ಕವನ :ದೋಣಿ-ಸಾಗಲಿ

ಹುಣ್ಣಿಮೆಯ ಇರುಳಿರೆ ,
ಅಲೆಗಳ ಮೇಲೊಂದು ಹಾಯಿದೋಣಿ ತೇಲುತಿರೆ
ಮಲಯ ಮಾರುತ ಮೆಲ್ಲಗೆ ತೀಡುತಿರೆ

ಧರೆಯ ತುಂಬಾ ಚೆಲ್ಲುತ್ತಿರೆ ಬೆಳದಿಂಗಳು
ನಭದ ತುಂಬ ಮಿನುಗುತಿರೆ ತಾರೆಗಳು
ಮಂದಗತಿಯಲಿ ಸಾಗಿ ಬರುತಿರೆ ಮೇಘ ಗಳು

ಆಗಸ ಭುವಿಯನು ತಬ್ಬಿರೇ
ಅಲ್ಲಿ ನಾನು ನೀನು ಇಬ್ಬರೇ
ಮುಡಿದ ಮಲ್ಲಿಗೆಯ ಘಮ ಎಲ್ಲೆಡೆ ಹಬ್ಬಿರೆ

ನೀ ಎನ್ನ ಮಡಿಲಲ್ಲಿ ಮಗುವಾಗಿ.
ಹಿಡಿದು ಎನ್ನ ಕೈ ಮೃದುವಾಗಿ,
ನುಡಿಯುತಿರೆ ಪಿಸು ಮಾತು ಹಿತವಾಗಿ

ಕಣ್ಣಿನಲಿ ಕಣ್ಣನಿಟ್ಟು
ನಿನ್ನ ಮುಂಗುರುಳ ಸವರಬೇಕು
ಬೊಗಸೆಯಲಿ ಮೊಗವ ಪಿಡಿದು ಹಣೆಗೊಂದು ಹೂ ಮುತ್ತನಿಡಬೇಕು
ಉಸಿರಿನಲಿ ಉಸಿರ ಬೆರೆಸಿ ಅಧರದಲಿ ಮಧುವ ಕಲೆಸಿ
ಪ್ರೇಮ ಭಾವವನೆಲ್ಲ ಸುರಿಸಿ
ಬರ ಸೆಳೆದು ಬಿಗಿದಪ್ಪಿಕೊಳ್ಳಬೇಕು

ಮರೆಯ ಬೇಕು ಜಗವ ನಿನ್ನೆದೆ ಯ ಮೇಲೆ ಒರಗಿ
ತುಂಬಿಕೊಳ್ಳ ಬೇಕು ಒಲವ ನಿನ್ನ ಮಾತಿನಲಿ ಕರಗಿ

ಬೆಳಗು ಮೂಡದೆಯೇ ಇರಲಿ ಪಯಣ ಸಾಗುತ್ತಲೆಯೇ ಇರಲಿ
ಜನುಮ ಜನುಮಕೂ ಈ ಅನುಬಂಧ ಹೀಗೆಯೇ ಇರಲಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link