ದೇವನಗರಿಯಲ್ಲಿ ಕಳೆಗಟ್ಟಿರುವ ಗಣೇಶೋತ್ಸವ

ದಾವಣಗೆರೆ:

      ನಗರದ ಗಲ್ಲಿ, ಗಲ್ಲಿಯಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಗಣಪತಿ ಹಬ್ಬಕ್ಕೆ ಇಡೀ ದೇವನಗರಿ ಕಳೆಗಟ್ಟಿದೆ.
ಹೌದು… ಇಲ್ಲಿಯ ವಿವಿಧ ಸಂಘ-ಸಂಸ್ಥೆಗಳು, ಬಳಗಗಳು, ಗಣೇಶ ಮಂಡಳಿಗಳು ನಗರದ ಬೀದಿ, ಬೀದಿ ಹಾಗೂ ಗಲ್ಲಿ-ಗಲ್ಲಿಗಳಲ್ಲಿ ತರಹೇವಾರಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಬೆಳಿಗ್ಗೆ, ಸಂಜೆ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೆ, ಮೊದಕ, ತಂಬಿಟ್ಟುಗಳ ನೈವೇದ್ಯ ಇಡಲಾಗುತ್ತಿದೆ.

ಇಷ್ಟಲಿಂಗ ಗಣಪತಿ:

      ಪ್ರತಿ ವರ್ಷವೂ ವಿನೂತನ ಪ್ರಯೋಗಳ ಮೂಲಕ ನಾಗರೀಕರ ವಿಶೇಷ ಗಮನ ಸೆಳೆದಿರುವ ದಾವಣಗೆರೆಯ ಹಿಂದೂ ಯುವ ಶಕ್ತಿ ಸಂಘಟನೆಯು ಈ ಬಾರಿ ಇಷ್ಟಲಿಂಗಗಳನ್ನು ಬಳಕೆ ಮಾಡಿಕೊಂಡು 13 ಅಡಿಯ ಭವ್ಯ ಗಣಪತಿ ಮೂರ್ತಿಯನ್ನು ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಿದೆ.

       ಈ ವರೆಗೂ ತೆಂಗಿನಕಾಯಿ, ಹಸಿ ಅಡಿಕೆ, ಮೆಕ್ಕೆಜೋಳದ ತೆನೆ, ನವಧಾನ್ಯ, ಉತ್ತತ್ತಿ, ಬಾದಾಮಿ, ಡೈಮಂಡ್, ಒಂದು ರೂ. ನಾಣ್ಯ, ರೇಷ್ಮೆಗೂಡು, ರುದ್ರಾಕ್ಷಿ, ಯಾಲಕ್ಕಿ, ಬೆಟ್ಟಡಿಕೆ, ಮುತ್ತಿನಮಣಿ, ಕವಡೆ, ಗಣಪತಿ ಮೂರ್ತಿಗಳು, ಮೋದಕ, ತಂಬಿಟ್ಟು, ಗೋಡಂಬಿ, ಅರಿಶಿಣ ಕೊಂಬು, ಕಡಲೆಕಾಯಿ, 5 ರೂ. ನಾಣ್ಯ, ಸಣ್ಣ ಬೆಳ್ಳಿ ಗಣಪತಿ ಹೀಗೆ ವಿವಿಧ ವಸ್ತುಗಳನ್ನು ಬಳಕೆ ಮಾಡಿಕೊಂಡು ವಿನೂತನ ಪ್ರಯೋಗ ಮಾಡಿಕೊಂಡು ಬಂದಿರುವ ಪಿ.ಸಿ.ಮಹಬಲೇಶ್ವರ ನೇತೃತ್ವದ ಹಿಂದೂ ಯುವ ಶಕ್ತಿ ಸಂಘಟನೆಯು ಈ ಬಾರಿ, ಸುಮಾರು 15000 ಇಷ್ಟಲಿಂಗಗಳನ್ನು ಬಳಸಿಕೊಂಡು 13 ಅಡಿ ಎತ್ತರದ ಭವ್ಯ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.

      ಇಷ್ಟಲಿಂಗಗಳನ್ನು ಬಳಕೆ ಮಾಡಿಕೊಂಡು ಮೂರ್ತಿ ಪ್ರತಿಷ್ಠಾಪಿಸಿರುವ ಈ ಸಂಘಟನೆಯವರು ಪೂಜೆಗಾಗಿ ಐದು ಅಡಿಯ ಇನ್ನೊಂದು ಗಣಪತಿಯನ್ನು ಸಹ ಪ್ರತಿಷ್ಠಾಪಿಸಿದ್ದು, 11 ದಿನಗಳ ನಂತರ ಅಂದರೆ, ಸೆ.23ರಂದು ಭವ್ಯ ಮೆರವಣಿಗೆಯೊಂದಿಗೆ ಈ ಐದು ಅಡಿಯ ಗಣಪನ ಮೂರ್ತಿಯನ್ನು ವಿರ್ಸಜನೆ ಮಾಡಿ, 13 ಅಡಿಯ ಗಣಪತಿ ನಿರ್ಮಾಣಕ್ಕೆ ಬಳಸಿರುವ ಇಷ್ಟಲಿಂಗಗಳನ್ನು ತಗೆದು, ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲು ತೀರ್ಮಾನಿಸಿದೆ.

ನೆರೆ ನೆನಪಿಸುವ ಗಣಪ:

     ದಾವಣಗೆರೆಯ ಪಿಜೆ ಬಡಾವಣೆಯ ಪಿನ್ಸ್ ವಿನಾಯಕ ಗ್ರೂಪ್‍ನ ನಿಖಿತ್ ಶೆಟ್ಟಿ ನೇತೃತ್ವದಲ್ಲಿ ಆಚರಿಸುವ ಗಣೇಶೋತ್ಸವ ಈ ಬಾರಿ ಕೊಡಗಿನ ನೆರೆಯನ್ನು ನೆನಪಿಸಲಿದೆ.

     ಮನುಷ್ಯ ದುರಾಸೆಯಿಂದ ಪ್ರಕೃತಿ ನಾಶ ಮಾಡಿದರೆ, ಮುಂದೆ ಯಾವ ರೀತಿಯಲ್ಲಿ ಮಾರಕವಾಗುತ್ತದೆ ಎಂಬುದನ್ನು ಸಾರುವ ಪ್ರಾತ್ಯಕ್ಷಿಕೆ ಗಮನ ಸೆಳೆಯಲಿದೆ. ಕೊಡಗಿನ ಬೆಟ್ಟಗುಡ್ಡಗಳು ಅವರುಗಳ ಮೇಲೆ ಮನೆ, ಕೃಷಿ, ರೆಸಾರ್ಟ್‍ಗಳು, ಕೆಳಗಡೆ ನೀರು ಹರಿಯುತ್ತಿರುವುದು ಅದರಲ್ಲಿ ಬಸ್ ಮನೆ ತೇಲಿಕೊಂಡು ಹೋಗುತ್ತಿರುವುದು ಇಲ್ಲಿ ಕಾಣ ಸಿಗಲಿದೆ. ಸೆ.23ರಂದು ಜಾನಪದ ತಂಡಗಳ ಮೆರವಣಿಗೆಯೊಂದಿಗೆ ಇಲ್ಲಿ ಪ್ರತಿಷ್ಠಾಪಿಸಿರುವ 8.5 ಅಡಿ ಎತ್ತರದ ಗಣಪತಿ ಮೂರ್ತಿ ವಿಸರ್ಜನೆಗೊಳ್ಳಲಿದೆ.

ಭದ್ರಾ ಡ್ಯಾಂ ವಿನಾಯಕ:

     ನಗರಕ್ಕೆ ಸಮೀಪದ ಹಳೇ ಕುಂದುವಾಡದ ಈಗಲ್ ಗ್ರೂಪ್‍ನ ಯುವಕರು ಭದ್ರಾ ಡ್ಯಾಂ ಗಣಪತಿ ಸ್ಥಾಪಿಸಿರುವುದು ವಿಶೇಷ ಗಮನ ಸೆಳೆಯುತ್ತಿದೆ.

      ಭದ್ರಾ ಡ್ಯಾಮ್ ತುಂಬಿ ನಾಲ್ಕು ಕ್ಲಸ್ಟರ್ ಗೇಟ್‍ಗಳ ಮೂಲಕ ನೀರು ಹರಿಯುತ್ತಿದ್ದು, ಆ ನೀರು ಬಂದು ಸೇರುವ ನದಿಯ ಮೇಲೆ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಭದ್ರಾ ಅಣೆಕಟ್ಟೆಯ ಸಂಪೂರ್ಣ ಮಾಹಿತಿ ನೀಡುವ ಪ್ರಯತ್ನವನ್ನು ಇಲ್ಲಿಯ ಯುವಕರು ಮಾಡಿದ್ದು, ಸತತ ಒಂದು ತಿಂಗಳಿನಿಂದ ಶ್ರಮಪಟ್ಟು ಈ ಮಾದರಿಯನ್ನು ನಿರ್ಮಿಸಲಾಗಿದೆ. ಅರ್ಧ ಹೆಚ್ಪಿ ಮೋಟರ್ ಬಳಸಿ ನಾಲ್ಕು ಕ್ಲಸ್ಟರ್ ಮೂಲಕ ನೀರು ಬಿಡಲಾಗುತ್ತಿದೆ. ಜಲಾಶಯದ ಮಧ್ಯೆ ಗಣಪತಿ ಪ್ರತಿಷ್ಠಾಪಿಸಲಾಗಿದೆ. ಪಕ್ಕದಲ್ಲಿ ಭದ್ರಾ ಅಣೆಕಟ್ಟಿನ ಜಲಾನಯನ ಪ್ರದೇಶ. 1,968 ಚದರ ಅಡಿ ಇದ್ದು 71.53 ಟಿಎಂಸಿ ನೀರು ಸಂಗ್ರಹಣಾ ಸಾಮಥ್ರ್ಯ (ಜಲಾಶಯದ ಗರಿಷ್ಠಮಟ್ಟ 186 ಅಡಿ) ಹೊಂದಿರುವ ಜಲಾಶಯ ಇದ್ದು, ಭದ್ರಾ ಬಲ ಹಾಗೂ ಎಡ ದಂಡೆ ನಾಲೆಗಳ ಸುಮಾರು 1,82,818 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಪೂರೈಕೆ ಮಾಡಲಾಗ್ತಿದೆ ಎಂಬ ಮಾಹಿತಿಯನ್ನು ಸಹ ಇಲ್ಲಿ ಒದಗಿಸಲಾಗಿದೆ.

      ಪ್ರತಿ ವರ್ಷ ವಿನೂತನವಾಗಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತೇವೆ. ಈ ಬಾರಿ ಭದ್ರಾ ಜಲಾಶಯ ತುಂಬಿರುವುದರಿಂದ ಹಾಗೂ ನಮ್ಮ ಭಾಗದ ಜೀವನಾಡಿಯಾಗಿರುವ ಡ್ಯಾಂ ಕುರಿತು ಗಣೇಶ ನಿರ್ಮಿಸಿದ್ದೇವೆ ಎನ್ನುತ್ತಾರೆ ಈಗಲ್ ಗ್ರೂಪ್‍ನ ರಮೇಶ.

ವಿಠಲನ ಅವತಾರದಲ್ಲಿ ಗಣೇಶ:

       ನಗರದ ಬಂಬೂಬಜಾರ್‍ನಲ್ಲಿರುವ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮೇದಾರ ಸಮಾಜದ ವತಿಯಿಂದ 47ನೇ ವರ್ಷದ ಗಣೇಶೋತ್ಸವವನ್ನು ಬಿದಿರಿನಿಂದ ಮೂಡಿ ಬಂದ ಪಂಡರಾಪುರದ ಪಾಂಡುರಂಗ ವಿಠಲನ ಅವತಾರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ಲಾಸ್ಟಿಕ್ ಉತ್ಪನ್ನಗಳನ್ನೇ ಅತಿ ಹೆಚ್ಚು ಬಳಸುತ್ತಿರುವ ಇಂದಿನ ಸಂದರ್ಭದಲ್ಲಿ ದಾವಣಗೆರೆ ಮೇದಾರ್ ಸಮಾಜದವರು ತಮ್ಮ ಕುಲಕಸುಬಾದ ಬಿದಿರಿನ ಕೆಲಸದಿಂದ ಪರಿಸರ ಸ್ನೇಹಿಯಾದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link