ಡ್ರಗ್ಸ್ – ಸೈಬರ್ ಕ್ರೈಂ ಎಂಬೆರಡು ಸವಾಲುಗಳು ಪೊಲೀಸ್ ಇಲಾಖೆಯ ಮುಂದಿವೆ

ಬೆಳಗಾವಿ: ಡ್ರಗ್ಸ್ ಮತ್ತು ಸೈಬರ್ ಕ್ರೈಂ ಎಂಬೆರಡು ಸವಾಲುಗಳು ನಮ್ಮ ಪೊಲೀಸ್ ಇಲಾಖೆಯ ಮುಂದಿವೆ. ಹಾಗಾಗಿ, ಡ್ರಗ್ಸ್ ವಿರುದ್ಧ ಸಮರ ಸಾರಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಸಿ ಸೈಬರ್ ಕ್ರೈಂ ತಡೆಗಟ್ಟಲು ಕಟ್ಟುನಿಟ್ಟಿ‌ನ ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರತೀ ಜಿಲ್ಲೆಯಲ್ಲೂ ಸೈಬರ್ ಲ್ಯಾಬ್ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

ಇಂದು ನಗರ ಪೊಲೀಸ್ ಆಯುಕ್ತಾಲಯ ಮತ್ತು ಜಿಲ್ಲಾ ಪೊಲೀಸ್ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ತಂದು ಹಂಚುವ ಪ್ರಯತ್ನ ನಡೆದಿದೆ. ಆರೋಪಿಗಳನ್ನು ನಿರ್ದಾಕ್ಷಿಣ್ಯವಾಗಿ ಹಿಡಿಯುತ್ತಿದ್ದೇವೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ₹24 ಕೋಟಿಯ ಡ್ರಗ್ಸ್ ಅನ್ನು ಪೊಲೀಸರು ಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾವಿರಾರು ಕೋಟಿಯ ಡ್ರಗ್ಸ್ ಹಿಡಿದು ನಾಶಪಡಿಸಿದ್ದೇವೆ. 15 ಲಕ್ಷ ವಿದ್ಯಾರ್ಥಿಗಳನ್ನು ನಮ್ಮ ಪೊಲೀಸರು ಭೇಟಿಯಾಗಿ ಡ್ರಗ್ಸ್ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದರು.

ಜನರಲ್ ಕ್ರೈಂ ಕಡಿಮೆ ಆಗುತ್ತಿವೆ. ಆದರೆ, ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಅವುಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಸೈಬರ್ ವಂಚಕರನ್ನು ಹಿಡಿಯಲಾಗುತ್ತಿದೆ. ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ತ್ವರಿತವಾಗಿ ತಡೆಗಟ್ಟಲಾಗುತ್ತಿದೆ. ಪ್ರತಿಯೊಬ್ಬ ಪೊಲೀಸ್ ಕಾನ್ಸ್​ಟೇಬಲ್​ ಕೂಡ ಸೈಬರ್ ಕ್ರೈಂ ಬಗ್ಗೆ ತಿಳಿದುಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸೈಬರ್ ಲ್ಯಾಬ್ ಸ್ಥಾಪಿಸಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಇಡೀ ಭಾರತದಲ್ಲಿ ನ್ಯಾಯ ಒದಗಿಸಿ ಕೊಡುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದಲ್ಲೇ ಮೂರನೇ ಅತ್ಯುತ್ತಮ ಠಾಣೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಅದೇ ರೀತಿ ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಠಾಣೆಗಳನ್ನು ಜನಸ್ನೇಹಿ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

ಪೊಲೀಸರು ಜನಸ್ನೇಹಿ ಆಗಿರಬೇಕು. ಶಿಸ್ತು ಮತ್ತು ಕಾನೂನಿನಲ್ಲಿ ರಾಜಿ ಆಗುವಂತಿಲ್ಲ. ಕರ್ನಾಟಕ ಪೊಲೀಸರ ಬಗ್ಗೆ ಹೆಮ್ಮೆ ಇದೆ. ಮೂರನೇ ಸಾರಿ ನಾನು ಗೃಹ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ. ಇಲಾಖೆಯಲ್ಲಿ ಅನೇಕ ಬದಲಾವಣೆ ತಂದಿದ್ದೇವೆ. ಪೊಲೀಸರಿಗೆ ಸೌಲಭ್ಯ ನೀಡಲು ಹಿಂದೆ ಬಿದ್ದಿಲ್ಲ. ಯಾವುದೇ ಯೋಜನೆ ಕೇಳಿದಾಗ ಸಿಎಂ ಹಣ ಮತ್ತು ಉತ್ತೇಜನ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆ ಸಮರ್ಥವಾಗಿದ್ದಷ್ಟು ಒಳ್ಳೆಯ ಕೆಲಸ ಮಾಡುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಯಾವುದೇ ರೀತಿ ಕೋಮುಗಲಭೆ ಮಾಡಲು ನಾವು ಬಿಟ್ಟಿಲ್ಲ. ಯಾವುದೇ ಸಮುದಾಯ ಇದ್ದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ರಾಜ್ಯಗಳಿಗೆ ಬಂಡವಾಳ ಹೂಡಿಕೆದಾರರು ಮನಸ್ಸು ಮಾಡುವುದಿಲ್ಲ. ಆದರೆ, ಕರ್ನಾಟಕದಲ್ಲಿ ಪೊಲೀಸರು ಒಳ್ಳೆಯ ರೀತಿ ಕಾನೂನು ಸುವ್ಯವಸ್ಥೆ ಕಾಪಾಡಿದ ಪರಿಣಾಮ ನಮ್ಮ ರಾಜ್ಯಕ್ಕೆ 10 ಲಕ್ಷಕ್ಕೂ ಕೋಟಿ ಹಣ ಹೂಡಿಕೆ ಹರಿದು ಬಂದಿದೆ. ಆ ಹಣವನ್ನು ಬೆಳಗಾವಿ ಸೇರಿದಂತೆ ಮತ್ತಿತರ ಎರಡನೇ ದರ್ಜೆ ನಗರಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಪೊಲೀಸ್ ಇಲಾಖೆ ಚನ್ನಾಗಿ ಕೆಲಸ ಮಾಡಿದರೆ ಹೆಚ್ಚು ಬಂಡವಾಳ ಹೂಡಿಕೆ ಆಗುತ್ತದೆ ಎಂಬುದನ್ನು ಕರ್ನಾಟಕ ಸಾಬೀತುಪಡಿಸಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಇಂದು 67.79 ಕೋಟಿ ರೂ. ಅನುದಾನದ ಕಾಮಗಾರಿಗಳ ಉದ್ಘಾಟನೆ ಮತ್ತು ಅಡಿಗಲ್ಲು ನೆರವೇರಿಸಲಾಗಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ನೂರಕ್ಕೆ ನೂರು ಸಿಬ್ಬಂದಿಗಳಿಗೆ ಕ್ವಾಟರ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಶೇ.40ರಷ್ಟು ಸಿಬ್ಬಂದಿಗಳಿಗೆ ಪೊಲೀಸ್ ಗೃಹ ಯೋಜನೆಯಡಿ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ಅತ್ಯಂತ ಸುಸಜ್ಜಿತ 2ಬಿಹೆಚ್​ಕೆ ಮನೆ ನೀಡಲಾಗಿದೆ. ಕಳೆದ ವರ್ಷ 2 ಸಾವಿರ ಕೋಟಿ ಮುಖ್ಯಮಂತ್ರಿಗಳು ನೀಡಿದ್ದಾರೆ. ಈಗ ಮತ್ತೆ 250 ಕೋಟಿ ಅನುದಾನ ಕೊಟ್ಟಿದ್ದಾರೆ. 1 ಯೂನಿಟ್​ಗೆ 38 ಲಕ್ಷ ರೂ. ಖರ್ಚಾಗುತ್ತದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಪೊಲೀಸರಿಗೆ ಹೆಚ್ಚೆಚ್ಚು ಸೌಲಭ್ಯ ನೀಡಲಾಗುತ್ತಿದೆ. ಪೊಲೀಸರು ಸರ್ಕಾರದ ಮುಖ ಇದ್ದಂತೆ. ಅವರು ಚನ್ನಾಗಿ ಕೆಲಸ ಮಾಡಿದರೆ, ಆ ರಾಜ್ಯದಲ್ಲಿ ಬೆಳವಣಿಗೆ, ಅಭಿವೃದ್ಧಿ ಆಗುತ್ತೆ ಎನ್ನುವುದು ನಮ್ಮ ನಂಬಿಕೆ ಎಂದು ಪರಮೇಶ್ವರ್ ಹೇಳಿದರು.

ಶಾಸಕರಾದ ಮಹಾಂತೇಶ ಕೌಜಲಗಿ, ಆಸೀಫ್ ಸೇಠ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮನ್ನವರ, ಎಡಿಜಿಪಿ ಆರ್.ಹಿತೇಂದ್ರ, ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ, ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಥೋಡ್, ಜಿ.ಪಂ.ಸಿಇಒ ರಾಹುಲ್ ಶಿಂಧೆ, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

Recent Articles

spot_img

Related Stories

Share via
Copy link