ರಾಣಿಬೆನ್ನೂರು:
ಸ್ಥಳೀಯ ನಗರಸಭಾ ಚುನಾವಣೆಗೆ ಶುಕ್ರವಾರ ನಡೆದ ಮತದಾನವು ನಗರದಲ್ಲಿ ಬಹುತೇಕ ಶಾಂತಿಯುತವಾಗಿ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಜರುಗಿ ಯಶಸ್ವಿಗೊಂಡಿತು.
ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ 7ಘಂಟೆಯಿಂದ ಮತದಾನ ನಿಧಾನವಾಗಿ ಸಾಗಿದ್ದು ಕಂಡು ಬಂದಿತು. 9 ಘಂಟೆಯ ನಂತರ ಸ್ವಲ್ಪ ಚುರುಕುಗೊಂಡು 10 ಘಂಟೆಯ ವೇಳೆಗೆ ಶೇ.25 ರಷ್ಟು ಮತದಾನವಾಗಿ ಸರಾಸರಿಯಲ್ಲಿ ಹೆಚ್ಚಳಗೊಂಡಿತ್ತು. ನಂತರ ಮತದಾನ ಚುರುಕುಗೊಂಡಿತ್ತು.
ಬಹುತೇಕ ನಗರದ ಅಡವಿ ಆಂಜನೇಯ ಬಡಾವಣೆ, ದೊಡ್ಡಪೇಟೆ, ಕುರುಬಗೇರಿ, ರಾಜೇಶ್ವರಿ ಹರಳಯ್ಯನಗರ, ಪೂರ್ವ ಬಡಾವಣೆ, ಬೀರೇಶ್ವರ, ಚೌಡೇಶ್ವರಿ ಬಡಾವಣೆ, ಈಶ್ವರ ನಗರ ಮತ್ತಿತರ ಭಾಗಗಳಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಸರದಿಯಲ್ಲಿದ್ದು ಉತ್ಸಾಹದಿಂದಲೇ ಮತ ಚಲಾಯಿಸುತ್ತಿದ್ದು ಸಾಮಾನ್ಯವಾಗಿತ್ತು. ಮಧ್ಯಾಹ್ನ 12ವೇಳೆಗೆ ನಗರದಾಧ್ಯಂತ ಶೇ.40 ಕ್ಕೂ ಅಧಿಕ ಮತದಾನವಾಗಿತ್ತೆಂದು ಪ್ರಥಮ ಮಾಹಿತಿಯಿಂದ ತಿಳಿದು ಬಂದಿತು.
ಸಂಜೆ 2.30ಘಂಟೆಯ ಸುಮಾರಿಗೆ ಸರಾಸರಿ 56ರಷ್ಟು ಮತದಾನವಾಗಿತ್ತೆಂದು ತಾಲೂಕಾ ಆಡಳಿತವು ಅಂದಾಜಿಸಿದೆ. ಚುನಾವಣೆ ಶಾಂತಿಯುತವಾಗಿ ನಡೆಯಲು ತಾಲೂಕಾ ಆಡಳಿತವು ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಪೋಲಿಸ್ ಬಂದೋಬಸ್ತ ಮತ್ತು ಕಾನೂನು ಸುವ್ಯವಸ್ಥೆ ಮಾಡಲಾಗಿತ್ತು.
ನಗರದಾಧ್ಯಂತ ಒಟ್ಟು 78 ಮತಗಟ್ಟೆಗಳ ಪೈಕಿ ಅತಿಸೂಕ್ಷ್ಮ ಮತಗಟ್ಟೆ 10, ಸೂಕ್ಷ್ಮ 25, ಸಾಮಾನ್ಯ ಮತಗಟ್ಟೆ 43 ಒಟ್ಟು 78 ಮತಗಟ್ಟೆಗಳನ್ನು ಚುನಾವಣಾಧಿಕಾರಿಗಳು ಗೊತ್ತುಪಡಿಸಿದ್ದು, ಎಲ್ಲಿಯೂ ಸಹ ಶಾಂತತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದ ರೀತಿಯಲ್ಲಿ ಚುನಾವಣೆ ನಡೆಯಿತೆಂದು ಚುನಾವಣಾಧಿಕಾರಿಗಳು ಸ್ಪಷ್ಠಪಡಿಸಿದ್ದಾರೆ. ಒಟ್ಟು 78 ಮತಗಟ್ಟೆಗಳ ಪೈಕಿ ಒಟ್ಟು 86.697 ಮತದಾರರಿದ್ದು, ಅವರಲ್ಲಿ ಪುರುಷರು 43.473 ಮತ್ತು ಮಹಿಳೆಯರು 43.224 ಮತದಾರರು ಮತಚಲಾಯಿಸುವ ಹಕ್ಕನ್ನು ಪಡೆದಿದ್ದರು.