ನೆರವಿನ ಸಹಾಯ ಹಸ್ತ ಚಾಚಿದ ಜ್ಞಾನಭಾರತಿ ಕಾಲೇಜು

ಕುಣಿಗಲ್:

            ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರಾಜ್ಯದ ಕೊಡಗು ಜಿಲ್ಲೆಯ ಸಂತ್ರಸ್ಥರ ನೆರವಿಗೆ ಧಾವಿಸಿರುವ ಪಟ್ಟಣದ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಒಂದು ದಿನದ ವೇತನವನ್ನು ಹಾಗೂ ವಿದ್ಯಾರ್ಥಿಗಳು ತಮ್ಮ ಶಕ್ತಾನುಸಾರ ಸಂಗ್ರಹಿಸಿದ ಆರ್ಥಿಕ ದೇಣಿಗೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

           ಪ್ರಾಚಾರ್ಯ ಕಪನಿಪಾಳ್ಯ ರಮೇಶ ನೇತೃತ್ವದ ಉಪನ್ಯಾಸಕರ ತಂಡ ಸಂತ್ರಸ್ಥರಿಗೆ ಅವಶ್ಯಕವಾಗಿ ಬೇಕಾದ ದವಸ ಧಾನ್ಯ, ಬಿಸ್ಕೆಟ್‍ಗಳು, ಬಟ್ಟೆ, ಬೆಡ್‍ಶೀಟ್‍ಗಳು, ಟೂತ್ ಪೇಸ್ಟ್, ಬ್ರೆಶ್, ಸೋಪು ಇತ್ಯಾದಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಪ್ಯಾಕ್ ಮಾಡಿ ಕಳುಹಿಸಿದರು. ಇದರ ಜೊತೆಗೆ ಉಪನ್ಯಾಸಕರು ತಮ್ಮ ಒಂದು ದಿನದ ವೇತನವನ್ನು ನೀಡಿದರು. ವಿದ್ಯಾರ್ಥಿಗಳು ತಮ್ಮ ಕೈಲಾದ ಮಟ್ಟಿಗೆ ಹಣವನ್ನು ದೇಣಿಗೆ ನೀಡಿ ಸಹಾಯ ಹಸ್ತ ಚಾಚಿದರು.

            ಈ ಸಂದರ್ಭದಲ್ಲಿ ಮಾತನಾಡಿದ ರಮೇಶ ಜಿಲ್ಲೆಯು ಜೀವಮಾನದಲ್ಲಿಯೇ ಕಂಡರಿಯದ ಜಲಪ್ರಳಯಕ್ಕೆ ತುತ್ತಾಗಿದ್ದು ಅತ್ಯಂತ ಸಂಕಷ್ಟ ಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ರಕ್ಷಣೆಗಾಗಿ ಜನರಲ್ ಕಾರ್ಯಪ್ಪ ಅವರನ್ನು ಒಳಗೊಂಡಂತೆ ಯೋಧರ ಮಹಾ ಪಡೆಯನ್ನೇ ನೀಡಿ ತ್ಯಾಗ, ಬಲಿದಾನ, ದೇಶಪ್ರೇಮಕ್ಕೆ ಸಾಕ್ಷಿ ಪ್ರಜ್ಞೆಯಾಗಿರುವ ಕೊಡಗಿನ ನಮ್ಮ ಸಹೋದರ, ಸಹೋದರಿಯರು, ಶಿಕ್ಷಕರು ಇತ್ಯಾದಿ ನೌಕರರು ಹಾಗೂ ಸಮಸ್ತ ಕೊಡಗಿನ ಜನತೆ ಈ ಭೀಕರ ಮಳೆಯ ಪ್ರವಾಹದಿಂದ ಪ್ರಕೃತಿ ಪ್ರಕೋಪದ ಸಂಕಷ್ಟಕ್ಕೆ ಸಿಲುಕಿದ್ದಾರೆ.

            ಪರಿಣಾಮ, ಮನೆ, ಆಸ್ತಿ ಹಾಗೂ ಇದ್ದಂತಹ ಕನಿಷ್ಟ ಸೌಲಭ್ಯಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಜೀವನ ಕಟ್ಟಿಕೊಳ್ಳಲು ಪರದಾಡುತ್ತಿರುವ ಜನರ ಬದುಕಿಗೆ ಆಸರೆಯಾಗಬೇಕಾಗಿದೆ. ಇದಕ್ಕೆ ಸಮಸ್ತ ನಾಡಿನ ಜನತೆ ಸಮರೋಪಾದಿಯಲ್ಲಿ ತಮ್ಮ ಸಹಾಯ ಹಸ್ತವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ಇದಕ್ಕೆ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ನಿರ್ದೇಶಕರು ಪ್ರೋತ್ಸಾಹ ನೀಡಿದರು.

Recent Articles

spot_img

Related Stories

Share via
Copy link
Powered by Social Snap