ಬಳ್ಳಾರಿ:
ಕಾರ್ಮಿಕ ಇಲಾಖೆಯು ಜಾರಿಗೆ ತಂದಿರುವ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯು ಮನರೆಗಾ ಕೂಲಿಕಾರರಿಗೆ ವರದಾನವಾಗಿದ್ದು , ಈ ಯೋಜನೆ ಅಡಿ ಸಿಗುವ ಸೌಲಭ್ಯಗಳನ್ನು ಪಡೆಯುವುದರ ಮೂಲಕ ಕೂಲಿಕಾರರು ಭದ್ರತೆಯ ಬದುಕನ್ನು ಸಾಗಿಸಬಹುದು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.
ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆಯ ಗ್ರಾಪಂ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕೂಲಿಕಾರರ ಸ್ಮಾರ್ಟ್ ಕಾರ್ಡ್ ಅದಾಲತ್ (ಕಾರ್ಮಿಕ ಅದಾಲತ್) ಗೆ ಚಾಲನೆ ನೀಡಿ ಮನರೆಗಾ ಅಡಿ ಕೂಲಿಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ಈ ಯೋಜನೆ ಅಡಿ ಮೂರು ವರ್ಷ ಸದಸ್ಯತ್ವ ಪೂರೈಸಿದವರಿಗೆ ಮಾಸಿಕ 1 ಸಾವಿರ ಪಿಂಚಣಿ ದೊರೆಯುತ್ತದೆ. ಕೆಲಸದ ವೇಳೆ ಅಪಘಾತಕ್ಕೀಡಾದರೇ,ಅಂಗವಿಕಲರಾದರೇ ಮಾಸಿಕ 1 ಸಾವಿರ ಪಿಂಚಣಿ ಜೊತೆಗೆ ದುರ್ಬಲತೆಯನ್ನಾದರಿಸಿ 2ಲಕ್ಷ ರೂ. ಅನುಗ್ರಹ ರಾಶಿ ಸಹಾಯಧನ ದೊರೆಯುತ್ತದೆ. ಮನೆ ಖರೀದಿ,ಕಟ್ಟಲು 2ಲಕ್ಷ ರೂ.ವರೆಗೆ ಸಹಾಯಧನ,ಮಹಿಳಾ ಫಲಾನುಭವಿಯ ಮೊದಲ ಎರಡು ಹೆಣ್ಮಕ್ಕಳ ಜನನಕ್ಕೆ 30 ಸವಿರ ಹಾಗೂ ಗಂಡು ಮಗು ಜನನಕ್ಕೆ 20 ಸಾವಿರ ಸಹಾಯಧನ ಸೇರಿದಂತೆ ಕೂಲಿಕಾರರ ಮಕ್ಕಳಿಗೆ ಶೈಕ್ಷಣಿಕ ನೆರವು, ಅಪಘಾತ ಪರಿಹಾರ ಸೇರಿದಂತೆ ಬಹಳಷ್ಟು ಸೌಲಭ್ಯಗಳು ಈ ಯೋಜನೆ ಅಡಿ ದೊರೆಯುತ್ತಿದ್ದು, ಜಿಲ್ಲೆಯ ಎಲ್ಲ ಅರ್ಹ ಕೂಲಿಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಪಿಡಿಒಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಎಲ್ಲ ಅರ್ಹ ಕೂಲಿಕಾರರಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸುವ ಮೂಲಕ ಕೂಲಿಕಾರರ ಬದುಕಿಗೆ ಭದ್ರತೆ ನೀಡುವ ಪುಣ್ಯದ ಕೆಲಸವನ್ನು ಶ್ರದ್ಧೆಯಿಂದ ಮಾಡುವಂತೆ ಅವರು ಸೂಚನೆ ನೀಡಿದರು.
ಕಾರ್ಮಿಕ ನಿರೀಕ್ಷಕ ಧನಪಾಲ್ ನಾಯಕ್ ಅವರು ಅಂಬೇಡ್ಕರ್ ಸಹಾಯಹಸ್ತ ಯೋಜನೆ ಅಡಿ ಕೂಲಿಕಾರರು ಸ್ಮಾರ್ಟ್‍ಕಾರ್ಡ್‍ಗಳನ್ನು ಪಡೆಯಲು ಹೊಂದಿರಬೇಕಾದ ಅರ್ಹತೆಗಳನ್ನು ವಿವರಿಸಿದರು.
ಐಎಎಸ್ ಪ್ರೋಬೆಷನರ್ ನಂದಿನಿ, ಶ್ರೀಧರ್‍ಗಡ್ಡೆ ಗ್ರಾಪಂ ಅಧ್ಯಕ್ಷೆ ತಿಮ್ಮಕ್ಕ, ಜಿಪಂ ಸದಸ್ಯ ಎನ್.ಗೋಪಾಲ್, ತಾಪಂ ಸದಸ್ಯರಾದ ಮಹಾಲಕ್ಷ್ಮೀ, ತಾಪಂ ಇಒ ಜಾನಕಿರಾಮ್ ಸೇರಿದಂತೆ ಗ್ರಾಪಂ ಸದಸ್ಯರು, ತಾಪಂ ತಾಂತ್ರಿಕ,ಸಾಮಾಜಿಕ ಸಮಾಲೋಚಕರುಗಳು, ಶ್ರೀಧರಗಡ್ಡೆ,ಕೊರ್ಲಗುಂದಿ, ಹಂದಿಹಾಳು,ಚಾನಾಳು,ಕಪಗಲ್,ಸಿರಿವಾರ್ ಗ್ರಾಪಂಗಳ ಪಿಡಿಒಗಳು ಮತ್ತು ಕೂಲಿಕಾರರು ಪಾಲ್ಗೊಂಡಿದ್ದರು.
ಶ್ರೀಧರಗಡ್ಡೆ,ಕಪಗಲ್, ಹಂದಿಹಾಳ, ಕೊರ್ಲಗುಂದಿ,ಚಾನಾಳು, ಸಿರಿವಾರ ಗ್ರಾಪಂಗಳ 139 ಜನ ಮನರೆಗಾ ಕೂಲಿಕಾರರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಸ್ಮಾರ್ಟ್ ಕಾರ್ಡ್‍ಗಳನ್ನು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ವಿತರಿಸಿದರು .
200 ಗ್ರಾಪಂಗಳಲ್ಲಿ ಕೂಲಿಕಾರರ ಅದಾಲತ್: ಜಿಲ್ಲೆಯಲ್ಲಿರುವ 200 ಗ್ರಾಪಂಗಳಲ್ಲಿ ಕೂಲಿಕಾರರ ಅದಾಲತ್‍ನನ್ನು ಸೆ.17ರಿಂದ 22ರವರೆಗೆ ಐದು ದಿನಗಳ ಕಾಲ ನಡೆಸಲು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಸೂಚನೆ ನೀಡಿದ್ದರು.
ಅದರನ್ವಯ ಹೈಕ ವಿಮೋಚನೆ ದಿನವಾದ ಸೆ.17 ಹೊರತುಪಡಿಸಿ ಸೆ.18ರಿಂದ ಜಿಲ್ಲೆಯಾದ್ಯಂತ ಈ ಅದಲಾತ್ ಎಲ್ಲೆಡೆ ನಡೆಯುತ್ತಿದೆ. ಪ್ರತಿ 5 ಗ್ರಾಪಂಗಳಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯ ನಿಯಮಗಳಿಗನುಗುಣವಾಗಿ 91240 ಜನ ಮನರೆಗಾ ಕೂಲಿಕಾರರು ಅಂಬೇಡ್ಕರ್ ಸಹಾಯಹಸ್ತ ಯೋಜನೆಯ ಸ್ಮಾರ್ಟ್ ಕಾರ್ಡ್‍ಗಳು ಪಡೆಯಲು ಅರ್ಹತೆ ಹೊಂದಿದ್ದು, ಕನಿಷ್ಠ 90 ದಿನಗಳ ಮಟೇರಿಯಲ್ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ಮಾಡಿದ 27984 ಕೂಲಿಕಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು,ಅದರಲ್ಲಿ ಗ್ರಾಪಂ ಪಿಡಿಒಗಳು 23085 ಕೂಲಿಕಾರರ ಅರ್ಜಿಗಳನ್ನು ದೃಢೀಕರಿಸಿದ್ದಾರೆ. ಈ ಪೈಕಿ 16208 ಕೂಲಿಕಾರರಿಗೆ ಆಯಾ ತಾಲೂಕುಗಳ ಕಾರ್ಮಿಕ ನಿರೀಕ್ಷಕರುಗಳ ಮೂಲಕ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿತ್ತು. ಬಾಕಿ ಉಳಿದ75032 ಜನ ಕೂಲಿಕಾರರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








