ಪೆಟ್ರೋಲ್, ಡೀಸಲ್ ಆಯ್ತು ಈಗ ವಿದ್ಯುತ್ ದರ ಏರಿಕೆಯ ಪ್ರಸ್ತಾಪ : ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬಿಜೆಪಿ ಬಿಸ್ನೆಸ್ ಕ್ಲಾಸಿನ ಕಾಮಧೇನು

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದೆ. ಈಗ ಬೆಲೆ ಏರಿಸಿ, ಇನ್ನೇನು ಚುನಾವಣೆ ದಿನಾಂಕ ಹತ್ತಿರದಲ್ಲಿದೆ ಎನ್ನುವಾಗ ದರ ಇಳಿಸುವ ಸ್ಟಂಟ್ ಇದರ ಹಿಂದೆ ಇದೆ. ವೆಚ್ಚ ಹೊಂದಾಣಿಕೆಯ ಹೊಸ ಐಡಿಯಾ ಅಂದರೆ ಇದೇನಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ವಿದ್ಯುತ್ ಉತ್ಪಾದನೆಯೂ ಚೆನ್ನಾಗಿದೆ. ಹೆಚ್ಚುವರಿ ವಿದ್ಯುತ್ ಇದೆ ಎಂದು ಸರ್ಕಾರವೇ ಹೇಳುತ್ತಿದೆ. ಹೀಗಿದ್ದರೂ ದರ ಏರಿಕೆ!! ಇದರ ಹಿಂದಿನ ಹುನ್ನಾರ ಏನು? ಎಂದು ಪ್ರಶ್ನಿಸಿದ್ದಾರೆ.

ಮಾಸಿಕ 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚು ಬೆಲೆ ತೆರಬೇಕು. ಅಂದರೆ; ಬಡವರು ಮತ್ತು ಮಧ್ಯಮ ವರ್ಗದ ಜನರು ವಿದ್ಯುತ್ ಬಳಸದೇ ಕತ್ತಲಲ್ಲಿ ಕೊಳೆಯಬೇಕೆ? ಗತಿಶಕ್ತಿ ಯೋಜನೆ ಮೂಲಕ ದೇಶಕ್ಕೆ ಹೊಸ ಗತಿ ಕಾಣಿಸುವುದು ಎಂದರೆ ಇದೇನಾ? ಎಂದು ನೇರವಾಗಿ ಪ್ರಶ್ನೆ ಕೇಳಿದ್ದಾರೆ.

ಇಂಧನ ಇಲಾಖೆಯ ಅಸಮರ್ಪಕ ನಿರ್ವಹಣೆ ಹಾಗೂ ವಿದ್ಯುತ್ ಸೋರಿಕೆಯನ್ನು ತಡೆಯಲಾಗದ ಅಧ್ಯಕ್ಷತೆ ಬಗ್ಗೆ ಜನಕ್ಕೆ ಗೊತ್ತಿದೆ. ಆ ಹೊರೆಯನ್ನು ಜನರ ಮೇಲೆ ಹೇರುತ್ತಿದ್ದಿರಾ. ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಲೂಟಿಗೆ ತುತ್ತಾಗಿರುವ ಜನರನ್ನು ಮತ್ತಷ್ಟು ಸುಲಿಗೆ ಮಾಡುವ ಪ್ರಯತ್ನ ಇದಾಗಿದೆ ಎಂದು ಹೆಚ್ ಡಿಕೆ ಟೀಕಿಸಿದ್ದಾರೆ.

ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ. ಬಲಿಷ್ಟರು, ಬಲ್ಲಿದರ ಆಡಂಬೋಲ. ಬಿಸ್ನೆಸ್ ಕ್ಲಾಸಿನ ಕಾಮಧೇನು. ಬಡವರು & ಮಧ್ಯಮ ವರ್ಗದ ಜನರ ಪಾಲಿಗೆ ರಕ್ತಪಿಪಾಸುವ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇದೆ. ಈಗ ಬೆಲೆ ಏರಿಸಿ, ಇನ್ನೇನು ಚುನಾವಣೆ ದಿನಾಂಕ ಹತ್ತಿರದಲ್ಲಿದೆ ಎನ್ನುವಾಗ ದರ ಇಳಿಸುವ ಸ್ಟಂಟ್ ಇದರ ಹಿಂದೆ ಇದೆ. ವೆಚ್ಚ ಹೊಂದಾಣಿಕೆಯ ಹೊಸ ಐಡಿಯಾ ಅಂದರೆ ಇದೇನಾ? ಎಂದು ಸರ್ಕಾರವನ್ನು ಕುಟುಕಿದ್ದಾರೆ.

ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು. ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ, ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಕೆ ಮಾಡುವ ನೈತಿಕ ಹಕ್ಕಿಲ್ಲ. ಒಂದು ವೇಳೆ ಏರಿಕೆ ಮಾಡಿದರೆ ಜನರನ್ನು ಒಗ್ಗೂಡಿಸಿ ಜನಾಂದೋಲನ ಇಳಿಯಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap