ದಾವಣಗೆರೆ:
ಮಹಿಳಾ ಶಿಕ್ಷಣಕ್ಕೆ ಆದ್ಯತೆ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದರೂ, ಉನ್ನತ ಶಿಕ್ಷಣಕ್ಕೆ ಬರುವ ಮಹಿಳೆಯರ ಸಂಖ್ಯೆ ಕಡಿಮೆ ಇದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವೆ (ಆಡಳಿತಾಂಗ) ಡಾ.ಬಿ.ಕೆ. ತುಳಸಿಮಾಲಾ ವಿಷಾದ ವ್ಯಕ್ತಪಡಿಸಿದರು.
ನಗರದ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಿಂದ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ರ್ಯಾಂಕ್ ವಿಜೇತರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಭಿವೃದ್ಧಿಯಲ್ಲಿ ಶಿಕ್ಷಣವು ಅತೀ ದೊಡ್ಡ ಪಾತ್ರ ನಿರ್ವಹಿಸಲಿದೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ ಆಗಿದೆ. ಆದರೆ, ಉನ್ನತ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಸಂಶೋಧನೆಯಲ್ಲೂ ಮಹಿಳೆಯ ಕೊರತೆ ಎದ್ದು ಕಾಣುತ್ತಿದೆ. ವಿದ್ಯಾರ್ಥಿನಿಯರು ಸಂಶೋಧನಾ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.
ಮಹಿಳೆಯರು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯವಾಗಿದೆ. ಶಿಕ್ಷಣ ಪಡೆದ ನಂತರ ಮಹಿಳೆಯರು ಕಲಿತ ಕೌಶಲ್ಯವನ್ನು ವ್ಯರ್ಥ ಮಾಡದೇ, ಸಮಾಜದ ಅಭಿವೃದ್ಧಿಗೆ ಬಳಸಬೇಕು. ಹೆಣ್ಣು ಮಕ್ಕಳಲ್ಲಿ ಅಗಾಧವಾದ ಜ್ಞಾನ, ಸಾಮಥ್ರ್ಯವಿದ್ದರೂ ಅವುಗಳನ್ನು ಸಮರ್ಥವಾಗಿ ಬಳಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೂಲ ಕೌಶಲದ ಜತೆಗೆ ಪೂರಕ ಕೌಶಲಗಳನ್ನು ಕಲಿಯಬೇಕಾಗಿದೆ. ಪದವಿ ಪಡೆಯುವುದೇ ಮುಖ್ಯವಲ್ಲ, ಕಲಿತ ವಿಷಯದಲ್ಲಿ ಶ್ರೇಷ್ಠತೆ ಹೊಂದಬೇಕು. ಉದ್ಯೋಗವಕಾಶಗಳು ಸಾಕಷ್ಟಿವೆ, ನಮ್ಮಲ್ಲಿ ಉದ್ಯೋಗಾರ್ಹತೆ ಇದ್ದರೆ ಕೆಲಸ ಸಿಗುತ್ತದೆ ಎಂದರು.
ದಾವಣಗೆರೆ ವಿವಿ ಕುಲಸಚಿವ (ಪರೀಕ್ಷಾಂಗ) ಡಾ.ಬಸವರಾಜ್ ಬಣಕಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧಿಸುವ ಛಲವಿರಬೇಕು. ಇಟ್ಟ ಗುರಿಯನ್ನು ತಲುಪಲು ಸತತ ಪರಿಶಮ ನಡೆಸಬೇಕು. ಸಾಧಕರ ಜೀವನವನ್ನು ಮಾದರಿಯನ್ನಾಗಿ ಮೈಗೂಡಿಸಿಕೊಂಡು ಸಾಧನೆಗೆ ಮುಂದಾಗಬೇಕು. ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಆಲೋಚನಾ ಶಕ್ತಿಯನ್ನು ಸಹ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾಲೇಜು ಅಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವುದರ ಜೊತೆಗೆ ಸಂಸ್ಕಾರವನ್ನು ಸಹ ಕಲಿಯಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ರ್ಯಾಂಕ್ ವಿಜೇತರಾದ ಹೆಚ್.ಗೋಪಿ, ಎ.ಎಸ್.ರೇಷ್ಮಾ, ಪೂಜಾ ಜಿ, ಮಧು.ಪಿ, ಸಿದ್ದಮ್ಮ.ಕೆ, ಶ್ರಾವಂತಿ ಪಿ.ವಿ, ಕಾವ್ಯಾ ಎಸ್.ಆರ್, ಅಕ್ಷತಾ ಆರ್.ಜಿ, ಅರ್ಪಿತಾ, ಸಹನಾ, ದಿವ್ಯಾ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಕ್ರೀಡಾಕೂಟದಲ್ಲಿ ವಿಜೇತರಾಗಿದ್ದ ಧರಣಿ, ತೇಜಸ್ವಿನಿ, ಪವನಕುಮಾರ್, ಮಾನಸ, ಲಕ್ಷ್ಮೀದೇವಿ ಸಿಂಧು, ಹೀನಾ ಅವರುಗಳಿಗೆ ಬಹುಮಾನ ವಿತರಿಸಲಾಯಿತು.ಎಸ್.ಬಿ.ಸಿ. ಕಾಲೇಜು ಪ್ರಾಂಶುಪಾಲ ಡಾ.ಕೆ. ಷಣ್ಮುಖ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿನಾಯಕ ಎಜುಕೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಎಂ.ಎಚ್. ನಿಜಾನಂದ, ಪ್ರಾಂಶುಪಾಲರಾದ ಬೇತೂರುಮಠ, ರಾಜಶೇಖರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
