ಕೊಟ್ಟೂರು:
ಕೊಟ್ಟೂರು ಪಟ್ಟಣ ಪಂಚಾಯ್ತಿಯ ಚುನಾವಣೆ ಆಗಸ್ಟ್ 29 ರಂದು ನಡೆಯಲಿದ್ದು ಗುರುವಾರದಂದು 09 ನಾಮಪತ್ರಗಳು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಕೆಯಾಗಿವೆ. 1ರಿಂದ 10ನೇ ವಾರ್ಡ್ ಸದಸ್ಯ ಕ್ಷೇತ್ರಗಳಿಗೆ ತಾಲೂಕು ಕಛೇರಿ ಮತ್ತು 11ರಿಂದ 20ನೇ ವಾರ್ಡ್ ಸದಸ್ಯ ಕ್ಷೇತ್ರಗಳಿಗೆ ಪಟ್ಟಣ ಪಂಚಾಯ್ತಿಯ ಕಾರ್ಯಾಲಯದಲ್ಲಿ ಚುನಾವಣಾ ವಿಭಾಗದ ಕೇಂದ್ರಗಳನ್ನು ತೆರೆಯಲಾಗಿದೆ.
ಮೊದಲನೆ ವಾರ್ಡ್‍ಗೆ ಎಂ. ರವಿಕುಮಾರ್ (ಪಕ್ಷೇತರ), ವಿನಯ್ ಕುಮಾರ್ (ಬಿಜೆಪಿ), 7ನೇ ವಾರ್ಡ್‍ಗೆ ಚಿರಿಬಿ ಕೊಟ್ರೇಶ (ಪಕ್ಷೇತರ) 8ನೇ ವಾರ್ಡ್‍ಗೆ ತಿಪ್ಪೇಸ್ವಾಮಿ ಬೋರ್‍ವೆಲ್ (ಬಿಜೆಪಿ), 10ನೇ ವಾರ್ಡ್‍ಗೆ ಜ್ಯೋತಿ ಭರಮಣ್ಣ (ಬಿಜೆಪಿ), 11ನೇ ವಾರ್ಡ್‍ಗೆ ಜ್ಯೋತಿ (ಬಿಜೆಪಿ), 16ನೇ ವಾರ್ಡ್‍ಗೆ ಭಾರತಿ ಸುಧಾಕರ ಪಾಟೇಲ್ (ಕಾಂಗ್ರೇಸ್), ಎನ್.ಎಸ್ ಸುಮಾ (ಬಿಜೆಪಿ), 18ನೇ ವಾರ್ಡ್‍ಗೆ ಪಿ.ಪಂಪನಗೌಡ (ಪಕ್ಷೇತರ) ಇವರುಗಳು ನಾಮಪತ್ರ ಸಲ್ಲಿಸಿದ್ದಾರೆಂದು ಚುನಾವಣೆ ಅಧಿಕಾರಿಗಳಾದ ಪ್ರಕಾಶ ಮತ್ತು ಸುಧೀಂದ್ರ ತಿಳಿಸಿದರು.
ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ಎಸ್.ತಿಂದಪ್ಪ, ಎಂ,ಎಂ,ಜೆ ಸ್ವರೂಪಾನಂದ, ವಿರೇಶ ಗೌಡ, ಹಳ್ಳಿ ಅಶೋಕ, ಶಿವುಕುಷನ್ ಮತ್ತಿತರರು ಇದ್ದರು.
ಪಟ್ಟಣದ 7ನೇ ವಾರ್ಡ್‍ನ ಹಾಲಿ ಸದಸ್ಯ ಚಿರಿಬಿ ಕೊಟ್ರೇಶ ಗೆ ಬಿಜೆಪಿ ನಾಯಕರು ಟಿಕೆಟ್ ನಿರಾಕರಿಸಿದ್ದರಿಂದ ಅವರು ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕೆ ಧುಮುಕಲು ನಾಮಪತ್ರ ಸಲ್ಲಿಸಿದರು. 7ನೇ ವಾರ್ಡ್ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದೆ. ಈ ಕಾರಣವನ್ನು ಮುಂದು ಮಾಡಿದ ಬಿಜೆಪಿಯ ಮುಖಂಡರು ಎಸ್.ಟಿ ಜನಾಂಗಕ್ಕೆ ಮೀಸಲಾದ ನಾಲ್ಕನೇ ವಾರ್ಡ್‍ಗೆ ಸ್ಪರ್ಧಿಸುವಂತೆ ಚಿರಿಬಿ ಕೊಟ್ರೇಶಗೆ ಸೂಚಿಸಿ ಪಕ್ಷದ ಬಿ.ಪಾರ್ಮ್‍ನ್ನು ಸಹ ನೀಡಲು ಮುಂದಾಗಿತ್ತು. ಆದರೆ ಕೊಟ್ರೇಶ ಕಳೆದ ಬಾರಿ ಸಾಮಾನ್ಯ ಕ್ಷೇತ್ರವಾದ ಏಳನೇ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ಸಾದಿಸಿದ್ದು ಅಲ್ಲಿಂದಲೇ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದ್ದರು.
ಬಿಜೆಪಿ ಟಿಕೆಟ್ ನಿರಾಕರಣೆಯಿಂದಾಗಿ ಅವರು ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದ್ದು ಕಾಂಗ್ರೇಸ್ ಮತ್ತು ಬಿಜೆಪಿಯ ಉಳಿದ ಅಭ್ಯರ್ಥಿಗಳು ನಾಳೆ ನಾಮಪತ್ರ ಸಲ್ಲಿಸಲು ಸಿದ್ದತೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ