ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಇಂದು (ಜ.22) ಹುಟ್ಟುಹಬ್ಬದ ಸಂಭ್ರಮ.
ಈ ಖುಷಿಯ ದಿನದಂದು ಅವರ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ಲುಕ್ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಕೊಟ್ಟ ಮಾತಿನಂತೆಯೇ ಚಿತ್ರತಂಡದಿಂದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ‘ಯದುವೀರ’ ಎಂದು ಶೀರ್ಷಿಕೆ ಇಡಲಾಗಿದೆ.
ನಿಖಿಲ್ ಕುಮಾರ್ ಅವರು ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಂಜು ಅಥರ್ವ ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರಿತ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ನಿಖಿಲ್ ಕುಮಾರಸ್ವಾಮಿ ನಟನೆಯ 5ನೇ ಸಿನಿಮಾ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾ ಆಗಲಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಜೊತೆಗೆ ಆಯಕ್ಷನ್ ಕೂಡ ಭರ್ಜರಿಯಾಗಿ ಇರಲಿದೆ.
ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ‘ಯದುವೀರ’ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ನಿಖಿಲ್ ಜೊತೆ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್ ಆರಂಭ ಆಗಿದೆ.
‘ಯದುವೀರ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ಮಂಜು ಅಥರ್ವ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಹಲವು ಚಿತ್ರಗಳಿಗೆ ಅವರು ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ‘ಯದುವೀರ’ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಈ ಸಿನಿಮಾದ ಪೋಸ್ಟರ್ ಮೂಲಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭ ಕೋರಲಾಗಿದೆ. ಅವರ ಹೊಸ ಗೆಟಪ್ ಕಂಡು ಫ್ಯಾನ್ಸ್ ಖುಷಿ ಆಗಿದ್ದಾರೆ. ರಗಡ್ ಲುಕ್ನಲ್ಲಿ ನಿಖಿಲ್ ಕಾಣಿಸಿಕೊಂಡಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.
ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಇಂದು ಅದ್ದೂರಿಯಾಗಿ ನಿಖಿಲ್ ಕುಮಾರ್ ಬರ್ತ್ಡೇ ಆಚರಣೆ ಮಾಡಿಕೊಳ್ಳಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಅವರು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಟ್ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೇವಲ ಸೋಶಿಯಲ್ ಮೀಡಿಯಾ ಮೂಲಕವೇ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನಿಖಿಲ್ಗೆ ಶುಭ ಕೋರುತ್ತಿದ್ದಾರೆ
ಈ ವರ್ಷ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿಲ್ಲ ಎಂಬ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೇಸರ ಇದೆ. ಜ.21ರಂದು ನಿಖಿಲ್ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.
‘ಕೊವಿಡ್ ಸಂಕಷ್ಟದ ಸಮಯದಲ್ಲಿ ಅದ್ದೂರಿ ಹುಟ್ಟುಹಬ್ಬದ ಆಚರಣೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಕೊವಿಡ್ ಸಂಕಷ್ಟದಲ್ಲಿ ಇರುವವರಿಗೆ ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ತಾವಿದ್ದಲ್ಲಿಂದಲೇ ನನಗೆ ಹರಸಿ. ಒಂದು ಅರ್ಥಪೂರ್ಣ ಆಚರಣೆಗೆ ಕೈಜೋಡಿಸಿ’ ಎಂದು ನಿಖಿಲ್ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ