ನವದೆಹಲಿ:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಮಂಡನೆಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂಗೆ ಏರಿಕೆ ಮಾಡಿದ್ದು, ಇದರಿಂದ 4 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಪಿಂಚಣಿದಾರರಿಗೆ 15 ಸಾವಿರ ರೂ.ನಿಂದ 25 ಸಾವಿರ ರೂ.ಗೆ ಏರಿಕೆ ಮಾಡಲಾಗಿದ್ದು, ಸದ್ಯ ಮೂರನೇ 2 ಭಾಗದಷ್ಟು ಜನರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ತೆರಿಗೆ ವ್ಯವಸ್ಥೆಯ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ವಿವಿಧ ಪಾವತಿಗಳಿಗೆ ಐದು ಪ್ರತಿಶತ ಟಿಡಿಎಸ್ ಬದಲಿಗೆ ಎರಡು ಪ್ರತಿಶತ ಟಿಡಿಎಸ್ ಅನ್ನು ಒದಗಿಸಲಾಗುತ್ತದೆ ಎಂದರು.
ಮ್ಯೂಚುವಲ್ ಫಂಡ್ ಅಥವಾ ಯುಟಿಐ ಮರುಖರೀದಿಯಲ್ಲಿ ಟಿಡಿಎಸ್ ಅನ್ನು ಶೇಕಡಾ 20ರಷ್ಟು ಹಿಂಪಡೆಯಲಾಗಿದೆ. ಇ-ಕಾಮರ್ಸ್ ಆಪರೇಟರ್‌ಗಳಿಗೆ TDS ಅನ್ನು ಶೇಕಡಾ 1 ರಿಂದ 0.1 ಕ್ಕೆ ಇಳಿಸಲಾಗಿದೆ. ಅಲ್ಲದೆ, ಟಿಡಿಎಸ್ ತುಂಬುವಲ್ಲಿ ವಿಳಂಬವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದರು.
ಹೊಸ ತೆರಿಗೆ ಪದ್ಧತಿಯಲ್ಲಿ ಕೂಡ ಬದಲಾವಣೆ ಮಾಡಲಾಗಿದ್ದು, 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ. ಇನ್ನು, ಎನ್‌ಜಿಒ ಸೇರಿ ಯಾವುದೇ ರೀತಿಯ ದಾನ ಮಾಡುವವರಿಗೆ ಎರಡು ಸ್ಲ್ಯಾಬ್ ಬದಲು, ಒಂದು ಸ್ಲ್ಯಾಬ್ ಮಾಡಲಾಗಿದೆ. ಟಿಡಿಎಸ್ ನಿಯಮಗಳನ್ನೂ ಸುಲಭಗೊಳಿಸಲು ತೀರ್ಮಾನಿಸಲಾಗಿದೆ.
ಟಿಡಿಎಸ್ ಮರುಪಾವತಿ ವಿಳಂಬವಾಗುವುದನ್ನೂ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಇ-ಕಾಮರ್ಸ್ ಮೇಲಿನ ತೆರಿಗೆಯನ್ನೂ ಇಳಿಸಲು ತೀರ್ಮಾನಿಸಲಾಗಿದೆ. ಆದರೆ, ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆಗೆ ತೆರಿಗೆ ವಿನಾಯಿತಿ ಇರುವುದಿಲ್ಲ ಎಂಬುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಹೊಸ ತೆರಿಗೆ ಪದ್ಧತಿಯಲ್ಲಿ ಸಂಬಳ ಪಡೆಯುವ ಉದ್ಯೋಗಿ ಬದಲಾವಣೆಗಳ ಆಧಾರದ ಮೇಲೆ ಆದಾಯ ತೆರಿಗೆಯಲ್ಲಿ ರೂ 17,500 ವರೆಗೆ ಉಳಿಸಬಹುದಾದ ಅವಕಾಶವಿದೆ.
ನೂತನ ತೆರಿಗೆ ಪದ್ಧತಿಗೆ ಅನುಗುಣವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ಮಿತಿಗಳನ್ನು ಘೋಷಣೆ ಮಾಡಿದ್ದು, 0 ಯಿಂದ 3 ಲಕ್ಷ ರೂ ವರೆಗಿನೆ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 3 ರಿಂದ 7 ಲಕ್ಷ ರೂ ವರೆಗೆ ಶೇ.5 ರಷ್ಟು, 7 ರಿಂದ 10 ಲಕ್ಷ ರೂ ವರೆಗೆ ಶೇ.10 ರಷ್ಟು, 12 ರಿಂದ 15 ಲಕ್ಷ ರೂ ವರೆಗೆ ಶೇ.20ರಷ್ಟು ಮತ್ತು 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ.30ರಷ್ಟು ತೆರಿಗೆ ಹೇರಲಾಗಿದೆ ಎಂದು ತಿಳಿಸಿದರು.
ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ಈ ಮಿತಿ 2.5 ಲಕ್ಷ ರೂ ವರೆಗೆ ತೆರಿಗೆ ಇರಲಿಲ್ಲ. 2.5 ರಿಂದ 5 ಲಕ್ಷ ರೂ ಗೆ ಶೇ.5ರಷ್ಟು, 5ರಿಂದ 10ಲಕ್ಷ ರೂವರೆಗೆ ಶೇ.20ರಷ್ಟು ಮತ್ತು 10 ಲಕ್ಷರೂ ಗಿಂತೆ ಹೆಚ್ಚಿನ ಆದಾಯಕ್ಕೆ ಶೇ.30ರಷ್ಟು ತೆರಿಗೆ ಇತ್ತು.
ಕಸ್ಟಮ್ಸ್ ತೆರಿಗೆ ಇಳಿಕೆ
ಜಿಎಸ್‌ಟಿಯು ಬಡವರ ಮೇಲಿನ ತೆರಿಗೆ ಹೊರೆಯನ್ನು ಇಳಿಸಿದೆ. ಜಿಎಸ್‌ಟಿಯನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಕಸ್ಟಮ್ಸ್ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್ ಉಪಕರಣಗಳು, ಮೂರು ಕ್ಯಾನ್ಸರ್ ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಶೇ.15ರಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಿದೆ.
ಆಮದು ಮಾಡಿಕೊಳ್ಳುವ ಮೊಬೈಲ್, ಮೊಬೈಲ್ ಭಾಗಗಳ ಮೇಲಿನ ಸುಂಕವನ್ನೂ ಕೇಂದ್ರ ಸರ್ಕಾರ ಇಳಿಸಿದೆ. ಚಿನ್ನ ಹಾಗೂ ಬೆಳ್ಳಿಯ ಮೇಲಿನ ಅಬಕಾರಿ ಸುಂಕವನ್ನೂ ಶೇ.6ರಷ್ಟು ಇಳಿಕೆ ಮಾಡಿದೆ. ಇದರಿಂದ ಚಿನ್ನದ ವ್ಯಾಪಾರಿಗಳು ಹಾಗೂ ಖರೀದಿಸುವ ಗ್ರಾಹಕರಿಗೆ ಅನುಕೂಲವಾಗಲಿದೆ.
ಹೊಸ ತೆರಿಗೆ ಸ್ಲ್ಯಾಬ್‌ಗಳು:
3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
3 ಲಕ್ಷದಿಂದ 7 ಲಕ್ಷದವರೆಗಿನ ಆದಾಯಕ್ಕೆ ಶೇ.5 ತೆರಿಗೆ
7 ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ.10 ತೆರಿಗೆ
10 ಲಕ್ಷದಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ.15 ತೆರಿಗೆ
12 ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ.20 ತೆರಿಗೆ
15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ 30% ತೆರಿಗೆ
