ಆ ರಾತ್ರಿ
ವಿಧಿ ಕರುಣೆ ತೋರಬಹುದಿತ್ತು
ಸಡಿಲಗೊಂಡ ದೇಹದ ಅಂಗಾಂಗಳಿಗೆ
ಶಕ್ತಿ ತುಂಬಬಹುದಿತ್ತು
ಉಸಿರು ತಿರುಗಿಸಿಕೊಳ್ಳಲು ಬಿಡದ ಕೆಮ್ಮು
ನಿನ್ನ ಅತಿಥಿ
ನಿನ್ನ ನೋಟದ ಪ್ರತಿ ಭಾವದಲ್ಲು
ಸಾವಿನ ನೆರಳಿತ್ತು
ನನ್ನ ಕೈಯಲ್ಲೇನಿತ್ತು
ನಿದ್ದೆಗೆಟ್ಟು ನೀರು ಕಾಯಿಸಕೊಡುವುದ ಬಿಟ್ಟರೆ
ನೋವು ನಿನ್ನದೆ
ಉಸಿರೂ ನಿನ್ನದೆ
ಸಾಕಿ ಸಲುಹಿದ ಕಾಳಜಿಯಲ್ಲಿ
ನನ್ನದು ತೃಣಮಾತ್ರ ಸೇವೆ
ನೀನೇ ಕೊಟ್ಟ ಉಸಿರು ನಾನು
ನಿನ್ನ ಶಕ್ತಿಯ ಬಿಸಿಯ ಕಾವಿನಲಿ
ಅರಳಿದ ಮನಸುಗಳು ನಿದ್ದೆ ಮಾಡುತ್ತಿವೆ
ನಿನ್ನ ನೋವು ಅವರಿಗೆ ಭಂಗವೆನಿಸಿದರು
ನನ್ನದೆಯೊಳಗೆ ಎಚ್ಚರದ ಗಂಟೆ ಬಾರಿಸುತ್ತಲೇ ಇದೆ
ಬಿಟ್ಟೋಗುವೆನೆಂಬ ನೋವು
ನಿನಗೆ ಬಾಧಿಸುತ್ತಲೇ ಇತ್ತು
ಬದುಕಿನ ದಾರಿಯ ಕೈಗಳು
ಕರೆಯುವ ನೋಟ ನನ್ನೊಳಗಿತ್ತು
ಅದು ಸೋಲಲ್ಲ ಗೆಲುವಿನ ರಾತ್ರಿ
ಜವರಾಯನಿಗೆ ಕೆಂಡದಲ್ಲಿ
ಕಬ್ಬಿಣ ಕಾಯಿಸಿ ಬರೆ ಹಾಕಿದ
ಅಚ್ಚಳಿಯದ ಉಳಿದ ಎಚ್ಚರದ ರಾತ್ರಿ
ಕಣ್ಣು ಮುಚ್ಚದೆಯೂ ಕುಳಿತರು
ನಾನು ನೋಡಲಿಲ್ಲ ಅವನನ್ನು
ಹಾಗೆ ತೂಕಡಿಸುತ್ತಿದ್ದೆ
ಬೆಳಗಿನ ಜಾವವದು
ಯಾರೋ ಅಯ್ಯಯ್ಯೋ ಬಿಡಮ್ಮ ಅಂದರು
ಕಣ್ಣು ಬಿಟ್ಟು ನೋಡಿದೆ
ಯಾರೂ ಇಲ್ಲ ನಿನ್ನ ಮುಂದೆ
ನೀನು ಗೆದ್ದಿದ್ದೆ
ಚೈತನ್ಯ ಮೂಡಿತ್ತು ಮೊಗದಲ್ಲಿ
ನನಗೆ ಮತ್ತೆ ಅಮ್ಮನ ಮಡಿಲು ಸಿಕ್ಕ
ಖುಷಿ ಹೃದಯ ಅಪ್ಪಿತ್ತು
ಮತ್ತೊಂದು ಬೆಳಗು
ಮತ್ತೆ ರಾತ್ರಿ ಬರಲು…!