ದೆಹಲಿಯ 5 ಶಾಲೆಗಳಿಗೆ ಬಾಂಬ್‌ ಬೆದರಿಕೆ

ನವದೆಹಲಿ:

    ದೆಹಲಿಯ 5 ಶಾಲೆಗಳು ಹಾಗೂ ಪಶ್ಚಿಮ ಬಂಗಾಳದ ರಾಜಭವನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ, ಪರಿಶೀಲನೆ ನಡೆಸುತ್ತಿದೆ.

     ಪಶ್ಚಿಮ ಬಂಗಾಳದ ರಾಜಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಕರೆ ಮಾಡಿದ್ದು, ನಾವು ಟೆರರೂಸರ್ಸ್​ ಎಂಬ ಭಯೋತ್ಪಾದಕ ಗುಂಪಿಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ.

    ರಾಜಭವನ ಕಟ್ಟಡದ ಒಳಗೆ ಸ್ಫೋಟಕ ಸಾಮಗ್ರಿ ಇರಿಸಿದ್ದೇವೆ. ಅಲ್ಲಿರುವ ಅನೇಕರು ಸಾಯುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ, ಪಶ್ಚಿಮ ಬಂಗಾಳ ಪೊಲೀಸರು ಇದೊಂದು ಹುಸಿ ಕರೆ ಎಂದಿದ್ದಾರೆ. ಕರೆ ಮಾಡಿದವರ ಬಗ್ಗೆ ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

    ಈ ನಡುವೆ ಪೂರ್ವ ದೆಹಲಿಯ ಮಯೂರ ವಿಹಾರದಲ್ಲಿರುವ ಮದರ್ ಮೇರಿ ಶಾಲೆ ಸೇರಿ 5 ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

    ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

    ಸೋ ಮವಾರ ಜೈಪುರ, ಕಾನ್ಪುರ ಮತ್ತು ಗೋವಾದ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕ್ರಮ ಹೆಚ್ಚಿಸಲಾಗಿದೆ ಮತ್ತು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಏಪ್ರಿಲ್ 26 ರಂದು ಕೋಲ್ಕತ್ತಾ ಮತ್ತು ಜೈಪುರ ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಈ ಸಂಬಂಧ ಮುಂಬೈ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.

Recent Articles

spot_img

Related Stories

Share via
Copy link
Powered by Social Snap