ಬಳ್ಳಾರಿ:
ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡುವಂತಹ ಕಾರ್ಯಗಳಲ್ಲಿ ದುಷ್ಠಶಕ್ತಿಗಳ ದಮನಕ್ಕೆ ಹಾಗೂ ರಾಷ್ಟ್ರದ ರಕ್ಷಣೆಗೆ, ದೇಶದ ಸಮಗ್ರತೆಗೆ ಎಲ್ಲರೂ ಒಟ್ಟಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೆರಿಸಿ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಸ್ವಾತಂತ್ರ್ಯ ಸಂದೇಶ ನೀಡಿದರು.
ಸ್ವಾತಂತ್ರೋತ್ಸವದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿಯಾಗಿದೆ ಹಾಗೂ ಅದು ನಮ್ಮ ಅದ್ಯ ಕರ್ತವ್ಯವೂ ಆಗಿದೆ ಎಂದು ಹೇಳಿದ ಸಚಿವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನೋವು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಹಾಗೂ ಅಪಾರ ತ್ಯಾಗ ಮಾಡಿದ ಜನರಲ್ಲಿ ಅನೇಕರು ಇಂದು ನಮ್ಮೊಂದಿಗಿದ್ದಾರೆ. ಅನೇಕರು ನಮ್ಮನ್ನು ಅಗಲಿದ್ದಾರೆ. ಅವರೆಲ್ಲರಿಗೂ ನಮ್ಮ ನಮನಗಳು ಸಲ್ಲಬೇಕು ಎಂದರು.
ಭಾರತದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ವಿಶ್ವದಲ್ಲಿ ಅನನ್ಯವಾದ ಸ್ಥಾನ ಸಿಕ್ಕಿದೆ. ಭಾರತದ ಸ್ವಾತಂತ್ರ್ಯದ ಹೋರಾಟವೆಂದರೆ ಅದೊಂದು ಪವಾಡ ಎಂದು ತಮ್ಮ ಮಾತುಗಳಲ್ಲಿ ಬಣ್ಣಿಸಿದ ಸಚಿವ ಡಿಕೆಶಿ ಅವರು, ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಮನೋಭಾವದಿಂದ ದೇಶ ಪ್ರೇಮದಿಂದ ಪ್ರೇರಿತರಾಗಿ ಯಾವುದೇ ರೀತಿಯ ಜಾತಿ-ಮತ ಧರ್ಮಳ ಬೇಧವನ್ನು ಮರೆತು ಒಂದುಗೂಡಿ ಹೋರಾಡಿದರು. ಈ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಿಂದ ಇಂದಿನ ಪೀಳಿಗೆಯು ಮುಖ್ಯವಾಗಿ ಯುವಕರು, ವಿದ್ಯಾರ್ಥಿಗಳು ರಾಷ್ಟ್ರಪ್ರೇಮದ ಬಗ್ಗೆ ಪ್ರೇರಣೆ ಪಡೆದುಕೊಳ್ಳುವುದು ಅಗತ್ಯ ಎಂದರು.
ಸಮಾಜ ಸುಧಾರಣೆಯು ಸ್ವಾತಂತ್ರ್ಯ ಚಳುವಳಿಯ ಅವಿಭಾಜ್ಯ ಅಂಗವಾಗಿತ್ತು. ಭಾರತವು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರ ಹಾಗೂ ವಿದ್ಯಾರ್ಥಿಗಳು ಸಹ ಅಪೂರ್ವ ಸೇವೆ ಸಲ್ಲಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್‍ದಾರ್ ವಲ್ಲಬಾಯಿ ಪಟೇಲ್, ನೆಹರು, ಸುಭಾಸ್ ಚಂದ್ರ ಭೋಸ್, ದಾದಾಬಾಯಿ ನವರೋಜಿ, ವೀರಸಾವರ್‍ಕರ್, ಮೌಲಾನ ಅಬುಲ್ ಕಲಾಂ ಆಜಾದ್, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್‍ಸಿಂಗ್, ಚಂದ್ರಶೇಖರ ಅಜಾದ್, ರಾಜ್‍ಗುರು, ಸಖ್‍ದೇವ್ ಹಾಗೂ ಸಾವಿರಾರು ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಮೊದಲ ಕರ್ತವ್ಯ ಎಂದರು.
ಬಳ್ಳಾರಿಯಲ್ಲಿನ ಸ್ವಾತಂತ್ರ್ಯ ಹೋರಾಟ ನೆನೆದ ಡಿಕೆಶಿ:
ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆ ಅತ್ಯಂತ ಮಹತ್ತರ ಕೊಡುಗೆ ನೀಡಿದೆ. ಇಲ್ಲಿನ ಸ್ವಾತಂತ್ರ್ಯ ಹೋರಾಟವು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿದೆ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟವು ಮೂಲಭೂತವಾಗಿ ಗಾಂಧಿವಾದ ಸ್ವರೂಪದಾಗಿತ್ತು. ಯಾವುದೇ ಹಿಂಸೆಗೆ ಅವಕಾಶ ನೀಡದಂತೆ ಅಹಿಂಸಾವಾದವನ್ನು ಅನುಸರಿಸಿ ಹೋರಾಟ ನಡೆಸಿದನ್ನು ಸಚಿವ ಡಿ.ಕೆ.ಶಿವಕುಮಾರ ಅವರು ಸ್ಮರಿಸಿದರು.
ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಟಿ.ಸುಬ್ರಮಣ್ಯಂ, ಟಿ.ಬಿ.ಕೇಶವರಾವ್, ಕೊಟ್ಟೂರಿನ ಗೋರ್ಲಿ ಶರಣಪ್ಪ, ಗೋರ್ಲಿ ರುದ್ರಮ್ಮ, ಡಾ. ಎ. ನಂಜಪ್ಪ, ಚಿದಾನಂದ ಶಾಸ್ತ್ರಿ, ಕೊ. ಚನ್ನಬಸಪ್ಪ, ಗೌಡಪ್ಪ, ಬಿಂಧು ಮಾದವರಾವ್, ಬುರ್ಲಿ ಶೇಷಣ್ಣ, ಬೆಲ್ಲದ ಚೆನ್ನಪ್ಪ, ಬೂಸಲ ಸಾಂಬಮೂರ್ತಿ, ಹಡಪದ ತಿಮ್ಮಪ್ಪ, ಬಂಡಿಹಟ್ಟಿ ವೆಂಕೋಬರಾವ್, ಲಕ್ಷ್ಮಿದೇವಿ ಇನ್ನು ಮುಂತಾದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ನಾವಿಂದು ನೆನೆಯಬೇಕಾಗಿದೆ ಎಂದರು.
ಬಳ್ಳಾರಿಯ ಅಲ್ಲಿಪುರ ಜೈಲಿನಲ್ಲಿ ನೂರಾರು ಸತ್ಯಾಗ್ರಹಿಗಳನ್ನು ಬಂಧಿಸಲಾಗಿತ್ತು. ಚಕ್ರವರ್ತಿ ರಾಜಗೋಪಾಲಚಾರಿ, ಪೊಟ್ಟಿ ಶ್ರೀರಾಮುಲು, ಕಾಮರಾಜ್, ಟಿ.ವಿ.ಸುಬ್ಬಾಶೆಟ್ಟಿ, ಬೆಜವಾಡ ಗೋಪಾಲರೆಡ್ಡಿ ಮುಂತಾದ ಅಗ್ರಗಣ್ಯ ಹೋರಾಟಗಾರರನ್ನು ಈ ಜೈಲಿನಲ್ಲಿ ಇರಿಸಲಾಗಿತ್ತು ಎಂಬುದು ಇತಿಹಾಸದಿಂದ ವೇದ್ಯವಾಗುತ್ತದೆ ಎಂದರು.
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಕೈಗಾರಿಕೆ, ಕೃಷಿ, ಸಾಕ್ಷರತೆ, ತಂತ್ರಜ್ಞಾನ, ಆರೋಗ್ಯ, ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ, ಬಾಹ್ಯಾಕಾಶ ವಿಜ್ಞಾನ, ಅಣುವಿಜ್ಞಾನ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವಂತಹ ಪ್ರಗತಿ ಸಾಧಿಸಿದೆ. ಸ್ವಾತಂತ್ರ್ಯ ಬಂದ ನಂತರ ತನ್ನೆಲ್ಲ ಸಮಸ್ಯೆ-ಸವಾಲುಗಳ ಮಧ್ಯೆಯೂ ಭಾರತ ಬಲಿಷ್ಠ ರಾಷ್ಟ್ರವಾಗಿ ರೂಪುಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಸೈಯದ್ ಯಾಸೀನ್, ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ,ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಮೇಯರ್ ಆರ್.ಸುಶೀಲಾಬಾಯಿ, ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಮತ್ತಿತರರು ಇದ್ದರು.