ವೈಭವಯುತವಾಗಿ ನಡೆದ ದುರ್ಗಮ್ಮನ ಬ್ರಹ್ಮರಥೋತ್ಸವ

ಹುಳಿಯಾರು

       ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ 49ನೇ ವರ್ಷ ಬ್ರಹ್ಮ ರಥೋತ್ಸವ ಶುಕ್ರವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು.

       ರಥೋತ್ಸವದ ಅಂಗವಾಗಿ ಶುಕ್ರವಾರ ಮುಂಜಾನೆ ರಥಕ್ಕೆ ಪುಣ್ಯಾಹ,ದಿಗ್ಬಲಿ ಸೇರಿದಂತೆ ವಿವಿಧ ಪೂಜೆಗಳು ನಡೆಯಿತು.ಅಮ್ಮನವರಿಗೆ ಬೆಳಗ್ಗೆಯಿಂದಲೇ ವಿವಿಧ ಪೂಜೆಗಳನ್ನು ಸಮರ್ಪಿಸಲಾಯಿತು.

      ಅಮ್ಮನವರ ಮೂಲ ವಿಗ್ರಹಕ್ಕೆ ಹಾಗೂ ದೇವಾಲಯಕ್ಕೆ ಮಾಡಲಾಗಿದ್ದ ಹೂವಿನ ಅಲಂಕಾರ ಗಮನ ಸೆಳೆಯಿತು. ನಂತರ ರಥವನ್ನು ವಿವಿಧ ಹೂ,ಹಾರ,ಬಣ್ಣಬಣ್ಣದ ಬಾವುಟದಿಂದ ಅಲಂಕರಿಸಲಾಯಿತು. ಬೆಳಿಗ್ಗೆ 11ರ ವೇಳೆಗೆ ಸೋಮನೊಂದಿಗೆ ಬೀರದೇವರಗುಡಿಯಲ್ಲಿಗೆ ಹೋಗಿ ಪೂಜೆ ಮಾಡಿಸಿಕೊಂಡು ಪಾನಕದ ಗಾಡಿಯನ್ನು ಸೋಮನಕುಣಿತದೊಂದಿಗೆ ಕರೆತಂದು ಸೋಮನನ್ನು ಗದ್ದುಗೆ ಮಾಡಲಾಯಿತು.

         ದೇವಾಲಯದಲ್ಲಿ ದುರ್ಗಮ್ಮನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿದ ನಂತರ ಸರ್ವಾಲಂಕೃತ ದುರ್ಗಮ್ಮದೇವಿಯನ್ನು ಹುಳಿಯಾರಮ್ಮ,ಹೊಸಹಳ್ಳಿಯ ಕೊಲ್ಲಾಪುರದಮ್ಮ,ಕೆಂಚಮ್ಮ,ಗೌಡಗೆರೆ ದುರ್ಗಮ್ಮ,ಹೊಸಳ್ಳಿಪಾಳ್ಯದ ಅಂತಘಟ್ಟೆಅಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ ದೇವರುಗಳೊಂದಿಗೆ ಹೊರಡಿಸಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿ,ಪಾನಕದ ಗಾಡಿಗಳಿಗೆ ಪೂಜೆಸಲ್ಲಿಸಲಾಯಿತು.
ರಥದ ಬಳಿ ಆಗಮಿಸಿ ರಥಕ್ಕೆ ಪೂಜೆ ಸಲ್ಲಿಸಿ ಸಾವಿರಾರು ಭಕ್ತರ ಜೈಕಾರದೊಂದಿಗೆ ರಥಕ್ಕೆ ಈಡುಗಾಯಿ ಹೊಡೆಯುವುದರ ಮೂಲಕ ದುರ್ಗಮ್ಮದೇವಿಯನ್ನು ಸಜ್ಜುಗೊಂಡಿದ್ದ ರಥದಲ್ಲಿ ಕುಳ್ಳಿರಿಸಿ ತೇರನ್ನು ಎಳೆಯಲಾಯಿತು.

       ಸುಡು ಬಿಸಿಲನ್ನು ಲೆಕ್ಕಿಸದೆ ಕಿಕ್ಕಿರಿದು ನೆರದಿದ್ದ ಭಕ್ತಾಧಿಗಳು ಜಯಘೋಷದೊಂದಿಗೆ ತೇರನ್ನೆಳೆದು ಸಂಭ್ರಮಿಸಿದರು. ಆಗಮಿಸಿದ್ದ ಕೆಲಭಕ್ತರು ತೇರಿನತ್ತ ಬಾಳೆಹಣ್ಣು ತೂರಿದರೆ ಮತ್ತೆಕೆಲವರು ಕಳಸದ ನೆತ್ತಿಯಲ್ಲಿದ್ದ ನಿಂಬೆಹಣ್ಣಿಗೆ ಗುರಿಯಿಟ್ಟಿದ್ದರು.ಮಂಗಳವಾಧ್ಯದೊಂದಿಗೆ ಸಾಗಿಬಂದ ರಥಕ್ಕೆ ಬಾಳೆಹಣ್ಣು,ಧವನ ತೂರುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಹಾಗೂ ಹರಕೆಯನ್ನು ಸಮರ್ಪಿಸಿದರು.

        ರಥೋತ್ಸವದ ನಂತರ ಮಹಿಳೆಯರು ರಥದ ಮೇಲಿದ್ದ ದೇವಿಗೆ ಹಣ್ಣುಕಾಯಿ ಮಾಡಿಸಲು ಮುಗಿಬಿದ್ದರು. ದೇವಾಲಯ ಸಮಿತಿ ವತಿಯಿಂದ ದೇವಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸೇವಾಕರ್ತರಿಂದ ಭಕ್ತರಿಗೆ ಪಾನಕ ಪನಿವಾರ, ಮಜ್ಜಿಗೆ ಹಾಗೂ ಯುವಕ ಸಂಘದಿಂದ ಸಹಸ್ರಾರು ಜನರಿಗೆ ಐಸ್ ಕ್ಯಾಂಡಿ ವಿತರಣೆ ಮಾಡಲಾಯಿತು.

       ರಥೋತ್ಸವ ನೋಡಲು ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಯವರು ಆಗಮಿಸಿದ್ದು ದೇವಾಲಯದ ಆವರಣದಲ್ಲಿ ಎತ್ತ ಕಣ್ಣು ಹಾಯಿಸಿದರೂ ಜನವೇ ತುಂಬಿದ್ದರು. ಈ ವೇಳೆ ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ. ಸಿದ್ದರಾಮಯ್ಯ , ತಾಲೂಕು ಪಂಚಾಯಿತಿ ಸದಸ್ಯ ಕುಮಾರ್, ಪಟ್ಟಣ ಪಂಚಾಯ್ತಿ ಸದಸ್ಯರಾದ ರಾಘವೇಂದ್ರ, ಧನುಶ್ ರಂಗನಾಥ್. ಶಂಕರ್, ಎಲ್.ಆರ್.ಚಂದ್ರಶೇಖರ್ ಮತ್ತಿತರರು ಸೇರಿದಂತೆ ಕಮಿಟಿಯ ಧರ್ಮದರ್ಶಿ ಹೆಚ್.ಶಿವಕುಮಾರ್, ಕನ್ವಿನರ್ ಹೆಚ್.ಕೆ.ವಿಶ್ವನಾಥ್ ಸೇರಿದಂತೆ ಗುಂಚಿ ಗೌಡರುಗಳು,ವಿವಿಧ ದೇವಾಲಯಗಳ ಮುಖಂಡರುಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ