ಜಗಳೂರು:
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ಯುವಕ ಪ್ರತಾಪ್ ಮೇಲೆ ನಡೆದಿರುವ ಅಮಾನುಷ್ಯ ಕೃತ್ಯವನ್ನು ಖಂಡಿಸಿ ತಾಲೂಕಿನ ಪ್ರಗತಿಪರ ಸಂಘಟನೆ ಹಾಗೂ ದಲಿತ ಒಕ್ಕೂಟ,ದಲಿತ ಸಂಘರ್ಷಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ದಲಿತ ಮುಖಂಡ ಜಿ.ಎಚ್.ಶಂಭುಲಿಂಗಪ್ಪ ಮಾತನಾಡಿ,ದೇಶದಲ್ಲಿ ದಲಿತರ ಮೇಲೆ ಅಮಾನುಷ್ಯ ಕೃತ್ಯಗಳು ನಡೆಯುತ್ತಿದ್ದು ನಾವು ಯಾವದೇಶದಲ್ಲಿದ್ದೇವೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಮನುಶಾಹಿ ವರ್ಗದ ಜನರು ದಲಿತ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ.
ಗುಂಡ್ಲುಪೇಟೆ ತಾಲುಕಿನಲ್ಲಿ ದಲಿತ ಯುವಕ ಪ್ರತಾಪ್ ದೇವಸ್ಥಾನ ಪ್ರವೇಶಿಸಿದ ಎಂಬ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡಿ,ವಿವಸ್ತ್ರಗೊಳಿಸಿ ರಸ್ತೆಯ ಮೇಲೆ ಪ್ರಾಣಿಗಳಂತೆ ಎಳೆದುಕೊಂಡು ಹೋಗುವಂತಹ ಅಮಾನುಷ್ಯ ಕೃತ್ಯ ಎಸಗುವ ಮೇಲ್ವರ್ಗದ ಜಾತಿವಾದಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಈ ಘಟನೆಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಲು ಮುಂದಾಗಬೇಕು ಎಂದರು. ರಾಜ್ಯದಲ್ಲಿ ದಲಿತ ಸಮುದಾಯದ ಉಪಮುಖ್ಯಮಂತ್ರಿ ಇದ್ದರೂ ಸಹ ಭಯವಿಲ್ಲದ ಜಾತಿವಾದಿಗಳಿಗೆ ತಕ್ಕಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಒಕ್ಕೂಟ ಅದ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸ್ವತಂತ್ರವಾಗಿ ಬದುಕುವ ಅವಕಾಶವಿದ್ದು ಕಾನೂನಿನ ಅರಿವಿಲ್ಲದೆ ಜಾತಿವಾದಿಗಳು ತನ್ನ ಅಟ್ಟಹಾಸ ಮೆರೆಯುತ್ತಿದ್ದಾರೆ ಶತಮಾನಗಳ ಕಾಲದಿಂದಲೂ ನಿರಂತರ ದಬ್ಬಾಳಿಕೆ ನಡೆಸುತ್ತಿರುವ ಪಟ್ಟಭದ್ರಾ ಹಿತಾಸಕ್ತಿಗಳಿಗೆ ಕಡಿವಾಣಯಿಲ್ಲದಂತಾಗಿದೆ.
ಗುಂಡ್ಲುಪೇಟೆಯ ಘಟನೆ ದೇಶದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂತ್ರಸ್ಥರ ನೆರವಿಗೆ ಬಂದು ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಹಾಗೂ ತಪ್ಪಿಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ,ತಕ್ಷಣವೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿ ಸೂಕ್ತ ನ್ಯಾಯ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ದಲಿತಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ ಗೌರಿಪುರದ ಸತ್ಯಮೂರ್ತಿ ಡಿಎಸ್‍ಎಸ್ ಸಂಚಾಲಕ ಮಲೆಮಾಚಿಕೆರೆ ಸತೀಶ್, ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್, ಮಾಜಿ ಉಪಾಧ್ಯಕ್ಷ ಮರೇನಹಳ್ಳಿ ನಜೀರ್, ಗೌರಿಪುರ ಕುಬೇರಪ್ಪ ಎಐಎಸ್‍ಎಫ್ ನ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್, ಗೊವಿಂದರಾಜ್, ಸತೀಶ್, , ತಿಪ್ಪೇಸ್ವಾಮಿ ರೇಣುಕೇಶ ಸೇರಿದಂತೆ ಇತರರು ಭಾಗವಹಿಸಿದ್ದರು.