ಹಾವೇರಿ
ಸಮಾಜದ ಶಾಂತಿ, ಸುರಕ್ಷತೆಗೆ ಪ್ರಜಾಪ್ರಭುತ್ವದ ವ್ಯವಸ್ಥೆಯ ಸುಗಮ ನಿರ್ವಹಣೆಗೆ ತಮ್ಮ ಜೀವವನ್ನೇ ತ್ಯಾಗಮಾಡಿದ ಪೊಲೀಸ್‍ರ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹೇಳಿದರು.ಕೆರೆಮತ್ತಿಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೊಲೀಸರ ಕರ್ತವ್ಯ ನಿರ್ವಹಣೆ ಅತ್ಯಂತ ಸವಾಲಿನ ಕೆಲಸವಾಗಿದೆ. ಹಗಲು-ರಾತ್ರಿ ಎನ್ನದೆ ಊಟ-ನಿದ್ರೆ ಲೆಕ್ಕಿಸದೇ ನಾಗರಿಕರ ಬದುಕಿನ ನೆಮ್ಮದಿಗಾಗಿ ಶ್ರಮಿಸುತ್ತಾರೆ. ತಂದೆ-ತಾಯಿ, ಕುಟುಂಬವನ್ನು ಬಿಟ್ಟು ತಿಂಗಳು ಗಟ್ಟಲೆ ಕರ್ತವ್ಯ ನಿರ್ವಹಣೆಗಾಗಿ ಮನೆಯಿಂದ ಹೊರಗೆ ಕಾಲ ಕಳೆಯುತ್ತಿದ್ದಾರೆ. ಅಪರಾಧ ತಡೆ, ಕಾನೂನು ಮತ್ತು ಸುವ್ಯವಸ್ಥೆ, ಶಿಸ್ತು ಪಾಲನೆ, ಸಂಚಾರಿ ಸುರಕ್ಷತೆಯಂತೆ ಜವಾಬ್ದಾರಿಯುತ ಕರ್ತವ್ಯದಲ್ಲಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗಮಾಡಿರುತ್ತಾರೆ. ಇಂತಹ ತ್ಯಾಗ ಜೀವಿಗಳ ಆತ್ಮಕ್ಕೆ ನಮ್ಮ ದೇಶದಲ್ಲಿ ಗೌರವ ಸಲ್ಲಿಸುವ ಅತ್ಯುನ್ನುತ ಅವಕಾಶವಾಗಿ ಹುತಾತ್ಮ ಪೊಲೀಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ನಾಗರಿಕರ ನೆಮ್ಮದಿಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡು ಹುತಾತ್ಮ ಪೊಲೀಸ್‍ರ ಕರ್ತವ್ಯನಿಷ್ಠೆ ಶ್ರೇಷ್ಟವಾದದ್ದು. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 12 ಹಾಗೂ ದೇಶದಲ್ಲಿ 192 ಜನ ಹುತಾತ್ಮರಾಗಿದ್ದಾರೆ. ಇವರಿಗೆ ಶ್ರದ್ಧಾಪೂರ್ವಕವಾಗಿ ನಮಿಸೋಣ ಎಂದು ಹೇಳಿದರು.
ದೇಶದ ಪೊಲೀಸ್ ವ್ಯವಸ್ಥೆಯ ಸುಧಾರಣೆಗೆ ಹಾಗೂ ಪೊಲೀಸರ ಕಲ್ಯಾಣ ಕಾರ್ಯಕ್ರಮಕ್ಕೆ ಹಲವು ಸಮಿತಿಗಳನ್ನು ರಚಿಸಲಾಗಿದೆ. ಪೊಲೀಸರ ಕಲ್ಯಾಣಕ್ಕಾಗಿ ಹಲವು ಸುಧಾರಣಾ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ. ಪೊಲೀಸರು ಒತ್ತಡ ಹಾಗೂ ಭಯ ರಹಿತವಾಗಿ ಹೆಚ್ಚು ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಜಿ.ದೇವರಾಜು ಅವರು, ಕೇಂದ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿ.ಎಸ್.ಪಿ. ಕರಣಸಿಂಗ್ ಅವರು 1959 ಅಕ್ಟೋಬರ್ 21 ರಂದು ಲಡಾಕ್ ಗಡಿ ಪ್ರಾಂತ್ಯದಲ್ಲಿ ಚೀನಿ ಸೈನಿಕರ ವಿರುದ್ಧ ಸೈನಿಕರೊಂದಿಗೆ ಹೋರಾಡಿ ಮಡಿದು ರಾಷ್ಟ್ರದ ರಕ್ಷಣೆ ಮಾಡಿ ಕರ್ತವ್ಯ ನಿಷ್ಠೆ ತೋರಿದ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.
1-9-2018 ರಿಂದ 30-8-2019ರವರೆಗೆ ದೇಶದಲ್ಲಿ ಕರ್ತವ್ಯದಲ್ಲಿ ತೊಡಗಿದಾಗ 292 ಜನ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ತಡಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸಪೆಕ್ಟರ್ ರಾಚಪ್ಪ ಚಾಕಲಬ್ಬಿ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ 12 ಜನ ಪೊಲೀಸರು ಹುತಾತ್ಮರಾಗಿದ್ದಾರೆ. ಎಲ್ಲರಿಗೂ ಗೌರವ ಪೂರ್ವ ನಮನಗಳನ್ನು ಸಲ್ಲಿಸೋಣ ಎಂದು ತಿಳಿಸಿ ಹುತಾತ್ಮರಾದ ಪೊಲೀಸ್‍ರ ಹೆಸರುಗಳನ್ನು ಕಾರ್ಯಕ್ರಮದಲ್ಲಿ ವಾಚಿಸಿದರು.
ಇದಕ್ಕೂ ಮುನ್ನ ಪೊಲೀಸ್ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಜಿಲ್ಲಾ ಅಬಕಾರಿ ಅಧೀಕ್ಷಕ ನಾಗಶಯನ, ವಿವಿಧ ಪೊಲೀಸ್ ಉಪಾಧೀಕ್ಷಕರು, ವೃತ್ತ ನಿರೀಕ್ಷಕರು, ಸಮಾಜದ ಗಣ್ಯರು, ಮಾಧ್ಯಮದವರು ಪೊಲೀಸ್ ಸ್ಮಾರಕಕ್ಕೆ ಪುಷ್ಪ ಗುಚ್ಛ ಇರಿಸಿ ಗೌರವ ನಮನ ಸಲ್ಲಿಸಿದರು.ಹುತಾತ್ಮ ಪೊಲೀಸ್‍ರ ಗೌರವಾರ್ಥ ರಾಷ್ಟ್ರಗೀತೆ ನುಡಿಸುವುದರೊಂದಿಗೆ ಮೂರು ಸುತ್ತು ಕುಶಾಲತೋಪುಗಳನ್ನು ಹಾರಿಸಲಾಯಿತು. ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ನಮನ ಸಲ್ಲಿಸಲಾಯಿತು. ಪೊಲೀಸ್ ಶೋಕ ಗೀತೆಯನ್ನು ವಾದ್ಯ ತಂಡಗಳು ನುಡಿಸಿ ಹುತಾತ್ಮರಾದ ಪೊಲೀಸ್‍ರಿಗೆ ಶ್ರದ್ಧಾಪೂರ್ವಕವಾದ ಗೌರವ ಸಲ್ಲಿಸಲಾಯಿತು.