ಆರೋಗ್ಯ ಇಲಾಖೆಯ 1.36 ಕೋಟಿ ರೂ. ಅವ್ಯವಹಾರ ತನಿಖೆಗೆ ಆಗ್ರಹ

ತುಮಕೂರು

    ಕೋರಂ ಕೊರತೆಯಿಂದಾಗಿ ಜಿಲ್ಲಾ ಪಂಚಾಯ್ತಿಯ ಹಿಂದಿನ ಎರಡು ಸರ್ವಸದಸ್ಯರ ಸಭೆಗಳು ಮುಂದೂಡಲ್ಪಟ್ಟಿದ್ದವು. ಶನಿವಾರ ನಡೆದ ಮುಂದುವರೆದ ಸಭೆಯಲ್ಲೂ ಅಧ್ಯಕ್ಷರ ವಿರುದ್ಧ ಸದಸ್ಯರ ಅಸಮಾಧಾನ ಮುಂದುವರೆಯಿತು. ಸಭೆಗೆ ಕೋರಂ ಕೊರತೆಯಾಗದಿದ್ದರೂ ಸಭೆ ನಡೆಯಲು ಸದಸ್ಯರ ಸಹಕಾರ ಸಿಗಲಿಲ್ಲ.

    ತಡವಾಗಿ ಸಭೆಗೆ ಬಂದ ಅಸಮಾಧಾನಿತ ಸದಸ್ಯರು ವಿಳಂಬ ಮಾಡಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದರು. ಆರೋಗ್ಯ ಇಲಾಖೆಗೆ ನಿಯಮ ಮೀರಿ 1.36 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಈ ಬಗ್ಗೆ ತನಿಖೆಯಾಗಬೇಕು ಎಂದು ಹಲವು ಸದಸ್ಯರು ಅಧ್ಯಕ್ಷರಿದ್ದ ವೇದಿಕೆ ಬಳಿ ಬಂದು ಪ್ರತಿಭಟನೆ ನಡೆಸಿದರು. ವಾದ-ವಿವಾದ ನಡೆದು ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು. ಪ್ರತ್ಯೇಕ ಸಭೆ ನಡೆಸಿದರು. ಮತ್ತೆ ಸಭೆಗೆ ಹಾಜರಾಗಿ ನಂತರ ಹೊರ ಹೋದರು. ಹೀಗೆ, ಹಲವು ರಾಜಕೀಯ ಪ್ರಹಸನ ನಡೆದವು.

     ಅಧ್ಯಕ್ಷೆ ಲತಾ ರವಿಕುಮಾರ್ ಅವರ ಅಧ್ಯಕ್ಷತೆಯ ಸರ್ವಸದಸ್ಯರ ಸಭೆ ಅಂತೂ ಇಂತೂ ನಡೆದಂತಾಯಿತು. ಬೆಳಿಗ್ಗೆ 11ಗಂಟೆಗೆ ನಿಗಧಿಯಾಗಿದ್ದ ಸಭೆಗೆ ಬೆರಳೆಣಿಕೆಯ ಸದಸ್ಯರು ಸಕಾಲಕ್ಕೆ ಆಗಮಿಸಿದ್ದರು. ಅನೇಕ ಸದಸ್ಯರು ಸಭಾಂಗಣಕ್ಕೆ ಹಾಜರಾಗದೆ, ಮಿನಿ ಸಭಾಂಗಣದಲ್ಲಿ ಪ್ರತ್ಯೇಕ ಸಭೆ ನಡೆಸಿದರು. 11.30ರ ಸುಮಾರಿಗೆ ಅಧ್ಯಕ್ಷೆ ಲತಾ ರವಿಕುಮಾರ್, ಉಪಾದ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸಿಇಒ ಶುಭಾ ಕಲ್ಯಾಣ್ ಆಗಮಿಸಿದರು. ಆನಂತರ, ಒಬ್ಬೊಬ್ಬರೇ ಸದಸ್ಯರು ಆಗಮಿಸತೊಡಗಿದರು.

     ಹಾಜರಾತಿ ಪುಸ್ತಕಕ್ಕೆ ಸದಸ್ಯರ ಸಹಿ ಮಾಡಿಸಿಕೊಳ್ಳವ ಕಚೇರಿ ಸಿಬ್ಬಂದಿ ಬರುವ ಸದಸ್ಯರಿಗಾಗಿ ಕಾದು, ಬಂದವರ ಬಳಿ ಹೋಗಿ ಸಹಿ ಮಾಡಿಸಿಕೊಳ್ಳುತ್ತಿದ್ದರು. ಇಷ್ಟಾಗಿಯೂ ಮಧ್ಯಾಹ್ನ 12 ಗಂಟೆಯಾದರೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ ಸದಸ್ಯರ ಸಂಖ್ಯೆ ಸಭೆ ನಡೆಸಲು ಅಗತ್ಯವಿರುವ ಕೋರಂಗೆ ಸಾಕಾಗಲಿಲ್ಲ. ಈ ವೇಳೆ ಕೆಲ ಸದಸ್ಯರು, ಅದ್ಯಕ್ಷರೇ, 12 ಗಂಟೆಯಾಯಿತು ಸಭೆ ಆರಂಭಿಸಿ ಎಂದು ಒತ್ತಾಯಿಸಿದರು.

    ಬಂದಿರುವ ಸದಸ್ಯರೆಲ್ಲಾ ಸಹಿ ಹಾಕಿ, ಸಭೆ ಆರಂಭಿಸೋಣ, ಕೆಲವೊಂದು ಅನುಮೋದನೆ ಪಡೆಯಬೇಕಾಗಿದೆ ಎಂದು ಅಧ್ಯಕ್ಷೆ ಲತಾ ರವಿಕುಮಾರ್ ಮನವಿ ಮಾಡಿಕೊಂಡರು. ಹಾಜರಿದ್ದರೂ ಸಹಿ ಹಾಕದೆ ಕೆಲ ಸದಸ್ಯರು ಅದ್ಯಕ್ಷರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

    ಈ ವೇಳೆ, ಪುರವರ ಕ್ಷೇತ್ರದ ಸದಸ್ಯ ಕೊಂಡವಾಡಿ ತಿಮ್ಮಯ್ಯ, ಅಧ್ಯಕ್ಷರೇ ನೀವು ಸದಸ್ಯರನ್ನು ಸಹಿ ಭಿಕ್ಷೆ ಕೇಳುವ ಬದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಛೇಡಿಸಿದರು. ಆಗ ಸಿಟ್ಟಿಗೆದ್ದ ಅಧ್ಯಕ್ಷರು, ಬಂದವರು ಸಹಿ ಹಾಕಬೇಕು ಭಿಕ್ಷೆ ಕೇಳುತ್ತಿಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದು ತಿರುಗೇಟು ನೀಡಿದರು.

    ಈ ಸಂದರ್ಭದಲ್ಲಿ ಗೊಂದಲ ಶುರುವಾಯಿತು. ಕೆಲವು ಸದಸ್ಯರು ಅಧ್ಯಕ್ಷರ ವಿರುದ್ಧ ಮಾತನಾಡಲು ಶುರು ಮಾಡಿದರು. ಅದ್ಯಕ್ಷರ ಬಗ್ಗೆ ಸದಸ್ಯರಿಗೆ ವಿಶ್ವಾಸವಿಲ್ಲ, ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಳಿಲುಘಟ್ಟ ಕ್ಷೇತ್ರದ ಸದಸ್ಯೆ ಯಶೋದಮ್ಮ ಶಿವಣ್ಣ ಒತ್ತಾಯ ಮಾಡಿದರು.

    ಕಳೆದ ಎರಡು ಸಭೆಗೆ ಸದಸ್ಯರು ಬರಲಿಲ್ಲ, ಸಭೆ ನಡೆಯಲಿಲ್ಲ, ಸಭೆಗೆ ಯಾಕೆ ಬರಲಿಲ್ಲ, ನಿಮ್ಮ ಸಮಸ್ಯೆ ಏನು ಎಂದು ಸದಸ್ಯರ ಸಭೆ ಕರೆದು ಅಧ್ಯಕ್ಷರು ಕೇಳಬೇಕಾಗಿತ್ತು. ಅಧಿಕಾರಿಗಳ ಮುಂದೆ ಹೀಗೆ ಅವಮಾನವಾಗುವುದು ತಪ್ಪುತ್ತಿತ್ತು ಎಂದು ಸದಸ್ಯ ಕೊಂಡವಾಡಿ ತಿಮ್ಮಯ್ಯ ಹೇಳಿದರು.

    ಆ ವೇಳೆಗೆ, ಹಾಜರಾದ ಸದಸ್ಯರ ಸಂಖ್ಯೆ 43 ಆಗಿದೆ, ಸಭೆ ನಡೆಸಲು ಅಗತ್ಯ ಕೋರಂ ಸಿಕ್ಕಿದೆ ಎಂದು ಅಧಿಕಾರಿಗಳು ಅಧ್ಯಕ್ಷರಿಗೆ ಮಾಹಿತಿ ನೀಡಿದ ನಂತರ ಸಭೆ ನಾಡಗೀತೆಯೊಂದಿಗೆ ಆರಂಭವಾಯಿತು.ಸ್ಥಾಯಿ ಸಮಿತಿ ಸಭೆಗಳ ನಡವಳಿಗಳನ್ನು ಅನುಮೋದನೆ ಮಾಡುವ ಸಂಬಂಧ ಚರ್ಚೆ ಆರಂಭಿಸುವ ವೇಳೆಗೆ ಕೆಲ ಸದಸ್ಯರು ಆರೋಗ್ಯ ಇಲಾಖೆಗೆ 1.36 ಕೋಟಿ ರೂ.ಗಳನ್ನು ನಿಯಮ ಮೀರಿ ನೀಡಲಾಗಿದೆ ಇದರ ತನಿಖೆ ಆಗಬೇಕು ಎಂದು ಪ್ರಸ್ತಾಪ ಮಾಡಿದರು. ಇತರೆ ಕೆಲ ಸದಸ್ಯರೂ ಧ್ವನಿಗೂಡಿಸಿದಾಗ ಸಭೆಯಲ್ಲಿ ಗೊಂದಲ ಶುರುವಾಯಿತು.

     ಸದಸ್ಯರಾದ ಕಲ್ಲೇಶ್, ಮಹಾಲಿಂಗಯ್ಯ, ರಾಮಕೃಷ್ಣಯ್ಯ, ರಾಮಚಂದ್ರಪ್ಪ, ಸಿದ್ದರಾಮಯ್ಯ, ಕೊಂಡವಾಡಿ ತಿಮ್ಮಯ್ಯ, ಶಿವರಾಮಯ್ಯ, ನಾರಾಯಣ್, ಪಾಪಣ್ಣ, ಯಶೋಧಮ್ಮ ಇನ್ನಿತರ ಸದಸ್ಯರ ಜೊತೆ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ನವ್ಯಾಬಾಬು ಸೇರಿಕೊಂಡು ವೇದಿಕೆ ಎದುರು ಬಂದು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 1.36 ಕೋಟಿ ರೂಗಳ ಅವ್ಯವಹಾರ ಆಗಿದೆ. ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡದೆ ಆರೋಗ್ಯ ಇಲಾಖೆಗೆ ಹಣ ಬಿಡುಗಡೆ ಮಾಡಲಾಗಿದೆ. ಆ ಹಣದಲ್ಲಿ ಆಸ್ಪತ್ರೆಗಳಿಗೆ ಸಿಸಿ ಕ್ಯಾಮರ, ಬಯೋಮೆಟ್ರಿಕ್ ಉಪಕರಣ ಖರೀದಿಗೆ ಅನುಮತಿ ನೀಡಿ ಹಣ ಬಿಡುಗಡೆ ಮಾಡಿರುವುದು ನಿಮಯ ವಿರೋಧಿಯಾಗಿದೆ. ಅಳವಡಿಸಿರುವ ಸಿಸಿ ಕ್ಯಾಮರಾ, ಬಯೋಮೆಟ್ರಿಕ್ ಕಳಪೆ. ಅನೇಕವು ಕೆಲಸ ಮಾಡುತ್ತಿಲ್ಲ ಎಂದು ಸದಸ್ಯರು ಆರೋಪ ಮಾಡಿದರು.

    ಈ ಬಗ್ಗೆ ಸಿಇಒ ಶುಭಾ ಕಲ್ಯಾಣ ಸ್ಪಷ್ಟನೆ ನೀಡುತ್ತಾ, ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಅಳವಡಿಸಿಲು ಸರ್ಕಾರದ ನಿದೇರ್ಶಶನದಂತೆ ಕಿಯೋನಿಕ್ಸ್‍ಗೆ ವಹಿಸಲಾಗಿತ್ತು. ಆದರೆ ಅಳವಡಿಸಿದ ಅನೇಕ ಕಡೆ ಅವು ಕೆಲಸ ಮಾಡುತ್ತಿಲ್ಲ ಎಂಬ ದೂರಿನ ಮೇರೆಗೆ, ಮಾಹಿತಿ ನೀಡಲು ತಂಡ ರಚನೆ ಮಾಡಲಾಗಿತ್ತು, ತಂಡದ ವರದಿಯಂತೆ ಕೆಲವು ಕಡೆ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಉಪಕರಣವನ್ನು ಅಳವಡಿಸಿಲ್ಲ, ಅಳವಡಿಸಿರುವ ಕೆಲವು ಕಡೆ ಅವು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವರದಿ ನೀಡಿದ್ದಾರೆ, ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಇಷ್ಟಕ್ಕೇ ಸುಮ್ಮನಾಗದ ಸದಸ್ಯರು, ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡದೆ 1.36 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದ ಸರಿಯಲ್ಲ, ಇದರಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು. ಆರೋಗ್ಯ ಸ್ಥಾಯಿ ಸಮಿತಿಯಲ್ಲಿ ಆಗಿರುವ ತೀರ್ಮಾನದಂತೆ ಖರೀದಿ ಮಾಡಲಾಗಿದೆ ಎಂದು ಸಿಇಓ ಹೇಳಿದರು.

   ಆಗ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ನವ್ಯಾ ಬಾಬು, ಸ್ಥಾಯಿ ಸಮಿತಿ ಸಭೆಯಲ್ಲಿ ಕೇವಲ 44 ಲಕ್ಷ ರೂ.ಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ ಎಂದರು. ಸದಸ್ಯರ ಗಲಾಟೆ ನಡುವೆ ಅಧ್ಯಕ್ಷೆ ಲತಾರವಿಕುಮಾರ್, ಅನುದಾನ ಉಪಯೋಗವಾಗಲಿ ಎಂದು ನನ್ನ ಅಧಿಕಾರ ಬಳಸಿ ಅನುಮತಿ ನೀಡಿದೆ ಎಂದರು.

   ಆರೋಗ್ಯ ಇಲಾಖೆಯ ಈ ಖರೀದಿಯಲ್ಲಿ ಅವ್ಯವಹಾರ ಆಗಿದೆ, ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಒಂದೂವರೆ ವರ್ಷದಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ, ನೀವು ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನೀತಿ-ನಿಯಮ ಇಲ್ಲದ ಈ ಸಭೆಯಲ್ಲಿ ಇರುವುದು ಬೇಡ ಸಭೆ ಬಹಿಷ್ಕರಿಸೋಣ ಎಂದು ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು. ಆಗ ಅಧ್ಯಕ್ಷರು ಸಭೆಯನ್ನು ಅರ್ಧ ಗಂಟೆ ಕಾಲ ಮುಂದೂಡಿದರು.

    ಹೊರ ನಡೆದ ಸದಸ್ಯರು ಕೊಠಡಿಯೊಂದರಲ್ಲಿ ಸೇರಿ ಚರ್ಚೆ ನಡೆಸಿದರು. 1.36 ಕೋಟಿ ರೂಗಳ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರೂ ಇದ್ದು ಸದಸ್ಯರ ಮನವೊಲಿಸುವ ಪ್ರಯತ್ನ ಮಾಡಿದರು.

    ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೆಲ ಸದಸ್ಯರು ಸಭೆಗೆ ಹಾಜರಾದರಾದರೂ ಚರ್ಚೆಯಲ್ಲಿ ಭಾಗವಹಿಸದೆ ಮತ್ತೆ ಹೊರ ಹೋದರು. ಮಧ್ಯಾಹ್ನದ ಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಬಹುತೇಕ ಸದಸ್ಯರು ಸಭೆಗೆ ಹಾಜರಾಗಲಿಲ್ಲ, ಬಿಜೆಪಿಯ ಸದಸ್ಯರು ಹಾಜರಿದ್ದು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link