ಬಗರ್ ಹುಕುಂ ಸಾಗುವಳಿದಾರರ ಒಕ್ಕಲೆಬ್ಬಿಸಲು ಯತ್ನ–ಪ್ರತಿಭಟನೆ

ತುಮಕೂರು:

       ಸಾಗುವಳಿ ಮಾಡುತ್ತಿರುವ ಭೂಮಿಯ ಸುತ್ತಲೂ ಗುಂಡಿ ಹೊಡೆಯಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ದ ಬಗರ್‍ಹುಕುಂ ಸಾಗುವಳಿದಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತುಮಕೂರು ತಾಲೂಕು ಸೀಬಿ ಗ್ರಾಮದ ಸಮೀಪ ನಡೆಯಿತು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ನೇತೃತ್ವದಲ್ಲಿ ಸಾಗುವಳಿ ಭೂಮಿಯ ಬಳಿ ಸೇರಿದ ರೈತರು ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದರು. ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತ ಬಂದಿದ್ದೇವೆ. ಇದೇ ನಮ್ಮ ಜೀವನಕ್ಕೆ ಆಧಾರವಾಗಿದೆ ಎಂದು ಬಗರ್‍ಹುಕುಂ ಸಾಗುವಳಿದಾರರು ಅಳಲು ತೋಡಿಕೊಂಡರು.

         ಸೀಬಿ ಗ್ರಾಮದ ಸರ್ವೇ ನಂಬರ್ 9, 10, 11, 14 ಮತ್ತು 15ನೇ ಸರ್ವೇ ನಂಬರ್‍ನಲ್ಲಿ ಚಿಕ್ಕಶೀಬಿ, ಸೀಬಿ, ಕೆಂಪನಹಳ್ಳಿ, ಅಳಲುಕುಂಟೆ, ಸಲುಪರಹಳ್ಳಿ, ಕೊಳಲುಕುಂಟೆ ಗ್ರಾಮದ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಕಳೆದ 35 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆಯುತ್ತ ಬರುತ್ತಿದ್ದು ಇದೇ ಜೀವನಕ್ಕೆ ಆಧಾರವಾಗಿದೆ. ಕುಟುಂಬ ನಿರ್ವಹಣೆ ಈ ಭೂಮಿಯಿಂದಲೇ ನಡೆಯುತ್ತಿದೆ. ಈಗ ಅರಣ್ಯ ಅಧಿಕಾರಿಗಳು ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳಿಕೊಂಡು ಭೂಮಿಯ ಸುತ್ತ ಗುಂಡಿ ಹೊಡೆಯಲು ಬಂದಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

         ಸ್ಥಳದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಚುನಾವಣೆ ಮುಗಿಯುವವರೆಗೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು. ಅರಣ್ಯ, ಪೊಲೀಸ್, ಜನಪ್ರತಿನಿಧಿಗಳು ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಸಭೆ ನಡೆಸಬೇಕು. ಅಲ್ಲಿಯವರೆಗೂ ಅರಣ್ಯಾಧಿಕಾರಿಗಳು ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

       ಅರಣ್ಯ ಇಲಾಖೆ ಸಿಬ್ಬಂದಿ ಒಂದು ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವ ರೈತರ ಬದುಕಿನಲ್ಲಿ ಅರಣ್ಯ ಅಧಿಕಾರಿಗಳು ಚಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಭೂಮಿ ಹೋರಾಟ ಮುಂದುವರಿಯಲಿದೆ. ಗುಬ್ಬಿ, ತುಮಕೂರು, ಶಿರಾ ತಾಲೂಕು ಸೇರಿದಂತೆ ಬಗರ್‍ಹುಕುಂ ಸಾಗುವಳಿದಾರರನ್ನು ಸಂಘಟಿಸಿ ಸಾಗುವಳಿ ಚೀಟಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಭೂಮಿ ಇಲ್ಲದ ಮತ್ತು ಈಗಾಗಲೇ ರೈತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರಿಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ರೈತ ಮುಖಂಡ ದೊಡ್ಡನಂಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link