ಗಾಂಧೀನಗರ:
ಗುರುವಾರ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ 241 ಮಂದಿ ಸೇರಿದಂತೆ ಐವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಏರ್ ಇಂಡಿಯಾ ವಿಮಾನ ಅಪಘಾತದ ನಂತರ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತ್‌ನ ಅಹಮದಾಬಾದ್‌ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಗುರುವಾರ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್‌ನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿತ್ತು.
ವಿಮಾನ ದುರಂತ ಸಂಭವಿಸುತ್ತಿದ್ದಂತೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದರು. ಅಹಮದಾಬಾದ್‌ನಲ್ಲಿ ನಡೆದ ದುರಂತವು ನಮ್ಮನ್ನು ದಿಗ್ಭ್ರಮೆಗೊಳಿಸಿದೆ ಮತ್ತು ದುಃಖಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕವಾಗಿದೆ ಎಂದು ಮೋದಿ ಹೇಳಿದ್ದಾರೆ. ಘಟನೆಯಲ್ಲಿ ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ 241 ಮಂದಿ ಮೃತಪಟ್ಟಿದ್ದಾರೆ. “ಅಹಮದಾಬಾದ್‌ನಿಂದ ಮಧ್ಯಾಹ್ನ 3.38 ಕ್ಕೆ ಹೊರಟ ವಿಮಾನವು ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ದಿತ್ತು. ಈ ಪೈಕಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು.
ಟಾಟಾ ಗ್ರೂಪ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಏರ್ ಇಂಡಿಯಾ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಏರ್ ಇಂಡಿಯಾವು ಸಂತ್ರಸ್ತರ ಕುಟುಂಬಗಳ ಬೆಂಬಲಕ್ಕೆ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ. “ಸ್ಥಳದಲ್ಲಿ ತುರ್ತು ಪ್ರತಿಕ್ರಿಯೆ ತಂಡಗಳಿಗೆ ಸಹಾಯ ಮಾಡಲು ಮತ್ತು ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ಬೆಂಬಲ ಮತ್ತು ನೆರವನ್ನು ಒದಗಿಸಲು ನಾವು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆʼʼ ಎಂದು ಚಂದ್ರಶೇಖರನ್ ಹೇಳಿದ್ದಾರೆ.
ಈ ದುರಂತದಲ್ಲಿ ಮೃತರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ 1 ಕೋಟಿ ರೂ. ಹಾಗೂ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಸಹ ಭರಿಸುತ್ತೇವೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲ ಆರೈಕೆ ಮತ್ತು ಬೆಂಬಲ ದೊರೆಯುವಂತೆ ನೋಡಿಕೊಳ್ಳುತ್ತೇವೆ. ವಿಮಾನ ಪತನಗೊಂಡ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನ ಪುನರ್ನಿರ್ಮಾಣಕ್ಕೆ ನೆರವು ನೀಡುತ್ತೇವೆ ಎಂದು ಅವರು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
