ಧಾರ್ಮಿಕ ಆಚರಣೆಗಳಿಂದ ಲೋಕಕಲ್ಯಾಣ : ಶ್ರೀಗಳು

ತಿಪಟೂರು :

             ಸನಾತನವಾದ ಹಿಂದೂ ಧರ್ಮದ ಪವಿತ್ರ ಪರಂಪರೆಗಳಾದ ಹಬ್ಬ-ಹರಿದಿನಗಳು, ಜಾತ್ರೆ- ಉತ್ಸವಾದಿಗಳು, ಯಜ್ಞ-ಯಾಗಾಧಿಗಳು, ಹವನ-ಹೋಮಗಳು, ಪೂಜಾ-ವಿಧಿ ವಿಧಾನಗಳು ಮತ್ತು ಅರ್ಥಪೂರ್ಣ ಆಚರಣೆಗಳಿಂದ ಪ್ರತಿಯೊಬ್ಬರು ಜೀವನದಲ್ಲಿ ಸುಖ, ಸಂತೋಷ, ಸಂತೃಪ್ತಿ, ಶಾಂತಿ, ನೆಮ್ಮದಿಯನ್ನು ಪೂರ್ವಿಕರು ಪಡೆದಕೊಳ್ಳುತ್ತಿದ್ದರೆಂದು ಆದಿಚುಂಚನಗಿರಿ ಶಾಖಾಮಠ ಸುಕ್ಷೇತ್ರ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಿ ಸನ್ನಿಧಿಯ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

               ತಾಲ್ಲೂಕಿನ ಆದಿಚುಂಚನಗಿರಿ ಶಾಖಾಮಠ ಸುಕ್ಷೇತ್ರ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ವರಮಹಾ ಲಕ್ಷ್ಮೀ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಹೋಮ ಹಾಗೂ ಲಕ್ಷ್ಮೀಪೂಜೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಪ್ರಾಚೀನ ಕಾಲದಿಂದಲೂ ನಮ್ಮ ಹಿರಿಯರು ತಮ್ಮ ಸಂತೃಪ್ತ ಬದುಕಿಗಾಗಿ ಪ್ರಕೃತಿ ಸಹಜವಾದ ಮಾಸಗಳಿಗೆ ಅನುಗುಣವಾಗಿ ಕೆಲ-ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು. ಅದರಂತೆ ಮಾಸಗಳಲೆಲ್ಲಾ ವಿಶಿಷ್ಠಿ ಮಹತ್ವವನ್ನು ಹೊಂದಿರುವ ಶ್ರಾವಣ ಮಾಸದಲ್ಲೂ ಕೂಡ ವಿಶೇಷವಾದ ಪೂಜೆ ಪುನಸ್ಕಾರದೊಂದಿಗೆ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರು. ಏಕೆಂದರೆ ಈ ಶ್ರಾವಣ ಮಾಸದ ವಿಶೇಷತೆಯೇ ಬಹಳ ಅರ್ಥಪೂರ್ಣ.

                ಭೂಮಿ ತಾಯಿಯು ನವ ಚೈತನ್ಯವನ್ನು ಪಡೆದುಕೊಳ್ಳುವ ಪರ್ವ ಕಾಲ. ಸಕಲ ಜೀವ ರಾಶಿಗಳು ಹೊಸತನದೊಂದಿಗೆ ಹೊಂದಿಕೊಳ್ಳಲು ಸಿದ್ದವಾಗುವ ಸಮಯ. ಮನುಷ್ಯನು ಅಂತರಿಕವಾಗಿ, ಮಾನಸಿಕವಾಗಿ ಪ್ರಪುಲ್ಲತೆ ಹಾಗೂ ಸುಪ್ರಸನ್ನತೆಯುಳ್ಳನಾಗಿ ಸತ್ಕಾರ್ಯಗಳನ್ನು ಮಾಡಲು ಸನ್ನದ್ಧನಾಗುವ ಪುಣ್ಯ ಕಾರ್ಯಗಳಿಂದ ಪುಣ್ಯವನ್ನು ಪ್ರಾಪ್ತೀಕರಿಸಿಕೊಳ್ಳುವ ಸುಸಮಯವಿದು.

                ಅದ್ದರಿಂದಲೇ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಶಕ್ತಿ ಹಾಗೂ ಸಿರಿ ಸಂಪತ್ತಿನ ಅದಿದೇವತೆಯಾದ ಲಕ್ಷ್ಮೀಯನ್ನು ಪ್ರತಿಯೊಬ್ಬರು ಮನೆಗಳಲ್ಲಿ ಕೂರಿಸಿ ಸರ್ವಾಲಂಕಾಆರ ಮಾಡಿ ತಾವು ಬೆಳೆದಿರುವ ದವಸ ಧಾನ್ಯಗಳನ್ನೆಲ್ಲಾ ಅವಳ ಮುಂದಿರಿಸಿ ಬಹು ಭಕ್ತಿಯಿಂದ ಈ ಭೂಮಿಗೆ ಮಳೆ-ಬೆಳೆ ಸಂಮೃದ್ಧಿಯಾಗಿ ಬೀಳಲಿ ಸುಭಿಕ್ಷವಾದ ಕಾಲ ಬರಲಿ, ನಮ್ಮೆಲ್ಲರ ಕಷ್ಟ ದಾರಿದ್ರ್ಯಗಳು ನಿರ್ಮೂಲನೆಯಾಗಲಿ, ಯಾವುದೇ ಅವಘಡ, ಅನಾಹುತಗಳು ನಡೆಯದಂತಿರಲಿ ನಮ್ಮ ಮನೆಗಳಲ್ಲಿ ಸದಾಕಾಲ ಸಿರಿ ಸಂಪತ್ತು ವೃದ್ಧಿಸಲಿ, ಶಾಂತಿ-ನೆಮ್ಮದಿ ಲಭಿಸಲಿ, ಆಯಸ್ಸು, ಆರೋಗ್ಯ ಗಟ್ಟಿಯಾಗಿರಲಿ ಇಡೀ ಲೋಕವೇ ಚೆನ್ನಾಗಿರಲಿ ಎಂದು ಆರಾಧಿಸುತ್ತಿದ್ದರು. ಇದರಿಂದಲೇ ನಮ್ಮ ಪೂರ್ವಿಕರೆಲ್ಲರೂ ಬಹಳ ಆರೋಗ್ಯಕರವಾದ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದರು.

               ದೇವರು ಮನುಷ್ಯನಿಗೆ ನೀಡಿರುವ ಎಲ್ಲಾ ರೀತಿಯ ಅನುಕೂಲಗಳನ್ನು ಬಡ ಬಗ್ಗರಿಗೆ, ನಿರ್ಗತಿಕರಿಗೆ ಅಸಹಾಯಕರಿಗೆ, ಸಂಕಷ್ಟದಲ್ಲಿರುವವರಿಗೆ ದಾನ ಮಾಡುವ ಮೂಲಕ ಪರೋಪಕಾರ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ. ದೇವರು ಮತ್ತು ಭಕ್ತರ ನಡುವಿನ ಸಂಬಂಧದ ಸಾಮರಸ್ಯದ ಸಹಬಾಳ್ವೆಯನ್ನು ನಡೆಸಿಕೊಳ್ಳುವ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕಾಗಿದೆ. ಹಿರಿಯರು ಹಾಕಿಕೊಟ್ಟಿರ ಪರಂಪರೆ ಮತ್ತು ಪದ್ಧತಿಗಳ ಮರ್ಮಗಳನ್ನು ಅರಿತು ಯಾವುದೇ ರೀತಿಯ ದ್ವೇಷ, ಅಸೂಹೆಗಳಿಲ್ಲದೇ ಕೌಟುಂಬಿಕ ಹಾಗೂ ಬಂಧು-ಬಾಂಧವರ ಮಧುರ ಸಂಭಂದಗಳೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸ, ಸಹಬಾಳ್ವೆಯಿಂದ ಬದುಕುವುದನ್ನು ಕಲಿತುಕೊಳ್ಳಬೇಕಾಗಿದೆ. ತನ್ನ ಸುಖಕ್ಕೆ ಮಾತ್ರ ಚಿಂತಿಸದೇ ಇತತರ ಒಳಿತಿಗೂ ಚಿಂತಿಸುತ್ತಾ ಸಾರ್ಥಕ ಜೀವನಕ್ಕೋಸ್ಕರ ಇಂತಹ ಶಕ್ತಿ ಪೀಠಗಳ ಸನ್ನಿಧಿಯಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯನ್ನು ಆಚರಿಸುವ ಮೂಲಕ ಲೋಕ ಕಲ್ಯಾಣದೊಂದಿಗೆ ತಮ್ಮ, ತಮ್ಮ ಏಳಿಗೆಯನ್ನು ಕಂಡುಕೊಳ್ಳಬೇಕಾಗಿದೆ ಎಂದರು.

                 ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಸುಕ್ಷೇತ್ರ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಕುಂಬಳಗೋಡು ಕ್ಷೇತ್ರದ ಶ್ರೀ ಪ್ರಕಾಶನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಶ್ರೀ ನಾರಾಯಣನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಂಡ್ಯ ಶಾಖಾಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಬಿ.ಸಿ.ನಾಗೇಶ್ ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap