ಬ್ಯಾಡಗಿ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗಕ್ಕೆ ಸೇರಿದ ಕೋಲಿ, ಕಬ್ಬಲಿಗ, ಬೆಸ್ತ, ಗಂಗಾಮತ, ಅಂಬಿಗ, ಸುಣಗಾರ, ಬಾರ್ಕಿ ಎಂಬ 39 ಪರ್ಯಾಯ ಪದಗಳಿಂದ ಕರೆಯಲ್ಪಡುವ ಗಂಗಾಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕಾ ಗಂಗಾಮತ ಸಮಾಜ ಬಾಂಧವರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಳಿಕ ತಹಶೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ಹಳೇ ಪುರಸಭೆಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಕೊನೆಗೆ ತಹಶೀಲ್ದಾರ ಕಾರ್ಯಾಲಯದಲ್ಲಿ ಸಭೆಯಾಗಿ ಮಾರ್ಪಟ್ಟಿತು, ಈ ಸಂದರ್ಭದಲ್ಲಿ ತಹಶೀಲ್ಧಾರ ಜಯಪ್ಪ ತಳವಾರ ಅವರಿಗೆ ಸಮಾಜದ ಪರವಾಗಿ ಮನವಿಯೊಂದನ್ನು ಸಲ್ಲಿಸಿದರು..
ಈ ಸಂದರ್ಭದಲ್ಲಿ ಮಾತನಾಡಿದ ಗಂಗಾಮತ ಸಮಾಜದ ಜಿಲ್ಲಾದ್ಯಕ್ಷ ಮಂಜುನಾಥ ಬೋವಿ, ರಾಜ್ಯದಲ್ಲಿ ಗಂಗಾಮತ ಸಮಾಜ ಜನರು 60 ಲಕ್ಷಕ್ಕೂ ಅಧಿಕವಾಗಿದ್ದಾರೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ.
ಹಲವಾರು ವರ್ಷಗಳಿಂದ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹಲವು ಬಾರಿ ಪ್ರತಿಭಟನೆ ನಡೆ ಸಿದ್ದರಿಂದ ರಾಜ್ಯ ಸರಕಾರ ಈ ಹಿಂದೆ 2 ಬಾರಿ ಕಡತವನ್ನು ಕೇಂದ್ರ ಸರಕಾರಕ್ಕೆ ಶಿಫಾರಾಸು ಮಾಡಿತ್ತು, ಆದರೆ ರಾಜ್ಯದ ಶಿಫಾರಸ್ಸನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ ನಮ್ಮ ಜನಾಂಗಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.
ತಾಲೂಕಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಬಾರ್ಕಿ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಗಂಗಾಮತ ಸಮಾಜ ದೋಣಿ ನಡೆಸುವದೂ ಸೇರಿದಂತೆ ಮೀನುಗಾರಿಕೆ, ಸುಣ್ಣ ತಯಾರಿಕೆ ಇನ್ನಿತರ ಕೂಲಿ ಕಾರ್ಮಿಕ ಕೆಲಸದಲ್ಲಿ ನಿರತವಾಗಿದೆ, ಕೇಂದ್ರದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಗಂಗಾಮತ ಸಮಾಜನ್ನು ನಿರ್ಲಕ್ಷಿಸಲಾಗುತ್ತಿದ್ದು ಈ ಬಗ್ಗೆ ಚಿಂತನೆ ನಡೆಸದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಆರೋಪಿಸಿದರು.
ಗಂಗಾಮತ ಸಮಾಜದ ಜನರ ದುಸ್ಥಿತಿ ನೋಡಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಒಂದು ವೇಳೆ ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು..
ಈ ಸಂದರ್ಭದಲ್ಲಿ ಗೌರವಾದ್ಯಕ್ಷ ನಿಂಗಪ್ಪ ಹೆಗ್ಗಣ್ಣನವರ, ಜಿತೇಂದ್ರ ಸುಣಗಾರ, ಜಯಪ್ಪ ಸುಣಗಾರ, ತಿರಕಪ್ಪ ಅಂಬಿಗೇರ, ಚಂದ್ರಪ್ಪ ದೊಡ್ಡಮನಿ, ಚಂದ್ರು ಮುಳಗುಂದ, ಪರಮೇಶಪ್ಪ ಚಿಕ್ಕಮ್ಮನವರ, ಜಗದೀಶ ಬಾರ್ಕಿ, ಹನುಮಂತಪ್ಪ ರೆವಜಿ, ಶಿವರಾಯಪ್ಪ ಹುಳ್ಳೇರ, ಸೋಮಪ್ಪ ಹಾವನೂರ, ಉಮೇಶಪ್ಪ ಕೊಕ್ಕನವರ, ಹೊನ್ನಪ್ಪ ಸಣ್ಣಬಾರ್ಕಿ, ಕುಬೇರಪ್ಪ ಮೇಗಳಮನಿ, ಗುತ್ತೆಪ್ಪ ಕೊಪ್ಪದ ಇನ್ನಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ