ದಾವಣಗೆರೆ:
ಹಲವು ಬಾರಿ ಸೂಚನೆ ನೀಡಿದರೂ, ಗಾಜಿನ ಮನೆಯ ಕಾಮಾರಿ ಪೂರ್ಣ ಗೊಳಿಸದ ತೋಟಗಾರಿಕೆ ಇಲಾಖೆ ಹಾಗೂ ಭೂಸೇನಾ ನಿಗಮದ ಅಧಿಕಾರಿಗಳನ್ನು ಶುಕ್ರವಾರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ತೀವ್ರವಾಗಿ ತರಾಟೆಗೆ ತಗೆದುಕೊಂಡರು.
ನಗರದ ಹೊರವಲಯದಲ್ಲಿರುವ ಕುಂದುವಾಡ ಕೆರೆಯ ಗಾಜಿನ ಮನೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ರವೀಂದ್ರನಾಥ್ ಇನ್ನೂ ಕಾಮಗಾರಿ ಪೂರ್ಣಗೊಳ್ಳದಿರುವುದನ್ನು ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡು, ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಎಸ್.ಎ.ರವೀಂದ್ರನಾಥ್, ಹಿಂದೆ ಗಾಜಿನ ಮನೆಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗನೇ ಪೂರ್ಣಗೊಳಿಸಿ ಕಳೆದ ಆಗಸ್ಟ್ 15ರಂದೇ ಗಾಜಿನ ಮನೆ ಲೋಕಾರ್ಪಣೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಮತ್ತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವ ಮೂಲಕ ಕಾಮಗಾರಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿ, ಅಭಿವೃದ್ಧಿ ಕಾಮಗಾರಿಯೇ ನಡೆಯದಂತಾಗಿದೆ. ನಮ್ಮ ಸರ್ಕಾರ ಇದ್ದಿದ್ದರೆ ಇಷ್ಟೊತ್ತಿಗೆ ಅನುದಾನ ತಂದು, ಕಾಮಗಾರಿ ಮುಗಿಸಿರುತ್ತಿದ್ದೇವು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇಲ್ಲಿ ಸುಮಾರು 24 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣಗೊಂಡಿದ್ದು, ಇದರ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿ, ರಸ್ತೆ, ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವ 5 ಕೋಟಿ ರೂ. ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರೂ ತೋಟಗಾರಿಕೆ ಇಲಾಖೆಯ ಉನ್ನತಾಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಬೆಂಗಳೂರಿನಲ್ಲೇ ಕೂತು ಕಾಲಹರಣ ಮಾಡದೆ, ತಕ್ಷಣವೇ ತೋಟಗಾರಿಕೆ ಇಲಾಖೆ ನಿರ್ದೇಶಕರೇ ಇಲ್ಲಿಗೆ ಬಂದು, ಕಮಾಗಾರಿ ಪರಿಶೀಲಿಸಿ, ಆದಷ್ಟು ಬೇಗನೆ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಕುಂದುವಾಡ ಕೆರೆಯ ಭಾಗದಲ್ಲಿ ಗಾಜಿನ ಮನೆ ಬಳಿ ನಿರ್ಮಿಸಲು ಉದ್ದೇಶಿರುವ ಓಪನ್ ಜಿಮ್‍ನ ಸಾಮಗ್ರಿಗಳನ್ನು ತಂದಿಟ್ಟಿದ್ದರೂ ಅಲ್ಲಿ ನೆಲಕ್ಕೆ ಬೆಡ್ ಹಾಕಿದ್ದನ್ನು ಬಿಟ್ಟರೆ ಯಾವುದೇ ಕೆಲಸವಾಗಿಲ್ಲ. ಸರ್ಕಾರದಿಂದ ಅಗತ್ಯವಾಗಿ ಬೇಕಾಗಿರುವ ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿಕೊಡುತ್ತೇವೆ. ಅದಕ್ಕೆ ತಕ್ಕಂತೆ ತ್ವರಿತ ಕೆಲಸವೂ ಆಗಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ, ಭೂಸೇನಾ ನಿಗಮದ ಲೋಕನಿರಂಜನ, ಡೂಡಾ ಮಾಜಿ ಅಧ್ಯಕ್ಷ ಮೆಳ್ಳೆಕಟ್ಟೆ ಮಲ್ಲಿಕಾರ್ಜುನಪ್ಪ, ಬಿಜೆಪಿ ಮುಖಂಡರುಗಳಾದ ಶಿವರಾಜ ಪಾಟೀಲ್, ಬಿ.ಜಿ.ಸಿದ್ದೇಶ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ