ಬಳ್ಳಾರಿ:
ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಹಾಗೂ ತಯಾರಿಕೆಗೆ ಮಹಾನಗರ ಪಾಲಿಕೆ ಸೇರಿದಂತೆ ಇತರೇ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಲು ಸಂಪೂರ್ಣ ವಿಫಲವಾಗಿದ್ದು, ಕುಲ ಕಸುಬುದಾರರಾದ ಕುಂಬಾರರ ಜೀವನ ಮೂರಾಬಟ್ಟೆಯಾಗಿದೆ ಎಂದು ಆರೋಪಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಇಲ್ಲಿನ ಶಾಲಿವಾಹನ ಕುಂಬಾರರ ಜಿಲ್ಲಾ ಸಮೀತಿ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.
ಕರ್ನಾಟಕ ಜನಸೈನ್ಯ ಸಂಘಟನೆ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮೀ ಅವರು ಮಾತನಾಡಿ, ಮಹಾನಗರ ಪಾಲಿಕೆ ಸೇರಿದಂತೆ ಸಂಬಂಧಿಸಿದ ನಾನಾ ಇಲಾಖೆ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಮಾಡುವುದನ್ನು ಕೈಬಿಟ್ಟು, ಇದೇ ವೃತ್ತಿಯನ್ನು ಆಶ್ರಯಿಸಿದ ಕುಂಬಾರರು ಪ್ರಸಕ್ತ ವರ್ಷ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾಡಲು ಮುಂದಾಗಿದ್ದೆವು. ಆದರೇ, ಮಹಾನಗರ ಪಾಲಿಕೆ ಸೇರಿದಂತೆ ಸಂಬಂಧಿಸಿದ ಇತರೇ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾನಾ ಕಡೆಗಳಲ್ಲಿ ಪಿಒಪಿ ಮೂರ್ತಿಗಳು ಮಾರಾಟ ಮಾಡುವುದು ಗಮನಕ್ಕಿದ್ದರೂ ಅದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಕುಂಬಾರರ ಬದುಕು ಮೂರಾಬಟ್ಟೆಯಾಗಿದೆ. ಪರಿಸರ ಸ್ನೇಹಿ ಗಣೇಶ ವಿಗ್ರಹಗಳು ಸಾಕಷ್ಟು ಉಳಿದಿದ್ದು, ಹೂಡಿದ ಬಂಡವಾಳದಲ್ಲಿ ನಯಾ ಪೈಸೆ ಹಿಂದಿರುಗಿಲ್ಲ. ಇದರಿಂದ ನಮ್ಮ ಜೀವನ ಅತಂತ್ರವಾಗಿದೆ ಎಂದು ದೂರಿದರು.
ಅಧಿಕಾರಿಗಳ ಸೂಚನೆಯಂತೆ ನಾವು ಪಾಲನೆ ಮಾಡಿರುವುದು ತಪ್ಪಾ, ಇದೇ ವೃತ್ತಿಯನ್ನು ನಾವು ಅವಲಂಬಿಸಿರುವುದು ತಪ್ಪಾ ತಿಳಿಯದಾಗಿದೆ. ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ಕುಂಬಾರರ ಬದುಕು ಹೈರಾಣವಾಗಿದೆ. ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಂಡಿದ್ದರೇ, ಮಕ್ಕಳು, ವೃಧ್ಧರೊಂದಿಗೆ ಕಚೇರಿಗೆ ಬರುವುದು ಅಗತ್ಯವಿರಲಿಲ್ಲ. ಪರಿಸರ ಸಂರಕ್ಷಣೆಗಾಗಿ ನಾವೂ ಪ್ರಸಕ್ತ ವರ್ಷ ಕೈಜೋಡಿಸಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂ.ನಷ್ಟ ಅನುಭವಿಸುವಂತಾಗಿದೆ. ನಗರದ ನಾನಾ ಕಡೆ ಪಿಒಪಿ ಗಣೇಶ ಮೂರ್ತಿಗಳು ಮಾರಾಟ ಮಾಡುತ್ತಿರುವ ಕುರಿತು, ಪ್ರತಿಷ್ಠಾಪನೆಮಾಡುತ್ತಿರುವ ಕುರಿತು ಕಚೇರಿಗೆ ಆಗಮಿಸಿ ತಿಳಿಸಿದರೂ ಕಡಿವಾಣ ಹಾಕಲು ಮುಂದಾಗದ ಹಿನ್ನೆಲೆಯಲ್ಲಿ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳು ಮಾರಾಟವಾಗದೇ ಉಳಿದಿದ್ದು, ಇದರಿಂದ ಲಕ್ಷಾಂತರ ರೂ.ನಷ್ಟುಂಟಾಗಿದೆ. ಕೂಡಲೇ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಅರಿತು, ಸೂಕ್ತ ಪರಿಹಾರ ನೀಡಬೇಕು, ಅಕ್ರಮವಾಗಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಲು ಅನುಮತಿ ನೀಡಿದ ಅಧಿಕಾರಿಗಳ ಹಾಗೂ ಮಾರಾಟ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯವಹಿಸಿದರೇ ಸಂಘದ ಆಶ್ರಯದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ನಾನಾ ಕಡೆಯಿಂದ ಆಗಮಿಸಿದ ಪಿಒಪಿ ಮೂರ್ತಿಗಳ ಮಾರಾಟಗಾರರಿಗೆ ಅಧಿಕಾರಿಗಳು ಪರೋಕ್ಷವಾಗಿ ಅನುಮತಿ ನೀಡಿದ್ದು, ಕುಂಬಾರ ಸಮುದಾಯದವರಿಗೆ ಮಾತ್ರ ಮೇಲಿಂದ ಮೇಲೆ ನೋಟೀಸ್ ನೀಡಿ ನಮ್ಮ ಮೂಲ ವೃತ್ತಿಯ ಹಕ್ಕನ್ನು ಅಧಿಕಾರಿಗಳು ಕಸಿದುಕೊಂಡಿದ್ದಾರೆ. ನಮಗೆ ನೀಡಿದ ನೊಟೀಸ್‍ನಂತೆ ಎಲ್ಲರಿಗೂ ನೀಡಿದ್ದರೆ ಮಾರುಕಟ್ಟೆಯಲ್ಲಿ ಪಿಒಪಿ ಮೂರ್ತಿಗಳ ಮಾರಾಟ ಹೇಗೆ ನಡೆಯಿತು. ನಡೆದರೂ ಮಾರಾಟಕ್ಕೆ ಕಡಿವಾಣ ಹಾಕದಿರುವುದು ನಾನಾ ಅನುಮಾನ ಹುಟ್ಟಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಂಖಡರಾದ ಕೆ.ನಾರಾಯಣಪ್ಪ, ಪಿ.ವಿ.ನರಸಿಂಹ, ಕೆ.ರಾಜೇಶ್ವಚರಿ, ಕೆ.ಲಲಿತಾ, ಕೆ.ಜ್ಯೋತಿ, ಕೆ.ವೆಂಕಟಲಕ್ಷ್ಮೀ, ಕೆ.ಶೃತಿ, ಕೆ.ಶಾಂತಿ, ಕೆ.ರಘು ಸೇರಿದಂತೆ ವಿವಿಧ ಮುಖಂಡರು ಇತರರು ಇದ್ದರು.