ಪಾಲಿಕೆ ಕಚೇರಿಯತ್ತ ಹೊಸಬರ ಆಗಮನ

ತುಮಕೂರು:


              ತುಮಕೂರು ಮಹಾನಗರ ಪಾಲಿಕೆಯ ಕಚೇರಿಯತ್ತ ನೂತನ ಕಾರ್ಪೊರೇಟರ್‌ಗಳು ನಿಧಾನವಾಗಿ ಹಾಗೂ ಒಬ್ಬೊಬ್ಬರಾಗಿ ಎಡತಾಕಲಾರಂಭಿಸಿದ್ದಾರೆ.
           ಪಾಲಿಕೆಗೆ ಆಗಸ್ಟ್ 31 ರಂದು ಚುನಾವಣೆ ನಡೆದಿತ್ತು. ಸೆ. 3 ರಂದು ಲಿತಾಂಶ ಪ್ರಕಟವಾಗಿದೆ. ಗೆದ್ದ ಸಂಭ್ರಮದ ನಡುವೆಯೇ ಆಯಾ ವಾರ್ಡ್‌ನ ಸಮಸ್ಯೆಗಳೂ ಮೆಲ್ಲನೆ ಇವರುಗಳ ಅರಿವಿಗೆ ಬರತೊಡಗಿದೆ. ಆದರೆ ವಾರ್ಡೂ ಹೊಸತು, ಪಾಲಿಕೆ ಕಚೇರಿಯೂ ಹೊಸತು, ಅಧಿಕಾರಿಗಳೂ ಹೊಸಬರು, ಸಮಸ್ಯೆಗಳೂ ಹೊಸತು- ಹೀಗೆ ಎಲ್ಲವೂ ಹೊಸತಾಗಿರುವುದರಿಂದ ಕಾರ್ಪೊರೇಟರ್‌ಗಳು ನಿಧಾನವಾಗಿ ಹೆಜ್ಜೆ ಇಡತೊಡಗಿದ್ದಾರೆ.
           ಕೆಲವು ಕಾರ್ಪೊರೇಟರ್‌ಗಳು ತಮ್ಮ ವಾರ್ಡ್‌ಗೇ ಕೆಲವು ಅಧಿಕಾರಿಗಳನ್ನು ಕರೆಸಿಕೊಂಡು, ಚರ್ಚಿಸಿದ್ದಾರೆಂದೂ ತಿಳಿದುಬಂದಿದೆ.
ಮಹಾನಗರ ಪಾಲಿಕೆಯ ಒಟ್ಟು ಸದಸ್ಯರ ಸಂಖ್ಯೆ 35 ಆಗಿದೆ. ಇವರಲ್ಲಿ ಶೇ. 50 ರಷ್ಟು ಮಹಿಳಾ ಮೀಸಲಾತಿ ಪ್ರಕಾರ ಆಯ್ಕೆಯಾಗಿದ್ದಾರೆ. ಅದರಂತೆ 17 ಮಹಿಳೆಯರು ಆರಿಸಿಬಂದಿದ್ದಾರೆ. ಇವರಲ್ಲಿ 18 ನೇ ವಾರ್ಡ್ (ಬನಶಂಕರಿ)ನ ಕಾಂಗ್ರೆಸ್ ಪಕ್ಷದ ಮುಜೀದಾ ಖಾನಂ ಬಿಟ್ಟರೆ ಮಿಕ್ಕ 16 ಮಹಿಳಾ ಕಾರ್ಪೊರೇಟರ್‌ಗಳೂ ಹೊಸಬರೇ ಆಗಿದ್ದಾರೆ.
           ಒಟ್ಟಾರೆ 35 ಕಾರ್ಪೊರೇಟರ್‌ಗಳಲ್ಲಿ 8 ನೇ ವಾರ್ಡ್‌ನ (ಪಿ ಜಿ ಲೇಔಟ್) ಕಾಂಗ್ರೆಸ್ ಪಕ್ಷದ ಸೈಯದ್ ನಯಾಜ್, 18 ನೇ ವಾರ್ಡ್  (ಬನಶಂಕರಿ)ನ ಕಾಂಗ್ರೆಸ್ ಪಕ್ಷದ ಮುಜೀದಾ ಖಾನಂ, 21 ನೇ ವಾರ್ಡ್‌ನ (ಕುವೆಂಪು ನಗರ) ಜೆಡಿಎಸ್‌ನ ಮಾಜಿ ಮೇಯರ್ ಲಲಿತಾ ರವೀಶ್ ಮತ್ತು 22 ನೇ ವಾರ್ಡ್‌ನ (ವಾಲ್ಮೀಕಿ ನಗರ) ಜೆಡಿಎಸ್‌ನ ಮಾಜಿ ಮೇಯರ್ ಎಚ್.ರವಿಕುಮಾರ್ ಮಾತ್ರ ಸತತವಾಗಿ ಪಾಲಿಕೆಗೆ ಆರಿಸಿ ಬಂದವರಾಗಿದ್ದಾರೆ.
           ಇನ್ನು ಹಿಂದಿನ ನಗರ ಸಭೆಯಲ್ಲಿ ಸದಸ್ಯರಾಗಿದ್ದು ಈಗ ಪಾಲಿಕೆಗೆ ಹೊಸದಾಗಿ ಆರಿಸಿಬಂದಿರುವ ಇಬ್ಬರು ಇದ್ದಾರೆ. ಅವರುಗಳೆಂದರೆ 3 ನೇ ವಾರ್ಡ್‌ನ (ಅರಳಿ ಮರದ ಪಾಳ್ಯ) ಜೆಡಿಎಸ್‌ನ ಲಕ್ಷ್ಮೀನರಸಿಂಹರಾಜು ಮತ್ತು 23 ನೇ ವಾರ್ಡ್‌ನ (ಸತ್ಯಮಂಗಲ) ಜೆಡಿಎಸ್‌ನ ಟಿ.ಕೆ.ನರಸಿಂಹಮೂರ್ತಿ. ಇನ್ನುಳಿದ ಕಾರ್ಪೊರೇಟರ್‌ಗಳಿಗೆ ಪಾಲಿಕೆ ಕಚೇರಿ ಹೊಸತಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap