ತುಮಕೂರು:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆಯಾದ ಕಾರಣ ತುಮಕೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದ ‘‘ನಾಮಪತ್ರ ಸಲ್ಲಿಕೆ’’ ಪ್ರಕ್ರಿಯೆ ಶುಕ್ರವಾರ ನಡೆಯಲಿಲ್ಲ.
ಶನಿವಾರ ಮತ್ತು ಸೋಮವಾರ ಚುನಾವಣೆ ಪ್ರಕ್ರಿಯೆಯ ಮೊದಲ ಭಾಗವಾದ ನಾಮಪತ್ರ ಸಲ್ಲಿಕೆ ಮುಂದುವರೆಯಲಿದ್ದು, ನಾಮಪತ್ರ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಧಾರ್ಮಿಕ ಕಾರಣಗಳಿಂದ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆ ಆಗಬಹುದೆಂದು ಈ ಮೊದಲು ನಿರೀಕ್ಷಿಸಲಾಗಿತ್ತು. ಆದರೆ ವಾಜಪೇಯಿ ಅವರ ನಿಧನದ ಕಾರಣ ಅನಿರೀಕ್ಷಿತವಾಗಿ ಶುಕ್ರವಾರ ರಜೆ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆಗೆ ಅವಕಾಶ ಲಭಿಸಲಿಲ್ಲ. ಹೀಗಾಗಿ ಶನಿವಾರ ಬಿಟ್ಟರೂ, ಸೋಮವಾರ (ಆಗಸ್ಟ್ 20) ಕಡೆಯ ದಿನ ಆಗಿರುವುದರಿಂದ ಅಂದು ಮಧ್ಯಾಹ್ನ 3 ಗಂಟೆಯ ಒಳಗೆ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಸಲ್ಲಿಸಲೇಬೇಕಾಗಿದೆ. ಆದ್ದರಿಂದ ಸೋಮವಾರ ನಾಮಪತ್ರ ಸಲ್ಲಿಸುವವರ ಸಂಖ್ಯೆಯಲ್ಲಿ ಏರಿಕೆ ಆಗಬಹುದೆನ್ನಲಾಗುತ್ತಿದೆ.
ಇದರೊಂದಿಗೆ ಪಾಲಿಕೆ ಚುನಾವಣಾ ಪ್ರಕ್ರಿಯೆಗಳು ಯಾವುದೇ ಬದಲಾವಣೆ ಇಲ್ಲದಂತೆ ಪೂರ್ವನಿಗದಿಯಾದ ವೇಳಾಪಟ್ಟಿಯಂತೆಯೇ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ :
ಆಗಸ್ಟ್ 21 ರಂದು ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯುವುದು. ನಾಮಪತ್ರಗಳನ್ನು ವಾಪಸ್ ಪಡೆಯಲು ಆಗಸ್ಟ್ 23 ಗುರುವಾರ ಕೊನೆಯ ದಿನ. ಆಗಸ್ಟ್ 31 ರಂದು ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಸೆಪ್ಟೆಂಬರ್ 2 ರಂದು ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯುವುದು. ಸೆಪ್ಟೆಂಬರ್ 3 ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ.
ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಆಗಸ್ಟ್ 17 ಸಾರ್ವತ್ರಿಕ ರಜೆ ಘೋಷಣೆಯಾದ ಕಾರಣ ಚುನಾವಣಾ ಆಯೋಗವು ಚುನಾವಣಾ ವೇಳಾ ಪಟ್ಟಿಯನ್ನು ಪರಿಷ್ಕರಿಸಿದ್ದು, ಅದರಂತೆ ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೂ ಆಗಸ್ಟ್ 29 ರ ಬದಲು, ಆಗಸ್ಟ್ 31ಕ್ಕೇ ಮತದಾನ ನಡೆಯಲಿದೆ. ಸೆಪ್ಟೆಂಬರ್ 3 ರಂದೇ ಮತ ಎಣಿಕೆಯೂ ನಡೆಯಲಿದೆ.