ದಾವಣಗೆರೆ :
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲೆಂಬ ಆಶಯದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಓಡುವ ಮೂಲಕ ರನ್ ಫಾರ್ ಮೋದಿ ಅಭಿಯಾನ ಹಮ್ಮಿಕೊಂಡಿರುವ ಮೋದಿ ಅಭಿಮಾನಿ ದಂಪತಿಗಳು ನಗರಕ್ಕೆ ಆಗಮಿಸಿದರು.
ಇಲ್ಲಿನ ಅಂಬೇಡ್ಕರ್ ವೃತ್ತಕ್ಕೆ ಭಾನುವಾರ ರಾತ್ರಿ 9ರ ಸುಮಾರಿಗೆ ಆಗಮಿಸಿದ ಮೂಲತಃ ಕೊಡಗಿನ ನೀಲಗುಂದ ಮಲ್ಲಪ್ಪ ಕುಮಾರ, ಪತ್ನಿ ರೂಪಾ ಅವರುಗಳನ್ನು ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು.ಇದೇ ವೇಳೆ ನೀಲಗುಂದ ಮಲ್ಲಪ್ಪ ಕುಮಾರ ಮಾತನಾಡಿ, ನಾವು ಯಾವುದೇ ಪಕ್ಷ, ಸಂಘ-ಸಂಸ್ಥೆ ಪದಾಧಿಕಾರಿಗಳಲ್ಲ. ನಾವು ಈ ದೇಶದ ಸಾಮಾನ್ಯ ಪ್ರಜೆಯಾಗಿದ್ದು, ದೇಶಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಉದ್ದೇಶದಿಂದ ಈ ಅಭಿಯಾನ ಕೈಗೊಂಡಿದ್ದೇವೆ. ಎಲ್ಲ ವರ್ಗದ ಜನರಿಗೂ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನಪರ ಆಡಳಿತ ನೀಡುತ್ತಿರುವ ನರೇಂದ್ರ ಮೋದಿಯವರು ಈ ದೇಶಕ್ಕೆ ಮತ್ತೆ ಪ್ರಧಾನಿಯಾಗಬೇಕು.
ಪ್ರತಿಯೊಬ್ಬರೂ ಆರೋಗ್ಯವಂತರಾಗಬೇಕಾದರೆ ಪ್ರತಿದಿನ ಬೆಳಗ್ಗೆ ವಾಕಿಂಗ್, ಯೋಗ, ಶಾರೀರಿಕ ಚಟುವಟಿಕೆ ಕೈಗೊಳ್ಳಬೇಕು. ಮೋದಿ ಅಭಿಮಾನಿಗಳಿಂದ ಕೈಲಾದ ದೇಣಿಗೆ ಸಂಗ್ರಹಿಸಿ ದೇಶ ಕಾಯುವ ಯೋಧರಿಗೆ ಅರ್ಪಿಸಬೇಕೆಂಬ ಮೂರು ಅಂಶಗಳನ್ನು ಇಟ್ಟುಕೊಂಡು ಅಭಿಯಾನ ಕೈಗೊಂಡಿದ್ದೇವೆ ಎಂದರು.
ಜನವರಿ 26ರಿಂದ ಕನ್ಯಾಕುಮಾರಿಯಿಂದ ಆರಂಭಗೊಂಡು ಮೋದಿ ರನ್ ಅಭಿಯಾನ ಈಗಾಗಲೇ ಸುಮಾರು 800 ಕಿಲೋಮೀಟರ್ ಕ್ರಮಿಸಿದ್ದು, ದಾವಣಗೆರೆಯಿಂದ ಫೆ.11ರಂದು ಬೆಳಗ್ಗೆ 6 ಗಂಟೆಗೆ ರಾಣಿಬೆನ್ನೂರು ಕಡೆಗೆ ಸಾಗಲಿದೆ. ಮಲ್ಲಪ್ಪ, ರೂಪಾ ದಂಪತಿಯನ್ನು ಹಿಂದೂ ಜಾಗರಣಾ ವೇದಿಕೆ, ಟೀಮ್ ಮೋದಿ ತಂಡದವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರಾಂತ್ಯ ಕಾರ್ಯದರ್ಶಿ ಎಸ್.ಟಿ.ವೀರೇಶ, ಜಿಲ್ಲಾ ಸಂಚಾಲಕ ಸತೀಶ ಪೂಜಾರಿ, ಟೀಮ್ ಮೋದಿಯ ಜಿಲ್ಲಾ ಸಂಚಾಲಕಿ ಶಾರದಾ, ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ, ಪಿ.ಸಿ.ಶ್ರೀನಿವಾಸ, ಮಲ್ಲಿಕಾರ್ಜುನ, ಕಾರ್ತಿಕ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
