ದಾವಣಗೆರೆ:
ತಾಲೂಕಿನ ಕನಗೊಂಡನಹಳ್ಳಿ ಗ್ರಾಮ ಪಂಚಾಯತ್ನ ಪಿಡಿಓ ಎನ್.ಮಾಳಮ್ಮನವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯವಾಗಿ ನಿಂದಿಸಿ, ದೈಹಿಕ, ಮಾನಸಿಕ ಹಲ್ಲೆ ಮಾಡಿರುವ ಗ್ರಾಪಂ ಅಧ್ಯಕ್ಷೆ ಜಯಮ್ಮ ಹಾಗೂ ಪುತ್ರ ಶರತ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ನೇತೃತ್ವದಲ್ಲಿ ನಗರದ ಜಿಪಂ ಕಚೇರಿ ಬಳಿ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಎನ್.ವಿವೇಕಾನಂದ ಮಾತನಾಡಿ, ಕನಗೊಂಡನಹಳ್ಳಿ ಗ್ರಾಪಂ ಕಚೇರಿಯಲ್ಲಿ ಕಳೆದ ದಿ.23ರಂದು ಮಧ್ಯಾಹ್ನ 2.20ರ ವೇಳೆ ಕಚೇರಿ ಸಭಾಂಗಣದಲ್ಲಿ ಟೇಬಲ್ ಮಾಡಿಸುವ ವಿಚಾರ ಚರ್ಚಿಸುತ್ತಿದ್ದಾಗ ಗ್ರಾಪಂ ಅಧ್ಯಕ್ಷೆ ಜಯಮ್ಮ ಜಗಳ ತೆಗೆದು, ಅವಾಚ್ಯವಾಗಿ ನಿಂದಿಸಿದ್ದಾರೆ.ಅಧ್ಯಕ್ಷೆ ಪುತ್ರ ಶರತ್ ಸಹ ಪಿಡಿಓ ಮೇಲೆ ಹಲ್ಲೆಗೆ ಪ್ರಚೋದನೆ ನೀಡಿದ್ದಾಗಿ ಆರೋಪಿಸಿದರು.
ಗ್ರಾಪಂ ಅಧ್ಯಕ್ಷೆ ಜಯಮ್ಮ ಜಾತಿ ನಿಂದನೆ ಕೇಸ್ ದಾಖಲಿಸುವ ಬೆದರಿಕೆ ಹಾಕಿ, ಪಿಡಿಓ ಮಾಳಮ್ಮ ಮೇಲೆ ಏಕಾಏಕಿ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ದೈಹಿಕ ಹಲ್ಲೆ ಮಾಡಿದ್ದಾರೆ. ಜಯಮ್ಮಗೆ ಮಗ ಶರತ್ ಸಾಥ್ ನೀಡಿದ್ದಾರೆ. ಮಹಿಳಾ ಪಿಡಿಓ ಎನ್ನದೇ ಬಟ್ಟೆ ಎಳೆದಾಡಿ, ದೈಹಿಕ ಹಲ್ಲೆ ನಡೆಸಿದ್ದರಿಂದ ಮಾಳಮ್ಮ ತೀವ್ರವಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದಾರೆ. ಆದ್ದರಿಂದ ಪಿಡಿಓ ಮೇಲೆ ಹಲ್ಲೆ ನಡೆಸಿದ ಗ್ರಾಪಂ ಅಧ್ಯಕ್ಷೆ, ಪುತ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗ್ರಾಪಂ ಅಧ್ಯಕ್ಷೆ, ಸದಸ್ಯತ್ವದಿಂದ ಜಯಮ್ಮನವರನ್ನು ವಜಾಗೊಳಿಸುವಂತೆ ಅವರು ಒತ್ತಾಯಿಸಿದರು.
ಧರಣಿಯಲ್ಲಿ ಸಂಘದ ಮುಖಂಡರಾದ ವಿವೇಕಾನಂದ, ಸಿದ್ದಪ್ಪ, ಶಾಂತಮ್ಮ, ಇಶ್ರತ್, ಅಶ್ವಿನಿ, ಸುಮಲತಾ, ವಿದ್ಯಾವತಿ, ಲಾವಣ್ಯ, ಹಬೀದಾ, ರಂಗಸ್ವಾಮಿ, ಜಗಳೂರು ಶಿವಕುಮಾರ, ವಾಸು ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
