ಪಿಎಸ್‍ಐ ಸಾಮಾಜಿಕ ಕೆಲಸಕ್ಕೆ ಸಾರ್ವಜನಿಕರು ಫಿದಾ…!

ಟ್ವಿಟರ್ ಅಭಿಯಾನಕ್ಕೆ ತಲೆ ಕೆಡಿಸಿಕೊಳ್ಳದ ಬಿಬಿಎಂಪಿ : ಗೊರಗುಂಟೆಪಾಳ್ಯದಲ್ಲಿ ಮೊಬೈಲ್ ಶೌಚಾಲಯ
 
ಗುಡಿಬಂಡೆ ಭರತ್ ಜಿ.ಎಸ್
ಬೆಂಗಳೂರು : ಪ್ರತಿದಿನ ಸಾವಿರಾರು ಜನರು ಸಂಚಾರ ಮಾಡುವ ಮಾರ್ಗ, ಎದ್ವೋ, ಬಿದ್ವೋ ಅಂತ ಬಸ್ಸುಗಳ ಹಿಂದೆ ಓಡಾಟ, ಇದರ ಮಧ್ಯೆ ಏನಾದರೂ ಸ್ವಲ್ಪ ಎಮರ್ಜೆನ್ಸಿ ಆದಾಗ ಶೌಚಾಲಯ ಹುಡುಕುತ್ತೇವೆ. ಒಂದು ವೇಳೆ ಸರಿಯಾದ ಸಮಯಕ್ಕೆ ಸಿಗಲಿಲ್ಲ ಅಂದರೆ, ಸ್ವಲ್ಪವೂ ಜವಾಬ್ದಾರಿ ಇಲ್ಲದೆ, ಸಾರ್ವಜನಿಕ ಸ್ಥಳದಲ್ಲೆ ಎಲ್ಲವೂ ಮುಗಿಸಿಬಿಡುತ್ತೆವೆ. ಆದರೆ ಮಹಿಳೆಯರು, ವೃದ್ಧರ ಪಾಡು ಹೇಗೆ ಎಂಬ ಆಲೋಚನೆಯಿಂದ ಪಿಎಸ್‍ಐ ಶಾಂತಪ್ಪ ಹೊಸ ಐಡಿಯಾ ಮಾಡಿದ್ದು, ಅದಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಗೊರಗುಂಟೆಪಾಳ್ಯ ಜಂಕ್ಷನ್‍ನಲ್ಲಿ ಸಾರ್ವಜನಿಕ ಶೌಚಾಲಯಬೇಕೆಂದು ಒಬ್ಬ ಸಾಮಾನ್ಯ ಪ್ರಜೆಯಂತೆ ಪಿಎಸ್‍ಐ ಶಾಂತಪ್ಪ ಸತತವಾಗಿ ನೂರು ದಿನಗಳು ಟ್ವಿಟರ್ ಅಭಿಯಾನ ಮಾಡಿದ್ರೂ ಬಿಬಿಎಂಪಿ ಕ್ಯಾರೇ ಎಂದಿಲ್ಲ. ಹಾಗಾಗಿ ಸ್ವಂತ ಖರ್ಚಿನಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ನೀಡಿದ್ದಾರೆ, ಇದರಿಂದ ಮಹಿಳೆಯರು, ವೃದ್ದರು ನಿಟ್ಟಿಸಿರು ಬಿಟ್ಟಿದ್ದಾರೆ.

ನಗರದ ಗೊರಗುಂಟೆಪಾಳ್ಯ ಜಂಕ್ಷನ್ ಮೂಲಕ ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಆಗಿದೆ, ಇಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ವೃದ್ಧರು, ಮಹಿಳೆಯರು, ಹೆಣ್ಣುಮಕ್ಕಳು ಸಮಸ್ಯೆಯನ್ನು ಎದುರಿಸುತ್ತಿದ್ದರು ಹಾಗಾಗಿ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಟ್ವಿಟರ್ ಮೂಲಕ ಪ್ರತಿ ದಿನ ಮನವಿ ಮಾಡಿದ್ದಾರೆ, ಹೇಗಾದರು ಮಾಡಿ ಸಾವಿರಾರು ಹೆಣ್ಣುಮಕ್ಕಳ ಸಮಸ್ಯೆ ಬಗೆಹರಿಸಬೇಕು ಎಂಬ ಡೃಢಸಂಕಲ್ಪದಿಂದ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಅವರ ಸ್ವಚ್ಚ ಭಾರತ್ ಅಭಿಯಾನವೇ ಸ್ಪೂರ್ತಿಯಾಗಿದೆ.

ಶೌಚಾಲಯಕ್ಕಾಗಿ ಟ್ವಿಟರ್ ಅಭಿಯಾನ : ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರಿಗೆ ಟ್ಯಾಗ್ ಮಾಡಿ ಫೆ 4 ರಿಂದ ಪ್ರತೀ ದಿನ ಟ್ವಿಟರ್ ಅಭಿಯಾನ ಮಾಡಿದ್ದಾರೆ. ಆದರೂ ನಗರ ಪಾಲಿಕೆ ತಲೆ ಕೆಡಿಸಿಕೊಂಡಿಲ್ಲ, ಕೊನೆಗೆ ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರು ಮಾಡಬೇಕಿದ್ದ ಕೆಲಸವನ್ನ ತಾವೇ ಮಾಡಿ ಪೂರೈಸಿದ್ದಾರೆ. ನೂರು ದಿನಗಳ ಬಳಿಕ ತಾವೇ ಮೊಬೈಲ್ ಶೌಚಾಲಯ ನಿರ್ಮಿಸಿದ್ದಾರೆ. ಇದರಿಂದ ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ, ಸದ್ಯ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಶಾಂತಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸ್ವಚ್ಚಭಾರತ್ ಅಭಿಯಾನ ಪ್ರೇರಣೆ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಪ್ರೇರಣೆಯಿಂದ ಮೊಬೈಲ್ ಶೌಚಾಲಯ ನಿರ್ಮಾಣ ಮಾಡಿರುವುದಾಗಿ ಪಿಎಸ್‍ಐ ಶಾಂತಪ್ಪ ತಿಳಿಸಿದ್ದಾರೆ. ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಮೊಬೈಲ್ ಶೌಚಾಲಯ ವಾಹನ ನಿಲ್ಲಿಸಿದ್ದು, ಮಂಗಳಮುಖಿಯರಿಂದ ಶೌಚಾಲಯ ಉದ್ಘಾಟನೆ ಮಾಡಲಾಗಿದೆ. ಪ್ರತಿನಿತ್ಯ ಸಾವಿರಾರು ಜನ ಗೊರಗುಂಟೆಪಾಳ್ಯ ಜಂಕ್ಷನ್‍ನಿಂದ ರಾಜ್ಯದ ಉತ್ತರದ ಭಾಗದ ಕಡೆ ಪ್ರಯಾಣಿಸುತ್ತಾರೆ. ಹಗಲು ರಾತ್ರಿ ಬಸ್‍ಗಳಿಗೆ ಕಾದು ನಿಂತಿರುತ್ತಾರೆ. ಆದರೆ ಜಂಕ್ಷನ್‍ನಲ್ಲಿ ಶೌಚಾಲಯ ಇಲ್ಲದೆ ಸಾರ್ವಜನಿಕರ ಪರದಾಟ ಉಂಟಾಗಿತ್ತು. ಖುದ್ದು ತಮ್ಮ ತಾಯಿಯನ್ನ ಊರಿಗೆ ಕರೆದೊಯ್ಯುವಾಗ ಪಿಎಸ್‍ಐ ಶಾಂತಪ್ಪ ಸಮಸ್ಯೆಯನ್ನು ಅನುಭವಿಸಿದ್ದರು. ಹಾಗಾಗಿ ಅಂದೇ ತೀರ್ಮಾನ ಮಾಡಿ ಅದನ್ನು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದರು ಆದರೆ ಪ್ರಯೋಜನವಾಗಿಲ್ಲ. ಹಾಗಾಗಿ ಸ್ವತಹ ಪಿಎಸ್‍ಐ ಶಾಂತಪ್ಪ ಶೌಚಾಲಯ ನಿರ್ಮಿಸಲು ಮುಂದೆಬಂದರು.

ಸಾರ್ವಜನಿಕರಿಗೆ ಅನುಕೂಲ : ತಮ್ಮ ತಾಯಿ ಅನುಭವಿಸಿದ ತೊಂದರೆ ಬೇರೆಯವರು ಅನುಭವಿಸಬಾರದು ಎಂಬ ಉದೇಶದಿಂದ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಶೌಚಾಲಯ ಬೇಕು ಅಂತ ಬಿಬಿಎಂಪಿ ಮತ್ತು ಸ್ಥಳೀಯ ಶಾಸಕ ಮುನಿರತ್ನ ಗಮನಕ್ಕೆ ತರಲು ನಿರಂತರ ಪ್ರಯತ್ನ ಮಾಡಿದರು. ಮುನಿರತ್ನ ಹಾಗೂ ಬಿಬಿಎಂಪಿಗೆ ಟ್ಯಾಗ್ ಮಾಡಿ ಟ್ವಿಟರ್ ಅಭಿಯಾನ ಆರಂಭಿಸಿದರು. ಆದರೆ ಅಭಿಯಾನಕ್ಕೆ ಬಿಬಿಎಂಪಿ ಮತ್ತು ಸಚಿವ ಮುನಿರತ್ನ ಕಿಂಚಿತ್ತೂ ಗಮನಹರಿಸಲಿಲ್ಲ. ಬಳಿಕ ತಮ್ಮ ಆಪ್ತರ ಜೊತೆಗೂಡಿ ಮೊಬೈಲ್ ಶೌಚಾಲಯವನ್ನು ಶಾಂತಪ್ಪ ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಶಾಂತಪ್ಪ ಮಾಡಿರೋದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೊಬೈಲ್ ಶೌಚಾಲಯದ ಅನುಕೂಲ : ಈ ವಾಹನದಲ್ಲಿ ಒಟ್ಟು 10 ಶೌಚಾಲಗಳಿವೆ ಅದರಲ್ಲಿ 5 ಪುರುಷರಿಗೆ, 3 ಮಹಿಳೆಯರಿಗೆ 2 ತೃತೀಯಲಿಂಗಗಳಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ, ಇದರಲ್ಲಿ ನೀರಿನ ವ್ಯವಸ್ಥೆಯನ್ನು ವಾಹನದಲ್ಲಿಯೇ ಕಲ್ಪಿಸಿದ್ದು, ಇದರಲ್ಲಿ ಎಲ್ಲವೂ ತುಂಬಿದ ನಂತರ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಇದನ್ನು ನಿರ್ವಹಣೆ ಮಾಡಲು ಒಬ್ಬ ವ್ಯಕ್ತಿಯನ್ನು ಸಹ ನೇಮಿಸಿಕೊಂಡಿದ್ದಾರೆ.

ಈ ಭಾಗದಲ್ಲಿ ಪ್ರತೀ ದಿನ ಸಾವಿರಾರು ಜನರು ಸಂಚಾರ ಮಾಡುತ್ತಾರೆ, ನಾನು ನನ್ನ ತಾಯಿಯನ್ನು ಊರಿಗೆ ಕಳುಹಿಸಲು ಬಸ್ ನಿಲ್ದಾಣದಲ್ಲಿದ್ದಾಗ, ನನ್ನ ತಾಯಿಗೆ ಆದ ಸಮಸ್ಯೆಯೇ ಎಲ್ಲಾ ತಾಯಿಂದರಿಗೂ ಆಗುತ್ತಿದೆ ಎಂಬುದು ತಿಳಿದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಟ್ವಿಟರ್ ಅಭಿಯಾನವನ್ನು ಫೆಬ್ರವರಿ 4ರಂದು ಆರಂಭ ಮಾಡಿದೆ, ಅದು ಬಧವಾರಕ್ಕೆ 100ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷವಾಗಿ ಏನಾದರೂ ಮಾಡಬೇಕು ಎಂದು ಮೊಬೈಲ್ ಶೌಚಾಲಯ ಆರಂಭ ಮಾಡಿದ್ದೇವೆ. ಇದಕ್ಕೆ ಎಲ್ಲರ ಸ್ಪುರ್ತಿ ನನಗೆ ಶಕ್ತಿ ತುಂಬಿತು, ಈ ಭಾಗದಲ್ಲಿ ಶಾಶ್ವತ ಶೌಚಾಲಯ ನಿರ್ಮಿಸುವವರೆಗೂ ನನ್ನ ಟ್ವಿಟರ್ ಅಭಿಯಾನ ಮುಂದುವರೆಯಲಿದೆ.
-ಶಾಂತಪ್ಪ, ಪಿಎಸ್‍ಐ

ಸಾವಿರಾರು ಜನರು ಪ್ರತಿದಿನ ಓಡಾಡುತ್ತಾರೆ, ಸಾರ್ವಜನಿಕ ಶೌಚಾಲಯ ಮಾಡಿರುವುದು ಜೀವ ಬಂದಹಾಗೆ ಆಗಿದೆ, ಮಹಿಳೆಯರು ಹಾಗೂ ಜನರ ವಾಹನಗಳು ಓಡಾಡುತ್ತಿರುತ್ತದೆ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಲು ಆಗುವುದಿಲ್ಲ, ಈ ರೀತಿಯ ಮೊಬೈಲ್ ಶೌಚಾಲಯ ಮಾಡಿರುವುದು ನೂರಾರು ಜನರಿಗೆ ತುಂಬ ಅನುಕೂಲವಾಗಲಿದೆ. ನೈರ್ಮಲ್ಯ ಹಾಗೂ ಶೌಚಾಲಯಗಳು ಸಣ್ಣ ಸಂಗತಿಗಳಲ್ಲ, ಅದರಿಂದಲೇ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ಹಾಗೂ ಮಹತ್ವ ಲಭ್ಯವಾಗಿದೆ. ನೈರ್ಮಲ್ಯಕ್ಕೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಉತ್ತಮ ನೈರ್ಮಲ್ಯ ವ್ಯವಸ್ಥೆ ಇದ್ದಲ್ಲಿ ಉತ್ತಮ ಆರೋಗ್ಯವೂ ಇರುತ್ತದೆ. ಹಾಗಾಗಿ ಉತ್ತಮ ಪರಿಸರ ನಿರ್ಮಿಸಲು ಮುಂದಾಗಿರುವ ಪಿಎಸ್‍ಐ ಸರ್ ರವರಿಗೆ ಅಭಿನಂದನೆಗಳು.

ಸಂತೋಷ ವ್ಯಕ್ತಪಡಿಸಿದ ಸಾರ್ವಜನಿಕರು.

Recent Articles

spot_img

Related Stories

Share via
Copy link
Powered by Social Snap