ದಾವಣಗೆರೆ:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಅವರಿಗೆ ಜಿಲ್ಲಾ ಛಲವಾದಿ ಮಹಾಸಭಾ ಬೆಂಬಲ ಸೂಚಿಸಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್.ರಾಮಯ್ಯ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೆಲ ಸಚಿವರು ಸಂವಿಧಾನ ಬದಲಿಸಲೆಂದೇ ನಾವು ಅಧಿಕಾರಕ್ಕೆ ಬಂದಿರುವುದಾಗಿ ಹೇಳಿದ್ದರೆ, ಇನ್ನೂ ಕೆಲ ಅಭ್ಯರ್ಥಿಗಳು ಅಂಬೇಡ್ಕರ್ ಪ್ರತಿಮೆಯನ್ನು ಪುಡಿ, ಪುಡಿ ಮಾಡಬೇಕೆಂದು ಹೇಳಿದ್ದಾರೆ. ತನ್ನ ಗುಪ್ತ ಅಜೆಂಡಾವನ್ನು ಸಾರ್ವಜನಿಕವಾಗಿ ಹೇಳುತ್ತಿರುವವರನ್ನು ಬಿಜೆಪಿ ಬೃಹತ್ ಶಕ್ತಿಯಾಗಿ ಬೆಳೆಸಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಸಂವಿಧಾವನ್ನು ಬದಲಿಸುವ ಎಲ್ಲಾ ಅಪಾಯಗಳಿವೆ. ಬಿಜೆಪಿ ಹಾಗೂ ಆರ್‍ಎಸ್‍ಎಸ್ ಎಂದೂ ಸಹ ದಲಿತರನ್ನು ಸ್ವಾಭಿಮಾನದಿಂದ ನಡೆಸಿಲ್ಲ. ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದಲೂ ಸಂಸದರಾಗಿರುವ ಜಿ.ಎಂ.ಸಿದ್ದೇಶ್ವರ್ ಸಮಾಜದ ಬಾಂಧವರಿಗೆ, ಅಹಿಂದ ವರ್ಗದವರಿಗೆ, ಪರಿಶಿಷ್ಠ ವರ್ಗದವರಿಗೆ ಯಾವುದೇ ರೀತಿಯ ಸ್ಥಾನಮಾನ ನೀಡಿಲ್ಲ ಎಂದು ಆರೋಪಿಸಿದರು.
ಛಲವಾದಿ ಸಮಾಜ ಬಾಂಧವರು ಬಿಜೆಪಿಯ ಹಣದ ಆಸೆಗೆ ಒಳಗಾಗದೆ, ದಲಿತ ವಿರೋಧಿ ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತ, ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ಹಾಲೇಶ್ ಬಸವನಾಳ್, ಚಂದ್ರಪ್ಪ, ಗಿರೀಶ್, ನಾಗರಾಜ್, ಹೆಚ್.ನವೀನ್, ಐಗೂರು ಹನುಮಂತಪ್ಪ, ಗುರುದೇವಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
