ಪ್ರಧಾನಿಯವರ ಮಲತಾಯಿ ಧೋರಣೆಗೆ ಖಂಡನೆ

ತುರುವೇಕೆರೆ

             ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರವಾಹ ಪೀಡಿತ ಪ್ರದೇಶವಾಗಿದ್ದ ಕೇರಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ನೂರಾರು ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ರಾಜ್ಯದ ಕೊಡಗು ಮತ್ತಿತರ ಪ್ರದೇಶಗಳಲ್ಲಿ ತಲೆದೋರಿರುವ ಪ್ರವಾಹ ಭೀತಿಯನ್ನು ನೋಡಲು ಮುಂದಾಗದಿರುವುದು ಹಾಗೂ ಪರಿಹಾರ ಧನ ನೀಡದಿರುವುದು ಅವರ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಖಂಡಿಸಿದ್ದಾರೆ.

             ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇರಳಕ್ಕೆ ಭೇಟಿ ನೀಡಿದ್ದ ಮೋದಿಯವರು ರಾಜ್ಯದ ಪರಿಸ್ಥಿತಿಯನ್ನೂ ಸಹ ಅಧ್ಯಯನ ಮಾಡಬಹುದಾಗಿತ್ತು. ಅತಿವೃಷ್ಠಿಯಿಂದ ಸಾವಿರಾರು ಕೋಟಿ ನಷ್ಟವಾಗಿದ್ದರೂ ಸಹಾ ಮೋದಿಯವರು ಇದುವರೆಗೂ ರಾಜ್ಯಕ್ಕೆ ಪರಿಹಾರ ನೀಡುವ ಮನಸ್ಸು ಮಾಡದಿರುವುದು ದುರಂತವೇ ಸರಿ. ರಾಜ್ಯದಲ್ಲಿ 17 ಮಂದಿ ಬಿಜೆಪಿ ಲೋಕಸಭಾ ಸದಸ್ಯರಿದ್ದರೂ ಸಹಾ ಅವರ್ಯಾರೂ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ಮನನ ಮಾಡಿಕೊಡಲು ಮುಂದಾಗಿಲ್ಲ. ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಸರಿಯಾದ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದರು.

              ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಅಗತ್ಯ ಕ್ರಮಕೈಗೊಂಡಿದ್ದಾರೆ. ಆದರೂ ಸಹ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಆಕ್ಷೇಪಿಸುತ್ತಿರುವುದು ಅವರ ಘನತೆಗೆ ತಕ್ಕದಲ್ಲ. ಅವರಿಬ್ಬರೂ ಸಹ ಕೊಡಗಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಅದನ್ನು ಸಹಾ ನಾವುಗಳು ಕಾಟಾಚಾರವೆನ್ನಬಹುದೇ? ಎಂದು ಎಂ.ಟಿ.ಕೃಷ್ಣಪ್ಪ ವ್ಯಂಗ್ಯವಾಡಿದರು.

                 ಪುನರುತ್ಥಾನ – ಕೊಡಗು ಸಂಪೂರ್ಣವಾಗಿ ನಾಶವಾಗಿದೆ. ಕೇಂದ್ರ ಸರ್ಕಾರ ಈ ಕೂಡಲೇ ದೇಶದ ಗಡಿ ಕಾಯುತ್ತಿರುವ ಯೋಧರು ಹಾಗೂ ದೇಶಭಕ್ತರ ನಾಡನ್ನು ಪುನರುತ್ಥಾನ ಮಾಡಲು ಮುಂದಾಗಬೇಕು. ಕೂಡಲೇ ಪ್ರಧಾನ ಮಂತ್ರಿಗಳು ಕೊಡಗಿಗೆ ಭೇಟಿ ನೀಡಿ ಕೊಡಗಿನ ಜನರಿಗೆ ಶಾಶ್ವತ ಪರಿಹಾರವನ್ನು ದೊರಕಿಸಿಕೊಡಬೇಕು ಎಂದು ಕೃಷ್ಣಪ್ಪ ಆಗ್ರಹಿಸಿದರು.

                  ಪ್ರಧಾನಿ ಭೇಟಿ ಮಾಡಲು ಆಗ್ರಹ – ರಾಜ್ಯದ ಎಲ್ಲಾ ಸಂಸದರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಕೂಡಲೇ ರಾಜ್ಯದಲ್ಲಿ ಆಗಿರುವ ಅತಿವೃಷ್ಠಿಯ ಅನಾಹುತಗಳನ್ನು ವಿವರಿಸಿ ಕೇಂದ್ರದ ನೆರವು ಪಡೆಯಲು ಮುಂದಾಗಬೇಕು ಎಂದರು. ಮುಖ್ಯಮಂತ್ರಿಗಳನ್ನು ಟೀಕಿಸುವ ಶೋಭಾ ಕರಂದ್ಲಾಜೆಯವರು ತಮ್ಮ ಕ್ಷೇತ್ರದಲ್ಲಿ ಆಗಿರುವ ಅನಾಹುತಗಳ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಒಮ್ಮೆ ಅವಲೋಕನ ಮಾಡಿಕೊಳ್ಳಲಿ ಎಂದರು.

                  15 ಲಕ್ಷ ಪರಿಹಾರ – ಸ್ಥಳೀಯ ಎಪಿಎಂಸಿ ಯಲ್ಲಿ ಜೆಡಿಎಸ್ ಬೆಂಬಲಿಗ ಸದಸ್ಯರು ಅಧಿಕಾರದಲ್ಲಿದ್ದಾರೆ. ಸಮಿತಿಯಲ್ಲಿ ಸುಮಾರು ಒಂದೂವರೆ ಕೋಟಿಯಷ್ಟು ಸೆಸ್ ಹಣ ಸಹ ಖಾತೆಯಲ್ಲಿದೆ. ಇದರಲ್ಲಿ ಕೊಡಗಿಗೆ ನೆರವು ನೀಡುವ ಸಲುವಾಗಿ ಸುಮಾರು 15 ಲಕ್ಷ ರೂಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಪಿಎಂಸಿಯ ನೂತನ ಅಧ್ಯಕ್ಷ ರೇಣುಕಯ್ಯ ಹೇಳಿದರು. ವಿಶೇಷ ಸಭೆ ಕರೆದು ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿ ಕೊಡಗಿಗೆ ಧನ ಸಹಾಯ ಮಾಡಲಾಗುವುದು ಎಂದು ಎಪಿಎಮ್‍ಸಿ ಅಧ್ಯಕ್ಷ ರೇಣುಕಯ್ಯ ತಿಳಿಸಿದರು.

                   ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿಯ ಮಾಜಿ ಅಧ್ಯಕ್ಷ ಮಂಗೀಕುಪ್ಪೆ ಬಸವರಾಜು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೋಳಾಲ ಗಂಗಾಧರ್, ಜೆಡಿಎಸ್ ಮುಖಂಡರಾದ ತ್ಯಾಗರಾಜ್, ಶಿವರಾಮ್, ಚೇತನ್, ರಾಘು ಇದ್ದರು.

Recent Articles

spot_img

Related Stories

Share via
Copy link
Powered by Social Snap