ದಾವಣಗೆರೆ:
ಅಸಂಘಟಿತ ನಿವೃತ್ತ ಕಾರ್ಮಿಕರಿಗೆ ಪರ್ಯಾಪ್ತ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ, ನಿವೃತ್ತ ಅಸಂಘಟಿತ ಕಾರ್ಮಿಕರ ಯೂನಿಯನ್‍ಗಳ ಒಕ್ಕೂಟದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕ ಎಂ.ಬಾಬುಸಾಬ್ ಮಾತನಾಡಿ, ವಿಶ್ವಾದ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿರಿಯರಿಗಾಗಿ ಅ.1ನ್ನು ವಿಶ್ವ ಹಿರಿಯನಾಗರಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ, ಸಮಾಜದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಹು ದೊಡ್ಡ ಸಂಖ್ಯೆಯ ಹಿರಿಯ ನಾಗರಿಕರಿಗೆ ಸರ್ಕಾರ ಯಾವುದೇ ಭದ್ರತೆ ನೀಡಿಲ್ಲ ಎಂದು ಆರೋಪಿಸಿದರು.
ಅಸಂಘಟಿತ ವಲಯದಲ್ಲಿ ದುಡಿದು ನಿವೃತ್ತಿ ಹೊಂದಿರುವ ಹಿರಿಯ ಜೀವಿಗಳಿಗೆ ಪಿಂಚಣಿ ಇಲ್ಲದ ಕಾರಣ ತಮ್ಮ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ. ಪ್ರತಿದಿನ 12 ತಾಸು ಶ್ರಮ, ವಾರದ 7 ದಿನಗಳೂ ಕೆಲಸ, 40 ವರ್ಷಗಳ ನಿರಂತರ ದುಡಿಮೆ ಮಾಡಿದ್ದೇವೆ. ಆದರೆ, ನಮಗೆ ಯಾವುದೇ ಪಿಂಚಿಣಿ ಸೌಲಭ್ಯವಿಲ್ಲ. ಆದ್ದರಿಂದ ನಮ್ಮ ಸೇವೆಯನ್ನು ಆಧಾರವಾಗಿಟ್ಟುಕೊಂಡು, ಪರ್ಯಾಪ್ತ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಖಮರುನ್ನೀಸಾ, ಜಬೀನಾ ಖಾನಂ, ಎಂ.ಕರಿಬಸಪ್ಪ, ರವಿ, ರೇವಣಸಿದ್ದಪ್ಪ, ಪ್ರಸಾದ, ಎಂ.ಶಾಸ್ತ್ರೀ, ಹನುಮಂತಪ್ಪ, ಭೀಮಾ ನಾಯ್ಕ, ರುದ್ರೇಶ, ಜಯಮ್ಮ, ನಿಂಗಪ್ಪ, ಬಸವರಾಜ, ಸಂಗಪ್ಪ, ಬಸಪ್ಪ, ಮಲ್ಲೇಶ, ನಾಗರಾಜ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ