ಹಾವೇರಿ:
ಪರಿಸರ ಸ್ನೇಹಿ ಶಾಂತಿಯುತ ಗಣೇಶ ಉತ್ಸವಕ್ಕೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗಣೇಶ ಮೂರ್ತಿಗಳ ಸ್ಥಾಪನೆಗೆ ಅನುಮತಿ ಕೇಳುವ ಸಂಘ-ಸಂಸ್ಥೆಗಳಿಗೆ ತ್ವರಿತವಾಗಿ ಅನುಮತಿ ನೀಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸೂಚನೆ ನೀಡಿದರು.
ಗಣೇಶೋತ್ಸವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಗಣೇಶ ಉತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕು. ಶಾಂತಿ ಮತ್ತು ಸುವ್ಯವಸ್ಥಿತವಾಗಿ ಗಣೇಶ ಉತ್ಸವಗಳು ಜರುಗುವಂತೆ ಕ್ರಮತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಗಣೇಶ ಉತ್ಸವ ಆಚರಣೆಮಾಡುವವರ ಭಾವನೆಗಳಿಗೆ ತೊಂದರೆಯಾಗಬಾರದು. ಯಾವುದೇ ರೀತಿಯ ಕಿರಿಕಿರಿಗಳು ಉಂಟಾಗಬಾರದು. ಗಣೇಶ ಉತ್ಸವ ಆಚರಣೆಗೆ ನಿಯಮಾವಳಿ ಅನುಸಾರ ಅನುಮತಿ ಕೇಳಿ ಅರ್ಜಿ ಸಲ್ಲಿಸುವ ಸಂಘ ಸಂಸ್ಥೆಗಳಿಗೆ ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡಬೇಕು. ಅಪಾಯಕಾರಿ ವಿದ್ಯುತ್ ಸಂಪರ್ಕ, ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 3ರವರೆಗೆ ಹೆಚ್ಚು ಶಬ್ದಮಾಡುವ ಧ್ವನಿವರ್ಧಕ (ಡಿಜೆ) ಬಳಕೆ, ಸಾರ್ವಜನಿಕ ರಸ್ತೆಗಳಲ್ಲಿ ಮೂರ್ತಿಗಳ ಸ್ಥಾಪನೆ, ವಿಷಕಾರಿ ರಾಸಾಯನಿಕ ಲೋಹದ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಯ ಬಳಕೆಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸುತ್ತಾ ಈ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ, ತಹಶೀಲ್ದಾರ, ಪರಿಸರ ಅಧಿಕಾರಿ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಮಣ್ಣಿನ ಗಣಪತಿ ಪರಿಸರ ಪೂರಕ ಗಣೇಶ ಮೂರ್ತಿಗಳನ್ನು ಸ್ಥಾಪಿಸಲು ಮುಂಚಿತವಾಗಿ ಸೂಚನೆ ನೀಡಲಾಗಿದೆ. ಗಣೇಶ ಮೂರ್ತಿ ತಯಾರಿಕರಿಗೂ ಮುನ್ಸೂಚನೆ ನೀಡಲಾಗಿದೆ. ಇಷ್ಟಾಗಿಯೂ ಯಾರಾದರು ವಿಷಕಾರಿ ರಾಸಾಯನಿಕ ಲೋಹದ ಲೇಪಿತ ಗಣೇಶ ಮೂರ್ತಿಯನ್ನು ಮಾರಾಟ ಹಾಗೂ ಪ್ರತಿಷ್ಠಾಪಿಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಮೂರ್ತಿಗಳ ಮಾರಾಟ ಕಂಡುಬಂದರೆ ಪೊಲೀಸ್ ಸಹಕಾರದೊಂದಿಗೆ ಪ್ಲಾಸ್ಟಿಕ್ ಮೂರ್ತಿಗಳನ್ನು ವಶಕ್ಕೆ ಪಡೆದು ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಗಣೇಶ ಮೂರ್ತಿಗಳನ್ನು ಸಹಜವಾಗಿ ಮೂರುದಿನ, ಐದುದಿನ, ಒಂಭತ್ತುದಿನ ಹಾಗೂ 21 ದಿನಕ್ಕೆ ವಿಸರ್ಜನೆ ಮಾಡಲಾಗುತ್ತಿದೆ. ಗಣೇಶ ವಿಸರ್ಜನೆಗೆ ನಗರ ಸ್ಥಳೀಯ ಸಂಸ್ಥೆಗಳು ಕೃತಕ ಹೊಂಡಗಳನ್ನು ನಿರ್ಮಿಸಬೇಕು. ಅವರ ಮನೆ ಬಾಗಿಲುಗಳಲ್ಲೇ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಸಂಚಾರಿ ವಿಸರ್ಜನಾ ವ್ಯವಸ್ಥೆಯನ್ನು ಕೈಗೊಂಡು ಸಾರ್ವಜನಿಕರಿಗೆ ಮುಂಜಾಗ್ರತೆಯಾಗಿ ಮಾಹಿತಿ ನೀಡುವಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಣೇಶ ಹಬ್ಬವನ್ನು ನಿಮಿತ್ತವಾಗಿಟ್ಟುಕೊಂಡು ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣವಾದ ಕ್ರಮಕೈಗೊಳ್ಳಬೇಕು. ಇಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಲು ಜಿಲ್ಲಾಡಳಿತ ಹಿಂಜರಿಯುವುದಿಲ್ಲ. ಇಂತಹ ಶಕ್ತಿಗಳ ವಿರುದ್ಧ ತೀವ್ರ ನಿಗಾವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕಾ ಆಡಳಿತದೊಂದಿಗೆ ಸಂವಾದ ನಡೆಸಿ ಎಲ್ಲ ತಾಲೂಕುಗಳಲ್ಲೂ ಪೊಲೀಸ್, ತಹಶೀಲ್ದಾರ ಹಾಗೂ ವಿವಿಧ ಇಲಾಖೆಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಕುರಿತಂತೆ ಸಮನ್ವಯ ಸಭೆ ನಡೆಸಿ ಶಾಂತಿಯುತ ಗಣೇಶ ಉತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಮಾತನಾಡಿ, ಶಾಂತಿಯುತ ಗಣೇಶ ಉತ್ಸವ ಆಚರಣೆಗೆ ಎಲ್ಲ ಇಲಾಖೆಗಳು ಸಮನ್ವಯತೆ ಸಹಕಾರ ಅವಶ್ಯವಾಗಿದೆ. ಕಳೆದ ವರ್ಷ ಎಲ್ಲರ ಸಹಕಾರದಿಂದ ಶಾಂತಿಯುತವಾಗಿ ಗಣೇಶ ಉತ್ಸವ ನಡೆಸಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ 1750 ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳು ಸ್ಥಾಪನೆಗೊಳ್ಳುವ ಅಂದಾಜಿದೆ. ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 3ರವರೆಗೆ ಗಣೇಶ ಉತ್ಸವ ನಡೆಯಲಿದೆ. ಈ ನಡುವೆ ಮೋಹರಂ ಸಹ ನಡೆಯಲಿದೆ. ಶಾಂತಿಯುತವಾದ ಉತ್ಸವಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಶಾಂತಾ ಹುಲ್ಮನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಾಸಣ್ಣ, ಪರಿಸರ ಅಧಿಕಾರಿ ಮಹೇಶ್ವರಪ್ಪ, ಹೆಸ್ಕಾಂ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.