದ ಪುಟದಲ್ಲಿ ಶಿವಮೊಗ್ಗ  ಜಿಲ್ಲೆಯ ಶಿರಿಪುರ ತಾಲ್ಲೂಕಿನ ಈಸೂರು ಗ್ರಾಮವನ್ನು ಬಿಟ್ಟರೆ ತದನಂತರ ಸ್ಥಾನ ತುರುವನೂರಿಗೆ ಸಲ್ಲುತ್ತದೆ.

ತುರುವನೂರು ಗ್ರಾಮದ ಜನರು 1939ರಿಂದ 1947 ರವರೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ತನುಮನ, ಧನಗಳನ್ನು ಅರ್ಪಿಸಿದರು. ನಾನಾ ವಿಧವಾದ ಹೋರಾಟಗಳನ್ನು ಸೆರೆಮನೆವಾಸದ ಶಿಕ್ಷೆಗಳನ್ನು ಅನುಭವಿಸಿದರು. ಬಹುತೇಕ ಈ ಗ್ರಾಮದ ಪ್ರತಿ ಮನೆಯ ಆಂದೋಲನದ ಸ್ಪೂರ್ತಿ ಕೇಂದ್ರವಾಗಿತ್ತು ಎಂದರೆ ತಪ್ಪಾಗಲಾರದು.

1939 ಸಪ್ಟೆಂಬರ್ 18 ಈ ಗ್ರಾಮದ ಅತ್ಯಂತ ಮಹತ್ವದ ಇತಿಹಾಸ ಪ್ರಸಿದ್ಧವಾದ ದಿನ. ಅಂದು ಅರಣ್ಯ ಸತ್ಯಾಗ್ರಹ (ಈಚಲ ಮರ ಕಡಿಯುವುದು) ದಿನ. ಅಂದು ಸನ್ಮಾನ್ಯರುಗಳಾದ ನಿಜಲಿಂಗಪ್ಪನವರು ಮತ್ತು ಬಳ್ಳಾರಿ ಸಿದ್ಧಮ್ಮನವರುಗಳ ಸಲಹೆಯಂತೆ ಪ್ರತಿ ದಿನ ಐದೈದು ಜನರಂತೆ ಈಚಲ ಮರ ಕಡಿಯಲು ಹೋಗುವುದು, ಈ ರೀತಿ ಪ್ರತಿ ದಿನ ನಡೆಯುವಂತಾಗಲಿ, ಒಂದೇ ದಿನ ಎಲ್ಲರೂ ಅರೆಸ್ಟ್ ಆಗುವುದು ಬೇಡ, ಸ್ಪೂರ್ತಿ ನೀಡುವ ಮಂದಿ, ಸರ್ಕಾರದ ಕಣ್ಣಿಗೆ ಬೀಳದಂತೆ ತೆರೆಮರೆಯಲ್ಲಿ ಇರಲಿ, ಮುಂತಾದ ಅನೇಕ ಸಲಹೆಗಳನ್ನು ಕೊಟ್ಟರು, ಮೊದಲ ದಿನ ಶ್ರೀಯುತರುಗಳಾದ;

(1)ರಾಜಶೇಖರಯ್ಯ ಹಿರೇಮಠ್. (2) ಎಂ.ರಾಮರೆಡ್ಡಿ, (3) ತಿಮ್ಮನ ಗೌಡ್ರ ತಿಪ್ಪಣ್ಣ (4) ನೆಟಿಕಲ್ ಹನುಮಂತಪ್ಪ, (5) ಎರವ ನಾಗಪ್ಪ ಇವರುಗಳು ಈಚಲ ಮರಗಳನ್ನು ಕಡಿಯಲು ಕೊಡಲಿಗಳನ್ನು ಹೆಗಲಿಗೇರಿಸಿಕೊಂಡು ಊರ ದೇವತೆಯಾದ ಮಾರಮ್ಮನ ದೇವಸ್ಥಾನ ಬಳಿ ಬಂದರು. ಆ ದಿನ ಇಡೀ ಊರ ಜನತೆ ಮತ್ತು ಸುತ್ತು ಮುತ್ತಲು ಅನೇಕ ಗ್ರಾಮಗಳಿಂದ ಬಂದ ಜನತೆ ಹೆಣ್ಣು-ಗಂಡು-ಮಕ್ಕಳು ಎಂಬ ಬೇಧವಿಲ್ಲದೆ ಎಲ್ಲರೂ ಸೇರಿದರು. ಜನ ಜಾತ್ರೆಯೇ ಜಾತ್ರೆ. ಸಾಕಷ್ಟು ಪೊಲೀಸ್ ಮತ್ತು ರಿಸರ್ವ್ ಪೊಲೀಸ್ ಬಂದೂಕು, ಲಾಠಿ ಸಮೇತ ಬಂದು ಉಸ್ತುವಾರಿಗಾಗಿ ನಿಂತಿತ್ತು. ಈ ಐದು ಮಂದಿಗೆ ಹೂವಿನಹಾರ ನೂಲಿನಹಾರಗಳನ್ನು ಹಾಕಿ ಹಣೆಗೆ ಕುಂಕುಮ ಹಚ್ಚಿ, ಮುತ್ತೈದೆಯರು ಆರತಿ ಎತ್ತಿ ಜೈ ಬೋಲೊ ಭಾರತ ಮಾತಾಕೀ, ಜೈ ಭೋಲೊ ಮಹಾತ್ಮಾ ಗಾಂಧೀಜಿ ಕೀ, ವಂದೇಮಾತರಂ. ಏನೇ ಬರಲಿ-ಒಗ್ಗಟ್ಟಿರಲಿ, ಶಾಂತಿ-ಶಿಸ್ತು ಮುಂತಾದ ಹಲವಾರು ಘೋಷಣೆಗಳು ಮುಗಿಲು ಮುಟ್ಟುವುದರ ಮೂಲಕ ಬೀಳ್ಳೊಡುಗೆಯ ಮೆರವಣಿಗೆ ಪ್ರಾರಂಭವಾಯಿತು. ಅಲ್ಲಲ್ಲಿ ಮುತ್ತೈದೆಯರು ಆರತಿ ಎತ್ತಿ ಹಣೆಗೆ ಕುಂಕುಮ ಹಚ್ಚಿ ಬೀಳ್ಗೊಡುವ ಸನ್ನಿವೇಶ ಅತ್ಯಂತ ಹೃದಯ ಸ್ಪರ್ಶಿಯಾಗಿತ್ತು. ಕೆಲವರಿಗೆ ಜಯಗಳಿಸಿ ಬರುವ ವೀರಯೋಧರಂತೆ ಕಂಡರೆ, ಮತ್ತೆ ಕೆಲವರಿಗೆ ಯಾವುದೇ ಜಾತ್ರೆಯಲ್ಲಿ ದೇವಿಗೆ ಬಲಿಕೊಡುವ ಪ್ರಾಣಿಗಳಂತೆ ಕಾಣುತ್ತಿದ್ದರು. ಅಂತ ಊರಿಗೆ 2 ಮೈಲಿ ದೂರದಲ್ಲಿರುವ ದೇವರ ಮರದ ಹಳ್ಳದ ಬಳಿಗೆ ಈ ಉತ್ಸವ ಬಂದು ತಲುಪಿತು. ಈ ಹಳ್ಳದ ತುಂಬಾ ಸಾವಿರಾರು ಈಚಲ ಮರಗಳು.ಅನೇಕ ಮರಗಳಿಗೆ ಅಲ್ಲಲ್ಲಿ ಹೆಂಡ ಇಳಿಸುವ ಮಡಿಕೆಗಳನ್ನು ಕಟ್ಟಿದ್ದರು.

ಈ ಪ್ರದೇಶಕ್ಕೆ ಬಂದ ಕೂಡಲೆ ಎಸ್. ನಿಜಲಿಂಗಪ್ಪನವರು, ಶ್ರೀಮತಿ ಬಳ್ಳಾರಿ ಸಿದ್ದಮ್ಮ, ಶ್ರೀಮತಿ ನಾಗರತ್ನಮ್ಮ ಹಿರೇಮಠ, ಶ್ರಿ ದುಮ್ಮಿ ಮುರಿಗಪ್ಪ. ಶ್ರೀ ರಾಮಗಿರಿ ಹನುಮಂತಪ್ಪ, ಶ್ರೀ ವಾಸುದೇವರಾವ್ (ಜಿಲ್ಲಾ ಕಾಂಗ್ರಸ್ ಕಮಿಟಿ ಕಾರ್ಯದರ್ಶಿ) ಮತ್ತು ಶ್ರೀ ಪಿ. ಚನ್ನಾರೆಡ್ಡಿ ಇವರಿಂದ ಭಾಷಣ ಅಸಹಕಾರ ಚಳುವಳಿಯ ಉದ್ದೇಶ, ಮಹತ್ವ ವಿವರಿಸಿದ ನಂತರ ಈ ಐವರು ತಲಾ ಒಂದೊಂದು ಮರದ ಬಳಿ ಹೋಗಿ ಜೈಕಾರಗಳನ್ನು ಹಾಕುವ ಮೂಲಕ ಮರಗಳನ್ನು ಕಡಿಯಲು ವಿದ್ಯುಕ್ತರಾದರು. ಕೂಡಲೇ ಸಬ್ ಇನ್ಸ್‍ಪೆಕ್ಟರ್ ಬಂದು ಈ ಐವರನ್ನು ಅರೆಸ್ಟ್ ಮಾಡಿ ಪೊಲೀಸ್ ವ್ಯಾನಿನಲ್ಲಿ ಕೂರಿಸಿಕೊಂಡು ಹೋದರು. ಕೂಡಲೇ ಇತ್ತ ಶಾಲಾ ಮಕ್ಕಳಾದ .ಎಸ್.ನಾರಾಯಣ ರೆಡ್ಡಿ. ಜೆ.ಮಹಲಿಂಗಪ್ಪ. ಎನ್.ಐಯ್ಯಣ್ಣ, ಎಲ್.ತಿಪ್ಪೇರುದ್ರಪ್ಪ, ಪಿ. ರಾಮರೆಡ್ಡಿ, ಎನ್ ತಿಮ್ಮಣ್ಣ  ಜಿ. ಹನುಮಣ್ಣ, ಎಸ್.ಲಕ್ಷ್ಮಣ ರೆಡ್ಡಿ, ಮಡ್ಡಿ ಕರಿಯಪ್ಪ, ಗೌಡ್ರ ತಿಮ್ಮಣ್ಣ ಇನ್ನೂ ಮುಂತಾದ ಬಾಲಕರ ಕೈಯಲ್ಲಿರುವ ಕಲ್ಲುಗಳಿಗ ಹೆಂಡದ ಮಡಿಕೆಗಳು ಆಹುತಿಯಾದುವು. ಇದಕ್ಕೂ ಮೊದಲು ಪೊಲೀಸ್‍ನವರು ಮತ್ತು ಸರ್ಕಾರಿ ಅಧಿಕಾರಿಗಳು ಈ ಜನ ಜಂಗುಳಿಯನ್ನು ನೋಡಿ ತುಂಬಾ ಅಧೀರರಾಗಿದ್ದರು. ಈ ಜನ ನಮ್ಮ ಮೇಲೆ ತಿರುಗಿ ಬಿದ್ದರೆ ನಮ್ಮಲ್ಲಿರುವ ಈ ಲಾಠಿ ಬಂದೂಕುಗಳು ಕೆಲಸ ಮಾಡಿಯಾವೆ? ನಮ್ಮ ಗತಿ ಏನಾದೀತೆಂದು ಹೆದರಿದ್ದರು. ಆದರೆ ಹಿರಿಯರ ಆತ್ಯಮೂಲ್ಯವಾದ ಭಾಷಣ ಕೇಳಿದ ಜನ ಯಾವ ಅಹಿತಕರ ಘಟನೆಗೂ ಅವಕಾಶ ಕೊಡದಂತೆ ಮಹಾತ್ಮಾ ಗಾಂಧೀಜಿವರ ಶಾಂತಿ ಮತ್ತು ಶಿಸ್ತನ್ನು ಚಾಚೂ ತಪ್ಪದೆ ಆಚರಿಸಿ ತೋರಿಸುವುದರ ಮೂಲಕ ಸತ್ಯಾಗ್ರಹದ ಮಹತ್ವವನ್ನು ಕಾಪಾಡಿದರು. ಅದೇ ದಿನ ಮಧ್ಯ ರಾತ್ರಿ ಶ್ರೀ ನಿಜಲಿಂಗಪ್ಪನವರನ್ನು, ಶ್ರೀಮತಿ ಬಳ್ಳಾರಿ ಸಿದ್ದಮ್ಮ, ಶ್ರೀಮತಿ ನಾಗರತ್ನಮ್ಮ ಹಿರೇಮಠ್, ಶ್ರೀ ಪಿ. ಚೆನ್ನಾರೆಡ್ಡಿ ಶ್ರೀ ವಾಸುದೇವರಾವ್ ಇವರುಗಳನ್ನೆಲ್ಲಾ ಅವರವರ ಮನೆಗಳಿಗೆ ಹೋಗಿ ಅರೆಸ್ಟ್‍ಮಾಡಿದರೆಂದು ಮರುದಿನ ಸುದ್ದಿ ಬಂದಿತು. ಅದೇ ದಿನ ತುರುವನೂರಿನ ಕೆ.ಸಂಜೀವರೆಡ್ಡಿಯವರನ್ನು ಅರೆಸ್ಟ್ ಮಾಡಿದರು. ಈ ಮೇಲೆ ಕಾಣಿಸಿದವರೆಲ್ಲರಿಗೂ ತಲಾ ಎರಡೂ ವರ್ಷದಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆಯಾಯಿತು.

ಇದೇರೀತಿ ಎರಡನೇ ದಿನ (1)ಗೌಡ್ರ ಜಡಿಯಪ್ಪ, (2) ಶ್ರೀ ಮಲ್ಲಿಕೇತೆ ಏಕಾಂತಪ್ಪ, (3) ನೆಟಿಕಲ್ ತಿಪ್ಪೇರುದ್ರಪ್ಪ, (4) ಗೊಂಚಿ ತಿಪ್ಪಣ್ಣ, (5)ತೋರಣಗಟ್ಟೆ ಕೃಷ್ಣಪ್ಪ,(6)ದಾಸರ ನರಸಪ್ಪ ಅರೆಸ್ಟ್ ಆದರು. ಇವರಿಗೆಲ್ಲಾ 1 ವರ್ಷದಿಂದ ಒಂದೂವರೆಗೆ ಜೈಲು ಶಿಕ್ಷೆಯಾಯಿತು. ನಂತರ 3ನೇಯ ದಿನ 5 ಜನ ಗಂಡಸರೂ, 5 ಜನ ಹೆಂಗಸರೂ ಅರೆಸ್ಟ್ ಆದರು. ಹಾಯ್ಕಲ್ ಶ್ರೀಮತಿ ಲಕ್ಷ್ಮಮ್ಮ ಹನುಮಕ್ಕಮ್ಮ, ಸಾನಿಕಂ ಗಿಡ್ಡ ರಾಮಪ್ಪ, ಹರಿಹರದ ಮರಾಠ ಹನುಮಂತರಾವ್, ನೂಲೆನೂರು ಈಶ್ವರಪ್ಪ, ಗೊಲ್ಲರ ತಿಮ್ಮಕ್ಕ. ಇದೇ ರೀತಿ ನಾಲ್ಕು ಮತ್ತು ಐದನೇಯ ದಿನ ಅರೆಸ್ಟ್ ಆದವರು, ಶ್ರೀಯುತರುಗಳಾದ (1)ಕೊಳಹಾಲ್‍ಕಲ್ಲಪ್ಪ, (2)ಬಸವರಾಜಪ್ಪ (3) ಬಿ.ಕೆ.ಹನುಮಂತರೆಡ್ಡಿ, (4) ಆರ್.ವಿರುಪಣ್ಣ, (5) ಎಂ.ಹನುಮಂತಪ್ಪ ಮಾಜಿ (6) ಮೂಲಂಗಿ ಮಂಜುನಾಥ್ (7) ತೋರಣಗಟ್ಟೆ  ಓಬಳಪ್ಪ (8)ತಿಮ್ಮಪ್ಪ (9) ಬುಡೆನ್ ಸಾಬ್ (10) ಪಂದ್ರಪಲ್ಲಿ ಮುರುಡಪ್ಪ (11)ಮೆಲ್ಲಿಕೇತೆ ಬಸಪ್ಪ (12)ದೊಡ್ಡ ಘಟ್ಟದ ಎಂ.ಕೆ ಪೆನ್ನಪ್ಪ (13) ನರಸಪ್ಪ (14)ಎ,ಕೆ.ಬಸಪ್ಪ (15) ಸಂಜೀವಪ್ಪ (16)ಬೆಳಗಟ್ಟದ ಮೋಹ ಬಸಣ್ಣ (17) ಸಾದಕೃಷ್ಣ ರೆಡ್ಡಿ (18) ಕುಂತಿ ಚೆನ್ನಾರೆಡ್ಡಿ (19) ಜಿ,ತಿಪ್ಪೇಸ್ವಾಮಿ ಗೌಡ (20)ಆರ್,ವಿರುಪಣ್ಣ (21) ಎಮ್.ಶಿವಯ್ಯ (22) ವೀರೇಶಪ್ಪ(23) ಕೆ.ಸಂಜೀವರೆಡ್ಡಿ (24)ಗೌಡ್ರ ಸಣ್ಣ ಜಡಿಯಪ್ಪ ಮುಂತಾದವರ ವಿಶಿಷ್ಟ ಸೇವೆ ಸ್ಮರಿಸುವಂತಹುದು.

1942ರಲ್ಲಿ ಹೆಂಡದಂಗಡಿಗಳನ್ನು ಸುಡುವುದು, ಶಾಲಾ-ಕಾಲೇಜು. ವ್ಯಾಸಂಗಕ್ಕೆ ಬಹಿಷ್ಕಾರ ಹಾಕುವುದು, ಪೊಲೀಸ್ ಸಮ ವಸ್ತ್ರಗಳನ್ನು ಕಸಿದು ಸುಡುವುದು, ಹೊಸದೇಶದ ವಸ್ತ್ರಗಳಿಗೆ ಬಹಿಷ್ಕಾರ, ಸ್ವದೇಶಿ ವಸ್ತುಗಳ ಆಂದೋಲನ, ಅಲ್ಲಲ್ಲಿ ಟಿಲಿಗ್ರಾಫ್ ತಂತಿ ಕತ್ತರಿಸುವುದು. ಪೊಲೀಸ್ ಸ್ಟೇಷನ್‍ನಲ್ಲಿರುವ ಬಂದೂಕುಗಳ ಅಪಹರಣ , ಅಲ್ಲಲ್ಲಿ ಪ್ರಚೋದಿತವಾದ ಭಾಷಣ ಮಾಡುವುದು, ಇನ್ನು ಮುಂತಾದ ಘಟನೆಗಳಿಗೆ ಸಂಬಂಧಿಸಿದಂತೆ. ಜಿ.ತಿಪ್ಪೇಸ್ವಾಮಿಗೌಡ, ಎಮ್.ಶಿವಯ್ಯ, ಆರ್.ವಿರುಪ್ಪಣ್ಣ, ಎನ್. ಸಿದ್ದಣ್ಣ ಜಿ.ಎಸ್.ತಿಪ್ಪೇರುದ್ರಪ್ಪ, ಕುಂತಿ ಸಂಜೀವರೆಡ್ಡಿ, ಸಾದಾ ನಾರಾಯಣ ರೆಡ್ಡಿ , ಎಸ್,ಅನಂತ ರೆಡ್ಡಿ, ಬುಡನ್ ಸಾಬ್, ಟೈಲರ್ ಲಕ್ಷ್ಮಣ ರೆಡ್ಡಿ, ವೀರಣ್ಣ ರೆಡ್ಡಿ, ಎಂ. ಹನುಮಂತಪ್ಪ ಮಾಜಿ, ಕಡಬನಕಟ್ಟಿ ನರಸಿಂಹ ರೆಡ್ಡಿ ಮುಂತಾದವರನ್ನೆಲ್ಲಾ ಸಿಕ್ಕ ಸಿಕ್ಕಲ್ಲಿ ಅರೆಸ್ಟ್ ಮಾಡಿ ಬೆಂಗಳೂರು ಸೆಂಟ್ರಲ್ ಜೈಲ್, ಬಳ್ಳಾರಿ ಜೈಲ್, ಕೂಡ್ಲಿಗಿ ಜೈಲ್ ಇನ್ನು ಮುಂತಾದ ಜೈಲುಗಳಿಗೆ ಕಳುಹಿಸಲಾಯಿತು. ಇವರಿಗೆ 6 ತಿಂಗಳಿನಿಂದ 2 ವರ್ಷದವರೆಗೆ ಶಿಕ್ಷೆ ವಿಧಿಸಲಾಯಿತು.

ಈ ರಾಜಕೀಯ ಕೈದಿಗಳಿಗೆ ರಾಗಿ ಬೀಸುವುದು, ಸೌದೆ ಹೊಡೆಯುವುದು, ಕೆರೆ ಕಟ್ಟೆ ರಿಪೇರಿ ಮತ್ತು ಹೂಳೆತ್ತುವ ಕೆಲಸ, ಇನ್ನು ಮುಂತಾದ ಕಠಿಣ ಶಿಕ್ಷೆಗಳಿಗೊಳಪಡಿಸುತ್ತಿದ್ದರು. ಊಟಕ್ಕೆ ಕಳಪೆ ಆಹಾರ ಕೊಡುತ್ತಿದ್ದರು. ಕೆಲವರ ಆರೋಗ್ಯ ಆಗಿಂದಾಗ್ಯೆ ಕೆಡುತ್ತಿತ್ತು. ಮಣ್ಣಿನ ಮುಚ್ಚಳದಲ್ಲಿ ಮುದ್ದೆ-ಸಾರು-ಅನ್ನ ಕೊಡುತ್ತಿದ್ದರು

ಇಂತಹ ಸಂದರ್ಭದಲ್ಲಿ ಪ್ರತಿಭಟಿಸಿದಾಗ ಲಾಠಿಯಿಂದ ಥಳಿಸುತ್ತಿದ್ದರು. ಭಾರವಾದ ಕಲ್ಲುಗಳನ್ನು ಹೊತ್ತು ಬಿಸಿಲಲ್ಲಿ ಬಹಳ ಕಾಲ ನಿಲ್ಲುವಂತೆ ಮಾಡುತ್ತಿದ್ದರು. ಇಂತಹ ಕಠಿಣ ಶಿಕ್ಷೆಗಳಿಗೆ ಬೆದರದೆ ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲೇ, ಶಾಂತಿ ಶಿಸ್ತಿನ ರೂಪದಲ್ಲಿ ಪ್ರತಿಭಟನೆ- ಉಪವಾಸ ಸತ್ಯಾಗ್ರಹದ ಮುಖಾಂತರ ಉತ್ತಮ ಆಹಾರ ಮತ್ತು ಅಲ್ಯೂಮಿನಿಯಂ ಪಾತ್ರೆಗಳನ್ನು ಪಡೆಯಲಾಯಿತು.

1940ರಲ್ಲಿ ತುರುವನೂರು ಗ್ರಾಮಕ್ಕೆ ಅಂದಿನ ಮೈಸೂರು ಮಂತ್ರಿಗಳಾಗಿದ್ದ ಮಿರ್ಜಾ ಇಸ್ಮಾಯಿಲ್ ಸಾಹೇಬರು  ಬಂದಾಗ ಅವರಿಗೆ ಧಿಕ್ಕಾರ ಹಾಕಿದರು. ಸ್ವಾಗತದ ದ್ವಾರದಲ್ಲಿ ಸೀರೆ-ಬಳೆಗಳನ್ನು ಕಟ್ಟಿ ಇಳಿ ಬಿಟ್ಟು ಅಮರ್ಯಾದೆ ಮಾಡಿದ ಪ್ರಯುಕ್ತ ಪುಂಡುಗಂದಾಯ ಹಾಕಿದರು. ಅಂದಿನ ಮೈಸೂರು ಪ್ರಾಂತ್ಯದ ಇತಿಹಾಸದಲ್ಲಿ ಬೇರೆ ಗ್ರಾಮ ಬೇರೆ ಇರಲಿಕ್ಕಿಲ್ಲ. ಪುಂಡುಗಂದಾಯ ಹಾಕಿದ ಈ ವಿಷಯ ಗಾಂಧೀಜಿಯವರಿಗೆ ಗೊತ್ತಾಗಿ ಅವರು ಕೂಡಲೇ ಅವರ ಆಪ್ತ ಪ್ರತಿನಿಧಿಗಳಾದ ಮಹದೇವ ದೇಸಾಯಿ, ಜೆ,ಸಿ ಕುಮಾರಪ್ಪ ಮತ್ತು ಮೊಮ್ಮಗ ಕೃಷ್ಣದಾಸ ಗಾಂಧಿ ಇವರುಗಳನ್ನು ತುರುವನೂರಿಗೆ ಕಳಿಸಿಕೊಟ್ಟರು. ಬಂದವರು  ಇಲ್ಲಿಯ ವಾತಾವರಣವನ್ನು ಸೂಕ್ಷ್ಮವಾಗಿ ಅವಲೋಕಿಸಿ ಹಿಂಸೆ ಮಾರ್ಗಕ್ಕೆ ಇಳಿಯದೆ ಯಾವತ್ತೂ ಅಹಿಂಸಾತ್ಮಕವಾದ ಹೋರಾಟವನ್ನೇ ಮುಂದುವರಿಸಬೇಕು. ಶಾಂತಿ ಶಿಸ್ತಿಗೆ ಹೆಚ್ಚು ಬೆಲೆ ಕೊಡಬೇಕು. ನಮ್ಮ ಗುರಿ ತಲುಪಲು ಅತೀ ಸಮೀಪದಲ್ಲಿದ್ದೇವೆ. ಮಹಾತ್ಮ ಗಾಂಧೀಜಿಯವರೇ ನಿಮ್ಮೂರಿನ ಜನತೆಯ ದರ್ಶನಕ್ಕೆ ಬರುವವರಿದ್ದಾರೆ ಎಂದು ಅವರ ಸಂದೇಶವನ್ನು ತಿಳಿಸಿದರು. ಅಂತು ಈ ಮೂವರ ಮಹನೀಯರ ದರ್ಶನದಿಂದ ಇಡೀ ಗ್ರಾಮದ  ಜನತೆ ಮಹಾತ್ಮಾಜಿಯನ್ನೇ ಕಂಡಷ್ಟು ಪ್ರೀತಿ ವಿಶ್ವಾಸದಿಂದ ನೋಡಿ ಸಂತೋಷದಿಂದ ಮುಳುಗಿ ಪುನೀತರಾದರು. ಇದೊಂದು ತುರುವನೂರಿನ ಅವಿಸ್ಮರಣೀಯ ಘಟನೆ.

1939 ರಿಂದ 1947 ರವರೆಗೆ ತುರುವನೂರಿನ ಚಟುವಟಿಕೆ ಹೇಗಿತ್ತೆಂದರೆ ಇಡೀ ಗ್ರಾಮಕ್ಕೆ ದಿನ ಪತ್ರಿಕೆ ತರಿಸುವವರು 3-4 ಜನರಿದ್ದರು. ಪ್ರತಿ ನಿತ್ಯ ಸಾಯಂಕಾಲ ದೇಶದ ಆಗು ಹೋಗುಗಳನ್ನು ತಿಳಿಯಲು ಕಲ್ಲೇಶ್ವರ ದೇವಸ್ಥಾನ ಅಥವಾ ಆಂಜನೇಯ ದೇವಸ್ಥಾನ ಬಳಿ ಜನ ಸೇರುತ್ತಿದ್ದರು. ಮೂಲಂಗಿ ಮಂಜುನಾಥನವರು ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಗಟ್ಟಿಯಾಗಿ ಓದುತ್ತಿದ್ದರು. ಜನ ನಿಶಬ್ದದಿಂದ ಇದ್ದು ಸುದ್ದಿಯನ್ನು ಆಲಿಸುತ್ತಿದ್ದರು. ಮಂಜುನಾಥನವರ ಗೈರು ಹಾಜರಿಯಲ್ಲಿ ಸಾದಾ ಅನಂತರೆಡ್ಡಿ ಅಥವಾ ಎಮ್.ಹನುಮಂತಪ್ಪ ಮಾಜಿ ಇವರು ಓದುತ್ತಿದ್ದರು. ನಂತರ ತಮ್ಮ ತಮ್ಮ ತಿಳುವಳಿಕೆಗೆ ತಕ್ಕಂತೆ ರಾಜಕೀಯದ ವಿಶ್ಲೇಷಣೆ ನಡೆಯುತ್ತಿತ್ತು.

ಶಾಲಾ ಬಾಲಕರಾದ ಜೆ. ಮಹಲಿಂಗಪ್ಪ, ಜಿ. ಹನುಮಂತಪ್ಪ ಎಲ್.ತಿಪ್ಪೇರುದ್ರಪ್ಪ, ಎನ್,ತಿಪ್ಪಣ್ಣ (ಇವರ ಈಗ ಹಾಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಬಳ್ಳಾರಿಯ ಪ್ರಸಿದ್ಧ ವಕೀಲರಾಗಿದ್ದರು) ಎನ್.ಐಯ್ಯಣ್ಣ, ಕೆ.ಭೀಮಾಚಾರ್, ಮುಸ್ಟೂರಪ್ಪ, ಎಸ್.ನಾರಾಯಣರೆಡ್ಡಿ, ಚನ್ನ ಬಸವಯ್ಯ, ಮಡ್ಡಿ ಕರಿಯಪ್ಪ, ದಾಸರ ಸಂಜೀವಪ್ಪಾ, ಗೌಡ್ರ ತಿಮ್ಮಣ್ಣ, ಗಾರಮನೆರಾಮರೆಡ್ಡಿ, ಬುಡನ್ ಸಾಬ್, ಜಿ.ಎಸ್. ತಿಪ್ಪೇರುದ್ರಪ್ಪ, ಇನ್ನು ಮುಂತಾದವರು ಪ್ರಭಾತ ಪೇರಿ ಮಾಡುತ್ತಿದ್ದರು. 1938 ಕ್ಕಿಂತ ಮುಂಚೆ ಪ್ರತಿವರ್ಷ ಊರ ದೇವಿಗೆ ಕೋಣವನ್ನು ಬಲಿ ಕೊಡುವುದರ ಜೊತೆಗೆ ನೂರಾರು ಕುರಿಗಳನ್ನು ಬಲಿ ಕೊಡುವ ದೊಡ್ಡ ನಾರೀಜಾತ್ರೆ ನಡೆಯುತ್ತಿತ್ತು. ಈ ಬಲಿಕೊಡುವ ಉತ್ಸವವನ್ನು ನಿಲ್ಲಿಸುವುದರ ಮೂಲಕ ಇಡೀ ಅಂದಿನ ಮೈಸೂರು ದೇಶದಲ್ಲೇ ಮಾದರಿಯ ಗ್ರಾಮವೆಂದು ಹೆಸರು ಪಡೆಯಿತು. ಇಡೀ ಗ್ರಾಮಕ್ಕೆ ನೀರು ತರುವ ಬಾವಿ ಎರಡು ಮಾತ್ರ ಇದ್ದವು (ಈಗ ಅವೂ ಕೂಡ ಇಲ್ಲ). ಒಂದು ಹರಿಜನರಿಗಾಗಿ ಪ್ರತ್ಯೇಕವಾಗಿ ಸೇದುವ ಬಾವಿ. ಮತ್ತೊಂದು ಬೇರೆಯವರಿಗೆಲ್ಲಾ ತುಂಬುವ ಬಾವಿ. ಮೊದಲಿಗೆ ಆದಿ ದ್ರಾವಿಡರು, ಒಡ್ಡರು ಈ ತುಂಬುವ ಬಾವಿಯ ಬಳಿ ತಮ್ಮ ಕೊಡಗಳನ್ನು ಇಟ್ಟುಕೊಂಡು ಕುಳಿತಿರುತ್ತಿದ್ದರು. ಇವರಿಗೆ ಯಾರಾದರೂ ತಮ್ಮ ಕೊಡಗಳಲ್ಲಿ ತುಂಬಿ ತಂದು ಇವರಿಗೆ ನೀರು ಹಾಕಬೇಕಿತ್ತು. ಉತ್ತಮ ಜಾತಿವರ ಮರ್ಜಿಹಿಡಿದು ನೀರು ತರಬೇಕಾಕಿತು. ಒಮ್ಮೆ  ಹರಿಜನರು ಸೇದುವ ಬಾವಿಯಲ್ಲಿ ಯಾರೋ ಬಿದ್ದು ಸತ್ತದ್ದರಿಂದ ಇವರಿಗೆ ಅಲ್ಲಿಯೂ ಕುಡಿಯಲು ನೀರಿಲ್ಲ. ಸಾರ್ವಜನಿಕರು ತುಂಬುವ  ಬಾವಿಗಳಿಗೆ ಬಂದು ಒಂದೊಂದು ಕೊಡ ನೀರು ತುಂಬಿ ತಮ್ಮ ಕೊಡಗಳಿಂದ ಹಾಕಿರಪ್ಪ ಎಂದು ಬೇಡುವ ದೃಶ್ಯ ನೋಡಲಾಗುತ್ತಿರಲಿಲ್ಲ. ಎಂ.ಹನುಮಂತಪ್ಪ ಮಾಜಿ, ಗೌಡ್ರ ಜಡಿಯಪ್ಪ. ವೀರೇಶಪ್ಪ, ಇವರ ಸಲಹೆಯಂತೆ ಶಾಲಾ ಬಾಲಕರು “ ನಿಮ್ಮ ನಿಮ್ಮ ಕೊಡಗಳನ್ನು ಇಲ್ಲೇ ತುಂಬಿಕೊಳ್ಳಿ ನಾವು ನಿಮಗೆ ತುಂಬಿ ಕೊಡುವುದಿಲ್ಲ”. ಎಂದು ತಿಳಿಸಿ ಬಲವಂತದಿಂದ ನೀರನ್ನು ತುಂಬಿಸಿದರು. ಈ ಘಟನೆಯಿಂದ ಕೆಲವು ಪಟ್ಟ ಭದ್ರ ಹಿರಿಯರಿಂದ ಈ ಬಾಲಕರು ಏಟುಗಳನ್ನು ಬೈಗಳನ್ನು ತಿನ್ನಬೇಕಾಯಿತು. ಹರಿಜನರಿಗೂ ಬೆದರಿಕೆಗಳಿಗೆ ಅಂಜದೆ ಹರಿಜನರ ಮನವೊಲಿಸಿ ಹೊತ್ತು ಹುಟ್ಟುವ ಮುನ್ನವೇ ನೀರನ್ನು ತುಂಬಿಕೊಂಡು ಹೋಗುವ ವ್ಯವಸ್ಥೆ ಮಾಡುತ್ತಿದ್ದರು. ತುರುವನೂರಿನಲ್ಲಿ ಚರಕ ಇಲ್ಲದ ಮನೆಯೇ ಇಲ್ಲವೆಂದು ಹೇಳಬಹುದು. ಪ್ರತಿ ನಿತ್ಯ ಎಲ್ಲರ ಮನೆಯಲ್ಲಿಯೂ ಚರಕಗಳು ತಿರುಗುತ್ತಿದ್ದವು. ಇಲ್ಲಿ ಬದನವಾಳ ಖಾದಿ ಕೇಂದ್ರವಿತ್ತು .ಇಲ್ಲಿ ಅರಳೆಯಿಂದ ನೂಲು ತೆಗೆಯುವ ಹಂಜಿಗಳನ್ನು ಮಾಡುತ್ತಿದ್ದರು. ತಾವು ನೂತ ನೂಲಿನ ಲಡಿಗಳನ್ನು ಖಾದಿ ಬಟ್ಟೆಯನ್ನು ನೇಯುವ  ಮಗ್ಗಗಳಿದ್ದುವು. ಊರಿನ ಜನತೆ, ಮತ್ತು ಸುತ್ತಲ ಗ್ರಾಮದವರು ಕೊಟ್ಟು ಬಂದ ಹಣದಿಂದ ಮನೆತನದ ಖರ್ಚುವೆಚ್ಚಗಳನ್ನು ತೂಗಿಸಿಕೊಂಡು ಹೋಗುತ್ತಿದ್ದರು, ಇಲ್ಲಿಯ ಕಂಬಳಿಗಳೂ ಸಹ ದೇಶದಲ್ಲಿ ಪ್ರಸಿದ್ಧ ಪಡೆದಿವೆ.

ಹಿರಿಯ ಎಸ್.ನಿಜಲಿಂಗಪ್ಪನವರ ಬಗ್ಗೆ ಊರಿನ ಜನತೆಗೆ ತುಂಬಾ ಅಭಿಮಾನ ಇತ್ತು. ತುರುವನೂರಿನ ಗೌಡರಿಗೂ ಶ್ರೀ ನಿಜಲಿಂಗಪ್ಪನವರಿಗೂ ಮೊದಲಿನಿಂದಲೂ ಆತ್ಮೀಯತೆ ಶ್ರೀನಿಜಲಿಂಗಪ್ಪನವರಿಗೂ ತುರುವನೂರುರೆಂದರೆ ಬಹಳ ಪ್ರೀತಿ ಚಳವಳಿಯ ಸಂದರ್ಭದಲ್ಲಿ ಸರ್ಕಾರ ವರ್ತಮಾನ ಪತ್ರಿಕೆಗಳನ್ನು ಮುಟ್ಟುಗೋಲು ಹಾಕಿಕೊಂಡಾಗ, ಜನತೆಗೆ ದೇಶದ ಸಮಾಚಾರವೇ ಗೊತ್ತಾಗುತ್ತಿರಲಿಲ್ಲ. ಆಗ ಚಿತ್ರದುರ್ಗದಲ್ಲಿದ್ದ ರಂಗರಾವ್, ವಾಸುದೇವರಾವ್, ಹುಲ್ಲೂರು ಶ್ರೀನಿವಾಸ ಜೋಯಿಸ್, ಕೆಂಚಪ್ಪ ಮುಂತಾದ ಹಿರಿಯರು ಕೊಡುವ ಸಮಾಚಾರವನ್ನು ಸಂಗ್ರಹಿಸದೆ ಜೆ.ಮಹಲಿಂಗಪ್ಪ, ಜೆ.ಹನುಮಂತಪ್ಪ, ಮಡ್ಡಿ ಕರಿಯಪ್ಪ, ಎನ್‍ತಿಪ್ಪೇರುದ್ರಪ್ಪ, ಎಸ್. ನಾರಾಯಣ ರೆಡ್ಡಿ ಇನ್ನು ಮುಂತಾದವರು ಸೇರಿ ಬೆಟ್ಟದಲ್ಲಿ ಅಡಗಿಕೊಂಡು ಕಾರ್ಬನ್‍ಷೀಟ್ ಇಟ್ಟು ಒಬ್ಬೊಬ್ಬರು 40-50 ಕಾಪಿಗಳನ್ನು ಬರೆದು ಊರೂರಿಗೆ ತಲುಪಿಸುತ್ತಿದ್ದರು. ಒಮ್ಮೆ ಈ ರೀತಿ ತಯಾರಿಸಿದ ಪತ್ರಿಕೆಯನ್ನು ಜಿಲ್ಲಾಧಿಕಾರಿಗಳ ಮನೆಯ ಹೊರಗೋಡೆಗೆ ಹಚ್ಚಿ ಬರಬೇಕೆಂದು ತೀರ್ಮಾನಿಸಿದರು. ಅಲ್ಲಿ ಸದಾ ಕಾವಲುಗಾರನಿರುತ್ತಿದ್ದ ಮತ್ತು ಬಲವಾದ ಒಂದು ನಾಯಿಯೂ ಇರುತ್ತಿತ್ತು ಇದರಿಂದ ಅಲ್ಲಿ ಪ್ರವೇಶಿಸುವುದೇ ದುಸ್ತರವಾಗಿತ್ತು. ಒಂದು ವಾರದಲ್ಲಿ ಕಾವಲುಗಾರನಿಗೆ ಬೀಡಿಕೊಡುವ ಅಭ್ಯಾಸಮಾಡಿಕೊಂಡು, ಹಾಗೆಯೇ ನಾಯಿಗೆ ಬಿಸ್ಕತ್, ಬ್ರೆಡ್ ಹಾಕುವುದರ  ಮೂಲಕ ಅದನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ದಿನ ಪತ್ರಿಕೆಯನ್ನು ಬಾಗಿಲಿಗೇ ಅಂಟಿಸಿ ಬಂದರು. ಇದನ್ನು ನೋಡಿದ ಡಿ.ಸಿ ಯವರು ಕಾವಲು ನಿಲ್ಲುತ್ತಿದ್ದ ಆ ಪೊಲೀಸ್‍ನನ್ನು ಬದಲಾಯಿಸುವುದರ ಜೊತೆಗೆ ಹಚ್ಚಿ ಹೋದ ಬಾಲಕರನ್ನ ಸೆರೆ ಹಿಡಿಯುವಂತೆ ಸಬ್ ಇನ್ಸ್‍ಪೆಕ್ಟರಿಗೆ ತಿಳಿಸಿದರೆಂದು ಮಾಹಿತಿ ಬಂತು ಆಗ ಬಾಲಕ ಭೀಮಪ್ಪನಾಯ್ಕರ ಮೊರೆ ಹೊಕ್ಕರು. ಭೀಮಪ್ಪನಾಯ್ಕರು ಸಬ್‍ಇನ್ಸ್‍ಪೆಕ್ಟರಿಗೆ ಬೆದರಿಕೆ ಹಾಕಿದರು. ಅಕಸ್ಮಾತ್ ಆ ಹುಡುಗರು ಸಿಕ್ಕರೆ ಆರೆಸ್ಟ್ ಮಾಡಿ ನಿಮ್ಮ ಕಾನೂನಿನಂತೆ ಕ್ರಮ ಜರುಗಿಸಿ ಏನಾದರೂ ಅವರಿಗೆ ಮೈಮೇಲೆ ಪೆಟ್ಟು ಕೊಟ್ಟರೆ, ಅವರ ಶರೀರಕ್ಕೇನಾದರೂ ಘಾಸಿಯಾದರೆ ಈಸೂರು ಪ್ರಕರಣವನ್ನು ಜ್ಞಾಪಿಸಿಕೊಳ್ಳಿ ಎಂದು ಬೆದರಿಕೆ ಹಾಕಿದ್ದರಿಂದ ಬಚಾವಾದರು. ಜೆ. ಮಹಾಲಿಂಗಪ್ಪ 1947ರ ಚಳುವಳಿಯಲ್ಲಿ ಉಪಾಧ್ಯಾಯ ವೃತ್ತಿಗೆ ತಿಲಾಂಜಲಿ ಇತ್ತು, ಚಿತ್ರದುರ್ಗದ ಕೋರ್ಟ್ ಮೇಲೆ ಧ್ವಜಾರೋಹಣ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅರೆಸ್ಟ್ ಆಗಿ 6 ತಿಂಗಳ ಶಿಕ್ಷೆಗೊಳಗಾಗಿ ಸೆಂಟ್ರಲ್ ಜೈಲಿಗೆ ಸೇರಿದರು. ಗೋವಿಂದ ರೆಡ್ಡಿ, ಕೆ.ತಿಪ್ಪೇಸ್ವಾಮಿ, ಕೊಳ್ಳಿ ತಿಪ್ಪಣ್ಣ, ತಿಪ್ಪಯ್ಯ, ಗೊಲ್ಲರ ಕರಿಯಪ್ಪ ಮಡ್ಡಿ, ರಮೇಶಪ್ಪ, ಸಾದಾ ಕೃಷ್ಣರೆಡ್ಡಿ ಇವರ ಸೇವೆ ಸ್ಮರಿಸುವಂತಹುದು

1947ರಲ್ಲಿ ಅರೆಸ್ಟ್ ಆದ ಸ್ವಾತಂತ್ರ್ಯ ಯೋಧರು ಶ್ರೀಯುತರುಗಳಾದ ಬುಡನ್ ಸಾಬ್, ಗಾರಮನೆ ರಾಮರೆಡ್ಡಿ, ಎಂ.ಕೆ.ಎರಪ್ಪ, ಎಲ್.ತಿಪ್ಪೇರುದ್ರಪ್ಪ, ಎಸ್.ಲಕ್ಷ್ಮಣರೆಡ್ಡಿ ಗಣೇಕಲ್ ಹನುಮಂತಪ್ಪ, ಕಾರ್ಮೂರು ನಾರಾಯಣರೆಡ್ಡಿ ನರಸಿಂಹರೆಡ್ಡಿ ಜೆ. ಮಹಾಲಿಂಗಪ್ಪ ಮಡ್ಡಿ ಕರಿಯಪ್ಪ, ಕಡಬನ ಕಟ್ಟೆ, ಎಮ್.ಹುನುಮಂತಪ್ಪ(ಮಾಜಿ), ಹನುಮಂತಪ್ಪ, ಗನಕಿ ಸಂಜೀವಪ್ಪ ಇನ್ನು ಮುಂತಾದವರು ಚಿತ್ರದುರ್ಗ ಜಗಳೂರುಗಳಲ್ಲಿ ಅರೆಸ್ಟ್ ಆದರು. ಇವರಿಗೆಲ್ಲಾ ಕೋರ್ಟಿನಲ್ಲಿ 6 ತಿಂಗಳ ಸೆರೆ ಪ್ರಕಟವಾಯಿತು. ಒಂದೂವರೆ ತಿಂಗಳು ಸೆಂಟ್ರಲ್ ಜೈಲಿನಲ್ಲಿರುವಾಗಲೇ ಮೈಸೂರಿಗೆ ಸ್ವಾತಂತ್ರ್ಯ ಬಂದ ಪ್ರಯುಕ್ತ ಸೆರೆಮನೆಯಿಂದ ಬಿಡುಗಡೆಗೊಂಡರು.

ಸ್ವಾತಂತ್ರ್ಯ ಬಂದ ನಂತರ ತುರೆವನೂರಿನ ಮುನಿಸಿಪಲ್ ಅಧ್ಯಕ್ಷರಾಗಿ ಆಯ್ಕೆಯಾಗಿ, ಪುಂಡುಗಂದಾಯ ಕಟ್ಟಿದ್ದವರ ಹಣವನ್ನು ವಾಪಸ್ಸು ಕೊಡಿಸಲು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಪ್ರಭಾವ ಬೀರಿ ಆರೆಸ್ಟ್ ಮಾಡಿಸಿದರು. ಕಟ್ಟಿದವರಲ್ಲಿ ರಶೀದಿ ಇಲ್ಲದ ಪ್ರಯುಕ್ತ ಮತ್ತೆ ಕೆಲವರಲ್ಲಿ “ನಮ್ಮದೇ ಸರ್ಕಾರ ನಮ್ಮ  ಹಣ ಇರಲಿ ಬಿಡು” ಎಂಬ ತಾತ್ಪರದ ಧೋರಣೆಯಿಂದ ಯಾರೂ ವಾಪಾಸ್ಸು ಪಡೆಯಲಿಲ್ಲ.

ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈ ಗ್ರಾಮವು ಸ್ವಾತಂತ್ರ್ಯ ಪೂರ್ವದಲ್ಲಿದ್ದಕ್ಕಿಂತಲೂ ಹೀನಾಯವಾಗಿದೆ. ಇಲ್ಲಿಯ ಜನತೆ ಕೇವಲ ಮಳೆಯ ನೀರನ್ನು ಮಾತ್ರ ನಂಬಿಕೊಂಡು ವ್ಯವಸಾಯ ಮಾಡ ಬೇಕಾಗಿದೆ. ಉತ್ಕೃಷ್ಠವಾದ ಭೂಮಿ ಇದ್ದರೂ ಸಕಾಲಕ್ಕೆ ಮಳೆಯಾಗದೆ ರೈತರು ಕಂಗಾಲಾಗಿ ಹೋಗಿದ್ದಾರೆ, ವಿದ್ಯಾವಂತ ಯುವಕರು ತಮ್ಮ ಊರನ್ನು ತೊರೆದು ಬೇರೆ ಬೇರೆ ಕಡೆ ಹೋಗಿ ನೆಲೆಸಿದ್ದರೆ ಇಲ್ಲಿಯ ಮುಖ್ಯ ಕಸುಬು ವ್ಯವಸಾಯ, ಕುರಿಸಾಕಾಣಿಕೆ, ಕಂಬಳಿ ತಯಾರಿಕೆ ವ್ಯವಸಾಯಗಾರರ ಸ್ಥಿತಿ ಹೀನಾಯವಾಗಿದೆ. ಕೈಕಸುಬು ಇರುವರು ಸ್ವಲ್ಪ ಜೀವ ಹಿಡಿದು ಜೀವಿಸುತ್ತಿದ್ದಾರೆ. ಇಲ್ಲಿ ಬೋರ್ ಹಾಕಿಸಿದರೆ ನೀರೇ ಬೀಳುವುದಿಲ್ಲ. ಈಗಲೂ ಕುಡಿಯುವ ನೀರಿನ ತೊಂದರೆ ಮೊದಲಿಗಿಂತಲೂ ಕಷ್ಟದಾಯಕವಾಗಿದೆ. ಸರ್ಕಾರದ ಮಟ್ಟದಲ್ಲಿ ಯಾವುದಾದರೂ ಮಾರ್ಗಹುಡುಕಿ ಯಾವ ಮೂಲದಿಂದಲಾದರೂ ಈ ಪ್ರವೇಶಕ್ಕೆ ನೀರುಣಿಸಿದಾಗ ಮಾತ್ರ ಇಲ್ಲಿಯ ಜನರ ಕಷ್ಟದೂರಾಗಬಹುದು.

                                                                                    ರಚನೆ-ಜೆ. ಮಹಾಲಿಂಗಪ್ಪ

                                                                     ಸಲಹೆ,ಸಹಕಾರ-ಹನುಮಂತಪ್ಪ(ಮಾಜಿ), ತುರುವನೂರು

Recent Articles

spot_img

Related Stories

Share via
Copy link