ತುಮಕೂರು:
ತುಮಕೂರು ಮಹಾನಗರ ಪಾಲಿಕೆಗೆ ಶುಕ್ರವಾರ ನಡೆದ ಪ್ರಥಮ ಚುನಾವಣೆಯಲ್ಲಿ ಪಕ್ಷ ಹಾಗೂ ಪಕ್ಷೇತರರಾಗಿ ಕಣದಲ್ಲಿರುವ 215 ಅಭ್ಯರ್ಥಿಗಳ ‘‘ರಾಜಕೀಯ ಭವಿಷ್ಯ’’ವನ್ನು ಇದೇ ಮೊದಲ ಬಾರಿಗೆ ಬಳಸಲಾದ ವಿದ್ಯುನ್ಮಾನ ಮತಯಂತ್ರ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್- ಎ.ವಿ.ಎಂ)ಗಳಲ್ಲಿ ನಗರದ ಮತದಾರರು ದಾಖಲಿಸಿದರು.
ತುಮಕೂರು ಮಹಾನಗರ ಪಾಲಿಕೆ ಒಟ್ಟು 35 ವಾರ್ಡ್ಗಳನ್ನು ಹೊಂದಿದೆ. ಅಷ್ಟೂ ವಾರ್ಡ್ಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಮತ್ತು ಜೆ ಡಿ ಎಸ್ ಎಲ್ಲ 35 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ ಕೇವಲ 33 ವಾರ್ಡ್ಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೊತೆಗೆ ಪಕ್ಷೇತರರೂ ಸ್ಪರ್ಧಿಸಿದ್ದು, ಕೆಲವು ವಾರ್ಡ್ಗಳಲ್ಲಿ ಪಕ್ಷೇತರರು ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಇವರೆಲ್ಲರ ‘‘ರಾಜಕೀಯ ಹಣೆಯಬರಹ’’ ಎವಿಎಂಗಳನ್ನು ಸೇರಿತು.
ಬೆಳಗ್ಗೆ 7 ಗಂಟೆಗೇ ಮತದಾನ ಪ್ರಕ್ರಿಯೆ ಆರಂಭವಾಯಿತು. ಸಂಜೆ 5 ಕ್ಕೆ ಕೊನೆಗೊಂಡಿತು. ಬೆಳಗಿನಿಂದ ಮಧ್ಯಾಹ್ನದವರೆಗೆ ನಗರಾದ್ಯಂತ ಅನೇಕ ಕಡೆಗಳಲ್ಲಿ ಮತದಾನ ಪ್ರಕ್ರಿಯೆ ನೀರಸವಾಗಿಯೇ ನಡೆಯಿತು. ಮತ್ತೆ ಕೆಲವೆಡೆ ಚುರುಕಾಗಿದ್ದುದು ಕಂಡುಬಂದಿತು.
ನಗರದ ಹೊರವಲಯಗಳಲ್ಲಿ ವಿಶೇಷವಾಗಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಾಸಿಸುವ ವಾರ್ಡ್ಗಳಲ್ಲಿ ಮತದಾನ ಸಹಜವಾಗಿಯೇ ಚುರುಕಾಗಿದ್ದುದು ಕಂಡುಬಂತು. ಮತಗಟ್ಟೆಗಳ ಮುಂದೆ ಜನರ ಗುಂಪುಗಳಿದ್ದುದು, ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದುದು ಗೋಚರಿಸಿತು. ಆದರೆ ಅದೇ ಹೊತ್ತಿನಲ್ಲಿ ನಗರದೊಳಗಿನ ವಿದ್ಯಾವಂತರ ವಸತಿ ಪ್ರದೇಶಗಳ ಮತಗಟ್ಟೆಗಳಲ್ಲಿ ಅಂತಹ ಚುರುಕುತನ ಕಾಣಿಸಲಿಲ್ಲ. ಒಂದು ರೀತಿ ನೀರಸ ವಾತಾವರಣ ಕಂಡುಬಂದಿತು.
ಅಭ್ಯರ್ಥಿ ಅಂಗಿಯ ವಿಶೇಷ:
ರಾಜಕೀಯವಾಗಿ ‘‘ಹೈ ವೋಲ್ಟೇಜ್ ವಾರ್ಡ್’’ ಎಂದೇ ಪರಿಗಣಿಸಲ್ಪಟ್ಟಿರುವ 3 ನೇ ವಾರ್ಡ್ (ಅರಳಿಮರದ ಪಾಳ್ಯ- ಸಾಮಾನ್ಯ)ನ ಎಚ್.ಎಂ.ಎಸ್.ಶಾಲೆ ಮತಗಟ್ಟೆಯಲ್ಲಿ ಬಿರುಸಿನ ಮತದಾನ ಕಂಡುಬಂದಿತು. ಕಾಂಗ್ರೆಸ್ ಅಭ್ಯರ್ಥಿ ಎನ್.ಮಹೇಶ್ ಬಿಳಿಬಣ್ಣದ ಅಂಗಿ ಧರಿಸಿದ್ದು, ಅಂಗಿಯ ಒಂದು ಬದಿ ಅವರ ಕ್ರಮಸಂಖ್ಯೆ 2 ಇದ್ದುದು ಹಾಗೂ ಇನ್ನೊಂದು ಬದಿ ಹಸ್ತದ ಚಿಹ್ನೆ ಇದ್ದುದು ಎಲ್ಲರ ಗಮನ ಸೆಳೆಯುತ್ತಿತ್ತು. ಮಿಕ್ಕಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಲ್ಲದೆ, ಪಕ್ಷೇತರ ಅಭ್ಯರ್ಥಿಗಳೂ ಸ್ಥಳದಲ್ಲಿದ್ದು ಮತಯಾಚನೆ ಮಾಡುತ್ತಿದ್ದರು. ಬಿಜೆಪಿ ಧುರೀಣ ಬಿ.ಎಸ್.ನಾಗೇಶ್ ಇಲ್ಲಿಂದ ಸ್ಪರ್ಧಿಸುತ್ತಿರುವುದರಿಂದ ಈ ವಾರ್ಡ್ ರಾಜಕೀಯವಾಗಿ ಭಾರಿ ಮಹತ್ವ ಪಡೆದಿದೆ.
ಲಾಭ ಬಿಟ್ಟರೆ ಬೇರೇನೂ ಇಲ್ಲ..?!
ನಗರದ ಗಾರ್ಡನ್ ರಸ್ತೆಯ ವಾಸವಿ ಶಾಲೆ ಮತಗಟ್ಟೆಯ ಮುಂದೆ ಭೇಟಿ ಆದ ಕಮ್ಯುನಿಸ್ಟ್ ಮುಖಂಡ ಬಿ.ಉಮೇಶ್, ‘‘ಎಲ್ಲರೂ ಬೆತ್ತಲಾಗಿರುವಾಗ ಅವರ ಮುಂದೆ ಬಟ್ಟೆ ‘ರಿಸಿದವರು ಮುಜುಗರ ಪಟ್ಟರಂತೆ ಎಂಬಂತೆ ಈ ಚುನಾವಣೆಯಲ್ಲಿ ಹಣಬಲ ಇಲ್ಲದವರ ಸ್ಥಿತಿ ಉಂಟಾಗಿದೆ’’ ಎಂದು ಹೇಳಿದ್ದು ಇಡೀ ಚುನಾವಣಾ ರೀತಿನೀತಿಯನ್ನೇ ಪರಾಮರ್ಶಿಸಿದಂತಿತ್ತು. 4 ನೇ ವಾರ್ಡ್(ಚಿಕ್ಕಪೇಟೆ- ಹಿಂದುಳಿದ ವರ್ಗ ‘ಬಿ’ ಮಹಿಳೆ) ನಿಂದ ಇವರ ಪತ್ನಿ ರೇಖಾ ಉಮೇಶ್ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರು ‘‘ಚುನಾವಣೆ ಎಂದರೆ ಕೆಲವರಿಗೆ ಲಾ‘ದಾಯಕವಾಗಿರುತ್ತದೆ, ಮತ್ತೆ ಕೆಲವರಿಗೆ ಯಾವುದೋ ಕೆಲಸ ಮಾಡಿಸಿಕೊಳ್ಳುವುದಾಗಿರುತ್ತದೆ. ಇಂಥ ಲಾಭೋದ್ದೇಶ ಬಿಟ್ಟರೆ ಬೇರೆ ಏನೂ ಕಾಣಿಸುತ್ತಿಲ್ಲ’’ ಎಂದು ಉದ್ಗರಿಸಿದರು.
ಅಗ್ರಹಾರದ ಶಿಶುವಿಹಾರ ಮತಗಟ್ಟೆ (ಅಗ್ರಹಾರ- ಹಿಂದುಳಿದ ವರ್ಗ ‘ಬಿ’)ಯಲ್ಲಿ ಬಿರುಸಾಗಿ ಮತದಾನ ಸಾಗುತ್ತಿದ್ದುದು ಕಂಡುಬಂದಿತು. ಒಂದೆಡೆ ಅಗ್ರಹಾರ ಹಾಗೂ ಸುತ್ತಲಿನ ಪ್ರದೇಶಗಳು ಹಾಗೂ ಮತ್ತೊಂದೆಡೆ ಸಂತೆಪೇಟೆ ಹಾಗೂ ಜಿ.ಸಿ.ಆರ್. ಕಾಲೋನಿ ಭಾಗದಿಂದ ಜನರು ಗುಂಪುಗೂಡಿದ್ದುದು ಕಾಣಿಸಿತು.
ಕೋಟೆ ಆಂಜನೇಯ ವೃತ್ತದಲ್ಲಿರುವ ಸರ್ಕಾರಿ ಎಂಪ್ರೆಸ್ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯ (5 ನೇ ವಾರ್ಡ್ -ಶ್ರೀರಾಮನಗರ- ಸಾಮಾನ್ಯ) ಸುತ್ತಮುತ್ತ ಭಾರಿ ಜನಜಂಗುಳಿ ಕಂಡುಬಂದಿತು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪರ ಅನೇಕ ಜನರು ಇದ್ದುದು ಕಾಣಿಸಿತು. ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪರ ಜೋರಾದ ಪ್ರಚಾರ ಕಾಣಿಸಿತು. ಅನೇಕ ಪ್ರಮುಖರು ನಿಂತು ಪ್ರಚಾರ ನಡೆಸುತ್ತಿದ್ದರು. ಇದೇ 5 ನೇ ವಾರ್ಡ್ಗೆ ಸೇರಿದ ಗುಂಚಿ ವೃತ್ತದ ಬಳಿಯ ಉರ್ದು ಶಾಲೆ ಮತಗಟ್ಟೆಯ ಬಳಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಟಿ.ಎಚ್.ಮಹೇಶ್ ಕುಮಾರ್ ಭೇಟಿಯಾಗಿದ್ದು, ಪಕ್ಷದ ಪರವಾದ ಅಲೆ ಇದೆ ಎಂದು ಪ್ರತಿಕ್ರಿಯಿಸಿದರು.
ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಪಕ್ಕದ ಜಯಪುರ (8 ನೇ ವಾರ್ಡ್-ಪಿಜಿ ಲೇಔಟ್- ಸಾಮಾನ್ಯ) ಹಾಗೂ ವೀರಸಾಗರ (9 ನೇ ವಾರ್ಡ್- ಪರಿಶಿಷ್ಟ ಜಾತಿ ಮಹಿಳೆ)ದಲ್ಲಿ ವಿವಿಧ ಪಕ್ಷಗಳವರು ಮತ್ತು ಮತದಾರರು ಗುಂಪುಗಳಲ್ಲಿ ಮತಗಟ್ಟೆಗಳ ಬಳಿ ಜಮಾಯಿಸಿದ್ದುದು ಕಂಡುಬಂದಿತು. 9 ನೇ ವಾರ್ಡ್ ವ್ಯಾಪ್ತಿಯ ಉರ್ದು ಶಾಲೆ ಮತಗಟ್ಟೆಯಲ್ಲಿ ಈ ಸಾಲಿನ ಕೊನೆಯ ಮೇಯರ್ ಸುಧೀಶ್ವರ್ ಖುದ್ದಾಗಿ ನಿಂತು ತಮ್ಮ ಪತ್ನಿ-ಕಾಂಗ್ರೆಸ್ ಅಭ್ಯರ್ಥಿ ಪ್ರಭಾವತಿ ಪರವಾಗಿ ಪ್ರಚಾರ ಮಾಡುತ್ತಿದ್ದರು. ಅಲ್ಲೇ ಜೆಡಿಎಸ್ ಅಭ್ಯರ್ಥಿ ಸೌಮ್ಯ ಶಿವಪ್ರಸಾದ್ ಪರವಾಗಿ ಅವರ ಪತಿ ಶಿವಪ್ರಸಾದ್ ಸಹ ಪ್ರಚಾರನಿತರರಾಗಿದ್ದರು. ಈ ಭಾಗದ ಸುತ್ತಮುತಲೆಲ್ಲ ಜನಜಂಗುಳಿ ಜೋರಾಗಿತ್ತು.
ಟೀ ಅಂಗಡಿ ಮಾಲೀಕನ ಪ್ರತಿಕ್ರಿಯೆ
ಇನ್ನು 17 ನೇ ವಾರ್ಡ್ (ಶಾಂತಿ ನಗರ- ಹಿಂದುಳಿದ ವರ್ಗ ‘ಎ’) ವ್ಯಾಪ್ತಿಯ ಹೇಮಾವತಿ ಕಚೇರಿ ಮತಗಟ್ಟೆಯ ಬಳಿ ಸಹ ಭಾರಿ ಜನಜಂಗುಳಿ ಕಂಡುಬಂದಿತು. ಅದೇ ಹೊತ್ತಿಗೆ ಅಲ್ಲಿಗೆ ಜೆಡಿಎಸ್ ಮುಖಂಡ ಎನ್.ಗೋವಿಂದರಾಜು ಬಂದಾಗ ಜೆಡಿಎಸ್ ಗುಂಪು ಅವರನ್ನು ಸುತ್ತುವರೆಯಿತು. ಆಗ ಸಮೀಪದ ಟೀ ಅಂಗಡಿಯ ಮಾಲೀಕ ಇದನ್ನು ನೋಡಿ, ಅಲ್ಲಿ ಟೀ ಕುಡಿಯುತ್ತ ಕುಳಿತಿದ್ದವರೊಡನೆ ‘‘ಸರ್.. ಎಂ.ಎಲ್.ಎ. ಎಲೆಕ್ಷನ್ಗೆ 50 ಕೋಟಿಯಷ್ಟು ಖರ್ಚು ಮಾಡಬೇಕಾಗುತ್ತದೆ’’ ಎಂದು ಉದ್ಗರಿಸಿದ. ಬಳಿಕ ಟೀ ಕುಡಿಯುತ್ತಿದ್ದವರು ‘‘ ಈ ಪಾಲಿಕೆ ಚುನಾವಣೆಗೆ….’’ ಎಂದು ಕೆದಕಿದಾಗ, ಆ ಟೀ ಅಂಗಡಿ ಮಾಲೀಕ ‘‘ಸರ್, ಏನಿಲ್ಲವೆಂದರೂ 50 ಲಕ್ಷ ಖರ್ಚು ಮಾಡಬೇಕಾಗುತ್ತದೆ’’ ಎಂದು ತಣ್ಣಗೆ ಪ್ರತಿಕ್ರಿಸಿದರು.
ಹಣ ಬಲ ರಭಸವಾಗಿದೆ
ಸದಾಶಿವ ನಗರ ಎಸ್.ಬಿ.ಐ. ರಸ್ತೆಯ ಮತಗಟ್ಟೆಯ (12 ನೇ ವಾರ್ಡ್-ನಜರಾಬಾದ್- ಸಾಮಾನ್ಯ)ಬಳಿ ವಿವಿಧ ಪಕ್ಷಗಳವರು ಮತ್ತು ಮತದಾರರು ದೊಡ್ಡ ಸಂಖ್ಯೆಯಲ್ಲೇ ಕಂಡುಬಂದರು. ಇಲ್ಲೇ ಭೇಟಿಯಾದ ಸಿಪಿಎಂ ಅಭ್ಯರ್ಥಿ ಹಾಗೂ ಹೋರಾಟಗಾರ ಸೈಯದ್ ಮುಜೀಬ್ ಅಹಮದ್ ‘‘ಚುನಾವಣಾ ಹೋರಾಟವನ್ನು ನಾವು ಪ್ರಾಮಾಣಿಕವಾಗಿ ಮಾಡಿದ್ದೇವೆ. ಆದರೆ ಈ ಚುನಾವಣೆಯಲ್ಲಿ ಇತರರ ಹಣಬಲವಂತೂ ತುಂಬ ರಭಸವಾಗಿ ಕಾಣುತ್ತಿದೆ. ಎಲ್ಲರೂ ಮೊದಲೇ ಫಿಕ್ಸ್ ಆದಂತೆ ಭಾಸವಾಗುತ್ತಿದೆ’’ ಎಂದು ಹೇಳಿದ್ದು ಇಡೀ ವ್ಯವಸ್ಥೆಯ ಕೈಗನ್ನಡಿಯಂತಿತ್ತು.
14 ನೇ ವಾರ್ಡ್ (ವಿನಾಯಕನಗರ- ಸಾಮಾನ್ಯ ಮಹಿಳೆ) ವ್ಯಾಪ್ತಿಯ ವಿನೋಬ ನಗರದ ವಿವೇಕಾನಂದ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಪುತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಾಸಿರಾ ಬಾನು ಅವರ ಪರವಾಗಿ ಅವರ ತಂದೆ ಮಾಜಿ ನಗರಸಭಾಧ್ಯಕ್ಷ ಹಾಗೂ ಮಾಜಿ ಉಪಮೇಯರ್ ಅಸ್ಲಾಂಪಾಷ ಅವರು ಮತಯಾಚಿಸುತ್ತಿದ್ದುದು ಕಂಡುಬಂದಿತು. ಇನ್ನೂ ಶೇ. 40-45 ರಷ್ಟು ಮಾತ್ರ ಮತದಾನವಾಗಿರುವುದಾಗಿ ಅವರು ಹೇಳಿದರು.
ಉಪ್ಪಾರಹಳ್ಳಿ ವೃತ್ತದ ಸರ್ಕಾರಿ ಶಾಲೆ (24 ನೇ ವಾರ್ಡ್ -ಪರಿಶಿಷ್ಟ ಜಾತಿ- ಉಪ್ಪಾರಹಳ್ಳಿ) ಬಳಿ ಎದುರ್ಗೊಂಡ ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ಮಾಡಿದರು. ‘‘ಒಂದು ವಾರ್ಡ್ನಲ್ಲಿರುವ ಮತದಾರರನ್ನು ಮತ್ತೊಂದು ವಾರ್ಡ್ಗೆ ಸೇರಿಸಲಾಗಿದೆ. ಮತದಾರರಲ್ಲಿ ಭಾರಿ ಗೊಂದಲ ಉಂಟಾಗುತ್ತಿದೆ. ಕೆಲ ಮತದಾರರ ಹೆಸರುಗಳೇ ಡಿಲೀಟ್ ಆಗಿದೆ’’ ಎಂದು ದೂರಿದರು.
ಇನ್ನು ನಗರದ ಸೋಮೇಶ್ವರ ಪುರಂನ ಅರಳಿ ಕಟ್ಟೆ ಬಳಿಯ ಎಸ್.ಎಂ.ಶಾಲೆ ಮತಗಟ್ಟೆ (25 ನೇ ವಾರ್ಡ್-ಸಿದ್ಧಗಂಗಾ ಬಡಾವಣೆ- ಸಾಮಾನ್ಯ ಮಹಿಳೆ) ಯಲ್ಲಿ ಜನರೇ ಇರಲಿಲ್ಲ. ‘‘ಮಧ್ಯಾಹ್ನವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಮತದಾನ ಆಗಿಲ್ಲ’’ ಎಂದು ಬಿಜೆಪಿ ಮುಖಂಡ ರಾಜಕುಮಾರ್ ಗುಪ್ತ ಪ್ರತಿಕ್ರಿಯಿಸಿದರು.
ಎಲ್ಲೆಡೆ ಮತಗಟ್ಟೆಗಳ ಬಳಿ ಗುಂಪುಗೂಡಿದ್ದ ರಾಜಕೀಯ ಪಕ್ಷಗಳವರು ಕುತೂಹಲದಿಂದ ಗೆಲುವು-ಸೋಲುಗಳ ಬಗ್ಗೆ, ಯಾರೆಷ್ಟು ಮತಗಳನ್ನು ಪಡೆಯಬಹುದೆಂಬ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದುದು ಕಂಡುಬಂದಿತು. ಆದರೆ ಮತದಾರರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮತಗಟ್ಟೆಗೆ ಬಂದು ಮತ ಚಲಾಯಿಸಿ ನಿರ್ಗಮಿಸುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ