ಚಳ್ಳಕೆರೆ
ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸಿದ ನಾವೆಲ್ಲರೂ ದೇವರನ್ನು ಒಲಿಸಿಕೊಳ್ಳಲು ಹಲವಾರು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಂಡು ಬಂದಿದ್ದೇವೆ. ಅದರಲ್ಲಿ ವಿಶೇಷವಾಗಿ ಆದಿಶಕ್ತಿಯ ರೂಪವಾದ ಎಲ್ಲಾ ದೇವತೆಗಳನ್ನು ಮಹಿಳೆಯರು ಭಕ್ತಿ ಶ್ರದ್ದೆಯಿಂದ ಪೂಜಿಸುವರು. ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಏಳಿಗೆಯ ಪ್ರತಿರೂಪವೆಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಿ.ಗಣೇಶ್ ತಿಳಿಸಿದರು.
ಅವರು, ಶುಕ್ರವಾರ ತಳಕು ಹೋಬಳಿಯ ದೊಡ್ಡ ಉಳ್ಳಾರ್ತಿ ಗ್ರಾಮದ ಗೌರಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಮಹಿಳಾ ಜ್ಞಾನ ವಿಕಾಸ, ಪ್ರಗತಿ ಬಂಧು ಸ್ವಸಹಾಯಕ ಸಂಘಗಳ ಒಕ್ಕೂಟ, ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹಲವಾರು ದಶಕಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜನಪರ ಕಾರ್ಯಕ್ರಮಗಳಿಗೆ ಉತ್ತಮ ಶ್ರೇಯಸ್ಸು ನಿರಂತರವಾಗಿ ದೊರಕುತ್ತಿರುವುದು ಇಂತಹ ಪುಣ್ಯ ಕಾರ್ಯಗಳಿಂದ. ಪ್ರತಿಯೊಬ್ಬರೂ ಸಹ ತಮ್ಮದೇಯಾದ ದೇವರನ್ನು ಭಕ್ತಿಯಿಂದ ಪೂಜಿಸುವ ಮೂಲಕ ಜೀವನದ ಸಂಕಷ್ಟಗಳನ್ನು ಎದುರಿಸಬೇಕೆಂದು ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಚನ್ನಪ್ಪಗೌಡ, ಕಳೆದ ಹಲವಾರು ವರ್ಷಗಳಿಂದ ನಮ್ಮ ಯೋಜನೆ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಗೂ ದೇವಸ್ಥಾನಗಳ ಜೀಣೋದ್ದಾರವನ್ನು ಕೈಗೊಳ್ಳಲಾಗುತ್ತಿದೆ. ಭಕ್ತರಲ್ಲಿ ಅಡಗಿರುವ ಗಾಡವಾದ ಭಕ್ತಿ ಶ್ರದ್ದೆಗಳನ್ನು ಸಂರಕ್ಷಿಸಲು ಇಂತಹ ಕಾರ್ಯಕ್ರಮಗಳು ಪ್ರೇರಕವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಗೋವಿಂದರಾಜು ಮಾತನಾಡಿ, ನಮ್ಮ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಮಹಿಳೆಯರೂ ವರಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸುವ ಅವಕಾಶವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ನೀಡಿದೆ. ಇಂತಹ ಕಾರ್ಯಕ್ರಮಗಳು ಪ್ರತಿಯೊಬ್ಬರಿಗೂ ಹೊಸ ಶಕ್ತಿ ಹಾಗೂ ಚೈತನ್ಯವನ್ನು ನೀಡುತ್ತವೆ. ದೇವರ ಪೂಜೆ ಮತ್ತು ದೈವದ ವಿಚಾರಗಳಿಗೆ ಎಂದಿಗೂ ಯಾವುದೇ ರೀತಿಯ ಚ್ಯುತಿ ಉಂಟಾಗಿಲ್ಲ. ಇಂತಹ ಕಾರ್ಯಕ್ರಮಗಳಿಂದಾದರೂ ವರುಣ ಕೃಪೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪೂಜಾ ಸಮಿತಿ ಅಧ್ಯಕ್ಷೆ ಟಿ.ಎಸ್.ಟಿ.ಪುಟ್ಟಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಗಾಯಿತ್ರಮ್ಮ, ಎಂ.ಟಿ.ಹನುಮಂತರೆಡ್ಡಿ, ಸುಭ್ರಮಣ್ಯಶೆಟ್ಟಿ, ಲಕ್ಷ್ಮಿದೇವಿ, ಸೇವಾ ಪ್ರತಿನಿಧಿ ಮೈಲನಹಳ್ಳಿ ನಾಗರಾಜು, ಲೋಕೇಶ್, ಶಾರದಮ್ಮ, ವರಲಕ್ಷ್ಮಿ, ಭೀಮಕ್ಕ, ಮಂಜಮ್ಮ, ಮಾರಣ್ಣ ಮುಂತಾದವರು ಉಪಸ್ಥಿತರಿದ್ದರು.








