ತುಮಕೂರು:
ದಿನೇ ದಿನೇ ಏರುತ್ತಿರುವ ರಣ ರೋಚಕ ಬಿಸಿಲಿನ ತಾಪಮಾನಕ್ಕೆ ಕಲ್ಪತರು ನಾಡು ಜನರಲ್ಲಿ ಹೀಟ್ ಸ್ಟ್ರೋಕ್ ಆತಂಕ ಕಾಡುತ್ತಿದೆ.ಈ ಆತಂಕದ ಬೆನ್ನಲ್ಲೇ ಜಿಲ್ಲಾಸ್ಪತ್ರೆ ಸೇರಿದಂತೆ, ತಾಲೂಕು ಅಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಸಿದೆ.
ಕಲ್ಪತರು ನಾಡಲ್ಲಿ ದಿನೇ ರಣ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವ ಪರಿಣಾಮ ಜನರಿಗೆ ಹೀಟ್ ಸ್ಟೋಕ್ ಆತಂಕ ಎದುರಾಗಿದೆ. ನಿತ್ಯ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಯಾರಿಗಾದರೂ ಹೀಟ್ ಸ್ಟ್ರೋಕ್ ಕಂಡು ಬಂದಲ್ಲಿ ತಕ್ಷಣವೇ ಚಿಕಿತ್ಸೆ ನೀಡಲು ಪ್ರತ್ಯೇಕವಾಗಿ 5 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಅಂತೆಯೇ ತಾಲೂಕು ಅಸ್ಪತ್ರೆಗಳಲ್ಲಿಯೂ ಪ್ರತ್ಯೇಕವಾಗಿ ಎರಡು ಹಾಸಿಗೆಗಳನ್ನ ಮೀಸಲಿರಿಸಲಾಗಿದೆ. ಜೊತೆಗೆ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ಸಹ ಸಿದ್ಧತೆ ಮಾಡಿಕೊಂಡಿದೆ.
ಸುಸ್ತು, ಆಯಾಸ ಎಂದು ಆಸ್ಪತ್ರೆಗೆ ಬರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈವರೆಗೆ ಯಾವುದೇ ಹೀಟ್ ಸ್ಟ್ರೋಕ್ ಪ್ರಕರಣ ಜಿಲ್ಲೆಯಾದ್ಯಂತ ಕಂಡುಬಂದಿಲ್ಲ. ಆದರೆ ಏಪ್ರಿಲ್ ತಿಂಗಳಲ್ಲಿ ಬಿಸಿಲಿನಿಂದ ಸುಸ್ತಾಗಿ ಬಿದ್ದಂತಹ ಎರಡು ಪ್ರಕರಣ ಕಂಡುಬಂದಿತ್ತು. ಆದರೆ ಅದು ಹೀಟ್ ಸ್ಟ್ರೋಕ್ ಪ್ರಕರಣವಾಗಿರಲಿಲ್ಲ.
ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ 36ರಿಂದ 38 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ರಣ ಬಿಸಿಲಿಗೆ ಜನ ಹೊರಬಾರದೆ ಪರದಾಡುತ್ತಿದ್ದಾರೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರು ಆಯಾಸವಾಗಿ ಬೀಳುತ್ತಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆತಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್ ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಜ್ಜು ಮಾಡಿಕೊಳ್ಳಲಾಗಿದೆ.
ರಣ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಆರೋಗ್ಯವೂ ಹದಗೆಟ್ಟಿದೆ. ಹೀಗಾಗಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಮುಂದೆ ಜನರು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಇಲಾಖೆಯಿಂದಲೂ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಎನ್ನುತ್ತಾರೆ ಜಿಲ್ಲಾವೈದ್ಯಾಧಿಕಾರಿ.