ಹುಳಿಯಾರು
ಪರಿಸರ ನಾಶದಿಂದ ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತಿದೆ. ಪರಿಸರದಲ್ಲಿ ಆಗುವ ಅಸಮತೋಲನ ಅನೇಕ ದುರಂತಗಳಿಗೆ ಹಾದಿ ಮಾಡಿಕೊಡಲಿದ್ದು ಮಡಿಕೇರಿ ಹಾಗೂ ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಘಟನೆಗಳೇ ಇದಕ್ಕೆ ಜ್ವಲಂತ ನಿದರ್ಶನ ಎಂದು ದೊಡ್ಡಬಳ್ಳಾಪುರದ ಪರಿಸರಪ್ರೇಮಿ ಬದರಿನಾಥ್ ತಿಳಿಸಿದರು.
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಕೃತಿಯಲ್ಲಿ ಪಂಚಭೂತಗಳ ಒಂದಾದ ಗಾಳಿ, ನೀರಿಲ್ಲದೆ ಜೀವನ ಸಾಧ್ಯವಿಲ್ಲ. ಮರ ಕಡಿಯುವುದರಿಂದ ಆಗಿರುವ ಅನಾಹುತಕ್ಕೆ ಮಡಿಕೇರಿಯ ದುರಂತ ಹಾಗೂ ನೇತ್ರಾವತಿ ಸದಾ ತುಂಬಿ ಹರಿಯುವ ಧರ್ಮಸ್ಥಳದಲ್ಲಿ ಭಕ್ತರನ್ನು ಸಧ್ಯಕ್ಕೆ ಬರಬೇಡಿ ಎಂದಿದ್ದು ಕನ್ನಡಿಯಾಗಿದೆ. ಇಂತಹ ಪರಿಸ್ಥಿತಿ ಬರಲು ಯಾರು ಕಾರಣ, ಪರಿಸರದ ಉಳಿವಿಗಾಗಿ ನಾವೇನು ಮಾಡಬೇಕು ಎಂಬ ಬಗ್ಗೆ ಬಗ್ಗೆ ಯೋಚಿಸುವ ಕಾಲ ಬಂದೊದಗಿದೆ ಎಂದರು.
ತಮಗೆ ಅರಿವಿದ್ದೋ ಅರಿವಿಲ್ಲದೆಯೋ ಎಲ್ಲರೂ ನಾನಾ ರೀತಿಯಲ್ಲಿ ಪರಿಸರ ವಿನಾಶಕ್ಕೆ ಕಾರಣವಾಗುತ್ತಿದ್ದು ಹಾಳಾದ ಪರಿಸರವನ್ನು ಸಮತೋಲನಕ್ಕೆ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಈಗಲಾದರೂ ಎಚ್ಚೆತ್ತು ಗಿಡಗಳನ್ನು ಬೆಳೆಸಿ ಉಳಿಸುವುದರ ಮೂಲಕ ಪರಿಸರಕ್ಕೆ ತಮ್ಮದೇ ಆದ ಕಾಣಿಕೆ ನೀಡಬೇಕೆಂದರು.
ಶಾಲಾ ಆಡಳಿತಾಧಿಕಾರಿ ಎಲ್.ಆರ್.ಚಂದ್ರಶೇಖರ್ ಮಾತನಾಡಿ ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ರಚನಾತ್ಮಕವಾಗಿ ನಿತ್ಯವೂ ನಡೆಯುವಂತಾಗಬೇಕು, ಉತ್ತಮ ಪರಿಸರ ನಿರ್ಮಾಣ ಮಾಡಲು ಎಲ್ಲರೂ ಬದ್ಧರಾಗಬೇಕು ಎಂದರು. ಸದ್ಯ ಕಾಡುತ್ತಿರುವ ಭೀಕರ ಬರಗಾಲಕ್ಕೆ ಪರಿಸರದ ಮೇಲೆ ಮಾನವನ ದುರಾಸೆಯಿಂದಾಗುತ್ತಿರುವ ಅವ್ಯಾಹತ ದಾಳಿ ಕಾರಣವಾಗಿದ್ದು ಶುದ್ಧ ಗಾಳಿ, ನೀರು, ಒಳ್ಳೆಯ ಬೆಳಕು, ಉತ್ತಮ ಪರಿಸರದಿಂದ ನಾವುಗಳು ವಂಚಿತರಾಗಿದ್ದು ಇದನ್ನು ಸುಧಾರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಏನೆಂಬುದನ್ನು ಅರಿಯಬೇಕು. ಪರಿಸರದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದರು.
ಈ ವೇಳೆ ವಿದ್ಯಾರ್ಥಿಗಳಿಂದ ಪರಿಸರದ ಪ್ರಾಮುಖ್ಯತೆ, ರಕ್ಷಣೆ, ಮಾಲಿನ್ಯ ನಿಯಂತ್ರಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಎಲ್.ಬಾಲೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಲ್.ಆರ್.ಬಾಲಾಜಿ, ಸಹಕಾರ್ಯದರ್ಶಿ ಎಂ.ಎಸ್.ನಾಗರಾಜು, ಮುಖ್ಯ ಶಿಕ್ಷಕರುಗಳಾದ ಗಂಗಾಧರಯ್ಯ ಮತ್ತು ಮಹೇಶ್ ಸೇರಿದಂತೆ ಐನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಾಲಾ ಬೋಧಕ ವರ್ಗದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
