ದುಶ್ಚಟ ಮತ್ತು ದ್ವೇಷ ಮುಕ್ತ ಸಮಾಜ ನಿರ್ಮಾಣವಾದಲ್ಲಿ ಬಲಿಷ್ಠ ದೇಶ ನಿರ್ಮಾಣ ಸಾಧ್ಯ : ಯು.ಟಿ ಖಾದರ್

ಬೆಂಗಳೂರು

    ದುಶ್ಚಟ ಮತ್ತು ದ್ವೇಷ ಮುಕ್ತ ಸಮಾಜ ನಿರ್ಮಾಣವಾದರೆ ಬಲಿಷ್ಠ ದೇಶ ನಿರ್ಮಾಣ ಸಾಧ್ಯ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಭಾಧ್ಯಕ್ಷರು, ಯುವಕರೆಲ್ಲಾ ಸೇರಿ ತಂಬಾಕು ವಿರುದ್ಧ ಜನಜಾಗೃತಿ ಮೂಡಿಸಬೇಕು.

    ಸರ್ಕಾರವು ತಂಬಾಕು ನಿಷೇಧಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ. ಜನಸಾಮಾನ್ಯರ ಬೆಂಬಲವಿದ್ದಲ್ಲಿ ಮಾತ್ರ ಅನುಷ್ಠಾನ ಸಾಧ್ಯ. ರಾಜ್ಯದ ಜನರ ಒಳಿತಿಗಾಗಿ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.

      ಭವಿಷ್ಯದ ಯುವಪೀಳಿಗೆಗೆ ತಂಬಾಕು ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ದುಶ್ಚಟಕ್ಕೆ ದಾಸರಾಗಿ ಆಸ್ಪತ್ರೆ ವಾಸಿಗಳಾದರೆ, ತಮ್ಮ ಕುಟಂಬ ಕಷ್ಟ ಅನುಭವಿಸುವುದರ ಜೊತೆಗೆ ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಯಾನ್ಸರ್ ರೋಗಿಯೊಬ್ಬರು ಸಭಾಧ್ಯಕ್ಷರನ್ನು ಭೇಟಿ ಮಾಡಿದರು.

     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾತನಾಡಿ ಈ ದಿನ ರಾಜ್ಯಾದೈಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷದ ವಿಷಯ  ನಮಗೆ ಆಹಾರ ಬೇಕು-ತಂಬಾಕು ಅಲ್ಲ .

       ಯುವಕರು ಚಿಕ್ಕ ವಯಸ್ಸಿನಲ್ಲೆ ತಂಬಾಕು ಅಭ್ಯಾಸಕ್ಕೆ ಒಳಗಾಗಬಾರದು. ತಂಬಾಕು ಉಪಯೋಗಿಸುವವರಿಗೆ ಇದರಿಂದ ಉಂಟಾಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಬೇಕೆಂದರು.

     ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸಚಿವರಾದ ಬಿ.ನಾಗೇಂದ್ರ ಮಾತನಾಡಿ, ತಂಬಾಕು ನಿರ್ಮೂಲನೆ ಕುರಿತು ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಬದ್ಧವಾಗಿದೆ. ಒಂದು ಸಿಗರೇಟು ಸೇವನೆ 10 ದಿನದ ಆಯಸ್ಸು ಕಡಿಮೆ ಮಾಡುತ್ತದೆ. ಯುವಕರು ದುಶ್ಚಟಕ್ಕೆ ಒಳಗಾಗದೆ, ಪೌಷ್ಠಿಕ ಆಹಾರ ಸೇವಿಸಿ ಸದೃಢರಾಗಬೇಕೆಂದರು.ಕಾರ್ಯಕ್ರಮದಲ್ಲಿ  ಸಮಿತಿಯ ಸದಸ್ಯರಾದ ಡಾ: ವಿಶಾಲ್ ರಾವ್, ಡಾ: ತ್ರಿವೇಣಿ, ಡಾ: ಅಶೋಕ ಆರ್. ಪಾಟೀಲ್, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ