ಹಾವೇರಿ:
ಭೂಮಿಯ ಪ್ರತಿ ಜೀವ ಸಂಕುಗಳಿಗೂ ನೀರು ಅತ್ಯಮೂಲ್ಯ. ಈ ನೀರನ್ನು ಮಿತವಾಗಿ ಬಳಸಿ ಭವಿಷ್ಯದ ಪೀಳಿಗೆಗೆ ಉಳಿಸಿ ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಾಯ್.ಎಲ್.ಲಾಡಖಾನ್ ಅವರು ಹೇಳಿದರು.
ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಜಿಲ್ಲಾ ಆಡಳಿತ , ಪೊಲೀಸ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಇವರ ಸಂಯುಕ್ತಾಶ್ರದಲ್ಲಿ ಶುಕ್ರವಾರ ಹಾವೇರಿ ತಾಲೂಕಿನ ದೇವಿ ಹೊಸೂರಿನಲ್ಲಿ ಜರುಗಿದ ವಿಶ್ವಜಲ ದಿನಾಚರಣೆ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನಿಶ್ಚಿತ ಮಳೆಯಿಂದಾಗಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಅಧಿಕವಾಗುತ್ತಿದೆ. ಹಾಗಾಗಿ ನೀರನ್ನು ಮಿತವಾಗಿ ಬಳಸಿ ಮುಂದಿನ ಪಿಳಿಗೆಗೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಿಂದಿನ ಕಾಲದಲ್ಲಿ ಹಿರಿಯರು ಕಾಲು ದಾರಿಯಲ್ಲಿ ನಡೆದು ನದಿಗಳಿಂದ ನೀರು ತರುತಿದ್ದರು.
ನೀರಿನ ಮಹತ್ವ ಅರಿತು ಮಿತವಾಗಿ ಬಳಸುತ್ತಿದ್ದರು. ಆದರೆ ಇಂದಿನ ಕಾಲಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಕೊಳವೆಬಾವಿ ಹಾಗೂ ಯಂತ್ರಗಳ ಬಳಕೆಯಿಂದ ಸುಲಬವಾಗಿ ಮನೆಯೊಳಗೆ 24ಗಂಟೆಗಳ ನಿರಂತರ ನೀರು ಒದಗಿಸುವ ಸೌಲಭ್ಯ ಕಲ್ಪಿಸಲಾಗಿದೆ. ಈ ಕಾರಣದಿಂದ ನೀರಿನ ಮಹತ್ವವನ್ನು ಅರಿಯದೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಬದುಕುವ ನಾವೆಲ್ಲರೂ ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು. ಬೇರೆವರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬಾರದು. ಕಾನೂನ ಮತ್ತು ಸಮಯವನ್ನು ಗೌರವಿಸಬೇಕೆಂದು ಹೇಳಿದರು.ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಪಿ.ಐ.ಬಾಸು ಚವ್ಹಾಣ ಮಾತನಾಡಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆಯು ಸದಾ ನಿಮ್ಮೂಂದಿಗೆ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾವೇರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ವಿನಾಯಕ ಹುಲ್ಲೂರು, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ ಅವರು ಉಪಸ್ಥಿತರಿದ್ದರು ಪ್ಯಾನಲ್ ವಕೀಲರಾದ ಜಿ.ಕೆ.ಕುಮಾರ ಅವರು ಮೂಲಭೂತ ಕಾನೂನು ಕುರಿತು ಹಾಗೂ ದೇವಗಿರಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಬಸಪ್ಪ ಮೇಟಿ ಅವರು ನೀರಿನ ಸದ್ಬಳಿಕೆ ಕುರಿತು ಉಪನ್ಯಾಸ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ