ತುಮಕೂರು:
ಹಾಡಹಗಲೇ ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗಳನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.
ಪಾವಗಡ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವ ವೇಳೆಯಲ್ಲಿ ಆಂಧ್ರದ ತುರುಕಾಲಪಟ್ಟಣಂ ವಾಸಿ ಕವಿತಾ ಅವರನ್ನು ಯಾರೋ ದುಷ್ಕರ್ಮಿಗಳು ಹಲ್ಲೆ ಮಾಡಿ ಕೊಲೆ ಮಾಡಿದ್ದು, ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಪಾವಗಡ ತಾಲ್ಲೂಕಿನ ವೆಂಕಟಾಪುರ ವಾಸಿ ಬಾಲಾಜಿಯನ್ನು ನೆರೆಯ ಆಂಧ್ರದ ಅನಂತಪುರಂ ಬಳಿ ಪತ್ತೆ ಮಾಡಿ ಬಂಧಿಸಿದ್ದು, ಆರೋಪಿಯು ಮೃತ ಕವಿತಾಳಿಂದ ವಿಚ್ಛೇದನ ಪಡೆಯಲು ನ್ಯಾಯಾಲಯದಲ್ಲಿ ಕೇಸು ಹಾಕಿಕೊಂಡಿದ್ದು, ಕವಿತಾ ವಿಚ್ಛೇಧನ ನೀಡಲು ಒಪ್ಪದೇ ಇದುದರಿಂದ ಆರೋಪಿಯು ಮಾ.23 ರಂದು ಬೆಳಗ್ಗೆ ಕೋರ್ಟಿಗೆ ಹಾಜರಾಗಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕವಿತಾಳನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಪೊಲೀಸ್ ಅಧೀಕ್ಷಕ ಡಾಕೆ.ವಂಶಿಕೃಷ್ಣ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಶೋಭಾರಾಣಿ, ಡಿವೈಎಸ್ಪಿ ಬಿ.ಶ್ರೀನಿವಾಸಮೂರ್ತಿ ಇವರ ಮಾರ್ಗದರ್ಶನದಲ್ಲಿ ಪಾವಗಡ ಸರ್ಕಲ್ ಇನ್ಸ್‍ಪೆಕ್ಟರ್ ಸಿ.ವೆಂಕಟೇಶ್ ಮತ್ತು ಪಾವಗಡ ಠಾಣೆಯ ಪಿಎಸ್‍ಐ ಮಧುಸೂದನ್ ಮತ್ತು ಸಿಬ್ಬಂದಿಗಳಾದ ಜಿ.ಟಿ.ಶ್ರೀನಿವಾಸ್, ಮಂಜುನಾಥ್, ಸೋಮಶೇಖರ್, ಗೋಪಿನಾಥ, ರಾಮಕೃಷ್ಣ, ಜೀಪ್ ಚಾಲಕ ಜಾವೀದ್ ಮತ್ತು ಶ್ರೀನಿವಾಸ್ ಅವರುಗಳು ಆರೋಪಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮಚ್ಚು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಶ್ರಮಿಸಿದ ತಂಡವನ್ನು ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
