ಬಳ್ಳಾರಿ 
ಸೋಂಕು ಹೊಂದಿದ ಈಡಿಸ್ ಇಜಿಪ್ಟೆ ಸೊಳ್ಳೆಯು ವ್ಯಕ್ತಿಗೆ ಕಚ್ಚುವುದರಿಂದ ಡೆಂಗ್ಯೂ ರೋಗಹರಡುತ್ತದೆ. ಇದಕ್ಕಾಗಿ ನೀರು ಸಂಗ್ರಹವನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸರಿಯಾಗಿ ಮುಚ್ಚಳಮುಚ್ಚಿ ಎಂದು ಭಾಗೆವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸುರೇಖ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಾಗೆವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ದೇಶನೂರ್ ಗ್ರಾಪಂ ಇವರ ಸಂಯುಕ್ತ ಆಶ್ರಯದಲ್ಲಿ ಭಾಗೆವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಸಾಮಾನ್ಯವಾಗಿ ಹಗಲು ಕಚ್ಚುವ ಈ ಸೊಳ್ಳೆಯು ಸ್ವಚ್ಛ ನೀರಿನಲ್ಲಿ ಮೊಟ್ಟೆಯಿಟ್ಟು ತನ್ನ ಸಂತತಿ ವೃದ್ದಿ ಮಾಡಿಕೊಳ್ಳುತ್ತದೆ ಮೊಟ್ಟೆಯಿಟ್ಟ 7 ದಿನಗಳ ನಂತರ ಪುನಃ ಸೊಳ್ಳೆಯಾಗಿ ಹೊರಬರುತ್ತದೆ. ಸೋಂಕು ಹೊಂದಿದ ಸೊಳ್ಳೆಯು ಹತ್ತಿರವಿರುವ ವ್ಯಕ್ತಿಯನ್ನು ಕಚ್ಚಿದಾಗ ಅವರಿಗೆ ಡೆಂಗ್ಯೂ ರೋಗ ಬರುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡುವ ಜೊತೆಗೆ ಯಾರಿಗಾದರೂ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣು ಹಿಂಭಾಗ, ಮಾಂಸ ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳವುದು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ವೈದ್ಯರ ಬಳಿ ತೋರಿಸಬೇಕು ಅಲ್ಲದೇ ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ.
ಈ ರೋಗಕ್ಕೆ ಯಾವುದೇ ನಿರ್ಧಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗಾನುಸಾರವಾಗಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಅವರು ಮಾತನಾಡಿ, ತಮ್ಮ ಮನೆಯ ಮುಂದಿನ ಬಳಿಕೆಗಾಗಿ ನೀರು ತುಂಬಿರುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಮಡಿಕೆ, ಮುಂತಾದವುಗಳನ್ನು ವಾರಕ್ಕೊಮ್ಮೆ ಚೆನ್ನಾಗಿ ತೊಳೆದು ಖಾಲಿ ಮಾಡಿ ನೀರು ತುಂಬಿದ ನಂತರ ಮುಚ್ಚಳವನ್ನು ಮುಚ್ಚುವುದು ಅಥವಾ ನೀರಿನ ಮೇಲೆ ಬಟ್ಟೆಯನ್ನು ಕಟ್ಟುವುದು ತಪ್ಪದೇ ಪಾಲಿಸಬೇಕು.
ಅಲ್ಲದೇ ಉಪಯೋಗಿಸಿದ ಒರಳುಕಲ್ಲು, ಪ್ಲಾಸ್ಟಿಕ್ ಡಬ್ಬಗಳು, ತೆಂಗಿನ ಚಿಪ್ಪುಗಳು, ಟೈರುಗಳು, ಮುಂತಾದ ಕಡೆ ನೀರು ಶೇಖರವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ ಅವರು ಗ್ರಾಮದ ಕೆಲವು ಬೀದಿಗಳಲ್ಲಿ ಚರಂಡಿಗಳಲ್ಲಿ ಹರಿಯುವ ನೀರಿಗೆ ಮಣ್ಣಿನ ಒಡ್ಡನ್ನು ಹಾಕಿ ನೀರು ಹರಿಯದಂತೆ ಮಾಡಿರುವುದು ಇತರೆ ಸಾಂಕ್ರಾಮಿಕ ರೋಗಗಳಿಗೆ ಹಾದಿ ಮಾಡಿಕೊಟ್ಟಂತಾಗುತ್ತದೆ ಆದ್ದರಿಂದ ಸಾರ್ವಜನಿಕರು ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಎನ್.ವಿ.ಬಿ.ಡಿ.ಸಿ.ಪಿ ಸಲಹೆಗಾರ ಹೆಚ್.ಪ್ರತಾಪ್ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರೋಜ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯವರಾದ ಎನ್.ವಿ.ಬಿ.ಡಿ.ಸಿ.ಪಿ ಕನ್ಸಲ್ಟೆಂಟ್ ಹೆಚ್.ಪ್ರತಾಪ್ ಶಕೀಲ್ ಅಹಮ್ಮದ್, ಶಿವಪ್ಪ, ಕೆ.ಎಂ.ರಾಚೋಟಯ್ಯ, ಸರೋಜಭಾಯಿ, ಶಕುಂತಲ, ಸಿದ್ದಪ್ಪ, ಹೆಚ್.ಲಿಂಗರಾಜ್, ಹೆಚ್.ಪ್ರಹ್ಲಾದ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








